ಕ್ಷಯ (ಟಿ.ಬಿ.) ರೋಗಕ್ಕೆ 1.5 ಜನ ಬಲಿ
ಕ್ಷಯ (ಟಿ.ಬಿ.) ರೋಗಕ್ಕೆ 1.5 ಜನ ಬಲಿ
ನವದೆಹಲಿ, ಅ.22- ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿರುವ ಕ್ಷಯಕ್ಕೆ (ಟಿ.ಬಿ.) ಕಳೆದ ವರ್ಷ ವಿಶ್ವಾದ್ಯಂತ 1.5 ಮಿಲಿಯನ್ ಜನ ಬಲಿಯಾಗಿದ್ದಾರೆ. ಸರಿಯಾದ ಚಿಕಿತ್ಸೆ ಪಡೆದರೆ ವಾಸಿಯಾಗಬಹುದಾದ ಕ್ಷಯ ರೋಗ ನಿರ್ಲಕ್ಷ್ಯಿಸಿದರೆ ಅಷ್ಟೇ ಅಪಾಯಕಾರಿ. 2013ರಲ್ಲಿ ಜಗತ್ತಿನ 9 ಮಿಲಿಯನ್ ಜನರಿಗೆ ರೋಗದ ಸೋಂಕು ತಗುಲಿದೆ. ಅವರಲ್ಲಿ 1.5 ಮಿಲಿಯನ್ ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಎಬೋಲಾ ನಂತರ ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿರುವ ಕ್ಷಯ ಆರ್ಥಿಕವಾಗಿ ಹಿಂದುಳಿದಿರುವ ದೇಶಗಳನ್ನು ಬಿಟ್ಟು ಬಿಡದೆ ಕಾಡುತ್ತಿದೆ. ವಿಶ್ವಾದ್ಯಂತ 3 ಮಿಲಿಯನ್ ಜನ ಕ್ಷಯ ರೋಗಕ್ಕೆ ತುತ್ತಾಗಿ ಚಿಕಿತ್ಸೆಯ ವೇಳೆ ಕಾಣೆಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗಾಳಿಯಲ್ಲಿ ಹರಡುವ ಕ್ಷಯ ರೋಗದ ಸೋಂಕು ಮೂತ್ರಪಿಂಡ, ಮಿದುಳು ಮತ್ತು ಬೆನ್ನುಹುರಿಯ ಮೇಲೆ ದಾಳಿ ಮಾಡಿ ಪ್ರಾಣಾಪಾಯಕ್ಕೆ ಕಾರಣವಾಗಲಿದೆ. ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಲು ಮಾರುಕಟ್ಟೆಯಲ್ಲಿ ಬಹಳಷ್ಟು ಔಷಧಿಗಳಿವೆ. ಈ ರೋಗ ನಿಯಂತ್ರಣದ ಮೂಲ ಸಮಸ್ಯೆ ಎಂದರೆ ಸರಿಯಾದ ತಪಾಸಣೆ ನಡೆಯದಿರುವುದು. ಒಂದು ವೇಳೆ ತಪಾಸಣೆ ನಡೆದು ರೋಗಿ ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಇನ್ನೂ ಕೆಲವಾರು ಮಂದಿಗೆ ಸೋಂಕು ಅಂಟಿಕೊಂಡಿರುತ್ತದೆ. ಹೀಗಾಗಿ ಕ್ಷಯವನ್ನು ಸಂಪೂರ್ಣವಾಗಿ ತೊಲಗಿಸುವುದು ಬಡ ರಾಷ್ಟ್ರಗಳಲ್ಲಿ ಸವಾಲಾಗಿದೆ ಎಂದು ವಿಶ್ವಸಂಸ್ಥೆಯ ಕ್ಷಯ ರೋಗ ಜಾಗೃತಿಯ ಕಾರ್ಯಕಾರಿ ನಿರ್ವಾಹಕ ಮೈಕ್ ಮಂಡೆಲಬಮ್ ತಿಳಿಸಿದ್ದಾರೆ
Comments
Post a Comment