Drop


Saturday, May 7, 2016

101 ಸರ್ವಜ್ಞನ ವಚನಗಳು:-

🌺
ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ
ಚಿಂತೆಯಲಿ ದೇಹ ಬಡವಕ್ಕು ಶಿವ
ತೋರಿದಂತಿಹುದೇ ಲೇಸು ಸರ್ವಜ್ಞ.

🌺
ಆದಿ ದೈವವನು ತಾ ಭೇದಿಸಲಿಕರಿಯದಲೆ
ಹಾದಿಯಾ ಕಲ್ಲಿಗೆಡೆ ಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ.

🌺
ತನ್ನಲಿಹ ಲಿಂಗವನು ಮನ್ನಿಸಲಿಕರಿಯದಲೆ
ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ.

🌺
ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿವ
ಬಣಗುಗಳ ನೋಡು ಸರ್ವಜ್ಞ.

🌺
ಕಲ್ಲು ಕಲ್ಲನೆ ಒಟ್ಟಿ ಕಲ್ಲಿನಲೆ ಮನೆಕಟ್ಟಿ
ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ
ಕಲ್ಲಿನಂತಿಹರು ಸರ್ವಜ್ಞ.

🌺
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ.

🌺
ಲಿಂಗಕ್ಕೆ ಕಡೆ ಎಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೇ ? ಸರ್ವಜ್ಞ.

🌺
ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ, ಲಿಂಗಕ್ಕೆ
ದೇಗುಲವೇ ಇಲ್ಲ ಸರ್ವಜ್ಞ.

🌺
ಕಾಯ ಕಮಲವೇ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿಂ ಶಿವಪೂಜೆ ಮಾಡುವವನ
ದೇವನೆಂದೆಂಬೆ ಸರ್ವಜ್ಞ.

🌺
ಓದು ವಾದಗಳೇಕೆ ? ಗಾದೆಯಾ ಮಾತೇಕೆ ?
ವೇದ ಪುರಾಣ ತನಗೇಕೆ ? ಲಿಂಗದಾ
ಹಾದಿಯರಿಯದವಗೆ ಸರ್ವಜ್ಞ.

🌺
ಊರಿಂಗೆ ದಾರಿಯನು ಆರು ತೋರಿದರೇನು ?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ.

🌺
ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಬರೆವವರ ಕೂಡ ಹಗೆ ಬೇಡ ಬಂಗಾರ
ದೆರವು ಬೇಡೆಂದ ಸರ್ವಜ್ಞ.

🌺
ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿ ಬಂದಂತೆ ಸರ್ವಜ್ಞ.

🌺
ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು ?
ಮನದಲ್ಲಿ ನೆನೆಯದಿರುವವನು ದೇಗುಲದ
ಕೊನೆಯಲಿದ್ದೇನು ? ಸರ್ವಜ್ಞ.

🌺
ಲಿಂಗದಾ ಗುಡಿ ಲೇಸು ಗಂಗೆಯಾ ತಡಿ ಲೇಸು
ಲಿಂಗಸಂಗಿಗಳ ನುಡಿ ಲೇಸು, ಭಕ್ತರಾ
ಸಂಗವೇ ಲೇಸು ಸರ್ವಜ್ಞ.

🌺
ಸತಿಯರಿರ್ದಡೆ ಏನು ? ಸುತರಾಗಿ ಫಲವೇನು ?
ಶತಕೋಟಿ ಧನವ ಗಳಿಸೇನು? ಭಕ್ತಿಯಾ
ಸ್ಥಿತಿಯಿಲ್ಲದನಕ ಸರ್ವಜ್ಞ.

🌺
ಕಚ್ಚೆ ಕೈ ಬಾಯಿಗಳು ಇಚ್ಚೆಯಲಿ ಇದ್ದಿಹರೆ
ಅಚ್ಯುತನು ಅಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ.

🌺
ಭಿತ್ತಿಯಾ ಚಿತ್ರದಲಿ ತತ್ವ ತಾ ನೆರೆದಿಹುದೇ ?
ಚಿತ್ರತ್ವ ತನ್ನ ನಿಜದೊಳಗೆ, ತ್ರೈ ಜಗದ
ತತ್ವ ತಾನೆಂದ ಸರ್ವಜ್ಞ.

🌺
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯಾ ಸರ್ವಜ್ಞ.

🌺
ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಮೊನೆಯಲ್ಲಿ
ಎಲ್ಲಿ ನೆನೆದಲ್ಲಿ ಶಿವನಿರ್ಪ ಅವ ನೀನಿದ್ದಲ್ಲಿಯೇ
ಇರುವ ಸರ್ವಜ್ಞ.

🌺
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟದೊಳಗೆ ಇರುವಾತ
ತನ್ನೊಳಗೆ ಇರನೆ? ಸರ್ವಜ್ಞ.

🌺
ಇಲ್ಲಿಲ್ಲವೆಂಬುದನು ಇಲ್ಲಿಯೇ ಅರಸುವುದು
ಇಲ್ಲಿಲ್ಲವೆಂದರಿದ ಒಡನೆ ಜಗವೆಲ್ಲ
ಒಳಗಿಕ್ಕು ಸರ್ವಜ್ಞ.

🌺
ಏನಾದಡೇನಯ್ಯ ತಾನಾಗದಿರುವನಕ
ತಾನಾಗಿ ತನ್ನನರಿದಿರಲು ಲೋಕದಲಿ
ಏನಾದಡೇನು ? ಸರ್ವಜ್ಞ.

🌺
ತನ್ನ ತಾನರಿದವಂಗೆ ಭಿನ್ನ ಭಾವನೆಯಿಲ್ಲ
ತನ್ನವರು ಇಲ್ಲ ಪರರಿಲ್ಲ, ತ್ರೈಭುವನವೇ
ತನ್ನೊಳಗೆ ಇಹುದು ಸರ್ವಜ್ಞ.

🌺
ಕೋಟಿಯನು ಕೊಟ್ಟರೂ ಕೂಟ ಕರ್ಮಿಯ ಹೊಲ್ಲ
ನೋಟದಲಿ ನಿಜವನರಿವ ಸುಜ್ಞಾನಿಯಾ
ಕೂಟವೇ ಲೇಸು ಸರ್ವಜ್ಞ.

🌺
ಸಾಲು ವೇದಗಳೇಕೆ ? ಮೂಲ ಮಂತ್ರಗಳೇಕೆ ?
ಮೇಲು ಕೀಳೆಂಬ ನುಡಿಯೇಕೆ ? ತತ್ವದಾ
ಕೀಲನರಿದವಗೆ ಸರ್ವಜ್ಞ.

🌺
ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕಾ
ರಕ್ಕರವೇ ಸಾಕು ಸರ್ವಜ್ಞ.

🌺
ಎಣ್ಣೆ ಬೆಣ್ಣೆಯ ರಿಣವು ಅನ್ನವಸ್ತ್ರದ ರಿಣವು
ಹೊನ್ನು ಹೆಣ್ಣಿನಾ ರಿಣವು ತೀರಿದ ಕ್ಷಣದಿ
ಮಣ್ಣು ಪಾಲೆಂದ ಸರ್ವಜ್ಞ.

🌺
ಸಂಗವನು ತೊರೆದಂಗೆ ಅಂಗನೆಯರಿರಲೇಕೆ ?
ಬಂಗಾರವೇಕೆ ? ಬಲವೇಕೆ ? ಲೋಕದಾ
ಶೃಂಗಾರವೇಕೆ ? ಸರ್ವಜ್ಞ.

🌺
ವೇಷಗಳ ಧರಿಸೇನು? ದೇಶಗಳ ತಿರುಗೇನು?
ದೋಷಗಳ ಹೇಳಿ ಫಲವೇನು? ಮನಸಿನಾ
ಆಸೆ ಬಿಡದನಕ ಸರ್ವಜ್ಞ.

🌺
ಕತ್ತೆ ಬೂದಿಯಲಿ ಹೊರಳಿ ಮತ್ತೆ ಯತಿಯಪ್ಪುದೇ ?
ತತ್ವವರಿಯದಲೆ ಭಸಿತವಿಟ್ಟವ ಶುದ್ಧ
ಕತ್ತೆಯಂತೆಂದ ಸರ್ವಜ್ಞ.

🌺
ನಿತ್ಯ ನೇಮಗಳೇಕೆ ? ಮತ್ತೆ ಪೂಜೆಗಳೇಕೆ ?
ನೆತ್ತಿ ಬೋಳೇಕೆ ? ಜಡೆಯೇಕೆ ? ವದನದಲಿ
ಸತ್ಯವುಳ್ಳವಗೆ ಸರ್ವಜ್ಞ.

🌺
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರೆಮನೆಯಕ್ಕು ಸರ್ವಜ್ಞ.

🌺
ಕೊಟ್ಟದ್ದು ಕುದಿಯಲಿ ಬೇಡ ಕೊಟ್ಟಾಡಿಕೊಳಬೇಡ
ಕೊಟ್ಟು ನಾ ಕೆಟ್ಟೆನೆನಬೇಡ ಶಿವನಲ್ಲಿ
ಕಟ್ಟಿಹುದು ಬುತ್ತಿ ಸರ್ವಜ್ಞ.

🌺
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ.

🌺
ಕೊಡುವಾತನೇ ಹರನು ಪಡೆವಾತನೇ ನರನು
ಒಡಲ ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ.

🌺
ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ತಾನಿರಿಸಿ
ಸಣ್ಣಿಸಿಯೆ ನೆಲನ ಸಾರಿಸಿದವನ ಬಾಯೊಳಗೆ
ಮಣ್ಣು ಕಾಣಯ್ಯ ಸರ್ವಜ್ಞ.

🌺
ಇದ್ದುದನು ಬಿಟ್ಟು ಹೊರಗಿದ್ದುದನೆ ಬಯಸುತಲೆ
ಇದ್ದು ಉಣದಿಪ್ಪ ಬಾಯೊಳಗೆ ಕತ್ತೆಯಾ
ಲದ್ದಿಯೇ ಬೀಳ್ಗು ಸರ್ವಜ್ಞ.

🌺
ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲು
ಪುಣ್ಯವನು ಮಾಡಿ ಉಣಲೊಲ್ಲದವನಿರವು
ಉಣ್ಣೆಯಿಂ ಕಷ್ಟ ಸರ್ವಜ್ಞ.

🌺
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಡದವನ ಒಡವೆಯದು
ಕಳ್ಳಂಗೆ ನೃಪಗೆ ಸರ್ವಜ್ಞ.

🌺
ಕೊಟ್ಟುಂಬ ಕಾಲದಲಿ ಕೊಟ್ಟುಣಲಿಕರಿಯದಲೆ
ಹುಟ್ಟಿನಾ ಒಳಗೆ ಜೇನಿಕ್ಕಿ ಪರರಿಂಗೆ
ಬಿಟ್ಟು ಹೋದಂತೆ ಸರ್ವಜ್ಞ.

🌺
ಅಪಮಾನದೂಟದಿಂದುಪವಾಸವಿರಲೇಸು
ನೃಪನೆಯ್ದೆ ಬಡಿವ ಒಡ್ಡೋಲಗದಿಂದವೆ
ತಪವು ಲೇಸೆಂದ ಸರ್ವಜ್ಞ.

🌺
ಸತ್ಯರಾ ನುಡಿ ತೀರ್ಥ ನಿತ್ಯರಾ ನುಡಿ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವ
ನೀರೆತ್ತಣದು ತೀರ್ಥ ಸರ್ವಜ್ಞ.

🌺
ಧನಕನಕವುಳ್ಳನಕ ದಿನಕರವೋಲಕ್ಕು
ಧನಕನಕ ಹೋದ ಮರುದಿನವೆ ಹಾಳೂರ
ಶುನಕನಂತಕ್ಕು ಸರ್ವಜ್ಞ.

🌺
ಕಣ್ಣು ನಾಲಿಗೆ ಮನವು ತನ್ನದೆಂದೆನಬೇಡ
ಅನ್ಯರು ಕೊಂದರೆನಬೇಡ ಇವು ಮೂರು
ತನ್ನ ಕೊಲ್ಲುವವು ಸರ್ವಜ್ಞ.

🌺
ಇದ್ದಲ್ಲಿ ಸಲುವ ಹೋಗಿದ್ದಲ್ಲಿಯೂ ಸಲುವ
ವಿದ್ಯೆಯನು ಬಲ್ಲ ಬಡವ ತಾ ಗಿರಿಯ
ಮೇಲಿದ್ದರೂ ಸಲುವ ಸರ್ವಜ್ಞ.

🌺
ಮಾತು ಮಾತಿಗೆ ತಕ್ಕ ಮಾತು ಕೋಟಿಗಳುಂಟು
ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ
ಸೋತವನೇ ಜಾಣ ಸರ್ವಜ್ಞ.

🌺
ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕ್ಕೆ
ಮಾತೆ ಮಾಣಿಕವು ಸರ್ವಜ್ಞ.

🌺
ಮಾತ ಬಲ್ಲಾತಂಗೆ ಯಾತವದು ಸುರಿದಂತೆ
ಮಾತಾಡಲರಿಯದಾತಂಗೆ ಬರಿ ಯಾತ
ನೇತಾಡಿದಂತೆ ಸರ್ವಜ್ಞ.

🌺
ಮಾತು ಬಲ್ಲಹ ತಾನು ಸೋತು ಹೋಹುದು ಲೇಸು
ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ.

🌺
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದವನ ಬರಿ ಮಾತು ಕಿವಿಯೊಳಗೆ
ಕೂರ್ದಸಿಯ ಬಡಿದಂತೆ ಸರ್ವಜ್ಞ.

🌺
ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ
ಹೊತ್ತಾಗಿ ನುಡಿದ ಮಾತು ಕೈ ಜಾರಿದ
ಮುತ್ತಿನಂತಿಹುದು ಸರ್ವಜ್ಞ.

🌺
ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು
ಮಾತು ತಾನರಿಯದಧಮಂಗೆ ಮಾಣಿಕವು
ತೂತು ಬಿದ್ದಂತೆ ಸರ್ವಜ್ಞ.

🌺
ಮಾತಿಂಗೆ ಮಾತುಗಳು ಓತು ಸಾಸಿರವುಂಟು
ಮಾತಾಡಿದಂತೆ ನಡೆದರೆ ಕೈಲಾಸಕಾತನೇ
ಒಡೆಯ ಸರ್ವಜ್ಞ.

🌺
ಆಡದಲೆ ಮಾಡುವನು ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು ಅಧಮ ತಾ
ನಾಡಿಯೂ ಮಾಡದವನು ಸರ್ವಜ್ಞ.

🌺
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೇ ಕೆಡುಗು ಸರ್ವಜ್ಞ.

🌺
ಸಾಲವನು ಕೊಂಬಾಗ ಹಾಲುಹಣ್ಣುಂಡಂತೆ
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.

🌺
ಬೋರಾಡಿ ಸಾಲವನು ಹಾರಾಡಿ ಒಯ್ಯುವನು
ಈರಾಡಿ ಬಂದು ಕೇಳಿದರೆ ಸಾಲಿಗನು
ಚೀರಾಡಿ ಕೊಡನು ಸರ್ವಜ್ಞ.

🌺
ಬೆಂಡಿರದೆ ಮುಳುಗಿದರು ಗುಂಡೆದ್ದು ತೇಲಿದರು
ಬಂಡಿಯಾ ನೊಗವು ಚಿಗಿತರೂ ಸಾಲಿಗನು
ಕೊಂಡದ್ದು ಕೊಡನು ಸರ್ವಜ್ಞ.

🌺
ಇದ್ದೂರ ಸಾಲ ಹೇಗಿದ್ದರೂ ಕೊಳಬೇಡ
ಇದ್ದುದನು ಸೆಳೆದು ಗುದ್ದುತ ಸಾಲವ
ನೊದ್ದು ಕೇಳುವನು ಸರ್ವಜ್ಞ.

🌺
ಉದ್ದರಿಯ ಕೊಟ್ಟಣ್ಣ ಹದ್ದಾದ ಹಾವಾದ
ಎದ್ದೆದ್ದು ಬರುವ ನಾಯಾದ ಮೈಲಾರ
ಗೊಗ್ಗಯ್ಯನಾದ ಸರ್ವಜ್ಞ.

🌺
ಹಾಲು ಬೋನವು ಲೇಸು ಮಾಲೆ ಕೊರಳಿಗೆ ಲೇಸು
ಸಾಲವಿಲ್ಲದವನ ಮನೆ ಲೇಸು ಬಾಲಕರ
ಲೀಲೆ ಲೇಸೆಂದ ಸರ್ವಜ್ಞ.

🌺
ಸಿರಿಯ ಸಂಸಾರವನು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ ಸರ್ವಜ್ಞ.

🌺
ಅತಿಯಾಸೆ ಮಾಡುವವನು ಗತಿಗೇಡಿಯಾಗುವನು
ಅತಿ ಆಸೆಯಿಂದ ಮತಿ ಕೆಡುಗು ಅತಿಯಿಂದ
ಸತಿಸುತರು ಕೆಡುಗು ಸರ್ವಜ್ಞ.

🌺
ನಲ್ಲ ಒಲ್ಲಿಯನೊಲ್ಲ ನೆಲ್ಲಕ್ಕಿ ಬೋನೊಲ್ಲ
ಅಲ್ಲವನು ಒಲ್ಲ ಮೊಸರೊಲ್ಲ ಯಾಕೊಲ್ಲ ?
ಇಲ್ಲ ಅದಕೊಲ್ಲ ಸರ್ವಜ್ಞ.

🌺
ಕಾಯಕವು ಉಳ್ಳನಕ ನಾಯಕನು ಎನಿಸಿಪ್ಪ
ಕಾಯಕವು ತೀರ್ದ ಮರುದಿನವೇ ಸುಡುಗಾಡ
ನಾಯಕನು ಎನಿಪ ಸರ್ವಜ್ಞ.

🌺
ಆಳಾಗಬಲ್ಲವನು ಆಳುವನು ಅರಸಾಗಿ
ಆಳಾಗಿ ಬಾಳಲರಿಯದವನು ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ.

🌺
ನಾರಿ ಪರರಿಗುಪಕಾರಿ ನಾರಿ ಸ್ವರ್ಗಕ್ಕೆ ದಾರಿ
ನಾರಿ ಸಕಲರಿಗೆ ಉಪಕಾರಿ ಮುನಿದರಾ
ನಾರಿಯೇ ಮಾರಿ ಸರ್ವಜ್ಞ.

🌺
ಮಾತನೇ ಉಣಕೊಟ್ಟು ಮಾತನೇ ಉಡಕೊಟ್ಟು
ಮಾತಿನ ಮುದ್ದ ತೊಡಕೊಟ್ಟು ಬೆಳಗೆ ಹೋ
ದಾತನೇ ಜಾಣ ಸರ್ವಜ್ಞ.

🌺
ಹಸಿವಿಲ್ಲದುಣಬೇಡ ಹಸಿದು ಮತ್ತಿರಬೇಡ
ಬಿಸಿ ಮಾಡಿ ತಂಗುಳುಣಬೇಡ ವೈದ್ಯನಾ
ಗಸಣೆಯೇ ಬೇಡ ಸರ್ವಜ್ಞ.

🌺
ನಾಲಿಗೆಯ ಕಟ್ಟಿದನು ಕಾಲನಿಗೆ ದೂರನಹ
ನಾಲಿಗೆ ರುಚಿಗಳ ಮೇಲಾಡುತಿರಲವನ
ಕಾಲಹತ್ತರವು ಸರ್ವಜ್ಞ.

🌺
ಕೊಟ್ಟಣವ ಕುಟ್ಟುವುದು ಮೊಟ್ಟೆಯನು ಹೊರಿಸುವುದು
ಬಿಟ್ಟಿಕೂಲಿಗಳ ಮಾಡಿಸುವುದು ಗೇಣು
ಹೊಟ್ಟೆ ಕಾಣಯ್ಯ ಸರ್ವಜ್ಞ.

🌺
ಸಾಲವನು ಮಾಡುವದು ಹೇಲ ತಾ ಬಳಿಸುವುದು
ಕಾಲಿನಾ ಕೆಳಗೆ ಕೆಡಹುವದು ತುತ್ತಿನಾ
ಚೀಲ ಕಾಣಯ್ಯ ಸರ್ವಜ್ಞ.

🌺
ಕುಲವನ್ನು ಕೆಡಿಸುವದು ಛಲವನ್ನು ಬಿಡಿಸುವದು
ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ
ಬಲವ ನೋಡೆಂದ ಸರ್ವಜ್ಞ.

🌺
ಅಟ್ಟಿ ಹರಿದಾಡುವದು ಬಟ್ಟೆಯಲಿ ಮೆರೆಯುವದು
ಹೊಟ್ಟೆ ಹುಣ್ಣಾಗಿ ನಗಿಸುವದು ಒಂದು ಹಿಡಿ
ಹಿಟ್ಟು ಕಾಣಯ್ಯಾ ಸರ್ವಜ್ಞ.

🌺
ಉಕ್ಕುವದು ಸೊಕ್ಕುವದು ಕೆಕ್ಕನೇ ಕೆಲೆಯುವದು
ರಕ್ಕಸನವೋಲು ಮದಿಸುವದು ಒಂದು ಸೆರೆ
ಯಕ್ಕಿಯಾ ಗುಣವು ಸರ್ವಜ್ಞ.

🌺
ಬಟ್ಟೆಯನು ಉಡಿಸುವದು ಸೆಟ್ಟಿಯೆಂದೆನಿಸುವದು
ಕಟ್ಟಾಣಿ ಸತಿಯ ಕುಣಿಸುವದು ತಾ ಚೋಟು
ಹೊಟ್ಟೆ ಕಾಣಯ್ಯ ಸರ್ವಜ್ಞ.

🌺
ನೇತ್ರಗಳು ಕಾಣಿಸವು ಶ್ರೋತ್ರಗಳು ಕೇಳಿಸವು
ಗಾತ್ರಗಳು ಎದ್ದು ನಡೆಯುವವು ಕೂಳೊಂದು
ರಾತ್ರಿ ತಪ್ಪಿದರೆ ಸರ್ವಜ್ಞ.

🌺
ಅಡಿಗಳೆದ್ದೇಳವವು ನುಡಿಗಳೂ ಕೇಳಿಸವು
ಮಡದಿಯರ ಮಾತು ಸೊಗಸದು ಕೂಳೊಂದು
ತಡೆದರಗಳಿಗೆ ಸರ್ವಜ್ಞ.

🌺
ನಿದ್ದೆಗಳು ಬಾರವವು ಬುದ್ಧಿಗಳು ತಿಳಿಯವವು
ಮುದ್ದಿನಾ ಮಾತು ಸೊಗಸವವು ಬೋನದಾ
ಮುದ್ದೆ ತಪ್ಪಿದರೆ ಸರ್ವಜ್ಞ.

🌺
ಎತ್ತ ಹೋದರು ಒಂದು ತುತ್ತು ಕಟ್ಟಿರಬೇಕು
ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು
ಎತ್ತಬೇಕೆಂದ ಸರ್ವಜ್ಞ.

🌺
ತಿತ್ತಿ ಹೊಟ್ಟೆಗೆ ಒಂದು ತುತ್ತು ತಾ ಹಾಕುವದು
ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ
ಗೆತ್ತಬೇಕೆಂದ ಸರ್ವಜ್ಞ.

🌺
ಅನ್ನದೇವರ ಮುಂದೆ ಇನ್ನು ದೇವರು ಉಂಟೇ ?
ಅನ್ನವಿರುವ ತನಕ ಪ್ರಾಣವೀ ಜಗದೊಳಗೆ
ಅನ್ನವೇ ದೈವ ಸರ್ವಜ್ಞ.

🌺
ಅನ್ನವನು ಇಕ್ಕುವದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.

🌺
ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ
ಅಲ್ಲದಹುದೆಂಬ ಅಜ್ಞಾನಿಯೊಡನಾಟ
ಕಲ್ಲು ಹಾದಂತೆ ಸರ್ವಜ್ಞ.

🌺
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಲು
ಕ್ಷಣಕೊಮ್ಮೆಯೊಂದ ಗುಣಿಸುವವನ ಜಪಕೊಂದು
ಎಣಿಕೆಯದುಂಟೆ ಸರ್ವಜ್ಞ.

🌺
ಭಿಕ್ಷವ ತಂದಾದೊಡಂ ಭಿಕ್ಷವನಿಕ್ಕುಣಬೇಕು
ಅಕ್ಷಯಪದವು ತನಗಕ್ಕು ಇಕ್ಕದೊಡೆ
ಭಿಕ್ಷುಕನೆಯಕ್ಕು ಸರ್ವಜ್ಞ.

🌺
ಮಾನವನ ದುರ್ಗುಣವನೇನೆಂದು ಬಣ್ಣಿಸುವೆ
ದಾನವಗೈಯೆನಲು ಕನಲುವ ದಂಡವನು
ಮೌನದಿಂ ತೆರುವ ಸರ್ವಜ್ಞ.

🌺
ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ
ಲೆಕ್ಕವ ಕಲಿತ ಕರಣಿಕನು ನರಕದಲಿ
ಹೊಕ್ಕಿರಲು ಕಲಿತ ಸರ್ವಜ್ಞ.

🌺
ಉತ್ತೊಮ್ಮೆ ಹರಗುವುದು ಬಿತ್ತೊಮ್ಮೆ ಹರಗುವುದು
ಮತ್ತೊಮ್ಮೆ ಹರಗಿ ಕಳೆದೆಗೆದು ಬೆಳೆಯೆ
ತನ್ನೆತ್ತರ ಬೆಳವ ಸರ್ವಜ್ಞ.

🌺
ಕ್ಷೇತ್ರವರಿಯದ ಬೀಜ ಪಾತ್ರವರಿಯದ ದಾನ
ಸಾತ್ವಿಕವನರಿಯದನ ಧರ್ಮದರ್ದಿಗನು
ಮೂತ್ರಗೈದಂತೆ ಸರ್ವಜ್ಞ.

🌺
ಅಕ್ಕರ ಹದಿನಾರುಲಕ್ಕ ಓದಿದರೇನು
ತಕ್ಕುದನರಿಯ ದಯವಿಲ್ಲದವನೋದು
ರಕ್ಕಸರೋದು ಸರ್ವಜ್ಞ.

🌺
ಹಲವನೋದಿದಡೇನು ಚೆಲುವನಾದಡೆಯೇನು
ಕುಲವಂತನಾಗಿ ಫಲವೇನು ಲಿಂಗದ
ಒಲವಿಲ್ಲದನಕ ಸರ್ವಜ್ಞ.

🌺
ಲಿಂಗ ಉಳ್ಳನೆ ಪುರುಷ ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ ವತುಳಸುಖ
ಲಿಂಗದಿಂ ಜನನ ಸರ್ವಜ್ಞ.

🌺
ನಡೆಯುವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ
ನಡುವೆ ಎತ್ತಣದು? ಸರ್ವಜ್ಞ.

🌺
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ?
ಜಾತಿವಿಜಾತಿಯೆನಬೇಡ ದೇವನೊಲಿದಾತನೇ
ಜಾತ ಸರ್ವಜ್ಞ.

🌺
ಎತ್ತಾಗಿ ತೊತ್ತಾಗಿ ಹಿತ್ತಲದ ಗಿಡವಾಗಿ
ಮತ್ತೆ ಪಾದದಾ ಕೆರವಾಗಿ ಗುರುವಿನಾ
ಹತ್ತಿಲಿರು ಸರ್ವಜ್ಞ.

🌺
ವಿದ್ಯೆ ಕಲಿತರೆ ಇಲ್ಲ ಬುದ್ಧಿ ಕಲಿತರೆ ಇಲ್ಲ
ಉದ್ಯೋಗ ಮಾಡಿದರೆ ಇಲ್ಲ ಗುರುಕರುಣ
ವಿದ್ದಲ್ಲದಿಲ್ಲ ಸರ್ವಜ್ಞ.

🌺
ಎತ್ತ ಹೋದರೆ ಮನ ಹತ್ತಿಕೊಂಡಿರುತಿಹುದು
ಮತ್ತೊಬ್ಬ ಮುನಿದು ಕೊಳಲರಿಯ ಜ್ಞಾನದಾ
ಬಿತ್ತು ಲೇಸಯ್ಯ ಸರ್ವಜ್ಞ.

🌞🌞🌞🌞🌞🌞🌞🌞🌞