ವಾಲ್ಮೀಕಿ :-
ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.
ಹಿನ್ನೆಲೆ:
ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ. ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು.
ರಾಮಾಯಣ ರಚನೆಗೆ ಪ್ರೇರಣೆ :-
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.
ಈ ಶ್ಲೋಕದ ಅರ್ಥ ಹೀಗಿದೆ :
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.
ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.
ಉತ್ತರ ರಾಮಾಯಣದೊಳಗೊಂದು ಪಾತ್ರವಾಗಿ:-
ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತೀಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.
Comments
Post a Comment