ಪ್ರಸ್ತುತ: ಸರ್ಕಾರಿ ಶಾಲೆ ಗುಣಮಟ್ಟ ಕುಸಿತಕ್ಕೆ ಕಾರಣಗಳೇನು? * ನಿರಂಜನಾರಾಧ್ಯ ವಿ.ಪಿ.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಶಿಥಿಲಗೊಳಿಸಿ ಖಾಸಗೀಕರಣ ಮತ್ತು ಶಿಕ್ಷಣದ ವ್ಯಾಪಾರೀಕರಣ ಬೆಂಬಲಿಸುವಂತೆ ಕೆಲಸ ನಿರ್ವಹಿಸುವ ಕೆಲವು ಮಾರುಕಟ್ಟೆ ಬೆಂಬಲಿತ ಸರ್ಕಾರೇತರ ಸಂಘಟನೆಗಳು, ಪ್ರತಿ ವರ್ಷವೂ ಸರ್ಕಾರಿ ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ. ಮಾರುಕಟ್ಟೆ ವಿಸ್ತರಣೆಯ ಪರವಾಗಿರುವ ಈ ಶಕ್ತಿಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಖಾಸಗೀಕರಣದ ಪರವಾಗಿ ಒಮ್ಮತ ಸೃಷ್ಟಿಸಲು ಏಕಪಕ್ಷೀಯವಾಗಿ ಮತ್ತು ಮಾರುಕಟ್ಟೆ ನಿಷ್ಠ ವರದಿ ತಯಾರಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವಿಲ್ಲವೆಂದು ದೂರುವ ಈ ಶಕ್ತಿಗಳು ಗುಣಮಟ್ಟ ತರಲು ಏನು ಮಾಡಬೇಕೆಂದಾಗಲಿ ಅಥವಾ ನಿತ್ಯ ಸರ್ಕಾರಿ ಶಾಲಾ ಹಂತದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟ ವೃದ್ಧಿಗೆ ಅವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆಂದು ತಮ್ಮ ವರದಿಗಳಲ್ಲಿ ತಿಳಿಸುವುದಿಲ್ಲ. ಬದಲಿಗೆ, ಸರ್ಕಾರಿ ಶಾಲೆಗಳ ಬಗ್ಗೆ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜತೆಗೆ ಈ ವರದಿಗಳು ಶಾಲೆಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಜನವರಿ-ಫೆಬ್ರವರಿ ತಿಂಗಳಲ್ಲೇ ಹೊರಬರುವ ಗುಟ್ಟೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ಸಂಸ್ಥೆಗಳು ಇದೇ ವರದಿಗಳನ್ನು ಜೂನ್-ಜುಲೈ ತಿಂಗಳಲ್ಲಿ ಹೊರತಂದು ಸರ್ಕಾರದ ಜತೆ ತಮ್ಮ ಶಕ್ತಿ-ಸಂಪನ್ಮೂಲ ಹಂಚಿಕೊಂಡು ಶಿಕ್ಷಣದ ಗುಣಮಟ್ಟ ವೃದ್ಧಿಸಬಹುದಲ್ಲವೆ?

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನಿರೀಕ್ಷಿತ ಗುಣಮಟ್ಟ ತಲುಪದಿರಲು ಇರುವ ಮೂಲ ಕಾರಣಗಳನ್ನೇ ಅರಿಯದೆ ಅವೈಜ್ಞಾನಿಕ ಮತ್ತು ಯಾಂತ್ರಿಕ ವರದಿಗಳನ್ನು ಪ್ರಕಟಿಸುವುದು ಅವಿವೇಕದ ಕೆಲಸ. ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಗುಣಮಟ್ಟದ ಶಿಕ್ಷಣ ಇಲ್ಲದಿರುವ ಬಗ್ಗೆ ಸಂಶೋಧನೆಯ ಅವಶ್ಯಕತೆ ಇಲ್ಲ. ಸರ್ಕಾರಿ ಕೆಲಸ ಮಾಡುವ ಐಎಎಸ್ ಅಧಿಕಾರಿಯಿಂದ ಕಟ್ಟಕಡೆಯ ಜವಾನನವರೆಗೆ ತನ್ನ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದಿರುವುದು ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಗುಣಮಟ್ಟ ಇಲ್ಲದಿರುವುದಕ್ಕೆ ದೊಡ್ಡ ಆಧಾರ. ಹಿಗಾಗಿ, ಕಣ್ಣಿಗೆ ಕಾಣುವ ಸತ್ಯ ತಿಳಿಯಲು ಸಾಮಾನ್ಯ ತಿಳಿವಳಿಕೆಯ ವಿವೇಚನೆ ಸಾಕು ಸಂಶೋಧನೆ ಅಗತ್ಯವಿಲ್ಲ.

ನಮಗೆ ತಿಳಿದಿರುವಂತೆ ರಾಜ್ಯದ ಪ್ರಾಥಮಿಕ (1ರಿಂದ 5ನೇ ತರಗತಿ) ಮತ್ತು ಹಿರಿಯ ಪ್ರಾಥಮಿಕ (ಒಂದರಿಂದ ಏಳು ಮತ್ತು ಕೆಲವೆಡೆ 8ನೇ ತರಗತಿ) ಶಾಲೆಗಳಲ್ಲಿ ಮಗು ಕ್ರಮವಾಗಿ ಭಾಷೆ (ಕನ್ನಡ, ಇಂಗ್ಲಿಷ್ ಮತ್ತು ಹಿಂದಿ), ಗಣಿತ, ಪರಿಸರ ಅಧ್ಯಯನ/ಸಮಾಜ ಜ್ಞಾನ ಮತ್ತು ಸಾಮಾನ್ಯಜ್ಞಾನವನ್ನು ಮುಖ್ಯ ವಿಷಯಗಳನ್ನಾಗಿ ಕಲಿಯಬೇಕು. ಜತೆಗೆ ಕಂಪ್ಯೂಟರ್, ಚಿತ್ರಕಲೆ, ಸಂಗೀತ, ದೈಹಿಕ ಶಿಕ್ಷಣ, ಸಮಾಜೋತ್ಪಾದಕ ಉಪಯುಕ್ತ ಕೆಲಸ ಇತ್ಯಾದಿಗಳನ್ನು ಪಠ್ಯ ಪೂರಕ ವಿಷಯಗಳನ್ನಾಗಿ ಅಭ್ಯಸಿಸಬೇಕಾಗುತ್ತದೆ.

ವಿಷಯ ಮತ್ತು ತರಗತಿಯನ್ನು ಆಧರಿಸದೆ ಪ್ರಾಥಮಿಕ ಶಾಲೆಯಾದರೆ 60 ಮಕ್ಕಳವರೆಗೆ ಇಬ್ಬರು ಶಿಕ್ಷಕರಿರುತ್ತಾರೆ. ಈ ಇಬ್ಬರು ಶಿಕ್ಷಕರಲ್ಲಿ ಒಬ್ಬರು ಬಹುತೇಕ ಸಮಯ ಬೋಧಕೇತರ ಕೆಲಸಗಳಲ್ಲಿಯೇ ತೊಡಗಿರುತ್ತಾರೆ. ಹಿಗಾಗಿ, ಅಕ್ಷರಶಃ ಒಬ್ಬ ಶಿಕ್ಷಕ ಐದು ತರಗತಿ ಹಾಗು 21 ವಿಷಯಗಳನ್ನು ಕಲಿಸಬೇಕಾಗುತ್ತದೆ. ಕಂಪ್ಯೂಟರ್,ಚಿತ್ರಕಲೆ, ಸಂಗೀತ, ದೈಹಿಕ ಶಿಕ್ಷಣ, ಸಮಾಜೋತ್ಪಾದಕ ಉಪಯುಕ್ತ ಕೆಲಸ ಇತ್ಯಾದಿ ವಿಷಯಗಳು ಕೇವಲ ವಿಷಯಗಳಾಗಿಯೇ ಉಳಿಯುತ್ತವೆ. ಪರಿಸ್ಥಿತಿ ಹೀಗಿರುವಾಗ, ಸರ್ಕಾರಿ ಶಾಲೆಯ ಮಕ್ಕಳಿಗೆ ಕನಿಷ್ಠ ಓದು-ಬರಹ-ಲೆಕ್ಕಾಚಾರ ಬರುವುದಿಲ್ಲವೆಂದು ವೈಭವೀಕರಿಸಿ ವರದಿ ಪ್ರಕಟಿಸುವ ಉದ್ದೇಶವೇನು? ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ವಿಷಯವಾರು ಶಿಕ್ಷಕರಿಲ್ಲದ ಕಾರಣ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ನೀರಸವಾಗುತ್ತಿದ್ದು ಗುಣಮಟ್ಟ ಕುಸಿಯುತ್ತಿದೆ. ಸಮರ್ಥ ವಿಷಯಜ್ಞಾನವನ್ನು ಪ್ರಭುತ್ವದ ಮಟ್ಟಕ್ಕೆ ಹೊಂದಿದ ಶಿಕ್ಷಕರಿಂದ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಶಿಕ್ಷಕರು ಸತತವಾಗಿ ಒಂದೇ ವಿಷಯವನ್ನು ಬೋಧಿಸುವುದರಿಂದ ವಿಷಯ ಸಂಪದೀಕರಣ ಮತ್ತು ಬೋಧನೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಎಲ್ಲ ಶಿಕ್ಷಕರೂ ಎಲ್ಲ ವಿಷಯಗಳನ್ನು ಬೋಧಿಸುವುದರಿಂದ 'ಮಾಸ್ಟರ್ ಆಫ್ ಆಲ್ ಜಾಕ್ ಆಫ್ ನನ್' ಎಂಬಂತಾಗಿ ಕೇವಲ ಪಠ್ಯಪುಸ್ತಕವನ್ನೇ ಸುಮ್ಮನೆ ಓದಿ ಹೇಳುವ ಮಟ್ಟಕ್ಕೆ ಶಿಕ್ಷಕರು ಇಳಿಯುವಂತಾಗಿದೆ. ಮಕ್ಕಳ ಶ್ರೇಣಿಗಳು ಕೇವಲ ಕಾಗದ ಪತ್ರಗಳ ದಾಖಲೆಗಳಾಗಿ ಉಳಿಯುತ್ತಿವೆ.

ಸರ್ವ ಶಿಕ್ಷಣ ಅಭಿಯಾನ ಬಂದಾಗಿನಿಂದ ಶಿಕ್ಷಕರು ಪಾಠ ಪ್ರವಚನಗಳಲ್ಲಿ ತೊಡಗುವುದಕ್ಕಿಂತ ಅನುದಾನಗಳ ನಿರ್ವಹಣೆ ಮತ್ತು ಉಪಯೋಗ ಪ್ರಮಾಣ ಪತ್ರ ನೀಡುವಲ್ಲಿಯೇ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ಅನುದಾನಗಳ ನಿರ್ವಹಣೆ, ಅಕ್ಷರ ದಾಸೋಹ ನಿರ್ವಹಣೆ, ಕ್ಷೀರಭಾಗ್ಯ ನಿರ್ವಹಣೆ, ಪ್ರೋತ್ಸಾಹ ವೇತನಗಳು, ಶೈಕ್ಷಣೆಕ ಯೋಜನೆಗಳ ದಾಖಲೆ ನಿರ್ವಹಣೆಯನ್ನು ಬೋಧನೆಗಿಂತ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ಕಲಿತಿದ್ದಾರೆ. ಪ್ರತಿ ಹಂತದಲ್ಲೂ ಅಂಕಿ-ಅಂಶ, ದಾಖಲೆ ನೀಡುವುದು ಮತ್ತು ಪಡೆಯುವುದಕ್ಕಾಗಿಯೇ ಗುಚ್ಛ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿದಂತಿದೆ. ಪ್ರತಿ ಶಿಕ್ಷಕರ ಸಭೆ, ಮುಖ್ಯ ಶಿಕ್ಷಕರ ಸಭೆ, ಸಮಾಲೋಚನಾ ಸಭೆ ಮತ್ತು ತರಬೇತಿಗಳಲ್ಲಿ ನಮೂನೆಗಳಿಗೆ ಅಂಕಿ-ಅಂಶಗಳನ್ನು ಭರ್ತಿಮಾಡುವ ಧಾನ ಹಾಗೂ ದಾಖಲೆ ನಿರ್ವಹಣೆಯ ಬಗ್ಗೆಯೇ ವಿವರ ನೀಡಲಾಗುತ್ತದೆಯೇ ಹೊರತು ಶೈಕ್ಷಣಿಕ ಸುಧಾರಣೆಗಲ್ಲ.

ಶಿಕ್ಷಕರು ನಿರ್ವಸುವ ದಾಖಲೆಗಳನ್ನು ಪ್ರಮುಖವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ಆಡಳಿತಾತ್ಮಕ ದಾಖಲೆಗಳು ಮತ್ತುಎರಡನೆಯದು ಶೈಕ್ಷಣಿಕ ದಾಖಲೆಗಳು. ಆಡಳಿತಾತ್ಮಕ ದಾಖಲೆಗಳೆಂದರೆ ದಾಖಲಾತಿವಹಿ; ಮಕ್ಕಳ ಹಾಜರಾತಿ ಪುಸ್ತಕ; ವರ್ಗಾವಣೆ ಪತ್ರ ವಿತರಣಾವಹಿ; ಚಲನಾವಹಿ; ಸಮಮಸ್ತ್ರ ತರಣಾವಹಿ; ಪಠ್ಯಪುಸ್ತಕ ತರಣಾವಹಿ; ನೋಟ್‌ಬುಕ್ ತರಣಾವಹಿ; ಸ್ಕೂಲ್‌ಬ್ಯಾಗ್ ತರಣಾವಹಿ; ವಿದ್ಯಾರ್ಥಿ ವೇತನಗಳ ತರಣಾವಹಿ; ಪ್ರೋತ್ಸಾಹವಿತರಣಾವಹಿ; ಎಸ್.ಡಿ.ಎಂ.ಸಿ. ರಚನಾವಹಿ; ಎಸ್‌ಡಿಎಂಸಿ ಮೆಮೋ/ನಡಾವಳಿ ಪುಸ್ತಕ; ಗ್ರಂಥಾಲಯವ /ತರಣಾವಹಿ; ಭೂದಾಖಲೆಗಳು/ಶಾಲಾ ಆಸ್ತಿ; ಶಾಲಾದಾಸ್ತಾನುವಹಿ; ಕ್ರೀಡಾ ಸಾಮಗ್ರಿವಹಿ; ಮಕ್ಕಳ ಗಣತಿವಹಿ; ಮಕ್ಕಳ ವೈದ್ಯಕೀಯ ತಪಾಸಣಾವಹಿ; ಶಾಲೆಬಿಟ್ಟ ಮಕ್ಕಳವಹಿ; ಪ್ರಯೋಗಾಲಯ ದಾಖಲೆಗಳು; ಶಿಕ್ಷಕರ ವೇತನ ಬಟವಾಡೆ ಪುಸ್ತಕ; ರಾಷ್ಟ್ರೀಯ ಹಬ್ಬಗಳವರದಿ; ಅಧಿಕಾರಿಗಳ ಸಂದರ್ಶನವಹಿ; ಅನುಪಾಲನಾ ವಹಿ; ಶಿಕ್ಷಕರ ವರ್ಗಾವಣೆ ಮತ್ತು ನಿಯೋಜನಾವಹಿ; ಸಾಂದರ್ಭಿಕ ರಜಾವಹಿ; ಸಮುದಾಯದತ್ತ ಶಾಲಾ ಕಾರ್ಯಕ್ರಮವಹಿ; ಇಂದ/ಗೆ ವಹಿ ಇತ್ಯಾದಿಗಳು. ಈ ಎಲ್ಲ ವಹಿಗಳನ್ನು ನಿರ್ವಸಲು ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಯಾವುದೇ ಬೋಧಕೇತರ ಸಿಬ್ಬಂದಿ ಇರುವುದಿಲ್ಲ.

ಶೈಕ್ಷಣಿಕ ದಾಖಲೆಗಳೆಂದರೆ, ವಾರ್ಷಿಕ ಕಾರ್ಯ ಯೋಜನೆ; ಕ್ರಿಯಾ ಯೋಜನೆ; ರೇಡಿಯೋ ಪಾಠ ವರದಿ; ಶಾಲಾ ಶೈಕ್ಷಣಿಕ ಯೋಜನೆ (ಖಅ);ಶಿಕ್ಷಕರ ಪಾಠ ವೀಕ್ಷಣಾ ವಹಿ; ಶಾಲಾ ಅಭಿವೃದ್ಧಿಯೋಜನೆ (ಖಈ); ಮುಖ್ಯಶಿಕ್ಷಕರ ಸಭೆಗ ವಹಿ; ಸೇತು ಬಂಧ; ಕಲಿಕೋಪಕರಣವಹಿ; ಪರಿಹಾರ ಬೋಧನೆ; ವೇಳಾಪಟ್ಟಿಗಳು; ವಾರ್ಷಿಕ ಪಾಠ ಹಂಚಿಕೆ ಪಟ್ಟಿ; ಕ್ರೋಢೀಕೃತ ಅಂಕವಹಿ; ಪಾಠಯೋಜನೆ / ಟಿಪ್ಪಣಿ; ಪರೀಕ್ಷಾ ದಾಖಲೆಗಳು (ನೀಲನಕ್ಷೆ, ಪ್ರಶ್ನೆ ಪತ್ರಿಕೆ, ಶ್ಲೇಷಣೆ, ಉತ್ತರ ಪತ್ರಿಕೆ, ಪ್ರಗತಿ ಪತ್ರ, ಮೌಲ್ಯಮಾಪನ ದಾಖಲೆಗಳು); ಶಿಕ್ಷಕರ ವೈಯಕ್ತಿಕ ಅಂಕವಹಿ (ಘಟಕ, ವಿಷಯ, ತರಗತಿವಾರು); ಶಿಕ್ಷಕರ ಕ್ರೋಢೀಕರಣ ವಹಿ; ನಲಿ-ಕಲಿ ಡೈರಿ; ಪ್ರಗತಿ ಪತ್ರಗಳು ಇತ್ಯಾದಿ. ಇದಲ್ಲದೆ, ಶಿಕ್ಷಕರು ಪ್ರತೀ ತಿಂಗಳು ಕಡ್ಡಾಯವಾಗಿ ನೀಡಲೇಬೇಕಾದ ದಾಖಲೆಗಳೆಂದರೆ ಮಾಹೇವಾರಿ; ಗುಣವರ್ಧನ ಮಾಹಿತಿ; ಅಕ್ಷರದಾಸೋಹ ಉಪಯೋಗ ಪ್ರಮಾಣ ಪತ್ರ (ಖಿಇ); ಶಾಲೆ ಬಿಟ್ಟ ಮಕ್ಕಳ ಮಾಹಿತಿ; ಕ್ಷೀರ ಭಾಗ್ಯ ಖಿಇ; ನಲಿ-ಕಲಿ ಪ್ರಗತಿವರದಿ; ಅನುದಾನಗಳ ಖಿಇ; ರಾಷ್ಟ್ರೀಯ ಕಾರ್ಯಕ್ರಮಗಳ ಫೋಟೋ ವರದಿ; ಸ್ಪಷ್ಟ ಓದು ಶುದ್ಧ ಬರಹ ವರದಿ ಇತ್ಯಾದಿಗಳು. ಈ ಎಲ್ಲ ಹೊರೆಯಿಂದ ಶಿಕ್ಷಕ ತತ್ತರಿಸಿದ್ದಾನೆ. ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಶೈಕ್ಷಣಿಕ ಯೋಜನೆಗಳ ಜೊತೆಗೆ ಹಣಕಾಸು ವಹಿವಾಟು ನಡೆಸಬೇಕಾಗಿರುವುದರಿಂದ ಅನೇಕ ಅನುದಾನಗಳ ನಿರ್ವಹಣೆ ಮಾಡಬೇಕಾಗುತ್ತದೆ. ಎಲ್ಲಿ ಹಣದ ವ್ಯವಹಾರ ಅಧಿಕವಾಗುವುದೊ ಅಲ್ಲಿ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗುವುದು ಖಂಡಿತ. ಶಾಲೆಯಲ್ಲಿ ಹಣಕಾಸು ನಿರ್ವಹಣೆಯಿಂದ ಮುಖ್ಯಶಿಕ್ಷಕರು, ಸಹಶಿಕ್ಷಕರು ಮತ್ತು ಎಸ್‌ಡಿಎಮ್‌ಸಿ ನಡುವೆ ಅಪನಂಬಿಕೆ ಮತ್ತು ದೂರುಗಳು ಹೆಚ್ಚುತ್ತಿದ್ದು ಭ್ರಷ್ಟಾಚಾರದ ಮಾತು ಕೇಳಿಬರುತ್ತಿವೆ. ಇದರಿಂದ ಶಾಲೆಯಲ್ಲಿ ಶೈಕ್ಷಣಿಕ ಚರ್ಚೆಗಳಿಗಿಂತ ಅನುದಾನದ ಬಳಕೆ ಚರ್ಚೆಗಳೇ ಹೆಚ್ಚು. ಇದಕ್ಕೆ ಸಂಬಂಧಿಸಿದಂತೆ ನಗದುವಹಿ; ಪಾಸ್ ಪುಸ್ತಕ; ಚೆಕ್ ಪುಸ್ತಕ; ಚೆಕ್ ತರಣಾವಹಿ; ರಶೀದಿ ಪುಸ್ತಕ ಇತ್ಯಾದಿಗಳು. ಹಾಗಾಗಿ ಪ್ರಸ್ತುತ ಸರ್ವಶಿಕ್ಷಣ ಅಭಿಯಾನ ಆರಂಭವಾದಗಿನಿಂದ ಶಿಕ್ಷಕ ರು ಕೈಯಲ್ಲಿ ಅನೇಕ ದಾಖಲೆ ಪತ್ರಗಳನ್ನು ಹಿಡಿದುಕೊಂಡು ನಿತ್ಯ ಕಚೇರಿಗೆ ನೀಡುವ ದಾಖಲೆಗಳನ್ನು ಕಾಣುವಂತಾಗಿದೆ.

ವಾಸ್ತವ ಪರಿಸ್ಥಿತಿ ಹೀಗಿರುವಾಗ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟಲ್ಲವೆಂದು ಬಣ್ಣ ಬಣ್ಣದ ವರದಿ ಪ್ರಕಟಿಸುವ ಸರ್ಕಾರೇತರ ಸಂಘಟನೆಗಳಿಗೆ ಈ ನಗ್ನ ಸತ್ಯ ತಿಳಿಯುವುದಿಲ್ಲವೇ? ಖಂಡಿತ ತಿಳಿಯುತ್ತದೆ. ಆದರೆ ಅವರ ಉದ್ದೇಶವೇ ಬೇರೆ ಇದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಅಸಮರ್ಪಕ ಕಾರ್ಯ ನಿರ್ವಹಣೆಗೆ ನಿಜವಾದ ಕಾರಣಗಳನ್ನು ಮರೆಮಾಚಿ ಜನರಿಗೆ ಸತ್ಯವನ್ನು ತಿಳಿಸದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಳಪೆಯೆಂದು ಪ್ರತಿಬಿಂಬಿಸುವ ಈ ಖಾಸಗೀಕರಣದ ಮಧ್ಯವರ್ತಿಗಳ ಬಗ್ಗೆ ಜನಸಾಮಾನ್ಯರು ಎಚ್ಚರಿಕೆಯಿಂದ ಇರಬೇಕಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗು ಶಿಕ್ಷಣ ಸಚಿವರು ಇನ್ನಾದರೂ ನೆರೆಹೊರೆಯ ಸಾರ್ವಜನಿಕ ಸಮಾನ ಶಾಲೆಯ ಬಗ್ಗೆ ಯೋಚಿಸಬೇಕಿದೆ.
www.freegksms.blogspot.in

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು