16 ಲಕ್ಷ ಕಿ.ಮೀ ದೂರದಿಂದ ತೆಗೆದ ಫೋಟೊ ಸೂರ್ಯ ಪ್ರಕಾಶದಲ್ಲಿ ಹೊಳೆವ ಭೂಮಿಯ ಮೊದಲ ಚಿತ್ರ


ಬಹುವರ್ಣ ಕ್ಯಾಮರಾ ಬಳಸಿ ತೆಗೆದಿರುವ ಭೂಮಿಯ ವರ್ಣರಂಜಿತ ಚಿತ್ರ –ರಾಯಿಟರ್‌್ಸ್ ಚಿತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಸೂರ್ಯನ ಬೆಳಕು ಇರುವ ಭೂಮಿಯ ಭಾಗದ ಚಿತ್ರವನ್ನು ಸೆರೆ ಹಿಡಿದಿದೆ. ಭೂಮಿಯಿಂದ 16 ಲಕ್ಷ ಕಿಲೋಮೀಟರ್‌ ದೂರದಿಂದ ಈ ಚಿತ್ರವನ್ನು ತೆಗೆಯಲಾಗಿದೆ.

ಈ ಚಿತ್ರವನ್ನು ನೋಡಿದ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು 'ನಮಗೆ ಇರುವ ಏಕೈಕ ಗ್ರಹವನ್ನು ಸಂರಕ್ಷಿಸಬೇಕಾದ ಅಗತ್ಯ ಇದೆ' ಎಂದು ಟ್ವೀಟ್‌ ಮಾಡಿದ್ದಾರೆ. ನಾಸಾದ ಡೀಪ್‌ ಸ್ಪೇಸ್‌ ಕ್ಲೈಮೆಟ್‌ ಆಬ್ಸರ್ವೇಟರಿ (ಡಿಎಸ್‌ಸಿಒವಿಆರ್‌) ಉಪಗ್ರಹದಲ್ಲಿ ಅಳವಡಿಸಲಾಗಿರುವ ಬಹುವರ್ಣ ಕ್ಯಾಮರಾ (ಎಪಿಕ್‌) ಬಳಸಿ ಈ ಚಿತ್ರವನ್ನು ತೆಗೆಯಲಾಗಿದೆ. ಫೋಟೊದ ಗುಣಮಟ್ಟ ಹೆಚ್ಚಿಸಲು ಮೂರು ಚಿತ್ರಗಳನ್ನು ಜೊತೆಯಾಗಿ ಇರಿಸಿ ಈ ಚಿತ್ರವನ್ನು ನಾಸಾ ಸಿದ್ಧಪಡಿಸಿದೆ.

ಜುಲೈ 6ರಂದು ತೆಗೆಯಲಾದ ಈ ಚಿತ್ರದಲ್ಲಿ ಮರುಭೂಮಿ ಮತ್ತು ಮರಳಿನ ರಚನೆಗಳು, ನದಿಗಳು ಮತ್ತು ಸಂಕೀರ್ಣ ಮೋಡದ ವಿನ್ಯಾಸಗಳನ್ನು ಕಾಣಬಹುದು ಎಂದು ನಾಸಾ ಹೇಳಿದೆ. 'ನೀಲಿ ಬಣ್ಣದ ಈ ಚಿತ್ರ ಈಗಷ್ಟೇ ಸಿಕ್ಕಿತು. ನಮಗೆ ಇರುವ ಏಕೈಕ ಗ್ರಹವನ್ನು ಸಂರಕ್ಷಿಸುವ ಅಗತ್ಯ ಇದೆ ಎಂಬುದನ್ನು ಇದು ಸುಂದರವಾಗಿ ನೆನಪಿಸುತ್ತದೆ' ಎಂದು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ (@POTUS) ಒಬಾಮ ಹೇಳಿದ್ದಾರೆ.

ಬಾಹ್ಯಾಕಾಶದಿಂದ ಭೂಮಿಯನ್ನು ಗಮನಿಸುವುದರ ಮಹತ್ವವನ್ನು ಡಿಎಸ್‌ಸಿಒವಿಆರ್‌ ತೆಗೆದಿರುವ ಮೊದಲ ಚಿತ್ರ ಮನವರಿಕೆ ಮಾಡಿಕೊಡುತ್ತದೆ ಎಂದು ನಾಸಾ ಆಡಳಿತಾಧಿಕಾರಿ ಚಾರ್ಲಿ ಬೋಲ್ಡನ್‌ ಹೇಳಿದ್ದಾರೆ.

'ಡಿಎಸ್‌ಸಿಒವಿಆರ್‌ ನಡೆಸುವ ಭೂಮಿಯ ಅವಲೋಕನ ಮತ್ತು ಸೂರ್ಯನಿಂದಾಗಿ ಬಾಹ್ಯಾಕಾಶ ಹವಾಮಾನದಲ್ಲಿ ಆಗುವ ಬದಲಾವಣೆಗಳ ಬಗೆಗಿನ ಎಚ್ಚರಿಕೆ ಬದಲಾಗುತ್ತಲೇ ಇರುವ ಭೂಮಿಯ ಮೇಲೆ ನಿಗಾ ಇರಿಸಲು ನೆರವಾಗುತ್ತದೆ. ಹಾಗೆಯೇ ಸೌರವ್ಯೂಹದಲ್ಲಿ ಭೂಮಿಯು ಹೇಗೆ ಹೊಂದಿಕೊಂಡಿದೆ ಎಂಬುದನ್ನೂ ತಿಳಿಸುತ್ತದೆ' ಎಂದು ಬೋಲ್ಡನ್‌ ಹೇಳಿದ್ದಾರೆ.

ಪ್ರತಿ ದಿನವೂ ಚಿತ್ರ: ಉಪಗ್ರಹವು ನಿಯಮಿತವಾಗಿ ಮಾಹಿತಿ ಸಂಗ್ರಹ ಕೆಲಸವನ್ನು ಆರಂಭಿಸಿದ ನಂತರ ಪ್ರತಿ ದಿನವೂ ಭೂಮಿಯ ಚಿತ್ರವನ್ನು ಕಳುಹಿಸಿಕೊಡಲಿದೆ. ಚಿತ್ರ ತೆಗೆದು 12ರಿಂದ 36 ತಾಸುಗಳಲ್ಲಿ ಅದು ಭೂಮಿಯನ್ನು ತಲುಪಲಿದೆ. ಸೆಪ್ಟೆಂಬರ್‌ನಿಂದ ಪ್ರತ್ಯೇಕ ಅಂತರ್ಜಾಲ ತಾಣವೊಂದರಲ್ಲಿ ಈ ಚಿತ್ರಗಳನ್ನು ಪ್ರದರ್ಶಿಸುವ ಉದ್ದೇಶವನ್ನು ನಾಸಾ ಹೊಂದಿದೆ. ಡಿಎಸ್‌ಸಿಒವಿಆರ್‌ ಉಪಗ್ರಹವನ್ನು ಫೆಬ್ರುವರಿ ತಿಂಗಳಲ್ಲಿ ಉಡಾವಣೆ ಮಾಡಲಾಗಿದೆ. ಇದು ಭೂಮಿಯಿಂದ 16 ಲಕ್ಷ ಕಿಲೋಮೀಟರ್‌ ದೂರದಲ್ಲಿ ಭೂಮಿ ಮತ್ತು ಸೂರ್ಯನ ಮಧ್ಯೆ ಇದೆ. ಹಾಗಾಗಿ ಸೂರ್ಯನ ಬೆಳಕು ಇರುವ ಭೂಮಿಯ ಭಾಗದ ಚಿತ್ರ ತೆಗೆಯುವುದು ಈ ಉಪಗ್ರಹಕ್ಕೆ ಸಾಧ್ಯವಾಗುತ್ತದೆ.

*
ಮುಖ್ಯಾಂಶಗಳು
*ಭೂಮಿಗೆ ಸಂಬಂಧಿಸಿದ ವೈಜ್ಞಾನಿಕ ಅಧ್ಯಯನಗಳಿಗೆ ಮಾಹಿತಿ ಬಳಕೆ
*ಪೂರ್ಣ ಕಾರ್ಯನಿರ್ವಹಣೆ ಆರಂಭದ ನಂತರ ಪ್ರತಿದಿನವೂ ಚಿತ್ರ ರವಾನೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK