ಮುಕ್ತ ವಿವಿ ಕೋರ್ಸ್‌ಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ಇಲ್ಲ
ಬೆಂಗಳೂರು, ಫೆ.2-ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆಗೆ ನೇಮಕ ಮಾಡಲು ಪಿಯುಸಿ ಕೋರ್ಸ್‌ಗೆ ತತ್ಸಮಾನವಾದ ಕೋರ್ಸ್‌ಗಳ ವಿದ್ಯಾರ್ಹತೆಯನ್ನು ಪರಿಗಣಿಸಲು ಸರ್ಕಾರ ಆದೇಶ ಹೊರಡಿಸಿದೆ. ಅನುಕಂಪದ ಆಧಾರದ ನೇಮಕಾತಿ ಮಾಡುವ ಅಧಿಕಾರವಿರುವ ಎಲ್ಲಾ ಪ್ರಾಧಿಕಾರಗಳು ಇನ್ನು ಮುಂದೆ ಈ ಅಂಶವನ್ನು ಗಮನಿಸುವಂತೆ ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ಸೂಚಿಸಿದೆ. ಸರ್ಕಾರಿ ನೌಕರರ ನಿವೃತ್ತಿಗೂ ಮುನ್ನ ಮರಣ ಹೊಂದಿದರೆ ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಹುದ್ದೆ ನೀಡಲಾಗುತ್ತದೆ.
ಅಂತಹ ಹುದ್ದೆಗೆ ನೇಮಕಾತಿ ಮಾಡುವಾಗ ಎಸ್‌ಎಸ್‌ಎಲ್‌ಸಿ ನಂತರ ಪದವಿ ಪೂರ್ವ ಶಿಕ್ಷಣಕ್ಕೆ ಬದಲಾಗಿ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೋ ಕೋರ್ಸ್‌ನ್ನು ತತ್ಸಮಾನವೆಂದು ನೇಮಕಾತಿಯಲ್ಲಿ ಪರಿಗಣಿಸಬಹುದಾಗಿದೆ. ಆದರೆ ಮುಕ್ತ ವಿಶ್ವವಿದ್ಯಾಲಯಗಳು ನಡೆಸುವ 10+2 ಪರೀಕ್ಷೆಯನ್ನು ನೇಮಕಾತಿಗೆ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2013, ಡಿ.13ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮ 1978ರ ನಿಯಮ 4ಕ್ಕೆ ತಿದ್ದುಪಡಿ ಮಾಡಿದ್ದು, ಹಿರಿಯ ಸಹಾಯಕ ಅಥವಾ ದ್ವಿತೀಯ ದರ್ಜೆ ಸಹಾಯಕರ ನೇರ ನೇಮಕಾತಿಗೆ ಪದವಿಪೂರ್ವ ಶಿಕ್ಷಣ ಪರೀಕ್ಷೆ ಅಥವಾ ಅದರ ತತ್ಸಮಾನ ವಿದ್ಯಾರ್ಹತೆ ಎಂದು ತಿದ್ದುಪಡಿ ಮಾಡಲಾಗಿದೆ. 1996ರ ಸಿವಿಲ್ ಸೇವಾ ನಿಯಮಗಳ ಅನ್ವಯ ಕಿರಿಯ ಸಹಾಯಕರು ಅಥವಾ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪದವಿ ಪೂರ್ವ ಶಿಕ್ಷಣ ಪರೀಕ್ಷೆಗೆ ತತ್ಸಮಾನವಾದ ವಿದ್ಯಾರ್ಹತೆ ಬಗ್ಗೆ ಹಲವು ಇಲಾಖೆಗಳು ಸ್ಪಷ್ಟೀಕರಣ ಬಯಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.
Comments
Post a Comment