ವಿ ಕ ವಿಶೇಷ : ಗಣತಿ ಗೊಂದಲ:

ದೇಶದಲ್ಲಿಯೇ ಅತಿ ವಿಸ್ತೃತ ಜಾತಿ ಗಣತಿ ಎನ್ನಬಹುದಾದ
ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ
ಸಮೀಕ್ಷೆಗೆ ರಾಜ್ಯಾದ್ಯಂತ ಚಾಲನೆ ಸಿಕ್ಕಿದೆ.
ಆದರೆ, ಸಮೀಕ್ಷೆಗೆ ಆರಂಭದಲ್ಲೇ ಹಲವು ಎಡರು-
ತೊಡರುಗಳು ಎದುರಾಗಿದ್ದು ಸಹಜ. ಜಾತಿಗಳ ಬಗೆಗಿನ ಕೋಡ್
ನಮೂದಿಸುವಲ್ಲಿ ಜನಸಾಮಾನ್ಯರಿಗೆ ಇರುವ ಅರಿವಿನ
ಕೊರತೆ, ಎಲ್ಲ 55 ಪ್ರಶ್ನೆಗಳಿಗೂ ಕೋಡ್ ಹುಡುಕಿ ಉತ್ತರ
ಪಡೆಯುವುದು ಗಣತಿದಾರರಿಗೂ ಸವಾಲಿನ ಕೆಲಸ ಅನಿಸಿತು.
ಆದರೆ, ತದನಂತರ ಗ್ರಾಮೀಣ ಪ್ರದೇಶದಲ್ಲಿ
ಗಣತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ,
ಬೆಂಗಳೂರಿನಂತಹ ನಗರದಲ್ಲಿ ಸಮೀಕ್ಷೆ ಇನ್ನೂ
'ಟೇಕಾಫ್' ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ
ರಾಜಧಾನಿಯಲ್ಲಿ ಸಮೀಕ್ಷೆಗೆ ಚಾಲನೆ
ನೀಡಲಾಗಿದೆ. ರಾಜ್ಯದಲ್ಲಿ ಏ. 11ರಿಂದ
ಪ್ರಾರಂಭವಾದ ಈ ಗಣತಿ 30ರವರೆಗೆ ಮುಂದುವರಿಯಲಿದೆ.
ರಾಜ್ಯದಲ್ಲಿನ 1.26 ಕೋಟಿ ಮನೆಗಳ ಸಮೀಕ್ಷೆಗಾಗಿ
1.33 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬ
ಗಣತಿದಾರನಿಗೆ 120ರಿಂದ 150 ಮನೆಗಳನ್ನು ಹಂಚಿಕೆ
ಮಾಡಲಾಗಿದೆ ಎಂದು ಆಯೋಗ ಹೇಳುತ್ತಿದ್ದರೂ ಕೆಲವು ಕಡೆಗಳಲ್ಲಿ
200ಕ್ಕೂ ಅಧಿಕ ಮನೆಗಳನ್ನು ಹಂಚಲಾಗಿದೆ ಎಂದು
ಗಣತಿದಾರರು ಅಲವತ್ತುಕೊಳ್ಳುತ್ತಿದ್ದಾರೆ.
ಒಬ್ಬ ಗಣತಿದಾರ ಒಂದು ಮನೆ ಸಮೀಕ್ಷೆ ನಡೆಸಲು
ಕನಿಷ್ಟ 40ರಿಂದ 45 ನಿಮಿಷ ಸಮಯ ಬೇಕಾಗುತ್ತದೆ. ಎಲ್ಲ
55 ಪ್ರಶ್ನೆಗಳಿಗೂ ಉತ್ತರ ಪಡೆದು ಪಟ್ಟಿಯಲ್ಲಿನ ಸರಿಯಾದ ಕೋಡ್
ಸಂಖ್ಯೆ ಹುಡುಕಿ ನಮೂದಿಸಲು ಸಾಕಷ್ಟು ಸಮಯ ಹಿಡಿಯುತ್ತಿದೆ.
ಹೀಗಾಗಿ, ದಿನಕ್ಕೆ ಐದಾರು ಮನೆಗಳಂತೆ 20 ದಿನಗಳಲ್ಲಿ
100ರಿಂದ 120 ಮನೆಗಳಷ್ಟೇ ಸಮೀಕ್ಷೆ ಮಾಡಲು
ಮಾತ್ರ ಸಾಧ್ಯವಾಗಬಹುದು. ಇದರಿಂದ ನಿಗದಿತ ಅವಧಿಯಲ್ಲಿ
ಹಂಚಿಕೆ ಮಾಡಿದಂತಹ ಮನೆಗಳ ಸಮೀಕ್ಷೆ
ನಡೆಸುವುದು ಕಷ್ಟ ವಾಗಲಿದೆ ಎಂದು ಹೆಸರೇಳಲಿಚ್ಛಿಸದ
ಗಣತಿದಾರರೊಬ್ಬರು ಅಳಲು
ತೋಡಿಕೊಂಡರು.
ಗಣತಿದಾರರು ಸಾರ್ವಜನಿಕರು ನೀಡುವ ಉತ್ತರವನ್ನು
ಮೊದಲು ಪೆನ್ಸಿಲ್ನಲ್ಲಿ ಗುರುತು
ಮಾಡಿಕೊಳ್ಳುತ್ತಿದ್ದರು. ರಾತ್ರಿ ವೇಳೆ ಮನೆಗಳಲ್ಲಿ
ಮತ್ತೆ ಸರ್ಕಸ್ ಮಾಡಿ ಜಾತಿ ಮತ್ತಿತರ ವಿಷಯಗಳಿಗೆ
ಸಂಬಂಧಿಸಿದ ಕೋಡ್ ಗುರುತಿಸಿ ಸ್ಪಷ್ಟವಾದ ಮಾಹಿತಿಯನ್ನು
ಪೆನ್ನಲ್ಲಿ ಗುರುತು ಮಾಡಿಕೊಳ್ಳುತ್ತಿದ್ದರು. ಆದರೆ,
ಇದಕ್ಕೆ ಹಿಂದುಳಿದ ವರ್ಗಗಳ ಆಯೋಗ ಕಡಿವಾಣ ಹಾಕಿದೆ.
ಪೆನ್ನಲ್ಲಿಯೇ ಗುರುತು ಮಾಡುವುದನ್ನು
ಕಡ್ಡಾಯಗೊಳಿಸಿದೆ.
ಅಪಾರ್ಟ್ಮೆಂಟ್ ಜನರಿಂದ ನಿರಾಸಕ್ತಿ:
ಬೆಂಗಳೂರಿನಂತಹ ನಗರದಲ್ಲಿ
ಅಪಾರ್ಟ್ಮೆಂಟ್ಗಳಲ್ಲಿ ನೆಲೆಸಿರುವ ಜನರು ಸಮೀಕ್ಷೆಗೆ
ನಿರಾಸಕ್ತಿ ತೋರುತ್ತಿರುವುದು ಬೆಳಕಿಗೆ ಬಂದಿದೆ. ಎಲ್ಲ 55
ಪ್ರಶ್ನೆಗಳಿಗೂ ಜನ ಉತ್ತರಿಸುವ ವ್ಯವಧಾನವನ್ನು ತೋರುತ್ತಿಲ್ಲ.
ಇನ್ನು, ಹೊರರಾಜ್ಯಗಳಿಂದ
ಬಂದಂತಹ ಜನರು ಹೆಚ್ಚಿನ ಸಂಖ್ಯೆಯಲ್ಲಿ
ಅಪಾರ್ಟ್ಮೆಂಟ್ಗಳಲ್ಲಿ ನೆಲೆಸಿರುವುದರಿಂದ ಜಾತಿ,
ಮದುವೆಯಾದಾಗಿನ ವಯಸ್ಸು ಮತ್ತಿತರ ಪ್ರಶ್ನೆಗಳಿಗೆ ಉತ್ತರಿಸಲು
ನಿರಾಕರಿಸುತ್ತಿದ್ದಾರೆ. ಒಂದೊಂದು
ಅಪಾರ್ಟ್ಮೆಂಟ್ನಲ್ಲಿ ಅರ್ಧಕ್ಕರ್ಧ ಮನೆಗಳ ಜನರು
ಸಮೀಕ್ಷೆ ಬಗ್ಗೆ ಅಂತಹ ಆಸಕ್ತಿ ತೋರದಿರುವುದು
ಬೆಳಕಿಗೆ ಬಂದಿದೆ. ಇಂತಹ ನಿರ್ದಿಷ್ಟ ಪ್ರಕರಣಗಳ
ಬಗ್ಗೆ ಗಣತಿದಾರರು ಮಾಹಿತಿ ನೀಡಿದಲ್ಲಿ ಪರ್ಯಾಯ
ಕ್ರಮಗಳನ್ನು ಕೈಗೊಳ್ಳುವುದಾಗಿ ಆಯೋಗ ಹೇಳುತ್ತಿದೆ.
ಇನ್ನು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ
ಸೌಲಭ್ಯದಡಿ ಸರಕಾರಿ ಸವಲತ್ತುಗಳನ್ನು ಪಡೆಯಬೇಕೆಂಬ
ಬಯಕೆ ಹೊಂದಿರುವ ಸಾಮಾನ್ಯ
ಜನರಿಂದ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ
ವ್ಯಕ್ತಿಯಾಗುತ್ತಿದೆ. ಆದರೆ, ಆರ್ಥಿಕ ವಿಷಯಗಳಿಗೆ
ಸಂಬಂಧಿಸಿದ ಪ್ರಶ್ನೆಗಳಿಗೆ ಪೂರ್ಣ ವಿವರ
ನೀಡಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ ಎಂಬ
ದೂರುಗಳು ಕೇಳಿ ಬರುತ್ತಿವೆ. ಜಮೀನು, ನಿವೇಶನ, ಬಾಡಿಗೆ ಮನೆ,
ವರಮಾನ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ
ಪ್ರಶ್ನೆಗಳಿಗೆ ಜನ ಯೋಚಿಸಿ ಉತ್ತರ ನೀಡುತ್ತಿದ್ದಾರೆ.
''ನಾವು ಜನರ ಮೇಲೆ ಒತ್ತಡ ಹೇರಿ ಬಲವಂತವಾಗಿ ಮಾಹಿತಿ
ಪಡೆಯುವಂತಿಲ್ಲ. ಮೇಲಾಧಿಕಾರಿಗಳಿಂದಲೂ ನಮಗೆ
ಅಂತಹ ಆದೇಶ ಬಂದಿದೆ. ಅಂತಿಮವಾಗಿ ಜನ ಏನು
ಹೇಳುತ್ತಾರೋ ಅದನ್ನೇ ನಮೂದಿಸುತ್ತಿದ್ದೇವೆ. ತಪ್ಪು ಮಾಹಿತಿ
ನೀಡುತ್ತಾರೆ ಎಂದು ನಮಗೇಕೆ ತಿಳಿಯುತ್ತದೆ,''
ಎಂದು ಗಣತಿದಾರರೊಬ್ಬರು ಪ್ರಶ್ನಿಸಿದರು.
''ಇದುವರೆಗಿನ ಸರಕಾರಗಳು ನಮಗೆ ಸವಲತ್ತು
ಕೊಟ್ಟಿದ್ದು ಅಷ್ಟಕ್ಕಷ್ಟೆ. ಇನ್ನು ಈ ಜಾತಿ
ಸಮೀಕ್ಷೆ ಕಟ್ಟಿಕೊಂಡು
ಯಾರಿಗ್ಯಾನ್ಬೇಕು ಹೋಗಿ ಸಾರ್'' ಎಂದು ಕೆಲವರು ಪ್ರತಿಭಟನೆ
ಸೂಚಿಸಿದ ಘಟನೆಗಳೂ ಅಲ್ಲಲ್ಲಿ ನಡೆದಿವೆ. ಆದರೆ, ಗಣತಿದಾರರು ಅವರ
ಮನವೊಲಿಸಿ ಮಾಹಿತಿ ಪಡೆಯುವಲ್ಲಿ
ಯಶಸ್ವಿಯಾಗುತ್ತಿದ್ದಾರೆ.
**
ನಿದ್ದೆ ಬರ್ತಿದೆ, ತೊಂದ್ರೆ
ಕೊಡ್ಬೇಡಿ
ಕೋಲಾರ: 'ನಮಗೆ ನಿದ್ದೆ ಬರುತ್ತಿದೆ. ತೊಂದರೆ
ಕೊಡಬೇಡಿ. ನೀವು ಕೇಳಿದ ಎಲ್ಲ
ಮಾಹಿತಿಯನ್ನುನೀಡಲು ಸಾಧ್ಯವಿಲ್ಲ, ಜಾತಿ ಕಲಂ
ಪ್ರಶ್ನೆಬಂದಾಗ ಸಿಡುಕಿನಿಂದಲೇ ಉತ್ತರ
ನೀಡ್ತಾರೆ' ಇದು ಕೋಲಾರದ ಹೆಸರು ಹೇಳಲಿಚ್ಛಿಸದ
ಗಣತಿದಾರರೊಬ್ಬರು ನೀಡಿದ ಮಾಹಿತಿ.
ಮನೆಗಳಿಗೆ ತೆರಳಿ ಕಾಲಿಂಗ್ ಬೆಲ್ ಒತ್ತುತ್ತಿದ್ದಂತೆ ಸಿಡುಕು
ಮುಖದಿಂದ ಬಾಗಿಲು ತೆಗೆಯುತ್ತಾರೆ. ಒಲ್ಲದ
ಮನಸ್ಸಿನಿಂದ ಮಾಹಿತಿ ನೀಡುತ್ತಾರೆ. ಅದರಲ್ಲೂ' ಜಾತಿ'
ಕಾಲಂ ವಿಷಯಕ್ಕೆ ಬಂದಾಗ ಕೆಲವರು ಆಕ್ರೋಶ
ವ್ಯಕ್ತಪಡಿಸಿದ್ದೂ ಉಂಟು ಎನ್ನುವುದು
ಗಣತಿದಾರರೊಬ್ಬರ ಅಳಲು.
**
ರಾತ್ರಿಯೂ ಬೆಲ್ ಬಾರಿಸ್ತಾರೆ:
ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಇರುವುದರಿಂದ ಸರಕಾರಿ ಕಚೇರಿ
ವೇಳೆಯನ್ನು ಬೆಳಗಿನ 8 ಗಂಟೆಯಿಂದ ಮಧ್ಯಾಹ್ನ
1.30ಕ್ಕೆ ಬದಲಿಸಲಾಗಿದೆ. ಗಣತಿದಾರರಿಗೆ ಮನೆಯಲ್ಲಿ ಯಜಮಾನ
ಸಿಗದೇ ಇರುವುದರಿಂದ ರಾತ್ರಿಯೂ ಮನೆಗೆ ಹೋಗಿ ಬೆಲ್ ಬಾರಿಸಿ
ಗಣತಿದಾರರು ಮಾಹಿತಿ ಪಡೆಯುತ್ತಿರುವ ಪ್ರಸಂಗ ಜೇವರ್ಗಿ
ಪಟ್ಟಣದಲ್ಲಿ ನಡೆದಿದೆ.
ಬಹುಪತ್ನಿತ್ವ ಮುಚ್ಚಿಡುವ ಪತಿ:
ತನಗೆ ಇಬ್ಬರು ಮೂವರು ಹೆಂಡತಿಯರು ಇದ್ದರೂ
ಯಜಮಾನರಾದವರು ಮಾತ್ರ ಒಬ್ಬಳೇ ಹೆಂಡ್ತಿ ಅಂತ
ಬರೆಸುತ್ತಿದ್ದಾರೆ. ಪರಿಚಯದ ಗಣಿತಿದಾರರು ''ಅಲ್ರಿ ನಿಮ್ಗೆ ಮೂವರು
ಹೆಂಡ್ತೀರು ಇದ್ದಾರಲ್ಲ,'' ಎಂದು
ಪ್ರಶ್ನಿಸಿದ್ದಕ್ಕೆ ಯಜಮಾನ,'' ಬೆಡ್ರೂಂ ಸಮಾಚಾರ್ ಕೇಳ್ಬಾರ್ದು
ಮೇಷ್ಟ್ರೆ,'' ಎಂದು ಉತ್ತರಿಸಿದ ಎಂದು ಹೆಸರು ಹೇಳಲು
ಇಚ್ಛಿಸದ ಗಣತಿದಾರರೊಬ್ಬರು ವಿಜಯ ಕರ್ನಾಟಕಕ್ಕೆ
ತಿಳಿಸಿದರು.
ಆದಾಯ ತೆರಿಗೆ ಪಾವತಿ ಮಾಡುವವರಿದ್ದರೂ ಆದಾಯ ಇಲ್ಲ ಎಂದೇ
ಉತ್ತರಿಸುತ್ತಿದ್ದಾರೆ.
ಶಿವಮೊಗ್ಗ ಸೇರಿದಂತೆ ಕೆಲವರು ಜಾತಿ
ಕಾಲಂನಲ್ಲಿ ಕತ್ತೆ, ಕುದುರೆ ಎಂದು ಬರೆಸಿರುವ ಬಗ್ಗೆ
ತಿಳಿದುಬಂದಿದೆ. ಅದೇ ರೀತಿ ಕೆಲವರು ಮನುಷ್ಯ ಜಾತಿ
ಎಂದು ಬರೆಸಿದ್ದಾರೆ.
**
ಗುರಿ ಮುಟ್ಟಲು ಸಾಧ್ಯವೇ?
ನಿಗದಿ ಪ್ರಕಾರ ಏ 30ರೊಳಗೆ ಗಣತಿ ಮುಗಿಯಬೇಕು.
ಇದು ಮುಗಿಯುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ,
ಗಣತಿದಾರರು ಮಾತ್ರ ಅನುಮಾನ ವ್ಯಕ್ತಪಡಿಸುತ್ತಾರೆ.
''ಜಾತಿ ಗಣತಿಗೆ ನಿಗದಿಯಾಗಿರುವುದು 20 ದಿನ. ಮೂರು ದಿನ ಸುತ್ತಾಡಲು
ಬೇಕು. ಉಳಿದ 17 ದಿನದಲ್ಲಿ ನನಗೆ ನೀಡಿರುವ 120 ಮನೆ
ಸಮೀಕ್ಷೆ ಮಾಡಲು ಸಾಧ್ಯವೇ ಇಲ್ಲ'' ಎಂಬುದು
ಮೈಸೂರಿನ ಶಿಕ್ಷಕಿ ಮಮತ. ಅನುಮಾನ. ''ಮನೆ ಮಾಲೀಕರು
ಸರಿಯಾಗಿ ಸಹಕರಿಸಿದರೆ ಒಂದು ಮನೆಯ ಸಮೀಕ್ಷೆಗೆ
ಕನಿಷ್ಠ ಒಂದು ಗಂಟೆ ಬೇಕು. ಸ್ವಲ್ಪ ಸಹಕಾರ
ನೀಡದಿದ್ದರೂ, ನಾವೇ ಅವರನ್ನು
ಮನವೊಲಿಸಿ, ಓಲೈಸಿ ಮಾಹಿತಿ ಪಡೆಯಲು ಕನಿಷ್ಠ 2
ಗಂಟೆ ಬೇಕು. ಈ ಲೆಕ್ಕದಲ್ಲಿ ಒಂದು ದಿನ ಆರೇಳು ಮನೆ
ಗಣತಿ ಮಾಡಬಹುದಷ್ಟೇ'' ಎಂಬುದು ಅವರು ಒಪ್ಪಿಸುವ ಲೆಕ್ಕಾಚಾರ.
ಬಳ್ಳಾರಿಯ ಗಣತಿದಾರರಾದ ಕೆ ಮಂಜುಳಾ ಮತ್ತು ಪಾರಿಜಾತ
ಅವರಿಗೂ ಇದೇ ಸಂಶಯ. ''ಜಾತಿ ಗಣತಿ ವೇಗವಾಗಿ ಸಾಗಲು ಎಲ್ಲರಿಗೂ
ಒಬ್ಬ ಸಹಾಯಕರನ್ನು ನೀಡಿದರೆ ಒಳಿತು. ಗಣತಿ ಕಾರ್ಯಕ್ಕೆ
ತೆರಳುವ ಮುನ್ನ, ನಮ್ಮಲ್ಲಿರುವ ಮನೆಗಳ ಮಾಹಿತಿಗೂ ಸ್ಥಳಕ್ಕೆ
ಹೋದಾಗ ಇರುವ ಮನೆಗಳ ಸಂಖ್ಯೆಗೂ ಅಜಗಜಾಂತರ
ವ್ಯತ್ಯಾಸ ಕಂಡುಬರುತ್ತಿದೆ,'' ಎನ್ನುವುದು ಅವರ ಅಳಲು.
**
ಜಾತಿ ಇಲ್ಲ
ಜಾತ್ಯತೀತ ಒಲವಿನ ವಿವಾಹ ವೇದಿಕೆ ಮಾನವ
ಮಂಟಪ ಅಂತರ್ಜಾತೀಯ ವಿವಾಹ
ಮಾಡಿಕೊಳ್ಳುವ ಜೋಡಿಗಳಿಗೆ ಸಾಮಾಜಿಕ, ಶೈಕ್ಷಣಿಕ
ಸಮೀಕ್ಷೆಯಲ್ಲಿ ತಮ್ಮ ವಿವರಗಳನ್ನು ದಾಖಲಿಸುವ ಕುರಿತು
ಮಾಹಿತಿ ನೀಡಿದೆ. ಗಣತಿಯ ವೇಳೆ
ಅಂತರ್ಜಾತೀಯ ದಂಪತಿ ಕಾಲಂ 14ರಲ್ಲಿ
ಸಂಕೇತ ಸಂಖ್ಯೆ 3 ಎಂದು ಅಂತರ
ಧರ್ಮೀಯ ದಂಪತಿಗಳು ಸಂಕೇತ
ಸಂಖ್ಯೆ 4 ಎಂದು ನಮೂದಿಸುವಂತೆ ಮನವಿ ಮಾಡಿದೆ.
ಯಾವುದೇ ಧರ್ಮಕ್ಕೆ ಸೇರಿಲ್ಲ ಎಂದು ನಮೂದಿಸಲು ಇಚ್ಛಿಸುವವರು
ಕಾಲಂ ನಂ 5ರಲ್ಲಿ ಸಂಕೇತ 8 ಎಂದು
ನಮೂದಿಸಬಹುದೆಂದು ಮಾನವಮಂಟಪದ ಟ್ರಸ್ಟಿ ನಟರಾಜ್
ಹುಳಿಯಾರ್ ಮನವಿ ಮಾಡಿದ್ದಾರೆ.
ಕಾಣೆಯಾದ ನಾಯಿ..!
ಸಮೀಕ್ಷೆಯಲ್ಲಿ ಹಲವಾರು ಜಾನುವಾರುಗಳ ಸಂಖ್ಯೆ
ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಪಟ್ಟಿಯಲ್ಲಿ . ಹಸು, ಎತ್ತು,
ಎಮ್ಮೆ, ಕೋಣ, ಕುರಿ, ಆಡು, ಮೇಕೆ, ಕೋಳಿ, ಬಾತುಕೋಳಿ ಹಾಗೂ
ಹಂದಿಗಳನ್ನು ಸಾಕುತ್ತಿರುವ ಬಗೆಗೆ ಮಾಹಿತಿ ಕೇಳಲಾಗಿದೆ. ಆದರೆ
ನಾಯಿಯ ಪ್ರಸ್ತಾಪವೇ ಇಲ್ಲ!
ಈ ಕುತೂಹಲದ ಪ್ರಶ್ನೆಯನ್ನು ಹುಬ್ಬಳ್ಳಿ ಜೆಪಿ ನಗರದ ನಿವಾಸಿ
ಎತ್ತಿದ್ದಾರೆ.ನಿಯತ್ತಿಗೆ ಹೆಸರಾದ ನಾಯಿಯನ್ನು ನಿರ್ಲಕ್ಷಿಸಿರುವುದು
ಸರಿ ಅಲ್ಲ ಎಂಬುದು ಅವರ ಆಕ್ಷೇಪ.
ಓಡಿ ಹೋದರು..!
ಸಾರಾಯಿ ಮಾರಾಟದಲ್ಲಿ ನಿರತ ಮಹಿಳೆಯೊಬ್ಬಳು
ಗಣತಿದಾರರು ಬರುವುದನ್ನು ಕಂಡು ಮನೆಬಿಟ್ಟು ಹೋಗಿರುವ
ಸಂಗತಿಯು ಕುಮಟಾ ತಾಲೂಕು ಡೀವಳ್ಳಿಯಲ್ಲಿ ಬೆಳಕಿಗೆ
ಬಂದಿದೆ. ಆ ಮಹಿಳೆ ಬರುವಿಕೆಗಾಗಿ ಕಾದು ಕುಳಿತ ಗಣತಿದಾರರು ಮಹಿಳೆ
ಬಾರದ್ದನ್ನು ಕಂಡು ನಿರಾಶರಾಗಿ ಮರಳಿದರು. ಮರುದಿನ
ಕೊನೆಗೂ ಪ್ರಯತ್ನಪಟ್ಟು ಮಹಿಳೆಯಿಂದ
ಮಾಹಿತಿ ಪಡೆದಿದ್ದಾರೆ.
ಗಣತಿದಾರರಿಗೆ ಪೇಚಾಟ
ಚಿಕ್ಕೋಡಿಯ ಗಡಿ ಭಾಗದಲ್ಲಿ ಮರಾಠಿ, ಕನ್ನಡ ಭಾಷೆ ಸಮಸ್ಯೆ
ಗಣತಿದಾರಿಗೆ ತೊಡಕಾಗಿ ಪರಿಣಮಿಸಿದೆ. ಮರಾಠಿ ಬಾರದ
ಶಿಕ್ಷಕರು ಸಕಾಲದಲ್ಲಿ ಮಾಹಿತಿ ಸಂಗ್ರಹಿಸಲಾಗದೇ
ಪರದಾಡುತ್ತಿದ್ದಾರೆ. ಜಾತಿ ಗಣತಿಯ ಬಗ್ಗೆ ತಿಳಿದದ್ದನ್ನು ಹೇಳಿಯೇ
ಗಣತಿದಾರರು ಜನರಿಂದ ಮಾಹಿತಿ ಸಂಗ್ರಹಿಸುವಂತಾಗಿದೆ.
ಆಸ್ತಿಪಾಸ್ತಿ ಮಾಹಿತಿಯಿಂದ ಹಿಡಿದು ಮನೆಯಲ್ಲಿರುವ ಬೈಕ್,
ಸೈಕಲ್ ವಿವರ ಕೇಳಿದಾಗ, ವೃದ್ಧರೊಬ್ಬರು ತಮ್ಮ
ಬಳಿಯಿರುವ ಬೂಟು, ಸೂಟು, ಧೋತರ, ಅಂಗಿಗಳ ವಿವರಗಳನ್ನೂ
ನೀಡಿ ಬರೆದುಕೊಳ್ಳುವಂತೆ
ಗಣತಿದಾರರಿಗೆ ದುಂಬಾಲು ಬಿದ್ದ ಪ್ರಸಂಗ ವರದಿಯಾಗಿದೆ.
**
ಮನೆ ಕೊಡ್ತೀರಾ?
ಇಂಥದ್ದೊಂದು ಪ್ರಶ್ನೆ ಎಲ್ಲ ಕಡೆ
ಕೇಳಿಬರುತ್ತಿದೆ. ಇಲ್ಲಿ ಕೆಲಸ ಮಾಡಿಕೊಂಡಿರುವ
ಉತ್ತರ ಭಾರತದ ಜನರು ಇದರಿಂದ ನಮಗೆ ರೇಶನ್ ಕಾರ್ಡ್
ಸಿಗುತ್ತದಾ ಎಂದು ಪ್ರಶ್ನಿಸುತ್ತಾರೆ. ವಿಜಯಪುರ, ಬಾಗಲಕೋಟೆ,
ರಾಯಚೂರು ಮತ್ತಿತರ ಕಡೆಗಳಿಂದ ಬಂದ ಕಾರ್ಮಿಕರು
''ಊರಲ್ಲಿ ಮಾಹಿತಿ ಕೊಡುತ್ತಾರೆ,'' ಎಂದು ಹೇಳಿ
ಲವು ಹೇಳಿದರೆ, ಮತ್ತೆ ಕೆಲವರು ''ನಮಗೆ ಮನೆ ಸಿಗುತ್ತದಾ?''
ಎಂದು ಪ್ರಶ್ನಿಸುತ್ತಾರೆ. ಕೆಲವರುಗಣತಿದಾರರಿಗೆ ಬೈದೇಬಿಡುತ್ತಾರೆ.
''ಒಂದೊಂದು ಸರಕಾರ
ಒಂದೊಂದು ಕಾನೂನು ತರುತ್ತದೆ. ಅರ್ಹರು
ಬಿಟ್ಟು ಯಾರ್ಯಾರಿಗೋ ಸೌಲಭ್ಯ ನೀಡುತ್ತಾರೆ,'' ಎಂದು
ಬೈಯುವುದು ಗಣತಿದಾರ ರಾಮಾಂಜಿಗೆ ಅನುಭವವಾಗಿದೆ.
ಕೋಟೇಶ್ವರದಲ್ಲಿ ಜಾತಿಗಣತಿಗೆ ಒಪ್ಪದ ಅಧ್ಯಾತ್ಮಿಕ ಪತ್ರಿಕೆಯ
ಸಂಪಾದಕರೊಬ್ಬರ ಮನವೊಲಿಸಿ
ಗಣತಿದಾರರು ವಿವರ ಪಡಕೊಂಡರು.
ಕೊನೆಗೂ ತನ್ನ ಜಾತಿ ನಮೂದಿಸದಂತೆ ಅವರು
ತಾಕೀತು ಮಾಡಿದ್ದರು.
**
ವ್ಯಕ್ತಿಯ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕೋಟೆಬಾಗಿಲು
ಎಂಬಲ್ಲಿ ಮಹಮ್ಮದ್ ಹನೀಫ್ ಎಂಬವರ
ಮನೆಗೆ ಶಿಕ್ಷಕಿಯರಾದ ಜೆಸಿಂತಾ ಫರ್ನಾಂಡಿಸ್ ಹಾಗೂ
ಶಿವಮ್ಮ ಜಾತಿ ಗಣತಿಗೆ ತೆರಳಿದ್ದರು. ಮನೆ ಯಜಮಾನರಾದ
ಮಹಮ್ಮದ್ ಹನೀಫ್ನಲ್ಲಿ ಪ್ರಶ್ನೆಗಳನ್ನು ಕೇಳಿದಾಗ
ಕೆರಳಿದ ಅವರು, ಶಿಕ್ಷಕಿಯರ ಕೈಯಲ್ಲಿದ್ದ ಪೆನ್ನು, ಪೆನ್ಸಿಲ್,
ಪೇಪರನ್ನು ಎಳೆದುಕೊಂಡು, ಗಣತಿಗೆ ವಿರೋಧ
ವ್ಯಕ್ತಪಡಿಸಿದರು. ಈ ಬಗ್ಗೆ ಶಿಕ್ಷಕಿಯರು
ಮೂಡುಬಿದಿರೆಪೊಲೀಸ್ ಠಾಣೆಯಲ್ಲಿ ದೂರು
ದಾಖಲಿಸಿದ್ದು, ಆರೋಪಿ ಮಹಮ್ಮದ್ ಹನೀಫ್ ಅವರನ್ನು
ಬಂಧಿಸಲಾಗಿದೆ.
ಗಣತಿದಾರರಿಗೆ ಆತಿಥ್ಯ!
ಎಲ್ಲ ಕಡೆ ಅಸಹಕಾರವೇನಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಕೆಲವು ಮನೆಗಳಲ್ಲಿ ಗಣತಿದಾರರಿಗೆ ತಂಪು ಪಾನೀಯ,
ಕೆಲವು ಮನೆಗಳಲ್ಲಿ ಊಟ, ಫಲಹಾ ರದೊಂದಿಗೆ
ಆತಿಥ್ಯ ನೀಡುತ್ತಿರುವುದು ಉಲ್ಲೇಖನೀಯ.
ಮುಸ್ಲಿಂ ಸಂಘಟನೆಯ ವಾಟ್ಸ್ ಆಪ್
ಗ್ರೂಪ್ವೊಂದರಲ್ಲಿ ಗಣತಿದಾರರು ಮನೆಗೆ
ಬಂದಾಗಉತ್ತಮ ಆತಿಥ್ಯ ನೀಡಿ ಎಂಬ
ಸಂದೇಶವನ್ನು ರವಾನಿಸಲಾಗುತ್ತಿರುವುದು ಉಲ್ಲೇಖನೀಯ
ಅಂಶವಾಗಿದೆ.
ವಿದ್ಯಾರ್ಥಿಗಳ ಬಳಕೆಗೆ ಚಿಂತನೆ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ
ನಿಯೋಜನೆಗೊಂಡ ಹಲವರು, ನಾನಾ ಸಬೂಬು ಹೇಳಿ,
ಸಮೀಕ್ಷೆಗೆ ಕೈಕೊಡುತ್ತಿದ್ದು,
ಪರೀಕ್ಷೆ ಬರೆದು, ರಜೆಯ ಮೋಜಿನಲ್ಲಿರುವ
ವಿದ್ಯಾರ್ಥಿಗಳನ್ನು ಗೌರವ ಧನ ಆಧಾರದ ಮೇಲೆ ಸಮೀಕ್ಷಾ
ಕಾರ್ಯಕ್ಕೆ ಬಳಸಿಕೊಳ್ಳಲು ಚಿಂತನೆ ನಡೆದಿದೆ
ಎಂದು ಬಳ್ಳಾರಿ ಜಿಲ್ಲಾಡಳಿತದ ಮೂಲಗಳು ಹೇಳುತ್ತವೆ.
ನಿಗದಿತ ದಿನಾಂಕದೊಳಗೆ ಗಣತಿ ಕಾರ್ಯ
ಮುಗಿಸುವುದು ಗಣತಿದಾರರಿಗೆ ಸವಾಲಾಗಿ ಪರಿಣಮಿಸಿದೆ. ''ಸಹಾಯಕರನ್ನು
ಕೊಟ್ಟಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು'' ಎಂದು
ಗಣತಿ ಸಿಬ್ಬಂದಿ ಹೇಳುತ್ತಾರೆ. ಅನಕ್ಷರಸ್ಥ ಕುಟುಂಬದ
ಹಲವು ಸದಸ್ಯರಿಂದ ಗಣತಿದಾರರು ಪ್ರಶ್ನೆಗಳ ಸುರಿಮಳೆ
ಎದುರಿಸಬೇಕಿದೆ. ''ನಮಗೆ ಪಡಿತರ ಕಾರ್ಡು ಬಂದಿಲ್ಲ. ಆಧಾರ್
ಕಾರ್ಡ್ ಕೊಟ್ಟಿಲ್ಲ. ಮತದಾರರ ಗುರುತಿನ
ಚೀಟಿ ಕೈಸೇರಿಲ್ಲ. ಸರಕಾರ ಮನೆ
ಕಟ್ಟಿಸಿಕೊಟ್ಟಿಲ್ಲ'' ಹೀಗೆ ನಾನಾ
ಸಮಸ್ಯೆಗಳನ್ನು ನಿವೇದಿಸಿಕೊಳ್ಳುತ್ತಿದ್ದಾರೆ.
ಸುಳ್ಳು ಹೇಳ್ತಾರೆ...
''ಸರಕಾರದ ಕೆಲ ಸೌಲಭ್ಯಗಳಿಂದ ವಂಚಿತರಾಗುತ್ತೇವೆ''
ಎಂಬ ಭೀತಿಯಲ್ಲಿ ಕೆಲವರು ಎಲ್ಲ ಇದ್ದರೂ
''ಇಲ್ಲ'' ಎಂದೇ ಬರೆಯಿಸುತ್ತಿದ್ದಾರೆ ಎಂದು
ಕೊಪ್ಪಳದ ಗಣತಿದಾರರು ಹೇಳುತ್ತಾರೆ. ''ನಿಮ್ಮ
ಮನೆಯಲ್ಲಿ ಬೈಕ್ ಇದೆಯಾ?'' ಎಂದು ಕೇಳಿದರೆ, ''ಇಲ್ಲ
ಎನ್ನುತ್ತಾರೆ. ಆದರೆ ಮನೆ ಎದುರು ಬೈಕ್ ನಿಂತಿರುತ್ತದೆ''
ಎಂದು ಗಣತಿದಾರರು ಹೇಳುತ್ತಾರೆ. ಆಸ್ತಿ, ಆಧಾರ್ ಕಾರ್ಡ್, ಮನೆ ಸೇರಿ
ಇತರ ಮಾಹಿತಿಗಳನ್ನು ತಪ್ಪು ತಪ್ಪಾಗಿ ಹೇಳುತ್ತಿದ್ದಾರೆ. ಬಹುತೇಕರು
''ನಮಗೆ ಜಮೀನು ತೀರಾ ಕಡಿಮೆ'' ಎಂದು
ಬರೆಯಿಸುತ್ತಿದ್ದಾರೆ.
ಜಾತಿ ಹಾಗೂ ಧರ್ಮದ ಮಾಹಿತಿ ಕೇಳಿದಾಗ ಕೆಲವು ಮನೆಯವರು, ಗುಸು ಗುಸು
ಮಾತನಾಡಿ, ''ಅದನ್ನು ನಾಳೆ ಹೇಳುತ್ತೇವೆ'' ಎಂದು ಗಣತಿದಾರರನ್ನು
ಸಾಗಹಾಕುತ್ತಿದ್ದಾರೆ. ಕೆಲವರಂತು, ''ಏನ್ರಿ ನಿಮ್ ಸರಕಾರ ನಮ್ಮ
ಜಾತಕನಾ ಕೇಳತೈತಿ. ತಗಂಡು ಏನ್ ಮಾಡತೈತಿ'' ಎಂದು
ಪ್ರಶ್ನಿಸುವವರೂ ಇದ್ದಾರೆ. ವಿಶೇಷವಾಗಿ ಅಂತರ್ಜಾತಿ
ವಿವಾಹವಾದವರಂತೂ ''ನಾವು ಜಾತಿ ಬೇಡ ಎಂದು ಬೇರೆ ಬೇರೆ
ಜಾತಿಯವರು ಒಗ್ಗೂಡಿ ಮದುವೆಯಾಗಿದ್ದೇವೆ. ಆದರೆ ನೀವು
ನಮ್ಮ ಗಂಡನದೊಂದು ಜಾತಿ,
ಹೆಂಡತಿದೊಂದು ಜಾತಿ ಅಂತ
ಬರೆದುಕೊಂಡು ಹೋಗ್ತೀರಿ'' ಎಂದು
ಬೇಸರ ವ್ಯಕ್ತಪಡಿಸುತ್ತಾರೆ.
ಮುಂದಿನ ವಾರ ಬನ್ನಿ
''ನಾವು ಎಷ್ಟು ಸೈಟ್ ಇಟ್ಟುಕೊಂಡಿದ್ರೆ
ನಿಮಗೇನ್ರಿ, ಅದನ್ನೆಲ್ಲಾ ಕೊಡೋಕ್ಕಾಗಲ್ಲ,
ಮುಂದಿನ ವಾರ ಬನ್ನಿ..''
ಮೈಸೂರಿನ ಬಡಾವಣೆಯೊಂದಕ್ಕೆ ಗಣತಿಗೆ ಹೋದ
ಗಣತಿದಾರರೊಬ್ಬರು ಎದುರಿಸಿದ ಸನ್ನಿವೇಶವಿದು.
' ನಮ್ಮ ಹೆಸರು, ಜಾತಿ ಎಲ್ಲಾ ಬರಕೋಳ್ರಿ. ಆದ್ರೆ ಆಸ್ತಿ, ಪಾಸ್ತಿ ಬಗ್ಗೆ
ಏಕೆ ಹೇಳಬೇಕು. ನಿಮಗ್ಯಾಕ್ರಿ ನಮ್ಮ ಆಧಾರ್ ಕಾರ್ಡ್, ವೋಟರ್ ಐಡಿ
ಮಾಹಿತಿ. ಒಂದು ವಾರ ಬಿಟ್ಟು ಬನ್ನಿ ಆಮೇಲೇ ಬನ್ನಿ '
ಎಂದು ಮಹಿಳೆಯೊಬ್ಬರು ಮುಖಕ್ಕೆ
ಹೊಡೆದಂತೆಯೇ ಹೇಳಿದರು. ' ಎಲ್ಲಾ ಮನೆ ಗಣತಿ
ಮಾಡಲೇಬೇಕು ಎನ್ನುವ ಕಾರಣಕ್ಕೆ ಮತ್ತೊಮ್ಮೆ ಆ
ಮನೆಗೆ ಹೋಗ್ತೀವಿ ' ಎನ್ನುವುದು ಗಣತಿ ಮಾಡುತ್ತಿರುವವರ
ನುಡಿ.
ಗಣತಿದಾರರಿಗೆ ನೂರೆಂಟು ಪ್ರಶ್ನ್ನೆ!
''ನಾವು ಈ ಸಮೀಕ್ಷೆ ಸಂದರ್ಭದಲ್ಲಿ ಮನೆಯವರಿಗೆ
ಕೇಳಬೇಕಿರುವುದು ಬರೀ 55 ಪ್ರಶ್ನೆ ಮಾತ್ರ. ಆದ್ರೆ, ನಾವು
ಅವರಿಂದ ಎದುರಿಸುತ್ತಿರುವ ಪ್ರಶ್ನೆಗಳು ನೂರೆಂಟು !''
-ಇದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು
ಗೊಂದಿಬಸವನಹಳ್ಳಿ ಮುಖ್ಯ ಶಿಕ್ಷಕ ಎಚ್.
ಜೆ. ಕುಮಾರ್ ಅವರ ಅನುಭವದ ಮಾತಿದು. ''ನಾವು ಕೇಳುವ ಪ್ರತಿ ಪ್ರಶ್ನೆಗೆ
ಅವರಿಂದಲೇ ಪ್ರತಿ ಪ್ರಶ್ನೆ ಇರುತ್ತೆ. ಇದೆಲ್ಲವೂ ನಿಮಗೆ ಏಕೆ
ಬೇಕು ? ಇದರಿಂದ ನಮಗೇನು ಪ್ರಯೋಜನ ? ಸರಕಾರಕ್ಕೆ ಏನು
ಲಾಭ ?'' ಎಂದು ಕೇಳುತ್ತಾರೆ. ಈ ಎಲ್ಲದಕ್ಕೂ ನಾವು ಉತ್ತರಿಸಿದ
ಬಳಿಕವೂ, ಅವರಿಗೆ ಸಮಾಧಾನವಾಗುವುದಿಲ್ಲ. ''ಜಾತಿ ಪದ್ದತಿ
ಹೋಗಬೇಕೆಂದು ಬೊಬ್ಬಿಡುವ ಸರಕಾರ ಈಗ್ಯಾಕೆ ಜಾತಿ
ಗಣತಿ ಮಾಡಿಸುತ್ತಿದೆ ?'' ಎಂದು ಕೆಲವರು ಕೇಳುತ್ತಾರೆ. ಇದಕ್ಕೆಲ್ಲಾ
ನಮಗೆ ಉತ್ತರ ನೀಡಲು ಸಾಧ್ಯವೇ ?
ಸಮೀಕ್ಷೆ ನಡೆಸುವುದು ಜನಗಣತಿಯಷ್ಟು ಸುಲಭವಾಗಿಲ್ಲ.
ಹರಸಾಹಸವಾಗಿದೆ'' ಎಂದು ವಿವರಿಸುತ್ತಾರೆ.
ಮುಜುಗರದ ಪ್ರಶ್ನೆಗಳಿವೆ !
''ಸಮೀಕ್ಷೆಯ ಔದ್ಯೋಗಿಕ ವಿಭಾಗದಲ್ಲಿ ನಿಮ್ಮ ಕುಲ
ಕಸುಬು ಯಾವುದು ? ಅದು ಮುಂದುವರಿದಿದೆಯೇ ? ಅದರಿಂದ
ಕಾಯಿಲೆ ಬಂದಿದೆಯೇ ಎಂಬ ಮೂರು ಪ್ರಶ್ನೆಗಳಿವೆ. ಈ ಪೈಕಿ
ಎರಡಕ್ಕೆ ಕೆಲವರು ಸಮಾಧಾನವಾಗಿ ಉತ್ತರಿಸುತ್ತಾರೆ. ಮೂರನೇ ಪ್ರಶ್ನೆ
ಕೇಳಿದರೆ, ಕೆಲವರು ಸಿಟ್ಟಿಗೇಳುತ್ತಾರೆ. ಅದನ್ನು ಕೇಳಲು ನಮಗೂ
ಮುಜುಗರವಾಗುತ್ತಿದೆ'' ಎನ್ನುತ್ತಾರೆ ಮೈಸೂರು ನಗರದ
ಕೊಳಗೇರಿಯಲ್ಲಿ ಗಣತಿ ಮಾಡುತ್ತಿರುವ ರೋಹಿಣಿ.
''ಬಡಗಿ, ಕಮ್ಮಾರಿಕೆಯಂಥ ಕಸುಬು ಮಾಡುವವರಿಗೆ, ಕಾಲಕ್ರಮೇಣ
ಬೆನ್ನುನೋವಿನಂತ ಕಾಯಿಲೆ ಬರುವುದು ಸಹಜ. ಈ ಹಿನ್ನೆಲೆಯಲ್ಲಿ
ಸರಕಾರ ಈ ಪ್ರಶ್ನೆಯನ್ನು ಸೇರಿಸಿದೆ. ಆದರೆ, ಇದನ್ನು ಕೆಲವರು ತಪ್ಪು
ತಿಳಿದುಕೊಳ್ಳುತ್ತಾರೆ. ಮಧುಮೇಹ,
ರಕ್ತದೊತ್ತಡ, ಕ್ಯಾನ್ಸರ್, ಎಚ್ಐವಿಯಂಥ
ರೋಗಗಳನ್ನು ಪತ್ತೆ ಮಾಡುವುದು ಸಮೀಕ್ಷೆ ಉದ್ದೇಶವಲ್ಲ
ಎಂದು ಮನವರಿಕೆ ಮಾಡಿಕೊಟ್ಟರೂ ಕೇಳುವುದಿಲ್ಲ''
ಎಂದು ಅಸಹಾಯಕರಾಗಿ ಹೇಳಿದರು.
ಅಂತರ್ಜಾತಿ ವಿವಾಹಿತರ 'ಜಾತಿ ಜಗಳ '!
ಹಾಸನದ ಆಡುವಳ್ಳಿಯಲ್ಲಿ ಗಣತಿಗೆ ಮಾಹಿತಿ ನೀಡಿರುವ
ದಂಪತಿ, 'ನಾವು ಪ್ರೀತಿಸಿ ವಿವಾಹವಾಗಿದ್ದೇವೆ. ಜಾತಿ ಬೇರೆ
ಬೇರೆ. ಆದರೆ, ಗಣತಿ ಸಂದರ್ಭದಲ್ಲಿ ಒಂದೇ ಒಂದು
ಜಾತಿ ಹೇಳಬೇಕಿದೆ. ಹಾಗಾಗಿ, ಗಂಡನ ಜಾತಿಯನ್ನೇ
ನೀಡುತ್ತಿದ್ದೇವೆ'' ಎಂದು ಗಣತಿದಾರರಿಗೆ ದಂಪತಿ
ಮನವರಿಕೆ ಮಾಡಿಕೊಟ್ಟಿದ್ದಾರೆ.
ಮೈಸೂರಿನಲ್ಲೂ ಇಂಥದ್ದೇ ಒಂದು ಅನುಭವ ಗಣತಿದಾರರಾದ
ಲೋಹಿತ್ ಕುಮಾರ್ಗೆ ಆಗಿದೆ. ''ನಾವು ಭೇಟಿ ನೀಡಿದ ಮನೆಯ
ಯಜಮಾನ 40 ವರ್ಷದ ಗಂಗಾಧರ ಖಾಸಗಿ
ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕ. ಅವರ
ಪತ್ನಿ ಸರಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕಿ. ಇಬ್ಬರೂ ಬೇರೆ ಬೇರೆ
ಜಾತಿಯವರು. ಜಾತಿ ಮಾಹಿತಿ ನೀಡುವ ಸಂದರ್ಭದಲ್ಲಿ,
ಗಂಡ ತನ್ನ ಜಾತಿ ನೀಡಬೇಕೆಂದು, ಹೆಂಡತಿ
ನನ್ನ ಜಾತಿಯೇ ಇರಲಿ ಎಂದು ಬಯಸಿದರೆ. ಸ್ವಲ್ಪ ಜಗಳವೂ
ಆಯಿತು. ಕಡೆಗೆ ಯಾವ ಜಾತಿಯ ವಿವರ ಕೊಟ್ಟರೆ,
ಭವಿಷ್ಯದಲ್ಲಿ ಮಕ್ಕಳಿಗೆ ಅನುಕೂಲ ಎಂಬುದನ್ನು ಚರ್ಚಿಸಿ,
ಕಡೆಗೆ ಒಂದು ಜಾತಿ ಬರೆಸಿದರು'' ಎಂದು ಲೋಹಿತ್ ವಿವರಿಸಿದರು.
ನಮ್ಮ ಜಾತಿ 0715!
ಮೈಸೂರು ತಾಲೂಕು ಡಿ. ಸಾಲುಂಡಿಯಲ್ಲಿ ಗಣತಿ ಮಾಡುತ್ತಿದ್ದ ಶಿಕ್ಷಕಿ
ಪಾರ್ವತಿ ಅವರಿಗೆ ಆದ ಅನುಭವ. 'ನಿಮ್ಮ ಜಾತಿ ಯಾವುದು ? '- ಇವರ
ಪ್ರಶ್ನೆ. 'ನಮ್ದೂ 0715!' - ಅವರ ಉತ್ತರ. ತಕ್ಷಣ ಇದೇನು
ಎಂದು ಗೊತ್ತಾಗಿಲ್ಲ. ಬಳಿಕ ಅವರಿಗೆ
ಗೊತ್ತಾಗಿದೆ, ಅವರು ಜಾತಿ ಕೋಡ್ ಹೇಳುತ್ತಿದ್ದಾರೆ
ಎಂದು !
ಯಾಕೆ ಹೀಗೆ ಎಂಬ ಪ್ರಶ್ನೆಗೆ ಊರಿನ
ಅನಕ್ಷರಸ್ಥರು ಹೇಳಿರುವ ಉತ್ತರ- ''ನಮ್ಮ ಜಾತಿಯವ್ರ
ಊರೆಲ್ಲೆಲ್ಲಾ ಟೋಕನ್(ಕರಪತ್ರ) ಕೊಟ್ಟು ಹೋಗಿದ್ದಾರೆ.
ನಿಮ್ಮ ಜಾತಿ ಯಾವ್ತ ಅಂದ್ರೆ, ಏನೇನೋ ಹೇಳಬೇಡಿ, ನಾವು
ನೀಡಿರುವ ಈ ಕೋಡ್ ಹೇಳಿ. ಅವರಿಗೆ ಅರ್ಥವಾಗುತ್ತೆ
ಎಂದಿದ್ದಾರೆ?''
ಬಾಡಿಗೆ ಮನೆಯವ್ರಿಗೆ ಸುಳ್ಳು ಜಾತಿ ಹೇಳಿದ್ದೇವಲ್ಲಾ ?
ಗಣತಿದಾರರ ಮುಂದೆ ಜಾತಿ ವಿವರ ಬಹಿರಂಗಪಡಿಸುವ
ವಿಷಯದಲ್ಲಿ ಹಾಸನದ ರಾಘವೇಂದ್ರ ಬಡಾವಣೆಯ
ದಂಪತಿಗೆ ದೊಡ್ಡ ಜಿಜ್ಞಾಸೆ ಕಾಡಿದೆ. ''ಎರಡು
ತಿಂಗಳ ಹಿಂದೆಯಷ್ಟೇ ನಾವು ನಾವು ಈ ಮನೆಗೆ ಬಾಡಿಗೆಗೆ
ಬಂದಿದ್ದೇವೆ. ನಮ್ಮ ಜಾತಿ ಹೇಳಿದ್ರೆ, ಮನೆ ಬಾಡಿಗೆ
ಕೊಡ್ತಾ ಇರ್ಲಿಲಿಲ್ಲ. ಹಾಗಾಗಿ, ಬೇರೆ ಜಾತಿ ಹೇಳಿದ್ದೇವೆ.
ಈಗ ಏನ್ಮಾಡೋದು ?'' ಎಂಬ ಪ್ರಶ್ನೆಯನ್ನು
ಮುಂದಿಟ್ಟಿದ್ದಾರೆ. ನಿಮ್ಮ ಜಾತಿ ಹೆಸರನ್ನು
ಬಹಿರಂಗಪಡಿಸುವುದಿಲ್ಲ ಎಂದು ಗಣತಿದಾರರು ವಿಶ್ವಾಸ
ತುಂಬಿದ ಮೇಲಷ್ಟೇ ಆ ದಂಪತಿ ವಿವರ
ನೀಡಿದ್ದಾರೆ.
ಬಹಿಷ್ಕಾರ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಪುನರ್ವಸತಿ
ಕೇಂದ್ರ ಮತ್ತೊಂದು ಗ್ರಾಮದ
ವ್ಯಾಪ್ತಿಗೆ ಸೇರಿದ್ದರಿಂದ ತಮ್ಮೂರಿನ ಅಸ್ತಿತ್ವಕ್ಕಾಗಿ ಜನತೆ 4
ದಿನಗಳ ಕಾಲ ಜಾತಿ ಸಮೀಕ್ಷೆ ಬಹಿಷ್ಕರಿಸಿದ್ದರು.
ಆಲಮಟ್ಟಿಯ ಹಿನ್ನೀರಿನಲ್ಲಿ ಮುಳುಗಡೆಯಾದ
ಸಿದ್ಧನಾಥ ಗ್ರಾಮದ ಪುನರ್ವಸತಿ ಕೇಂದ್ರ ಮತ್ತು
ಹಳೆರೊಳ್ಳಿ ಪುನರ್ವಸತಿ ಕೇಂದ್ರ
ರೊಳ್ಳಿ ಗ್ರಾಮದಲ್ಲಿ
ಸೇರ್ಪಡೆಗೊಂಡಿದೆ. ಹೀಗಾಗಿ ಸಿದ್ಧನಾಥ
ಗ್ರಾಮದ ಅಸ್ತಿತ್ವವೇ ಇಲ್ಲ. ಹೀಗಾಗಿ, ಜಾತಿ
ಸಮೀಕ್ಷೆ ವೇಳೆ ಸಿದ್ಧನಾಥ ಗ್ರಾಮಸ್ಥರು ಸಮಸ್ಯೆ
ನಿವಾರಣೆ ಆಗುವವರೆಗೆ ಸಮೀಕ್ಷೆ ಕಾರ್ಯ ನಡೆಸಬಾರದು
ಎಂದು ಬಹಿಷ್ಕರಿಸಿದ್ದರು. ನಂತರ ಕಂದಾಯ
ಅಧಿಕಾರಿಗಳು ಭರವಸೆ ನೀಡಿದ ನಂತರ
ಸಮೀಕ್ಷೆ ಆರಂಭವಾಗಿದೆ.
ನಾವೇ ತುಂಬಿಕೊಳ್ಳುತ್ತೇವೆ
ಗಣತಿದಾರರು ಮನೆಗಳಿಗೆ ಭೇಟಿ ನೀಡಿದ ವೇಳೆ ಅದರಲ್ಲೂ
ಗ್ರಾಮೀಣ ಭಾಗದಲ್ಲಿ ಅಪೂರ್ಣ ಮಾಹಿತಿ ಕಲೆಹಾಕುತ್ತಿರುವ
ದೂರುಗಳು ವಿಜಯಪುರದಿಂದ ಕೇಳಿಬಂದಿದೆ. 5-6
ಕಾಲಂಗಳಿಗೆ ಕೆಲವೇ ನಿಮಿಷಗಳಲ್ಲಿ ಮಾಹಿತಿ ಪಡೆದು
ಉಳಿದವುಗಳನ್ನು ನಾವೇ ತುಂಬಿಕೊಳ್ಳುತ್ತೇವೆ.
ಇಲ್ಲದಿದ್ದರೆ ನೀವೇ ಮೊಬೈಲ್ ಕರೆ ಮಾಡಿ
ಮಾಹಿತಿ ನೀಡಿ ಎಂದು ಸಮೀಕ್ಷೆದಾರರು
ಅಪೂರ್ಣ ಮಾಹಿತಿ ಕಲೆಹಾಕುತ್ತಿರುವುದಾಗಿ ಜನತೆ ದೂರಿದ್ದಾರೆ.
ನಿರಾಕರಣೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಟ್ಟೆ
ವ್ಯಾಪಾರಿಯೊಬ್ಬ ಎರಡು ಬಟ್ಟೆ ಅಂಗಡಿ,
ಸ್ವಂತ ಮನೆ ಹೊಂದಿದ್ದರೂ ಬಟ್ಟೆ
ಅಂಗಡಿ, ವಾಸದ ಮನೆ ಎರಡೂ ಬಾಡಿಗೆ ಎಂದು ಹೇಳಿದ್ದಾನೆ.
ಮೊಬೈಲ್ ನಂಬರ್, ಆತ
ಹೊಂದಿರುವ ವಾಹನ, ಕುಟುಂಬದ ಸದಸ್ಯರ
ಸಂಖ್ಯೆ ಏನೊಂದನ್ನೂ ಹೇಳಲು
ನಿರಾಕರಿಸಿದ್ದಾನೆ. ಇದು ಸರಕಾರ ಕೈಗೆತ್ತಿಕೊಂಡಿರುವ
ಸಮೀಕ್ಷೆ ಎಂದು ಹೇಳಿದಾಗಲೂ ಮಾಹಿತಿ
ನೀಡಿಲ್ಲ.
ಚಳ್ಳಕೆರೆ ತಾಲೂಕಿನಲ್ಲಿ ಮಹಿಳೆಯೊಬ್ಬರು ಗಣತಿದಾರ
ಎರಡು ದಿನ ಸಮೀಕ್ಷೆಗೆ ಹೋದಾಗಲೂ ಯಜಮಾನರು
ಮನೆಯಲ್ಲಿಲ್ಲ ಎಂದು ಮಾಹಿತಿ ನೀಡಲು
ನಿರಾಕರಿಸಿದ್ದಾರೆ. ಇದೇ ತಾಲೂಕಿನಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ
ಲಂಬಾಣಿ ಹಟ್ಟಿಯೊಂದರಲ್ಲಿ ಹಗಲು
ಮಾಹಿತಿ ಪಡೆಯುವುದು ಕಷ್ಟ ಎಂದು ಸಂಜೆ ಹೋದಾಗ ಕುಡುಕರ
ಹಾವಳಿಯಿಂದ ಮಾಹಿತಿ ಪಡೆಯಲು ಹರಸಾಹಸ ಪಡಬೇಕಾದ
ಪರಿಸ್ಥಿತಿ ನಿರ್ಮಾಣವಾಗಿದೆ.
ಗೊಂದಲ
ದಾವಣಗೆರೆ ಜಿಲ್ಲೆಯಲ್ಲಿ ಕೆಲ ಜಾತಿ ಸಂಘಟನೆಗಳು
ನೀಡಿದ ಹೇಳಿಕೆಗಳು ಗೊಂದಲ
ಹುಟ್ಟಿಸಿವೆ. ಅಖಿಲ ಭಾರತ ವೀರಶೈವ ಮಹಾಸಭಾ
ವೀರಶೈವ ಲಿಂಗಾಯತರಿಗೆ ಧರ್ಮದ
ಕಾಲಂನಲ್ಲಿ 'ಇತರೆ' ಎಂದು ಬರೆಸಲು ಮನವಿ ಮಾಡಿತ್ತು.
ಜಿಲ್ಲೆಯ ಇದೇ ಸಮುದಾಯಕ್ಕೆ ಸಂಬಂಧಿಸಿದ ಶಿವಸೈನ್ಯ
ಯುವಕ ಸಂಘ ಧರ್ಮದ ಕಾಲಂನಲ್ಲಿ 'ಹಿಂದು'
ಎಂದು ಬರೆಸಲು ಹೇಳಿದೆ.
ಅಂತರ್ಜಾತಿ ವಿವಾಹ ಆಗಿರುವವರು ಪತಿ, ಪತ್ನಿ ಅವರವರ
ಜಾತಿಯನ್ನು ಬರೆಸುತ್ತಿದ್ದಾರೆ. ನಾನು ನನ್ನ ಜಾತಿ, ಪತ್ನಿ ಅವರ ಜಾತಿ
ಬರೆಸುತ್ತೇವೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು
ಬರೆಸುತ್ತೇವೆ ಎಂದು ಅಂತರ್ಜಾತಿ ವಿವಾಹ ಆಗಿರುವ ಲೇಖಕ
ಮಲ್ಲಿಕಾರ್ಜುನ ಕಡಕೋಳ ಹೇಳುತ್ತಾರೆ.
ಜಾಲತಾಣಗಳಲ್ಲಿ ಜಾಗೃತಿ
ಜಾತಿ ಜನಗಣತಿಯಲ್ಲಿ ಸರಿಯಾದ ಮಾಹಿತಿ
ನೀಡಬೇಕೆಂದು ವಿವಿಧ ಜಾತಿ ಸಮುದಾಯಗಳು, ನಾನಾ
ರೀತಿಯಲ್ಲಿ ಸಮುದಾಯದ ಬಾಂಧವರಿಗೆ
ಸಂದೇಶ ರವಾನಿಸುತ್ತಿವೆ. ಮೊಬೈಲ್
ಮೆಸೇಜಿಂಗ್ ಆ್ಯಪ್ಗಳು, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲ
ತಾಣಗಳಲ್ಲಿ ತಮ್ಮ ಜಾತಿ ಬಗ್ಗೆ ಸರಿಯಾದ ಮಾಹಿತಿಯನ್ನು
ನೀಡುವಂತೆ ಮನವಿ ಮಾಡಿದ ಸಂದೇಶಗಳು
ಹರಿದಾಡುತ್ತಿವೆ. ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ
ಕೊಡವ ಜನಾಂಗದವರು ವಾಟ್ಸ್ಆ್ಯಪ್ ಮೂಲಕ
ಕುಲಬಾಂಧವರಿಗೆ ಸಂದೇಶಗಳನ್ನು ಕಳಿಸುತ್ತಿದ್ದು, ತಮ್ಮ
ಜಾತಿಯನ್ನು ಕೊಡವ ಎಂದು, ಮಾತೃಭಾಷೆಯನ್ನು
ಕೊಡವ ತಕ್ ಎಂದು ನಮೂದಿಸುವಂತೆ
ವಿನಂತಿಸಿಕೊಂಡಿದೆ.
ಇನ್ನೊಂದೆಡೆ ಹವ್ಯಕ ಬ್ರಾಹ್ಮಣರ
ಸಂಘಟನೆಗಳು ಜಾತಿ ಗಣತಿಯಲ್ಲಿ ಸರಿಯಾದ ಮಾಹಿತಿ
ನೀಡುವಂತೆ ಪ್ರಚಾರ ನಡೆಸುತ್ತಿದೆ.
ನಾಸ್ತಿಕ ಅಂದ್ರೇನು?
ಇದು ಗಣತಿಗೆ ಮಾಹಿತಿ ಕೊಡುವವರು ಕೇಳಿದ
ಪ್ರಶ್ನೆಯಲ್ಲ. ಗಣತಿಗೆ ಹೋದ ಸಿಬ್ಬಂದಿ ಕೇಳಿದ ಪ್ರಶ್ನೆ!
ಬೆಂಗಳೂರಿನ ಪ್ರದೇಶವೊಂದರಲ್ಲಿ ಗಣತಿ
ಕಾರ್ಯ ನಡೆಸುತ್ತಿದ್ದ ಗಣತಿದಾರರು
ವ್ಯಕ್ತಿಯೊಬ್ಬರು ಧರ್ಮ ಯಾವುದು ಎಂದು
ಕೇಳಿದರು. ಅದಕ್ಕವರು, 'ನಾಸ್ತಿಕ' ಎಂದು ಉತ್ತರಿಸಿದರು. ಅವರ
ತಂದೆಯನ್ನು ಅದೇ ಪ್ರಶ್ನೆ ಕೇಳಿದಾಗ, ಮಾಹಿತಿ ನೀಡಲು
ನಿರಾಕರಿಸಿದರು. ಇಬ್ಬರಿಗೂ ಕೋಡ್ ನಂಬರ್ 10 ಅನ್ನು ದಾಖಲಿಸಿದರು.
ಗಣತಿದಾರರನ್ನು ಈ ಬಗ್ಗೆ ವಿಚಾರಿಸಿದಾಗ ತಮಗೆ ನಾಸ್ತಿಕ
ಎಂದರೇನು ಗೊತ್ತಿಲ್ಲ ಎಂದುತ್ತರಿಸಿದ್ದರು!
ಇದು ಒಂದು ನಿದರ್ಶನವಷ್ಟೆ. ಜನ ಸರಿಯಾದ ಮಾಹಿತಿ
ನೀಡಿದರೂ ತಪ್ಪಾಗಿ ದಾಖಲಾಗುವ ಬಗ್ಗೆ ಆತಂಕ
ವ್ಯಕ್ತಪಡಿಸುತ್ತಿದ್ದಾರೆ.
120 ಅಲ್ಲ.. 200
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಗಣತಿ
ಕಾರ್ಯ ಮಾಡುವ ಪ್ರತಿ ಸಿಬ್ಬಂದಿಗೆ 120ರಿಂದ 125
ಮನೆಗಳನ್ನು 20 ದಿನಗಳಲ್ಲಿ ಪೂರೈಸುವಂತೆ ಸೂಚಿಸಲಾಗಿದೆ
ಎಂದು ಹೇಳಿದೆ. ಆದರೆ ಗಣತಿದಾರರು 200ಕ್ಕೂ ಹೆಚ್ಚು
ಮನೆಗಳಿಂದ ದಾಖಲೆ ಸಂಗ್ರಹಿಸಬೇಕಾಗಿದೆ ಎಂದು
ದೂರಿದ್ದಾರೆ. ಹಿಂದಿನ ಗಣತಿ ಕಾರ್ಯದಲ್ಲೂ
ಪಾಲ್ಗೊಂಡ ಮಹಿಳೆಯೊಬ್ಬರು
ಹಿಂದೆ 180 ಮನೆಗಳ ಗಣತಿ ಮಾಡಿದ್ದೆ, ಅದರ ಮೇಲೆ ಈಗಲೂ
ಅಷ್ಟೇ ಮನೆಗಳನ್ನು ಹಂಚಿದ್ದರೂ 200ಕ್ಕೂ ಹೆಚ್ಚು ಮನೆಗಳಿಗೆ
ಭೇಟಿ ನೀಡಬೇಕಾಗಿದೆ ಎಂದು ಹೇಳುತ್ತಾರೆ.
ಪೆನ್ಸಿಲ್ ಬರಹದ ಗೊಂದಲ :
ಗಣತಿದಾರರು ಮಾಹಿತಿಯನ್ನು ಪೆನ್ಸಿಲ್ನಲ್ಲಿ ಬರೆಯುತ್ತಿರುವ ನಾನಾ
ಕಡೆಗಳಿಂದ ಆಕ್ಷೇಪಗಳು ಬಂದಿವೆ. ಇದರಿಂದ
ಕಡ್ಡಾಯವಾಗಿ ಪೆನ್ನಿನಲ್ಲಿಯೇ ಮಾಹಿತಿ ತುಂಬುವಂತೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಗಣತಿದಾರರು ಭಾರಿ ಪ್ರಮಾಣದ ಮಾಹಿತಿಗಳನ್ನು ತಪ್ಪಾಗದಂತೆ
ತುಂಬಲು ಮೊದಲಿಗೆ ಪೆನ್ಸಿಲ್ನ್ನು ಬಳಸುವುದು
ಲಾಗಾಯ್ತಿನಿಂದ ನಡೆದುಕೊಂಡು ಬರುತ್ತಿದೆ.
ಆದರೆ, ಮಾಹಿತಿ ತಿದ್ದುತ್ತಾರೆ ಎನ್ನುವ ಅನುಮಾನ ಕೆಲವು
ಸಾರ್ವಜನಿಕರಿಗೆ. ''ನಿಯಮ ಏನೇ ಇದ್ದರೂ ಮನೆಯವರು
ಕೊಟ್ಟ ಮಾಹಿತಿಯನ್ನು ಯಾವುದೇ ಕಾರಣಕ್ಕೂ
ಬದಲಾಯಿಸುವ ಮನೋಸ್ಥಿತಿ ಶಿಕ್ಷಕ ಸಮುದಾಯದಲ್ಲಿ ಇಲ್ಲ . ಈ
ಹಿನ್ನೆಲೆಯಿಂದ ಗಣತಿದಾರರಿಗೆ ಅನಗತ್ಯ ಕಿರುಕುಳ
ನೀಡದೆ ನಿಖರ ಮಾಹಿತಿಗಳನ್ನು ಸಮರ್ಪಕ
ರೀತಿಯಲ್ಲಿ ದಾಖಲಿಸಲು ಅನುವು
ಮಾಡಿಕೊಡಬೇಕು,'' ಎಂದು ಕರ್ನಾಟಕ ರಾಜ್ಯ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಸಮಿತಿ
ಅಧ್ಯಕ್ಷ ಶಿವಶಂಕರ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ
ರಾಮಕೃಷ್ಣ ಮಲ್ಲಾರ್ ಹೇಳಿದ್ದಾರೆ.
**
ತಪ್ಪು ತಿದ್ದಲು ಮುಂದೆ ಅವಕಾಶ ಇದೆ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.
ಕಾಂತರಾಜ್ ಸಂದರ್ಶನ
* ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಜನರ
ಪ್ರತಿಕ್ರಿಯೆ ಹೇಗಿದೆ?
ರಾಜ್ಯದ ಎಲ್ಲ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ
ವ್ಯಕ್ತವಾಗುತ್ತಿದೆ. ಆರಂಭದಲ್ಲಿ ಸ್ವಲ್ಪ
ಗೊಂದಲ ಇತ್ತು. ಈಗ ಎಲ್ಲವೂ ಸರಿ ಹೋಗಿದೆ.
ಗಣತಿದಾರರಿಗೂ ಅಭ್ಯಾಸ ಆಗಿರುವುದರಿಂದ ಬಹಳಷ್ಟು ಚೆನ್ನಾಗಿ
ಸಮೀಕ್ಷೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮಾತ್ರ
ಎರಡು ದಿನಗಳಿಂದ ಸ್ವಲ್ಪ ತಡವಾಗಿ ಸಮೀಕ್ಷೆ
ಆರಂಭವಾಗಿದೆ.
*ಗಣತಿದಾರರಿಗೆ ನಿಗದಿಗಿಂತ ಹೆಚ್ಚಿನ ಮನೆಗಳನ್ನು
ಹಂಚಿಕೆ ಮಾಡಿರುವುದರಿಂದ ಸಮೀಕ್ಷೆಗೆ
ಅಡ್ಡಿಯಾಗುವುದಿಲ್ಲವೇ?
ಕೆಲವು ಕಡೆ ಗಣತಿದಾರರಿಗೆ 150ಕ್ಕಿಂತ ಹೆಚ್ಚು ಮನೆಗಳನ್ನು
ಹಂಚಿಕೆ ಮಾಡಿರುವುದು ಆಯೋಗದ ಗಮನಕ್ಕೆ ಬಂದಿದೆ.
ಒಂದು ವೇಳೆ ಅಂತಹ ಗಣತಿದಾರರಿಗೆ ನಿಗದಿತ
ಅವಧಿಯೊಳಗೆ ಸಮೀಕ್ಷೆ
ಪೂರ್ಣಗೊಳಿಸಲು ಅಡ್ಡಿಯಾದರೆ ಪರ್ಯಾಯ
ವ್ಯವಸ್ಥೆ ಮಾಡಲಾಗುವುದು.
* ಸಮೀಕ್ಷೆ ಅವಧಿಯನ್ನು ವಿಸ್ತರಿಸುವ ಉದ್ದೇಶ
ಆಯೋಗಕ್ಕಿದೆಯೇ?
ಸದ್ಯಕ್ಕೆ ಅಂತಹ ಯಾವುದೇ ಉದ್ದೇಶ ಆಯೋಗಕ್ಕಿಲ್ಲ. ಆ
ಬಗ್ಗೆ ಯೋಚನೆಯನ್ನೂ ಮಾಡಿಲ್ಲ.
* ಗಣತಿದಾರರು ಪೆನ್ಸಿಲ್ ಬಳಕೆ ಮಾಡುತ್ತಿರುವುದು ಆಯೋಗದ ಗಮನಕ್ಕೆ
ಬಂದಿದೆಯೇ?
ಯಾವುದೇ ಗಣತಿದಾರರು ಪೆನ್ಸಿಲ್ ಬಳಕೆ ಮಾಡುವಂತಿಲ್ಲ. ಈ
ಸಂಬಂಧ ಆಯೋಗ ಕಟ್ಟುನಿಟ್ಟಿನ ಸೂಚನೆ
ನೀಡಿದೆ. ಪೆನ್ಸಿಲ್ ಬಳಕೆ ಮಾಡಿದಲ್ಲಿ ಸಾರ್ವಜನಿಕರು ಸಹಿ
ಹಾಕಲೇಬಾರದು. ತಡವಾದರೂ ಪರವಾಗಿಲ್ಲ, ಗಣತಿದಾರರು ಪೆನ್ಸಿಲ್ ಬಳಕೆ
ಮಾಡುವುದು ನಿಷಿದ್ಧ.
* ಕೆಲವರು ಅರ್ಧಂಬರ್ಧ ಮಾಹಿತಿ ನೀಡುತ್ತಿರುವ
ಆರೋಪಗಳಿವೆಯಲ್ಲಾ?
ಸಾರ್ವಜನಿಕರು ಅಪೂರ್ಣ ಮಾಹಿತಿ ನೀಡುವುದು ತಪ್ಪು. ಜನರ
ಸಹಕಾರ ಇದ್ದರೆ ಮಾತ್ರ ಸಮೀಕ್ಷೆ ಯಶಸ್ವಿಯಾಗಲು
ಸಾಧ್ಯ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರು
ಅಗತ್ಯನೀಡಿ ಸಹಕರಿಸಬೇಕು.
* ಸಮೀಕ್ಷೆಯ ತಪ್ಪುಗಳನ್ನು ಸರಿಪಡಿಸಲು ಆಯೋಗ ಕರಡು
ಪಟ್ಟಿಯನ್ನು ಪ್ರಕಟಿಸಲಿದೆಯೇ?
ಸಮೀಕ್ಷೆ ಪ್ರಕ್ರಿಯೆ ಮುಗಿದ ನಂತರ ಖಂಡಿತಾ
ಆಯೋಗದ ವೆಬ್ಸೈಟ್ನಲ್ಲಿ ಎಲ್ಲ ಮಾಹಿತಿಯನ್ನೂ ಪ್ರಕಟಿಸುತ್ತೇವೆ.
ಇದರಿಂದ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ
ಸಿಗಲಿದೆ.
**
ಮಾಹಿತಿ ಬೇಕಿದ್ದರೆ ಕಾಲ್ ಮಾಡಿ 080-44554444
www.freegksms.blogspot.in

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK