ವಿಶ್ವ ಶಿಕ್ಷಕರ ದಿನದ ಶುಭಶಾಯಗಳು WORLD TEACHERS DAY BEST WISHES


ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿತು. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ.

ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಭಾರತದಲ್ಲಿ  ಆಚರಿಸಲಾಗುತ್ತದೆ.

ಸರ್ವಪಲ್ಲಿ ರಾಧಾಕೃಷ್ಣನ್ ಇವರ ಬಗ್ಗೆ ತಿಳುವಳಿಕೆ ಪಡೆಯುವ.

(ಜನನ : 5 ನೇ ಸೆಪ್ಟೆಂಬರ್, 1888.) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ 5 "ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ(1962) ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ.

ಜನನ ಬಾಲ್ಯ ಹಾಗೂ ವಿದ್ಯಾಭ್ಯಾಸ

'ಸರ್ವಪಲ್ಲಿ ರಾಧಾಕೃಷ್ಣನ್' ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ.(ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುತ್ರ ಸರ್ವಪಲ್ಲಿ ಗೋಪಾಲ್ ಅವರು ತಮ್ಮ ತಂದೆಯ ಬಗ್ಗೆ ಬರೆದ ಜೀವನಚರಿತ್ರೆಯಲ್ಲಿ ರಾಧಾಕೃಷ್ನನ್ ಅವರ ಜನ್ಮದಿನಾಂಕ 20-09-1887 ಎಂದಿದೆ) ಸರ್ವಪಲ್ಲಿಎನ್ನುವುದು ಮನೆತನದ ಹೆಸರಾದರೆ, 'ರಾಧಾಕೃಷ್ಣನ್' ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟ ಪಡುವ ಸಂದರ್ಭದಲ್ಲಿ 'ರಾಧಾಕೃಷ್ಣನ್‌'ಗೆ ಓದಬೇಕೆನ್ನುವ ಅಪಾರ ಹಂಬಲ! 'ಸ್ಕಾಲರ್‌ಶಿಪ್ ಹಣ'ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ 'ಬಿ.ಎ' ಮತ್ತು 'ಎಂ.ಎ. ಪದವಿ'ಗಳನ್ನು ಪಡೆದು ಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವು ಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ವಿವಾಹ

ವೆಲ್ಲೂರಿನಲ್ಲಿರುವಾಗಲೇ ಕೇವಲ 16 ನೇ ವಯಸ್ಸಿನಲ್ಲಿಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್,  1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.

ಮಹಾ ಶಿಕ್ಷಕನಾಗಿ

ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು "ರಾಧಾಕ್ರಿಶ್ಣಯ್ಯ"ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.

ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ

ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು

1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ

1952 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ 'ರಾಧಾಕೃಷ್ಣನ್', ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. 'ರಾಧಾಕೃಷ್ಣನ್' ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು.ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ.

' ಶಿಕ್ಷಕರ ದಿನಾಚರಣೆಯ ದಿನ'

ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಬಿರುದುಗಳು

ಬ್ರಿಟನ್ ಆಕ್ಸ್ ಫಾರ್ಡ್ ವಿ.ವಿ. ಗೌರವ ಡಾಕ್ಟರೇಟ್ (1951 ),ಅಮೇರಿಕ ಹಾರ್ವರ್ಡ್ ವಿ.ವಿ. ಗೌರವ ಡಾಕ್ಟರೇಟ್ (1953 ),ಲಂಡನ್ ಪ್ರವಾಸದಲ್ಲಿದ್ದಾಗ "ಆರ್ಡರ್ ಆಫ್ ಮೆರಿನ್"ಪ್ರಶಸ್ತಿ,ವ್ಯಾಟಿಕನ್ ಸಿಟಿ ಪೋಪ್ ಜಾನ್ ರಿಂದ "ನೈಟ್ ಆಫ್ ದ ಆರ್ಮಿ.ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ -1968 ,ಭಾರತೀಯ ವಿದ್ಯಾಭವನ "ಬ್ರಹ್ಮ ವಿದ್ಯಾ ಭಾಸ್ಕರ "ಬಿರುದು,"ಟೆಂಪಲ್ಟನ್"ಪ್ರಶಸ್ತಿ 1973ರಲ್ಲಿ."1954 ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ಗೌರವ

ನಿಧನ

ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ 1967 ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, 1975 ರ ಏಪ್ರಿಲ್ 17 ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.

ನಿಮ್ಮ ಮಾಹಿತಿಗಾಗಿ ನಿಮ್ಮವ,

ಕರ್ನಾಟಕ ರಾಜ್ಯ ನೇಕಾರ ಸಂಘದ

ರಾಜ್ಯಾಧ್ಯಕ್ಷರು,

ಎಣ್ಣೆಗೆರೆ ಆರ್. ವೆಂಕಟರಾಮಯ್ಯ
( ವೈ.ವಿ.ರಾಜು)

YENNEGERE R. VENKATARAMAIAH
( Y.V.RAJU)

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023