TRANSFER GUIDELINES 2015-16 PUBLISHED (udayavani paper)

​ಇಂದಿನಿಂದ ಸರ್ಕಾರಿ ನೌಕರರ ವರ್ಗಾವಣೆ ಭರಾಟೆ: ಮಾರ್ಗಸೂಚಿ ಪ್ರಕಟ

ಉದಯವಾಣಿ, Apr 22, 2015, 3:40 AM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಸೋಮವಾರ ಪ್ರಕಟವಾಗಿದ್ದು, ಮೇ 2ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಬುಧವಾರದಿಂದ ವರ್ಗಾವಣೆ ಭರಾಟೆ ಆರಂಭವಾಗಲಿದೆ.

ಪೊಲೀಸ್‌, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಹೊರತುಪಡಿಸಿ ಇತರೆಲ್ಲಾ ಇಲಾಖೆಗಳ ಸರ್ಕಾರಿ ನೌಕರರ ವರ್ಗಾವಣೆ ಈ ಮಾರ್ಗಸೂಚಿಯಂತೆ ನಡೆಯಲಿದೆ. 2013 ಮತ್ತು 2014ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಯನ್ವಯ ಸರ್ಕಾರಿ ನೌಕರರ ವರ್ಗಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ವರ್ಗಾವಣೆಯಾಗುವ ನೌಕರರು ಒಂದು ಹುದ್ದೆಯಲ್ಲಿ ಇರಬೇಕಾದ ಕನಿಷ್ಠ ಸೇವಾವಧಿಯನ್ನು 2014ರ ಮಾರ್ಗಸೂಚಿಯನ್ವಯವೇ ನಿಗದಿಪಡಿಸಲಾಗಿದೆ. ಆದರೆ, ಈ ಬಾರಿಯೂ ಎಷ್ಟು ಪ್ರಮಾಣದಲ್ಲಿ ನೌಕರರ ವರ್ಗಾವಣೆ ಮಾಡಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿಲ್ಲ.

ಹೋದ ವರ್ಷದ ಮಾನದಂಡ:

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿಯವರು ಸೋಮವಾರ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದ್ದು, 2013 ಮತ್ತು 2014ರಲ್ಲಿ ವರ್ಗಾವಣೆ ಮಾರ್ಗಸೂಚಿಯಲ್ಲಿರುವ ಷರತ್ತುಗಳನ್ವಯ ಸರ್ಕಾರಿ ನೌಕರರ ವರ್ಗಾವಣೆಯನ್ನು ಮೇ 2ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.
2013ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ವರ್ಗಾವಣೆ ಮಾರ್ಗಸೂಚಿಯಲ್ಲಿ ಗ್ರೂಪ್‌- ಎ ಮತ್ತು ಬಿ ಹುದ್ದೆಗಳಿಗೆ 3 ವರ್ಷ, ಗ್ರೂಪ್‌- ಸಿ ಹುದ್ದೆಗಳಿಗೆ 4 ವರ್ಷ ಮತ್ತು ಗ್ರೂಪ್‌- ಡಿ ಹುದ್ದೆಗಳಿಗೆ 7 ವರ್ಷ ಕನಿಷ್ಠ ಸೇವಾವಧಿ ನಿಗದಿಪಡಿಸಲಾಗಿತ್ತು. ಆದರೆ, 2014ರಲ್ಲಿ ಇದನ್ನು ಮಾರ್ಪಾಡು ಮಾಡಿ, ಗ್ರೂಪ್‌-ಬಿ ಹು¨ªೆಗಳಿಗೆ 1 ವರ್ಷ, ಗ್ರೂಪ್‌-ಸಿ ಹು¨ªೆಗಳಿಗೆ 2 ವರ್ಷ ಮತ್ತು ಗ್ರೂಪ್‌-ಡಿ ಹು¨ªೆಗಳಿಗೆ 7 ವರ್ಷ ಕನಿಷ್ಠ ಸೇವಾವಧಿ ನಿಗದಿಪಡಿಸಲಾಗಿತ್ತು. ಗ್ರೂಪ್‌- ಬಿ ಹುದ್ದೆಗಳಿಗೆ ಕನಿಷ್ಠ ಸೇವಾವಧಿಯನ್ನು ಒಂದು ವರ್ಷಕ್ಕೆ ಇಳಿಸಿದ್ದ ಬಗ್ಗೆ ಸರ್ಕಾರಿ ನೌಕರರ ಸಂಘದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಅದನ್ನು 2 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿಯೂ ಅದೇ ಮಾನದಂಡ ಅನ್ವಯವಾಗಲಿದೆ.

ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 2013ರಲ್ಲಿ ಸರ್ಕಾರ ಹೊರಡಿಸಿದ್ದ ವಿವರವಾದ ಮಾರ್ಗಸೂಚಿಯಲ್ಲಿ ಆಯಾ ಇಲಾಖೆಯ ಸಿಬ್ಬಂದಿಯ ಒಟ್ಟು ಸಂಖ್ಯೆಯ ಶೇ. 6ರಷ್ಟು ಮಾತ್ರ ವರ್ಗಾವಣೆ ಮಾಡಬೇಕು ಎಂದು ಮಿತಿ ನಿಗದಿಪಡಿಸಲಾಗಿತ್ತು. 2014ರಲ್ಲಿ ಅಂತಹ ಮಿತಿ ಇರಲಿಲ್ಲ. ಬದಲಾಗಿ ಮಿತವಾಗಿ ಮತ್ತು ಅವಶ್ಯವಿದ್ದಲ್ಲಿ ಮಾತ್ರ ವರ್ಗಾವಣೆ ಮಾಡಬೇಕು ಎಂದು ಹೇಳಲಾಗಿತ್ತು. ಅದೇ ಮಾನದಂಡವನ್ನು ಈ ಬಾರಿಯೂ ಅಳವಡಿಸಿಕೊಳ್ಳಲಾಗುತ್ತಿದೆ.

ಇನ್ನುಳಿದಂತೆ ಅವಧಿ ನಂತರ ಯಾವುದೇ ವರ್ಗಾವಣೆ ಮಾಡಬೇಕಾದಲ್ಲಿ ಅಥವಾ ಮಾರ್ಗಸೂಚಿಯಲ್ಲಿ ಹೇಳಿರುವ ಷರತ್ತುಗಳಿಗೆ ಹೊರತಾದ ಪ್ರಕರಣಗಳಲ್ಲಿ ಮುಖ್ಯಮಂತ್ರಿಯವರ ಪೂರ್ವಾನುಮತಿ ಪಡೆದು ವರ್ಗಾವಣೆ ಮಾಡಬೇಕು. ಪತಿ-ಪತ್ನಿ ಪ್ರಕರಣ, ಅನಾರೋಗ್ಯ, ಅವಲಂಬಿತರ ವೈದ್ಯಕೀಯ ಚಿಕಿತ್ಸೆ ಪ್ರಕರಣಗಳಿಗೆ ಆದ್ಯತೆ ನೀಡಬೇಕು. ವರ್ಗಾವಣೆ ಪ್ರಕ್ರಿಯೆಯನ್ನು 2013 ಮತ್ತು 2014ರ ಮಾರ್ಗಸೂಚಿ ಅನ್ವಯವೇ ನಡೆಸಬೇಕು ಎಂದು ಸೂಚಿಸಲಾಗಿದೆ.

ಕೇವಲ 9 ದಿನ ಅವಕಾಶ: ಅವಧಿ ವಿಸ್ತರಣೆ ಸಾಧ್ಯತೆ

ಪ್ರಸ್ತುತ ಹೊರಡಿಸಿರುವ ಆದೇಶದಂತೆ ಈ ಬಾರಿ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಕೇವಲ 9 ದಿನ ಮಾತ್ರ ಕಾಲಾವಕಾಶ ಸಿಗುತ್ತದೆ. ಸೋಮವಾರ ಮಾರ್ಗಸೂಚಿ ಪ್ರಕಟವಾಗಿದೆ. ಮಂಗಳವಾರ ಸರ್ಕಾರಿ ರಜೆ ಇತ್ತು. ಹೀಗಾಗಿ ಬುಧವಾರದಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಬೇಕು. ಈ ಮಧ್ಯೆ ಏ. 26ರ ಭಾನುವಾರ ಮತ್ತು ಮೇ 1ರಂದು ಕಾರ್ಮಿಕ ದಿನ ಪ್ರಯುಕ್ತ ಸರ್ಕಾರಿ ರಜೆ ಇರುತ್ತದೆ. ಮೇ 2 ವರ್ಗಾವಣೆಗೆ ಕಡೆಯ ದಿನ. 

ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ನಡೆಯಬೇಕಿರುವುದರಿಂದ ಈ ಕಾಲಾವಧಿ ತೀರಾ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸುವಂತೆ ಒತ್ತಾಯ ಕೇಳಿಬರಲಾರಂಭಿಸಿದೆ. 2013ರ ಪರಿಷ್ಕೃತ ಮಾರ್ಗಸೂಚಿಯನ್ವಯ ವರ್ಗಾವಣೆಗೆ ಮೇ ಅಂತ್ಯದವರೆಗೂ ಕಾಲಾವಕಾಶವಿದೆ. ಹೀಗಾಗಿ ಮತ್ತೆ ಕಾಲಾವಕಾಶ ವಿಸ್ತರಿಸುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳಿವೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK