ಹನ್ನೆರಡು ಸಾವಿರ ಶಿಕ್ಷರಿಗೆ ಬಡ್ತಿ ಭಾಗ್ಯ
ಬೆಂಗಳೂರು: ಅರವತ್ತಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ
ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮುಖ್ಯ ಶಿಕ್ಷಕ ಹುದ್ದೆ
ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದ್ದು,
ಇದರಿಂದಾಗಿ 19 ಸಾವಿರ ಮುಖ್ಯ ಶಿಕ್ಷಕ
ಹುದ್ದೆಗಳು ಸೃಷ್ಟಿಯಾದಂತಾಗಲಿದೆ.
ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಹಾಗೂ ಸರಕಾರಿ ಶಾಲೆ
ಮುಖ್ಯಶಿಕ್ಷಕರ ಸಂಘ ಕಳೆದ ನಾಲ್ಕು ವರ್ಷಗಳ ಬೇಡಿಕೆಗೆ
ಕೊನೆಗೂ ಸ್ಪಂದಿಸಿರುವ ಸರಕಾರ
ಮೇ 17ರಂದು ಆದೇಶ ಹೊರಡಿಸಿದೆ.
2011ಕ್ಕೆ ಪೂರ್ವದಲ್ಲಿ ಪ್ರತಿ ಸರಕಾರಿ ಪ್ರಾಥಮಿಕ
ಶಾಲೆಯಲ್ಲೂ ಮುಖ್ಯ ಶಿಕ್ಷಕ ಹುದ್ದೆ ಇತ್ತು. ಆ ಬಳಿಕ
121ರಿಂದ 160 ವಿದ್ಯಾರ್ಥಿಗಳಿರುವ ಸರಕಾರಿ ಶಾಲೆಗಳಿಗೆ ಮಾತ್ರ
ಪದೋನ್ನತಿ ಪಡೆದ ಮುಖ್ಯ ಶಿಕ್ಷಕ
ಹುದ್ದೆಯನ್ನು ನೀಡಿತ್ತು. ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ
ಹೋಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ
ಮುಖ್ಯ ಶಿಕ್ಷಕ ಹುದ್ದೆಗಳೂ ಕಡಿಮೆಯಾಗಿದ್ದವು. ಇದರಿಂದಾಗಿ
20 ವರ್ಷಕ್ಕೂ ಹೆಚ್ಚಿನ ಅವಧಿಯ ಸೇವೆ
ಸಲ್ಲಿಸಿದರೂ ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಿತ್ತು. ಕಾಲಕಾಲಕ್ಕೆ
ವೇತನ ಬಡ್ತಿ ಸಿಗುತ್ತಿತ್ತೇ ಹೊರತು ಸೇವಾವಧಿಯಲ್ಲಿ
ಒಂದು ಹೆಚ್ಚುವರಿ ಬಡ್ತಿ
ಸಿಗದೇ ಬಹಳಷ್ಟು ಶಿಕ್ಷಕರು ನಿವೃತ್ತರಾಗುತ್ತಿದ್ದರು.
ರಾಜ್ಯದಲ್ಲಿ 19 ಸಾವಿರ ಮುಖ್ಯ ಶಿಕ್ಷಕರ ಹುದ್ದೆ ಇದ್ದು,
121ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಬಡ್ತಿ ಮುಖ್ಯ
ಶಿಕ್ಷಕ ಹುದ್ದೆಯನ್ನು ರದ್ದುಪಡಿಸಲಾಗಿತ್ತು. ಇದರಿಂದಾಗಿ 12
ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಮುಖ್ಯ ಶಿಕ್ಷಕ ಹುದ್ದೆ
ಇದ್ದರೂ ಬಡ್ತಿ ಸಿಗುತ್ತಿರಲಿಲ್ಲ. ಶಾಲೆಗೆ ಕರ್ತವ್ಯಕ್ಕೆ ಸೇರಿದ
ದಿನಾಂಕದಲ್ಲಿ ಹಿರಿತನದ ಆಧಾರದ ಮೇಲೆ ಪ್ರಭಾರ
ಮುಖ್ಯಶಿಕ್ಷಕರು ಮಾತ್ರ ಇರುತ್ತಿದ್ದರು. ಹೊಸ
ಆದೇಶದಿಂದಾಗಿ 12 ಸಾವಿರಕ್ಕೂ ಹೆಚ್ಚು ಸಹಶಿಕ್ಷಕರಿಗೆ ಬಡ್ತಿ
ಭಾಗ್ಯ ಸಿಗಲಿದೆ.
ಅಭಿನಂದನೆ
ಶಿಕ್ಷಕರ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಿದ
ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣ
ಸಚಿವ ಕಿಮ್ಮನೆ ರತ್ನಾಕರ್, ಇಲಾಖೆ ಪ್ರಧಾನ ಕಾರ್ಯದರ್ಶಿ
ರಾಜಕುಮಾರ್ ಖತ್ರಿ ಹಾಗೂ ಆಯುಕ್ತರಾದ ಮೊಹಮದ್
ಮೊಹಸಿನ್ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ
ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್ ಹಾಗೂ ಪ್ರಧಾನ
ಕಾರ್ಯದರ್ಶಿ ವಿ.ಎಂ. ನಾರಾಯಣಸ್ವಾಮಿ ಅಭಿನಂದನೆ
ಸಲ್ಲಿಸಿದ್ದಾರೆ.
Comments
Post a Comment