ದೇಶದ ಪ್ರಥಮ ಹಲಸು ಉದ್ದಿಮೆ ಕೇರಳದಲ್ಲಿ ಆರಂಭ..

-
ಶ್ರೀ ಪಡ್ರೆ

ಹಲಸು ಉತ್ಪನ್ನಗಳೊಂದಿಗೆ ಸುಭಾಷ್
ಹಲಸಿಗೇ ಮೀಸಲಾದ ದೇಶದ ಪ್ರಪ್ರಥಮ
ಸುಸಜ್ಜಿತ ಉದ್ದಿಮೆ ಕೇರಳದಲ್ಲಿ ತಲೆಯೆತ್ತಿದೆ. ಈ
ಸಾಹಸ ಮೂವತ್ತೊಂದರ ಉತ್ಸಾಹಿ ಸುಭಾಷ್
ಕೊರೋತ್ ಅವರದು. ಅವರು ಇದಕ್ಕಾಗಿಯೇ
ತಳಿಪರಂಬದಲ್ಲಿ ನಾಲ್ಕು ಸಾವಿರ ಚದರಡಿಯ ಕಟ್ಟಡ
ಕಟ್ಟಿದ್ದಾರೆ.
ಹಲಸಿನ ಹಣ್ಣಿನ ವರಟ್ಟಿ (ಹಲ್ವದಂತಿರುತ್ತದೆ, ಆದರೆ
ಹಲ್ವವಲ್ಲ, ಕನ್ನಡದಲ್ಲಿ ಬೆರಟ್ಟಿ), ಹಣ್ಣಿನದೇ
ಲಘುಪೇಯ, ಚಾಕೊಲೇಟ್, ನಿರ್ಜಲೀಕೃತ
ಒಣ ಮತ್ತು ಕಾಯಿಸೊಳೆ, ಬೀಜದಿಂದ ಮಾಡಿದ
ದಿಢೀರ್ ಗಂಜಿ- ಇವಿಷ್ಟು ಆರಂಭ ದಲ್ಲಿ
ಮಾರುಕಟ್ಟೆಗಿಳಿಯುವ ಉತ್ಪನ್ನಗಳು. ದಿಢೀರ್
ಗಂಜಿ ಯನ್ನು ಬಿಸಿನೀರಿನಲ್ಲಿ ಹಾಕಿ ಕೂಡಲೇ
ಸೇವಿಸಬಹುದು.
ಈ ಕಂಪೆನಿಯ ಹೆಸರು ಕೇಳಿ - ಆರ್ಟೋಕಾರ್ಪಸ್
ಫುಡ್ಸ್ ಪ್ರೈವೇಟ್ ಲಿಮಿಟೆಡ್. ಹಲಸಿನ
ಸಸ್ಯಶಾಸ್ತ್ರೀಯ ನಾಮವೇ
ಆರ್ಟೋಕಾರ್ಪಸ್. ಕಂಪೆನಿಯ ಉತ್ಪನ್ನಗಳ
ವ್ಯಾಪಾರನಾಮ ಹೆಬಾನ್. ಸುಭಾಷ್ ಈ
ಕಂಪೆನಿಯ ನಿರ್ವಾಹಕ ನಿರ್ದೇಶಕರು. ಹಲಸಿನ ಹಣ್ಣಿನ
ತೊಳೆ ಮಾತ್ರವಲ್ಲ, ಉಳಿದವರು ಬಿಸಾಕುವ
ಬೀಜವನ್ನೂ ಇವರು ಬಳಸುತ್ತಾರೆ.
ಬೇಕರಿಯಲ್ಲಿ ತಯಾರಿಸುವ ಎಲ್ಲಾ ವಿಧದ ಕೇಕ್
ಮತ್ತು ಬಿಸ್ಕೆಟ್ಗಳಲ್ಲಿ ಮೈದಾಗೆ ಬದಲು
ಬಳಸಬಹುದಾದ ಹಲಸಿನಬೀಜದ ಹುಡಿ (ಹಬೀ
ಹುಡಿ) ಇವರ ವಿನೂತನ ಉತ್ಪನ್ನ. 'ಇಷ್ಟರಲ್ಲಿಯೇ
ಹಲವು ಬಾರಿ ಹಲಸಿನಬೀಜದ ಹುಡಿಯಿಂದ ಈ
ಎರಡು ಉತ್ಪನ್ನ ಮಾಡಿದ್ದು, ತಿಂದವ ರೆಲ್ಲಾ
ಶಹಭಾಸ್ ಎಂದಿದ್ದಾರೆ' ಎನ್ನುತ್ತಾರೆ ಸುಭಾಷ್.
ಜಗತ್ತಿನ ಹಲಸು ಬೆಳೆಸುವ ದೇಶಗಳಲ್ಲೆಲ್ಲಾ
ಅತಿದೊಡ್ಡ ಪ್ರಮಾಣದಲ್ಲಿ ಹಾಳಾಗಿಹೋಗುವ
ಉತ್ತಮ ಆಹಾರವಸ್ತು - ಹಲಸಿನ ಬೀಜ. ಅಡುಗೆಗೆ
ಅಷ್ಟೋ ಇಷ್ಟೋ ಬಳಸುವುದು ಬಿಟ್ಟರೆ
ವಾಣಿಜ್ಯೋತ್ಪನ್ನಕ್ಕೆ ಇದರ ಬೀಜ
ಬಳಕೆಯಾಗುವುದು ಬಹುಶಃ ಜಗತ್ತಿನಲ್ಲೇ
ಇದು ಮೊದಲ ಬಾರಿ ಆಗಿರಬೇಕು.
ಅದೇ ಊರಿನ ಸುಭಾಷ್ ಮಾರ್ಕೆಟಿಂಗ್ ರಂಗದಲ್ಲಿ
ಒಳ್ಳೆ ಅನುಭವ ಗಳಿಸಿದ್ದಾರೆ. ತಮ್ಮದೇ ಆದ
ಉತ್ಪನ್ನ ತಯಾರಿಸಬೇಕು, ಯಾರೂ
ಮಾಡದಂತಹದನ್ನು ಮಾಡಬೇಕು ಎಂಬ
ತುಡಿತ ಹಲಸಿನತ್ತ ಆಕರ್ಷಿಸಿತು. ಕಳೆದೊಂದು
ವರ್ಷದಿಂದ ಇವರು ಹಲಸಿನ ರಂಗದಲ್ಲಿ ಕೆಲಸ
ಮಾಡಿದವರೆಲ್ಲರನ್ನು ಭೇಟಿ ಮಾಡಿದ್ದಾರೆ. ಆಳ
ಅಧ್ಯಯನ ನಡೆಸಿದ್ದಾರೆ. ಮಾಡಿದ ಪ್ರತಿ ಕೆಲಸದಲ್ಲೂ
ವೃತ್ತಿಪರ ಸ್ಪರ್ಶ ಇರಬೇಕು, ಅದಕ್ಕಾಗಿ ಹೆಚ್ಚು
ಸಮಯ, ಶ್ರಮ, ವೆಚ್ಚ ತಗಲಿದರೂ ಅಡ್ಡಿಯಿಲ್ಲ ಎಂಬ
ಛಲವಿದೆ.
ಹಲಸಿನಹಣ್ಣಿನ ಬೆರಟ್ಟಿಗೆ ಕೇರಳದಾದ್ಯಂತ
ಭಾರೀ ಬೇಡಿಕೆಯಿದೆ. ಐದು ದೊಡ್ಡ
ಕಂಪೆನಿಗಳು ಇದನ್ನು ತಯಾರಿಸುತ್ತಿವೆ.
ಆದರೇನು, ವರ್ಷದುದ್ದಕ್ಕೂ ಸಿಗುವುದಿಲ್ಲ.
ಇಂಥಲ್ಲಿ ಹೋದರೆ ಸಿಕ್ಕೇಸಿಗುತ್ತದೆ
ಎನ್ನುವಂತಿಲ್ಲ. ಬೆರಟ್ಟಿ ಅಂತಲ್ಲ, ಹಲಸಿನ
ಯಾವುದೇ ಉತ್ಪನ್ನ ವರ್ಷವಿಡೀ ಎಲ್ಲೂ
ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಜನಪ್ರಿಯತೆ
ಪಡೆಯಲು ಇದೊಂದು ದೊಡ್ಡ ಅಡ್ಡಿ.
ಈ ಕೊರತೆಯನ್ನು ಮನದಲ್ಲಿಟ್ಟುಕೊಂಡು
ಹೆಬಾನ್ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು
ಕಣ್ಣೂರು, ಕಾಸರಗೋಡು- ಎರಡೇ
ಜಿಲ್ಲೆಗಳಲ್ಲಿ ಸೀಮಿತಗೊಳಿಸ ಬಯಸಿದೆ. ಹೆಚ್ಚೆಂದರೆ
ಇದಕ್ಕೆ ಕೋಝಿಕ್ಕೋಡ್ ಜಿಲ್ಲೆ ಸೇರಬಹುದು.
ಎಲ್ಲಾ ಉತ್ಪನ್ನಗಳೂ ವರ್ಷವಿಡೀ ಸಿಗುವಂತೆ
ಮಾಡುವುದು ನಮ್ಮ ಗುರಿ ಎಂದು ಸುಭಾಷ್
ತಿಳಿಸುತ್ತಾರೆ. ಇಷ್ಟರಲ್ಲೇ ಎರಡೂ ಜಿಲ್ಲೆಗಳಲ್ಲಿ
ಏಜೆನ್ಸಿಗಳನ್ನು ಗೊತ್ತುಗೊಳಿಸಿ ಸರಿಯಾದ
ಮಾರುಕಟ್ಟೆ ಜಾಲ ರೂಪುಗೊಳಿಸಿದ್ದಾರೆ.
ಸ್ವಲ್ಪ ಮೇಲುಸ್ತರದ ಗ್ರಾಹಕವರ್ಗ ತಲುಪುವ
ಗುರಿ ಇವರದು.
'ಆರ್ಟೋಕಾರ್ಪಸ್' ಸುತ್ತಲಿನ ಕೃಷಿಕರ
ಗುಂಪುಗಳಿಂದ ಕಿಲೋಗೆ ಐದು
ರೂಪಾಯಿಯಂತೆ ಹಲಸಿನಹಣ್ಣು
ಖರೀದಿಸುತ್ತಿದೆ. ಇವರಿಗೆ ಬಕ್ಕೆ, ತುಳುವ - ಎರಡೂ
ಬೇಕು. ದಿನಕ್ಕೆ ಮುನ್ನೂರು ಹಲಸನ್ನು
ಸಂಸ್ಕರಿಸುವ ಸಾಮರ್ಥ್ಯವಿದೆ. ಮೊದಲ ವರ್ಷದಲ್ಲಿ
20 ಸಾವಿರ ಹಲಸನ್ನು ಬಳಸುವುದು ಇವರ
ಯೋಜನೆ. ಹನ್ನೆರಡು ಮಂದಿ ಸಿಬ್ಬಂದಿ.
ತ್ಯಾಜ್ಯ ನಿರ್ವಹಣೆಗೆ ಕಷ್ಟವಿಲ್ಲ. ಸಿಪ್ಪೆ
ಇತ್ಯಾದಿಗಳನ್ನು ಸುತ್ತಲಿನ ಕುಟುಂಬಗಳು
ದನಗಳಿಗೆ ತಿನ್ನಿಸಲು ಅತಿ ಉತ್ಸಾಹದಿಂದ
ಒಯ್ಯುತ್ತಿದ್ದಾರೆ.
ಎರಡನೆ ಘಟ್ಟದಲ್ಲಿ ಹಲಸಿನ ಬೀಜದ ಚಿಕನ್ ಮಸಾಲಾ,
ನಿರ್ಜಲೀಕೃತ ಎಳೆ ಹಲಸು (ಗುಜ್ಜೆ) ಮತ್ತು
ರಿಟಾರ್ಟ್ ಪೌಚಿನಲ್ಲಿ ಬೇಯಿಸಿದ ಎಳೆಹಲಸು - ಹೀಗೆ
ಮೂರು ಉತ್ಪನ್ನ ಹೊರ ತರುವ ಉದ್ದೇಶವಿದೆ.
ಇದಲ್ಲದೆ ಮುಂಚಿತವಾಗಿ ದೊಡ್ಡ ಪ್ರಮಾಣದಲ್ಲಿ
ಆದೇಶ ಕೊಟ್ಟರೆ ರಿಟಾರ್ಟ್ ಪೌಚಿನಲ್ಲಿ ಹಲಸಿನ
ಹಣ್ಣಿನ ಪಲ್ಪ್ ತಯಾರಿಸಿ ಪೂರೈಸಲು
ಸಿದ್ಧರಿದ್ದಾರೆ.
ಸುಭಾಷ್ ಐಸ್ಕ್ರೀಂ ತಯಾರಕರಿಗೆ ಹಲಸಿನ ಹಣ್ಣಿನ
ಪಲ್ಪ್ ಕೊಟ್ಟು ಪ್ರಾಯೋಗಿಕ ಹಲಸಿನ ಐಸ್
ಕ್ರೀಂ ತಯಾರಿ, ಬೇರೆ ಬೇರೆ ಬೇಕರಿಯವರಿಗೆ
ಹಲಸಿನ ಬೀಜದ ಹುಡಿ ಕೊಟ್ಟು ಕೇಕ್ ಮಾಡಿಸಿ
ರುಚಿ ನೋಡುವುದು - ಇಂಥ ಹತ್ತಾರು
ಪ್ರಾಯೋಜಕ ಚಟುವಟಿಕೆ ಮಾಡುತ್ತಲೇ
ಇರುತ್ತಾರೆ.
ಇಂಥ ಉದ್ದಿಮೆದಾರರ ಸಂಪರ್ಕದಿಂದ ಇವರಿಗೆ ಗರಿಷ್ಠ
ಭರವಸೆ ಮೂಡಿಸಿರುವ ಉತ್ಪನ್ನ ಹಲಸಿನ ಬೀಜದ
ಹುಡಿ. ಬೇಕರಿಗಳ ಬಾಗಿಲು ಈ ಉತ್ಪನ್ನಕ್ಕೆ
ದೊಡ್ಡದಾಗಿ ತೆರೆಯುವ ಸಾಧ್ಯತೆಯಿದೆ.
ಹಾಗೇನಾದರೂ ಆಗಿ ಕ್ಲಿಕ್ ಆಯಿತೆಂದರೆ,
ನಾವೆಷ್ಟು ಸಾಹಸಪಟ್ಟು ಉತ್ಪನ್ನ
ತಯಾರಿಸಿದರೂ ಈ ಎರಡು ಮೂರು ಜಿಲ್ಲೆಗಳಿಂದ
ಹೊರಗೆ ಪೂರೈಸಲು ಸಾಧ್ಯವಾಗದೆ
ಹೋಗಬಹುದು, ಪ್ಲೇಟಿನಲ್ಲಿ ಹೆಬಾನ್ ಹಲಸಿನ
ಬೀಜ ಹುಡಿಯ ಕೇಕ್ ತುಂಡುಗಳನ್ನು
ಎದುರು ಒಡ್ಡುತ್ತಾ ಬಾಯ್ತುಂಬಾ
ನಗುತ್ತಾರೆ.
ಹಲಸಿಗೆ ಮರದ ಮೇಲೆ ಇರುವಾಗ ಬೆಲೆಯೇ ಇಲ್ಲ.
ಹಾಗೆಂದು ಕೊಯ್ದು ನಮ್ಮ ಕೈಗೆ
ಬರುವಾಗ ಅದು ದುಬಾರಿ ಬೆಲೆಯದಾಗುತ್ತದೆ.
ಇದಕ್ಕೆ ಸರಿಯಾದ ಸರಬರಾಜು ಸರಪಳಿ ಇಲ್ಲ.
ಉತ್ಪನ್ನಗಳ ಗುಣಮಟ್ಟದ ತಂತ್ರಜ್ಞಾನಗಳು
ಸಿದ್ಧವಿಲ್ಲ. ಉದ್ದಿಮೆಯಲ್ಲಿ
ಮುಂದುವರಿಯಬೇಕಾದರೆ ನಾವೇ
ಸಂಶೋಧನೆ ಮತ್ತು ಅಭಿವೃದ್ಧಿ
ಮಾಡಬೇಕಾಗುತ್ತದೆ, ಎದುರಿರುವ
ಸವಾಲುಗಳ ಬಗ್ಗೆ ತಿಳಿಸುತ್ತಾರೆ.
ಹಲಸಿನ ಉತ್ಪನ್ನಗಳನ್ನು ಗುಣಮಟ್ಟ ಕಾಯ್ದು
ಉತ್ಪಾದಿಸಿಕೊಂಡರೆ ಮಾರುಕಟ್ಟೆ
ಮಾಡುವುದು ಕಷ್ಟವಲ್ಲ. ಕಷ್ಟ ಹೆಚ್ಚು
ಇರುವುದು ಉತ್ಪಾದನೆ, ಅದಕ್ಕಾಗಿ ಸೂಕ್ತ
ಕಚ್ಚಾವಸ್ತು ಹೊಂದಿಸಿಕೊಳ್ಳುವುದು,
ಹಲಸನ್ನು ಕತ್ತರಿಸಿ ಸೊಳೆ
ಆಯ್ದುಕೊಳ್ಳುವುದು - ಇಂಥ
ಉತ್ಪಾದನಾಪೂರ್ವ ಪ್ರಕ್ರಿಯೆಗಳ ಯಶಸ್ವಿ
ನಿಭಾವಣೆಯಲ್ಲೇ ಉದ್ದಿಮೆಯ ಯಶಸ್ಸು ಅಡಗಿದೆ.
ಏನೇ ಇರಲಿ, ಸಾಮಾಜಿಕ ತಾಣಗಳಲ್ಲಿ ಇವರ ಹಲಸಿನ
ಬೀಜದ ಹುಡಿ ಬಗ್ಗೆ ಬಂದ ಪ್ರತಿಕ್ರಿಯೆ ನೋಡಿದರೆ
ಈ ಉದ್ದಿಮೆ ದೇಶದ ಗಮನ ಸೆಳೆಯುವ ದಿನ
ದೂರವಿಲ್ಲ ಅನ್ನಿಸುತ್ತದೆ. ಹೆಬಾನ್ ಸಂಪರ್ಕ
-9745654555 ಇ-ಮೇಲ್: md@artocarpus.in

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು