ಸರ್ಕಾರಿ ಶಾಲೆ: 'ವಿದ್ಯಾಂಜಲಿ'ಗೆ 16 ರಂದು ಚಾಲನೆ


ನವದೆಹಲಿ: ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಶೀಘ್ರ 'ವಿದ್ಯಾಂಜಲಿ' ಎಂಬ ಹೊಸ ಕಾರ್ಯಕ್ರಮ ಆರಂಭಿಸಲಿದೆ. ಸರ್ಕಾರಿ ಶಾಲೆಗಳಲ್ಲಿನ ಬೋಧನಾ ವ್ಯವಸ್ಥೆ ಸುಧಾರಣೆಗೆ ಮತ್ತು ಶಿಕ್ಷಕರ ಕೊರತೆ ನೀಗಿಸುವಲ್ಲಿ 'ವಿದ್ಯಾಂಜಲಿ' ನೆರವಾಗಲಿದೆ. ಇದಕ್ಕಾಗಿ ನಾಗರಿಕ ಸೇವೆ ಸಲ್ಲಿಸಿ ನಿವೃತ್ತರಾದವರು ಸೇರಿದಂತೆ ಬೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾಭಿಮಾನಿಗಳನ್ನು ಬಳಸಿಕೊಳ್ಳಲಾಗುತ್ತದೆ.
ವಿದ್ಯಾಂಜಲಿ ಕಾರ್ಯಕ್ರಮಕ್ಕೆ ಜೂನ್ 16 ರಂದು ಚಾಲನೆ ನೀಡಲಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಲೆಗಳಲ್ಲಿ ಬೋಧನೆ ಮಾಡಲು ಮುಂದಾಗುವ 'ಸ್ವಯಂಸೇವಕ'ರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವೇದಿಕೆ ರೂಪಿಸಿದೆ.
'ವಿದ್ಯಾಂಜಲಿ' ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ದೇಶದ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ಈ ಕೊರತೆ ನೀಗಿಸಲು 'ಸ್ವಯಂಪ್ರೇರಿತರ' ಗುಂಪು ರಚನೆಯಾಗಲಿದೆ. ಇವರು ತಮ್ಮ ಅಮೂಲ್ಯ ಸಮಯವನ್ನು ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ತಿಂಗಳ ಬಾನುಲಿ ಭಾಷಣ 'ಮನದ ಮಾತು'ವಿನಲ್ಲಿ ವಿದ್ಯಾಂಜಲಿ ಬಗ್ಗೆ ಮಾತನಾಡಿದ್ದರು. ಆನಂತರ ಮಾನವ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಮುಂದಾಗಿದ್ದರು. ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅಧಿಕಾರಿಗಳು, ಎಂಜಿನಿಯರ್, ವೈದ್ಯರು, ನಿವೃತ್ತರು ತಮ್ಮ ಸಮೀಪದ ಶಾಲೆಗಳಲ್ಲಿ ಬೋಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು.
ವಿದ್ಯಾಂಜಲಿಗೆ ಚಾಲನೆ ನೀಡಿದ ನಂತರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಆಸಕ್ತಿ ಹೊಂದಿದವರು ಕೇಂದ್ರ ಸರ್ಕಾರದ ವೆಬ್ಪೋರ್ಟಲ್ mygov.in. ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
'ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಮಾಡಿದ್ದೇವೆ. ನಿವೃತ್ತ ಅಧಿಕಾರಿಗಳು, ಶಿಕ್ಷಕರು, ಯಶಸ್ವಿ ಉದ್ಯಮಿಗಳು ಆಸಕ್ತಿ ತೋರಿಸಲಿದ್ದಾರೆ. ನಮ್ಮ ದೇಶದಲ್ಲಿ ಸ್ವಯಂ ಪ್ರೇರಿತ ಶಿಕ್ಷಣಾಭಿಮಾನಿಗಳು ಇದ್ದಾರೆ' ಎಂದು ಎಚ್‌ಆರ್ಡಿಯ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
32 ಚಾನೆಲ್ ಬಿಡುಗಡೆಗೆ ಸಿದ್ಧತೆ: ಐಐಟಿ ಮತ್ತು ಇತರ ಉನ್ನತ ಅಧ್ಯಯನ ಸಂಸ್ಥೆಗಳಲ್ಲಿ ನಡೆಯುವ ಪಾಠಗಳ ನೇರಪ್ರಸಾರವನ್ನು ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ಲಿವಿಂಗ್ ರೂಂನಲ್ಲಿ ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ 32 ಡಿಟಿಎಚ್ ಚಾಲನೆಗಳ ಬಿಡುಗಡೆಗೆ ಸಿದ್ಧತೆ ನಡೆಸಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು