ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ..!


Job--01
ಬೆಂಗಳೂರು, ಮೇ  6 – ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ .  ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 403 ಕೆಎಎಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು , ಮುಂದಿನ ವಾರ ಅಧಿಸೂಚನೆ ಹೊರಡಿಸಲಿದೆ.   ಜೂನ್ ತಿಂಗಳಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು , ಜುಲೈ ತಿಂಗಳಿನಲ್ಲಿ ಅಂತಿಮ ಪರೀಕ್ಷೆ , ವ್ಯಕ್ತಿ ಸಂದರ್ಶನ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.   ಹೋಟಾ ಸಮಿತಿಯ ಶಿಫಾರಸ್ಸಿನಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು , ವ್ಯಕ್ತಿ ಸಂದರ್ಶನ ಸೇರಿದಂತೆ ಎಲ್ಲವನ್ನೂ ವಿಡಿಯೋ ಮೂಲಕ ಚಿತ್ರೀಕರಿಸಿ ಸಂಪೂರ್ಣ ಪಾರದರ್ಶಕವಾಗಿ ಮೂಲಕ ನಡೆಸಲು ಕೆಪಿಎಸ್‍ಸಿ ತೀರ್ಮಾನಿಸಿದೆ.  ಗೆಜಟೆಡ್ ಪ್ರೊಬೆಷನರಿ ಹುದ್ದೆಗಳಲ್ಲಿ ಸಹಾಯಕ ಆಯುಕ್ತರು(ಎಸಿ), ಡಿವೈಎಸ್ಪಿ , ತಹಸೀಲ್ದಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಸೇರಿದಂತೆ ಒಟ್ಟು 403 ಹುದ್ದೆಗಳಿಗೆ ಆಯೋಗ ಅಧಿಸೂಚನೆ ಹೊರಡಿಸಲು ಮುಂದಾಗಿದೆ.
ಮುಂದಿನ ವಾರ ಅಧಿಸೂಚನೆ:
ಅಂದಹಾಗೆ ಕೆಪಿಎಸ್‍ಸಿ ಹುದ್ದೆಗಳ ಭರ್ತಿಗೆ ಮುಂದಿನ ವಾರ ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಲಿದೆ. ಹಣಕಾಸು ಇಲಾಖೆ ಹುದ್ದೆಗಳನ್ನು ಭರ್ತಿ ಮಾಡಲು ಹಸಿರು ನಿಶಾನೆ ಕೊಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಆಯೋಗ ಎಲ್ಲ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಿದೆ. ಇದೇ ಮೊದಲ ಬಾರಿಗೆ ಹೈದರಾಬಾದ್ ಕರ್ನಾಟಕದ  ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ(ಜೆ) ಕಾಯ್ದೆ ಪ್ರಕಾರ ಈ ಭಾಗಕ್ಕೆ ಶೇ.30ರಷ್ಟು ಅಂದರೆ 120 ಹುದ್ದೆಗಳು ಮೀಸಲಿಡಲು ಸರ್ಕಾರ ತೀರ್ಮಾನಿಸಿದೆ.
ಹೈದರಾಬಾದ್ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಇದರ ಜೊತೆಗೆ ಮಹಿಳೆಯರಿಗೆ ಶೇ.33ರಷ್ಟು ಅಂದರೆ 132 ಹುದ್ದೆಗಳನ್ನು ಮೀಸಲಿಡುವಂತೆ ಸರ್ಕಾರ ಸೂಚನೆ ಕೊಟ್ಟಿದೆ. ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದ್ದು , ಜೂನ್ ತಿಂಗಳಿನಲ್ಲಿ ಪೂರ್ವಭಾವಿ, ಜುಲೈ ತಿಂಗಳಿನಲ್ಲಿ ಮುಖ್ಯ ಪರೀಕ್ಷೆಯ ಜೊತೆಗೆ ವ್ಯಕ್ತಿ ಸಂದರ್ಶನ ನಡೆಯಲಿದೆ.
ಕನ್ನಡ ಕಡ್ಡಾಯ:
ಈ ಬಾರಿ ಯಾವುದೇ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡರೆ ಕನ್ನಡ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಲೇಬೇಕು. 150 ಅಂಕಗಳಿಗೆ ನಡೆಯುವ ಪರೀಕ್ಷೆಯಲ್ಲಿ ಕನಿಷ್ಟ 50 ಅಂಕಗಳನ್ನು ಕಡ್ಡಾಯವಾಗಿ ಪಡೆಯಲೇಬೇಕಾಗುತ್ತದೆ. ಮಾತೃಭಾಷೆ ಪರೀಕ್ಷೆಯಲ್ಲಿ 50ಕ್ಕಿಂತ ಕಡಿಮೆ ಅಂಕ ಪಡೆದರೆ ಪರಿಗಣಿಸದಿರಲು ಕೆಪಿಎಸ್‍ಸಿ ತೀರ್ಮಾನಿಸಿದೆ.   ಪರೀಕ್ಷೆಯು ಪ್ರತಿ ವಿಷಯಗಳಿಗೆ 200 ಅಂಕಗಳಿಗೆ ನಡೆಯಲಿದ್ದು , ಬಹು ಆಯ್ಕೆ ಮತ್ತು ವಸ್ತುನಿಷ್ಠ ಪರೀಕ್ಷೆಯು ನಡೆಯಲಿದೆ. ಈ ಬಾರಿ ವ್ಯಕ್ತಿ ಸಂದರ್ಶನವನ್ನು 1:3 ಬದಲಿಗೆ 1:5ಗೆ ಏರಿಕೆ ಮಾಡಲಾಗಿದೆ.
ಪಾರದರ್ಶಕಕ್ಕೆ ಒತ್ತು:
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಲ್ಲಿ ಪ್ರಮುಖವಾಗಿ ಕೆಪಿಎಸ್‍ಸಿಗೆ ಅಂಟಿಕೊಂಡಿರುವ ಭ್ರಷ್ಟಾಚಾರ ಕಳಂಕವನ್ನು ಹೋಗಲಾಡಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಪದೇ ಪದೇ ಕೇಳಿ ಬರುತ್ತಿದ್ದ ಭ್ರಷ್ಟಾಚಾರವನ್ನು ಹೋಗಲಾಡಿಸುವ ಉದ್ದೇಶದಿಂದ ಕೆಪಿಎಸ್‍ಸಿ ಹೋಟಾ ಸಮಿತಿಯ ಶಿಫಾರಸ್ಸಿನಂತೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023