14 Jun, 2017 ಪ್ರಜಾವಾಣಿ ವಾರ್ತೆ ಆತ್ಮೀಯ ಶಿಕ್ಷಕ ಬಂಧುಗಳೇ, ನನ್ನ ಮಗ ಸರ್ಕಾರಿ ಶಾಲೆಗೆ ಹೋಗ್ತಿನಿ ಅಂದಾಗ ಖುಷಿಪಟ್ಟು ಅವನೊಂದಿಗೆ ಈ ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದೇನೆ. ಸಾಧ್ಯವಾದರೆ ಓದಿ. ಇದು ನನ್ನ ಸಲಹೆಯೂ ಅಲ್ಲ, ಆಗ್ರಹವೂ ಅಲ್ಲ. ಹಾಗೆಂದು ನಿಮಗೆ ವಿನಂತಿಯೂ ಅಲ್ಲ. ಇದು ನನ್ನ ಮಗನ ಕುರಿತಾದ ನನ್ನ ಮಿಡಿತ. ನನ್ನ ಮಗನಿಗೆ ಇದನ್ನೇ ಕಲಿಸಿ, ಹೀಗೆ ಕಲಿಸಿ ಅಂತ ಸೂಚಿಸುವ ಪ್ರಯತ್ನವೂ ಅಲ್ಲ ಇದು. ನನ್ನೊಂದಿಗೆ ಹುಟ್ಟಿಕೊಂಡ ಮಾತುಗಳ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ. ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. ಒಂದು ಉನ್ನತ ಕೆಲಸ ಹಿಡಿಯುವುದಕ್ಕಾಗಿ ನಾನು ಓದಿಗೆ ಬಂದಿದ್ದೇನೆ ಎಂದು ಹೇಳಿಕೊಡಬೇಡಿ. ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ ಮಾಡುವುದು ಶ್ರೇಷ್ಠ ಎಂಬುದನ್ನು ಹೇಳಿಕೊಡಿ. ಅವನಿಗೆ ಪುಸ್ತಕಗಳ ಓದಿನ ಹುಚ್ಚು ಹಿಡಿಯುವಂತೆ ಮಾಡಿ. ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ, ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ. ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಹೇಳಿಕೊಡಿ. ನೋವಿನಲ್ಲೂ ನಗುವುದನ್ನು ಕಲಿಸಿ, ಎಲ್ಲರೂ ತನ್ನವರಂತೆ ಕಾಣುವುದನ್ನು ಕಲಿಸಿ, ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ, ಸಮಾಜದ ಮೋಸಗಳನ್ನ...