ಮಾಮ್ ಸಾಧನೆ..

ಒಂದು ತಿಂಗಳಲ್ಲಿ "ಮಾಮ್‌' ಸಾಧನೆ ಏನು?
ಇಸ್ರೋ ವಿಜ್ಞಾನಿಗಳು ಎದುರಿಸಿದ ಸವಾಲುಗಳು

ಮಂಗಳ ಶೋಧಕ ಕಳಿಸಿ ಸಾಧಿಸಿದ್ದೇನು?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿದ್ದ ಮಂಗಳ ಶೋಧಕ ಉಪಗ್ರಹ (ಮಾರ್ ಆರ್ಬಿಟರ್‌ ಮಿಷನ್‌) ಮಂಗಳನ ಅಂಗಳಕ್ಕಿಳಿದು ಒಂದು ತಿಂಗಳು ಸಂದಿದೆ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಇದೊಂದು ಅಪೂರ್ವ ಸಾಧನೆಯಾಗಿದ್ದು, ಜಗತ್ತಿನ ಮೊದಲ ಸಾಲಿನ ರಾಷ್ಟ್ರಗಳಲ್ಲಿ ಭಾರತವನ್ನೂ ತಂದು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳ ಶೋಧಕ ನೌಕೆ ಒಂದು ತಿಂಗಳು ಏನು ಮಾಡಿದೆ? ಇಷ್ಟರಲ್ಲಿ ವಿಜ್ಞಾನಿಗಳು ಎದುರಿಸಿದ ಪ್ರಮುಖ ಸವಾಲುಗಳು ಯಾವುದು? ಇತ್ಯಾದಿಗಳ ಕುರಿತ ಮಾಹಿತಿಗಳು ಇಲ್ಲಿವೆ...

ಮಂಗಳನ ಅಂಗಳಕ್ಕೆ

2013 ನ.5ರಂದು ಶ್ರೀಹರಿಕೋಟಾದ ಸತೀಶ್‌ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡಾವಣೆಗೊಂಡ ಮಂಗಳಶೋಧಕ ನೌಕೆ 2014 ಸೆ.24ರಂದು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಅಲ್ಲಿವರೆಗೆ ಒಟ್ಟು 78 ಕೋಟಿ ಕಿ.ಮೀ.ಗಳನ್ನು ಮಂಗಳ ಶೋಧಕ ಕ್ರಮಿಸಿದ್ದು, ಆಳ ಬಾಹ್ಯಾಕಾಶ ಸಂವಹನದಲ್ಲಿ ಭಾರತದ ಸಾಧನೆಯನ್ನು ಜಗತ್ತಿಗೆ ತಿಳಿಸಿದಂತಾಗಿದೆ. ನ.24ಕ್ಕೆ ಉಪಗ್ರಹ ಕಕ್ಷೆ ಮಂಗಳನ ಅಂಗಳಕ್ಕೆ ತಲುಪಿ ಒಂದು ತಿಂಗಳಾಗಿದ್ದು, ಉಡಾವಣೆಯಾದಲ್ಲಿಂದ ಇದುವರೆಗೆ ನಾಲ್ಕು ವರ್ಣ ಚಿತ್ರಗಳನ್ನು ಕಳಿಸಿದೆ. ಇದರೊಂದಿಗೆ ಶೋಧಕದಲ್ಲಿ ವಿವಿಧ ಸಲಕರಣೆಗಳಿದ್ದು, ಅವುಗಳ ಮೂಲಕ ಮಂಗಳನಲ್ಲಿ ಏನಿದೆ ಎಂಬ ಶೋಧನೆಗೆ ತೊಡಗಿಸಿಕೊಂಡಿದೆ.

ವಿಜ್ಞಾನಿಗಳು ಮೆಟ್ಟಿನಿಂತ ಸವಾಲುಗಳು

ವಿವಿಧ ತಾಪಮಾನಗಳಿಗೆ ಉಪಗ್ರಹ ಒಗ್ಗಿಕೊಳ್ಳಬೇಕಿದ್ದು, ಅದರ ತಾಂತ್ರಿಕತೆಯಲ್ಲಿ ವಿಜ್ಞಾನಿಗಳು ಯಶಸ್ವಿಯಾಗಬೇಕಿತ್ತು. ಮಂಗಳನ ಕಕ್ಷೆಯಲ್ಲಿ ಉಷ್ಣತೆ -120 ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಕಡಿಮೆ ಉಷ್ಣತೆ ಇದ್ದು ಅಂತಹ ಸಂದರ್ಭದಲ್ಲೂ ಶೋಧಕ ಉಪಗ್ರಹದ ಕಾರ್ಯನಿರ್ವಹಿಸುವ ಸವಾಲಿತ್ತು. ಇದರೊಂದಿಗೆ ಆಳ ಬಾಹ್ಯಾಕಾಶ ಸಂವಹನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಇಸ್ರೋ ವಿಜ್ಞಾನಿಗಳು ಹಮ್ಮಿಕೊಂಡಿದ್ದರು. ಭಾರತದಲ್ಲಿ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಸಿಸ್ಟಂ ಇಲ್ಲದಿದ್ದು, ಮಂಗಳಯಾನಕ್ಕಾಗಿ ನೂತನ ಹೈಗೈನ್‌ ಆ್ಯಂಟೆನಾ ಸ್ಥಾಪಿಸಿ ಶೋಧನೆಗೆ ಇಳಿಯಲಾಗಿತ್ತು. ಭೂಮಿಯಿಂದ ಮಂಗಳನಲ್ಲಿ 40 ಕೋಟಿ ಕಿ.ಮೀ. ದೂರವಿದ್ದು, ಇಷ್ಟು ದೂರಕ್ಕೆ ನೌಕೆ ಸಾಗುವ ವೇಳೆ
ಅದರೊಂದಿಗೆ ನಿರಂತರ ಸಂಪರ್ಕವಿರಿಸಬೇಕಾದ್ದು ಅತಿ ದೊಡ್ಡ ಸವಾಲಾಗಿತ್ತು. ಇದರೊಂದಿಗೆ ನಿಮ್ನ ವಾತಾವರಣದಲ್ಲಿ ನೌಕೆಯನ್ನು ಚಲಾಯಿಸುವುದು, ನಿಗದಿತ ಸಂದರ್ಭ ಪಥ ಬದಲಾವಣೆ, 300 ದಿನಗಳ ಬಳಕೆ ದ್ರವ ನೋದಕವನ್ನು ಮತ್ತೆ ಚಾಲನೆ ಮಾಡುವುದು ವಿಜ್ಞಾನಿಗಳಿಗಿದ್ದ ಬಹುದೊಡ್ಡ ಸವಾಲಾಗಿತ್ತು. ಇದರೊಂದಿಗೆ, ಮಂಗಳಕ್ಕೂ ಭೂಮಿಗೂ 6 ಗಂಟೆ 20 ನಿಮಿಷಗಳ ಸಮಯದ ಅಂತರವಿದ್ದು
ಜೊತೆಗೆ ಮಂಗಳನಿಂದ ಬರುವ ಸಂದೇಶ ಭೂಮಿ ತಲುಪಲು ಸುಮಾರು 12 ನಿಮಿಷಗಳು ತಲುಪುತ್ತವೆ.
ಆಳ ಬಾಹ್ಯಾಕಾಶ ಸಂಪರ್ಕದಲ್ಲಿ ಭಾರತ ಇದುವರೆಗೂ ಸಾಧಿಸಿದ ಕೆಲಸವೊಂದನ್ನು ಈ ಮೂಲಕ
ಸಾಧಿಸಿದಂತಾಗಿದೆ.

ಮಂಗಳ ಶೋಧಕ ಕಳಿಸಿ ಸಾಧಿಸಿದ್ದೇನು?

1 ಭೂಮಿಯ ವಿವಿಧ ಕೇಂದ್ರದಿಂದ ಉಪಗ್ರಹ ಉಡಾವಣೆಯ ನಿಯಂತ್ರಣ. 300 ದಿನಗಳ ಯಶಸ್ವಿ ಯಾನ.
2 ಇದುವರೆಗೆ ಭಾರತಕ್ಕೆ ಸಾಧ್ಯವಾಗದಿದ್ದ ಆಳ ಬಾಹ್ಯಾಕಾಶ ಸಂವಹನದಲ್ಲಿ ಮಹತ್ವದ ಹೆಜ್ಜೆ
3 ಬಾಹ್ಯಾಕಾಶದಲ್ಲಿ ಎದುರಾಗುವ ಸವಾಲುಗಳನ್ನು ಸರಿಪಡಿಸುವ ಸವಾಲುಗಳನ್ನು ಯಶಸ್ವಿಯಾಗಿ
ಮೆಟ್ಟಿನಿಂತದ್ದು.
4 ಇತ್ತೀಚೆಗೆ ಧೂಮಕೇತು ಅಪಾಯವಿದ್ದಾಗಲೂ ಯಶಸ್ವಿಯಾಗಿ ಪಾರಾಗಿದ್ದು

ಮಂಗಳನ ಅಂಗಳದಲ್ಲಿ ಮಾಮ್‌ ಏನ್‌ ಮಾಡುತ್ತೆ?

160 ದಿನಗಳ ಕಾಲ ಮಂಗಳ ಕಕ್ಷೆಯಲ್ಲಿ ಮಾಮ್‌ ಇರಲಿದ್ದು ಈ ವೇಳೆ ಮಂಗಳನ ಅಂಗಳದಲ್ಲಿ ಏನಿದೆ ಎಂಬ ಬಗ್ಗೆ ಶೋಧಿಸಲಿದೆ. ಉಪಗ್ರಹದಲ್ಲಿರುವ ವಿವಿಧ ಯಂತ್ರಗಳ ನೆರವಿನಿಂದ ಈ ಕಾರ್ಯ ನಡೆಯಲಿದ್ದು, ಈಗಾಗಲೇ ಶೋಧದಲ್ಲಿ ಉಪಗ್ರಹ ತೊಡಗಿದೆ.

ಲೈಮೆನ್‌ ಆಲ್ಫಾ ಫೊಟೋಮೀಟರ್‌

ಈ ಯಂತ್ರದ ನೆರವಿನಿಂದ ಗ್ರಹದ ಮೇಲ್ಮೆ„ಯಲ್ಲಿರುವ
ಜಲಜನಕ ಅಂಶ ಪತ್ತೆ ಹಚ್ಚುವಿಕೆ.

ಖನಿಜಾಂಶ ಪತ್ತೆ ಉಪಕರಣ

ಮಂಗಳನಲ್ಲಿರುವ ಖನಿಜ, ಮೇಲ್ಪದರದ ಮಾಹಿತಿ ಪಡೆಯುವುದು.

ವಾತಾವರಣ ಪರೀಕ್ಷಕ

ಪರಮಾಣು ದ್ರವ್ಯರಾಶಿ, ವಾತಾವರಣ ಮಾದರಿಯ ಮಾಹಿತಿ ತಿಳಿಸುವುದು.

ಮಿಥೇನ್‌ ಪತ್ತೆ ಉಪಕರಣ

ಸೋಲಾರ್‌ ರೇಡಿಯೇಷನ್‌ ಮೂಲಕ ಮಿಥೇನ್‌ ಅನಿಲ ಪತ್ತೆಹಚ್ಚುತ್ತದೆ.

ಒ ಕ್ಯಾಮೆರಾ

ಮಂಗಳನನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿಯುತ್ತದೆ.ಈಗಾಗಲೇ ಕೆಲವು ಚಿತ್ರಗಳನ್ನು ಕಳುಹಿಸಿಕೊಟ್ಟಿದೆ.

ಧೂಮಕೇತುವಿನಿಂದ ಪಾರಾದ ಮಾಮ್‌!

ಕಾಮೆಟ್‌ ಸೈಡಿಂಗ್‌ ಸ್ಟ್ರಿಂಗ್‌ ಎಂಬ ಧೂಮಕೇತು ಮಂಗಳ ಗ್ರಹದ ಪಕ್ಕದಲ್ಲೇ, ಅಂದರೆ ಮಂಗಳ ಶೋಧಕಕ್ಕೆ ತುಸು ದೂರದಲ್ಲೇ ಇತ್ತೀಚೆಗೆ ಹಾದು ಹೋಗಿತ್ತು. ಇದರಲ್ಲಿ ರುವ ಸಣ್ಣಪುಟ್ಟ ಆಕಾಶ
ಕಾಯಗಳು, ಧೂಳು ಕಲ್ಲಿನ ತುಣುಕುಗಳು ಉಪಗ್ರಹಕ್ಕೆ ತಾಗಿದ್ದರೂ ಮಾಮ್‌ಗೆ ಅಪಾಯವಾಗಿತ್ತು. ಆದರೆ ಇದರಿಂದ ಮಾಮ್‌ ಪಥವನ್ನು ತಪ್ಪಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಭಾರತದ ವಿಜ್ಞಾನಿಗಳ ಪಾಲಿಗೆ ಇದೂ ಒಂದು ಸಾಧನೆಯೇ. ಇದರೊಂದಿಗೆ ಅಮೆರಿಕದ ನಾಸಾ ಕೂಡ ಇತ್ತೀಚೆಗೆ ಕಳಿಸಿದ್ದ ಮಾವೆನ್‌
ಉಪಗ್ರಹದ ಪಥ ಬದಲಾವಣೆ ಮಾಡಿತ್ತು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು