ಕ್ಷುಲ್ಲಕ ಟೀಕೆಗಳನ್ನು ಮೆಟ್ಟಿಲು ಮಾಡಿಕೊಂಡೆ::-


ಮಂಗಳೂರು:ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ: ಅರುಣಿಮಾ ಸಿನ್ಹಾ ಹೀಗೆ ಹೇಳುತ್ತಿದ್ದರೆ ನಗರದ ಸಂಘ ನಿಕೇತನದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಸ್ಫೂರ್ತಿ ಉಕ್ಕುತ್ತಿತ್ತು. ಯಾಕೆಂದರೆ, ಹಾಗೆ ಹೇಳುತ್ತಿದ್ದ ಅರುಣಿಮಾ ಸಿನ್ಹಾ ಅವರಿಗೆ ಒಂದು ಕಾಲೇ ಇರಲಿಲ್ಲ ಮತ್ತು ಅವರು ಒಂಟಿ ಕಾಲಿನಲ್ಲೇ ಎವರೆಸ್ಟ್ ಹತ್ತಿರ ಮಹಾ ಛಲವಾದಿ, ಸಂಕಲ್ಪ ಶಕ್ತಿಯ ದಿಟ್ಟ ಹೆಣ್ಮಗಳು.ಯುವ ಬ್ರಿಗೇಡ್ ವತಿಯಿಂದ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಆಡಿದ ಒಂದೊಂದು ಮಾತೂ ಪ್ರೇರಣಾದಾಯಕವಾಗಿತ್ತು. ಕಷ್ಟಗಳು ಬಂದಾಗ ಕೊರಗಬೇಡಿ, ಸಮಸ್ಯೆಗಳನ್ನು ಅವಕಾಶವಾಗಿ ಬದಲಿಸಿಕೊಳ್ಳಿ. ಅದೆಲ್ಲ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದಾಗ ಇಡೀ ಪ್ರೇಕ್ಷಕ ಸಮೂಹ ತನಗೆ ತಾನೇ ಕೈಜೋಡಿಸಿತು.ಮೊಟ್ಟಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಬೇಕು. ನಾವು ಸಾಧಿಸಲು ಹೊರಟಿರುವ ಗುರಿಯ ಬಗ್ಗೆ ನಮಗೆ ವಿಶ್ವಾಸ ಇದ್ದರೆ, ಹೆತ್ತವರನ್ನು ಮನವರಿಕೆ ಮಾಡಲು ಸಾಧ್ಯ. ನಾವು ನಮ್ಮ ಮುಂದಿನ ಸಾಧನೆಯಕನಸು ಹೊತ್ತರೆ, ದಿನವಿಡೀ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ವರೆಗೆಛಲ ಬಿಡಬಾರದು. ಯಾವುದೇ ಸಂದರ್ಭದಲ್ಲೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದರು.ಜನರು ನೀಡುವ ನೋವು, ಅಪಮಾನಗಳು ನಮ್ಮನ್ನು ಕುಗ್ಗಿಸಬಾರದು. ಅದು ನಮಗೆ ಸಾಧನೆಯ ಮೆಟ್ಟಿಲಾಗಬೇಕು. ಪ್ರಾಮಾಣಿಕ ಶ್ರಮಕ್ಕೆ ನಿಶ್ಚಿತ ಫಲಿತಾಂಶ ಸಿಕ್ಕಿಯೇ ಸಿಗುತ್ತದೆ. ಇಲ್ಲಿರುವ ಪ್ರತಿಯೊಬ್ಬರೂ ಅಸಾಮಾನ್ಯರಾಗಿದ್ದಾರೆ. ಅದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು ಅಷ್ಟೇ ಎಂದರು.ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡುವ ಅವಶ್ಯಕತೆ ಇಲ್ಲ. ವಿಕಲಾಂಗರಾದರೆ, ಅದನ್ನು ಮೀರಿದ ಸಾಧನೆ ಮಾಡಬೇಕು. ಹಾಗೆಯೇ ಯಾವುದೇ ಋಣಾತ್ಮಕ ವಿಷಯವನ್ನು ಧನಾತ್ಮಕವಾಗಿ ಪರಿವರ್ತಿಸುವ ಗುಣ ರೂಢಿಸಿಕೊಳ್ಳಬೇಕು ಎಂದರು.ಸ್ಪೋರ್ಟ್ಸ್ ಅಕಾಡೆಮಿ ಕನಸು:ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪಿಸಿ ನನ್ನಂಥ ನೂರಾರು ವಿಕಲ ಚೇತನರಿಗೆ ತರಬೇತಿ ನೀಡಬೇಕು. ಅತ್ಯಾಧುನಿಕ ಕೃತಕ ಅಂಗಾಂಗಳನ್ನು ಜೋಡಿಸಿ ಸಾಧನೆಗೆ ಪ್ರೇರಣೆ ನೀಡಬೇಕು ಎಂಬ ಕನಸಿದೆ. ಸುಮಾರು 25ಕೋಟಿ ರೂ.ಗಳನ್ನು ಯೋಜನೆಗೆ ಜಮೀನು ಖರೀದಿಸಿದ್ದು, ಈಗಾಗಲೇ ಮಕ್ಕಳು ಬಂದು ಇಲ್ಲಿ ಆಟವಾಡುತ್ತಿದ್ದಾರೆ ಎಂದರು.ಕೇಂದ್ರ ಸರಕಾರದ ಸಿಆರ್‌ಪಿಎಫ್ ಉದ್ಯೋಗ ತೊರೆದು ಈಕೆಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಈಕೆಯ ಸಹೋದರ ಓಂ ಪ್ರಕಾಶ್ ಮಾತನಾಡಿ, ಯಾವುದಕ್ಕೂ ಮೊದಲು ನಾವು ಮಾನವರಾಗಬೇಕು. ಇದರಿಂದ ಇಡೀ ಜಗತ್ತಿಗೆ ಸೇವೆ ಮಾಡಲು ಸಾಧ್ಯ. ಮಹಿಳೆಯರಲ್ಲಿ ಲಕ್ಷ್ಮಿ, ಸರಸ್ವತಿ, ಶಕ್ತಿ ಹೀಗೆ ಎಲ್ಲವೂ ಇದೆ. ಮಹಿಳೆಯರನ್ನು ಗೌರವಿಸೋಣ. ಇಂತಹ ಮನೋಸ್ಥಿತಿ ನಿರ್ಮಿಸೋಣ ಎಂದರು. ಜಾಗೋ ಭಾರತ್‌ನ ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವ ಬ್ರಿಗೇಡ್‌ನ ನರೇಶ್ ಶೆಣೈ ಉಪಸ್ಥಿತರಿದ್ದರು.ಆಸ್ಪತ್ರೆಯಿಂದ ನೇರ ಪರ್ವತದ ಕಡೆಗೆ!: ನಾನು ಕಾಲು ಕಳೆದು ಆಸ್ಪತ್ರೆಯಲ್ಲಿರುವಾಗಲೇ ಎವರೆಸ್ಟ್ ಶಿಖರ ಏರುವ ಕನಸು ಕಂಡೆ. ಆಸ್ಪತ್ರೆಯಿಂದ ಹೊರ ಬಂದ ತಕ್ಷಣ ಅದನ್ನು ಅನುಷ್ಠಾನ ಮಾಡಲು ಹೊರಟೆ. ಯಾಕೆಂದರೆ ಕಬ್ಬಿಣ ಕಾದಾಗಲೇ ಬಡಿಯಬೇಕು. 2011ರಲ್ಲಿ ನನ್ನನ್ನು ದರೋಡೆಮಾಡಿ, ಚಲಿಸುವ ರೈಲಿನಿಂದ ಎಸೆದ ಆರೋಪಿಗಳನ್ನು ಪೊಲೀಸರು ಇನ್ನೂ ಹುಡುಕುತ್ತಿದ್ದಾರೆ. ಆ ಆರೋಪಿಗಳಿಗೆ ಒಳ್ಳೆಯ ಕೆಲಸ ಮಾಡುವ ಮನಸ್ಸನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಒಟ್ಟು 7 ಶಿಖರಗಳಲ್ಲಿ ಈಗಾಗಲೇ ಏಷ್ಯಾ, ಆಫ್ರಿಕಾ, ಯೂರೋಪ್‌ಗಳ ಶಿಖರಗಳನ್ನು ಯಶಸ್ವಿಯಾಗಿ ಏರಿ ಯಶಸ್ಸಾಗಿ ಬದುಕಿ ಬಂದಿದ್ದೇನೆ. ಆಸ್ಟ್ರೇಲಿಯಾದ ಶಿಖರ ಏರಲು ಅಕ್ಟೋಬರ್‌ನಲ್ಲಿ ಹೋಗುತ್ತಿದ್ದೇನೆ. ಜಗತ್ತಿನ ಉಳಿದ ನಾಲ್ಕು ಶಿಖರವನ್ನು ಯಶಸ್ವಿಯಾಗಿ ಏರಬಲ್ಲೆ ಎಂಬ ವಿಶ್ವಾಸ ನನಗಿದೆ ಎಂದರು.ರೈಲಿಂದ ಎಸೆದದ್ದು ಹಿಮಾಲಯ ಹತ್ತಿದ್ದು:1988ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿ, ಶಿಕ್ಷಣದ ಹಂತದಲ್ಲೇ ಉತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡೆ. ರಾಷ್ಟ್ರೀಯ ಮಟ್ಟದ ವಾಲಿಬಾಲ್ಆಟಗಾರ್ತಿಯಾಗಿದ್ದೆ.2011 ಎ.11 ನಾನು ಲಕ್ನೋದಿಂದ ಹೊಸದಿಲ್ಲಿಗೆ ಸಂಚರಿಸುತ್ತಿದ್ದ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸರಕಳ್ಳತನ ಮಾಡುವವರು ನನ್ನ ಕುತ್ತಿಗೆ ಹಿಡಿದು ಸರಕಳ್ಳತನ ಕ್ಕೆ ಯತ್ನ್ನಿಸಿದರು. ಅದನ್ನು ಪ್ರತಿರೋಧಿಸಿದ್ದಕ್ಕೆ, ನನ್ನನ್ನು ಚಲಿಸುವರೈಲಿನಿಂದ ಹೊರ ಎಸೆದರು. ಅದು ಮಧ್ಯರಾತ್ರಿ ಸಮಯವಾದ್ದರಿಂದ, ಯಾರೂ ಸಹಾಯಕ್ಕೆ ಬರಲಿಲ್ಲ. ಮರುದಿನ ಹತ್ತಿರದ ಗ್ರಾಮಸ್ಥರಿಗೆ ವಿಷಯ ಗೊತ್ತಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ವೈದ್ಯರ ಸೂಚನೆಯ ಮೇರೆಗೆ ಮೊಣಕಾಲಿನ ಗಂಟಿನ ಕೆಳಭಾಗದ ಕಾಲನ್ನು ಕತ್ತರಿಸಬೇಕಾಯಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಜಗತ್ತಿನ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನುಒಂಟಿ ಕಾಲಿನಲ್ಲೇ ಏರುವ ಕನಸನ್ನು ಕಂಡೆ. ಬಳಿಕ ಎವರೆಸ್ಟ್ ಏರಿದ ಭಾರತದ ಪ್ರಥಮ ಮಹಿಳೆ ಬಚೇಂದ್ರಿಪಾಲ್ ಅವರನ್ನು ಭೇಟಿ ಮಾಡಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಸ್ವಲ್ಪ ದಿನದಲ್ಲಿ ಪರ್ವತ ಏರುವ ಕುರಿತಂತೆ ತರಬೇತಿ ಪಡೆದೆ. ಅಂಗವಿಕಲತೆ ದೊಡ್ಡ ಸಮಸ್ಯೆಯೇ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಮುಂದಾದೆ. ಮಾ.31ರಿಂದ 52 ದಿನಗಳ ಕಾಲದ ತನ್ನ ಪರ್ವತಾರೋಹಣ ಹಾದಿ ಆರಂಭವಾಯಿತು. ಪ್ರತಿ ಹೆಜ್ಜೆ ಕೂಡ ಸವಾಲಾಗಿತ್ತು. ಆರೋಗ್ಯವೂ ಹದಗೆಟ್ಟಿತ್ತು. ಅಂತೂ 1,055 ಗಂಟೆಗಳ ತನ್ನ ಶ್ರಮ ಕೊನೆಗೂ ಫಲ ನೀಡಿತು. ಮೇ 21ರಂದು ಜಗತ್ತಿನ ಅತ್ಯಂತ ಎತ್ತರದ ಹಿಮಾಲಯ ಪರ್ವತ ಮೌಂಟ್ ಎವರೆಸ್ಟ್‌ನ ದಕ್ಷಿಣ ತುದಿಯಲ್ಲಿ ಏರಿ ನಿಂತು ಭಾರತದ ರಾಷ್ಟ್ರಧ್ವಜವನ್ನು ನೆಟ್ಟೆನು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು