ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಕತ್ರಿನಾ ಕೈಫ್
್
ಲಂಡನ್: ಜನಪ್ರಿಯ ನಟಿ ಕತ್ರಿನಾ ಕೈಫ್ ಅವರು ಶನಿವಾರ ಇಂಗ್ಲೆಂಡಿನ ಪ್ರತಿಷ್ಠಿತ ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಸೇರ್ಪಡೆಯಾದ 7ನೇ ಬಾಲಿವುಡ್ ತಾರೆಯೆನಿಸಿದರು.
ಬ್ರಿಟಿಷ್-ಭಾರತೀಯ ನಟಿ 1,50,000 ಪೌಂಡ್ ಮೌಲ್ಯದ ತನ್ನ ದೇಹಗಾತ್ರದ ಮೇಣದ ಪ್ರತಿಮೆಯನ್ನು (ವ್ಯಾಕ್ಸ್ ಸ್ಟ್ಯಾಚ್ಯೂ) ಸ್ವತಃ ಅನಾವರಣಗೊಳಿಸುವ ಮೂಲಕ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಸೇರಿದ ಇತ್ತೀಚಿನ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ತನ್ನ ಮೇಣದ ಪ್ರತಿಮೆಯ ಎದುರು ನಿಂತ 31ರ ಹರೆಯದ ಕತ್ರಿನಾ 'ಇದು ಅದ್ಭುತ. ಇದು ನಿಜವಾಗಿಯೂ ನನ್ನಂತೆಯೇ ಇದೆ' ಎಂದು ಉದ್ಘರಿಸಿದರು.
'ನಮ್ಮ ವಿಶ್ವವಿಖ್ಯಾತ ಶಿಲ್ಪಿಗಳು ಕಳೆದ ಒಂದು ದಶಕದಿಂದ ಭಾರತೀಯ ಚಲನಚಿತ್ರ ಉದ್ಯಮದ ಜೊತೆಗೆ ನಿಕಟವಾಗಿ ದುಡಿದಿದ್ದಾರೆ. ಈಗ ನಾವು ಬಾಲಿವುಡ್ಗಾಗಿಯೇ ಪ್ರತಿಮೆಗಳ ಸಾಲು ನಿರ್ಮಾಣ ಮಾಡಿದ್ದೇವೆ. ಈ ಪ್ರತಿಮೆಗಳ ಸಾಲು ಅತ್ಯಂತ ಹೆಚ್ಚು ಜನಪ್ರಿಯ ವಿಭಾಗವಾಗಿದೆ' ಎಂದು ಮೇಡಂ ಟುಸ್ಸಾಡ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬ್ರಿಟಿಷ್ ತಾಯಿ ಮತ್ತು ಕಾಶ್ಮೀರಿ ತಂದೆಗೆ ಜನಿಸಿದ ಕತ್ರಿನಾ ಕಳೆದ ವರ್ಷ ಮೇಡಂ ಟುಸ್ಸಾಡ್ಸ್ ನಡೆಸಿದ್ದ ಆನ್ಲೈನ್ ಸ್ಪರ್ಧೆಯಲ್ಲಿ ಪ್ರಿಯಾಂಕ ಛೋಪ್ರಾ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಸೆಣಸಿದ್ದರು. ಪಂಜಾಬ್ ರೇಡಿಯೋದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕತ್ರಿನಾ ಪರ 2,25,00 ಮತಗಳು ಬಂದಿದ್ದವು.
ಕತ್ರಿನಾಗೆ ಮುನ್ನ ಬಾಲಿವುಡ್ನ ಅಮಿತಾಭ್ ಬಚ್ಚನ್ (2000), ಐಶ್ವರ್ಯ ರೈ (2004), ಶಾ ರುಖ್ ಖಾನ್ (2007), ಸಲ್ಮಾನ್ ಖಾನ್ (2008), ಹೃತಿಕ್ ರೋಷನ್ (2011) ಮತ್ತು ಮಾಧುರಿ ದೀಕ್ಷಿತ್-ನೆನೆ (2012) ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಸೇರಿದ್ದಾರೆ.
Comments
Post a Comment