ರಾಜ್ಯ ರೈಲ್ವೆ ಪೊಲೀಸರಿಂದ ಫೋನ್ /ವಾಟ್ಸ್‌ಅಪ್ ಸಹಾಯವಾಣಿ- 18004251363, / 9480802140

ಬೆಂಗಳೂರು, ಫೆ.20-ಕರ್ನಾಟಕ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ವಾಟ್ಸ್‌ಅಪ್ ಸಹಾಯವಾಣಿ, ಟೋಲ್‌ಫ್ರೀ ಸಹಾಯವಾಣಿ, ವಾಯ್ಸ್ ಅನ್‌ಲಾಗ್ ವ್ಯವಸ್ಥೆ, ಸಿಸಿ ಟಿವಿ ಚಲನವಲನ ನಿಗಾಘಟಕ, ತರಬೇತಿ ಹೊಂದಿದ್ದ ಸಿಬ್ಬಂದಿಗಳ ನೇಮಕಾತಿಯಂತಹ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ.  ರೈಲ್ವೆ ನಿಲ್ದಾಣಗಳು, ಹಳಿಗಳು ಹಾಗೂ ಇಲಾಖೆಗೆ ಸಂಬಂಧಿಸಿದ ಯಾವುದೇ ಸ್ಥಳಗಳಲ್ಲಿ ದುರ್ಘಟನೆ ನಡೆದಿದ್ದರೆ, ಅನುಮಾನಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ
ಕೂಡಲೇ ನಾಗರಿಕರು ರೈಲ್ವೆ ಪೊಲೀಸರ ವಾಟ್ಸ್‌ಅಪ್ ಸಂಖ್ಯೆ 9480802140 ಇಲ್ಲಿಗೆ ಸಂದೇಶ ಕಳುಹಿಸಬಹುದು.

ವಾಟ್ಸ್‌ಅಪ್  ಇಲ್ಲದೆ ಇರುವವರು ಸಹಾಯವಾಣಿ 18004251363 ಇಲ್ಲಿಗೆ ಮಾಹಿತಿ ನೀಡಬಹುದು. ರೈಲ್ವೆ ನಿಲ್ದಾಣಗಳಲ್ಲಿ ದಿನದ 24ಗಂಟೆಯೂ ನಿಗಾ ವಹಿಸುವ ಸಿಸಿಟಿವಿ ಸರ್ವಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ 300 ಜನ ತರಬೇತಿ ಪಡೆದ ನಾಗರಿಕ ಪೊಲೀಸರನ್ನು ನೇಮಿಸಲಾಗಿದೆ. ಈ ಎಲ್ಲ ಕ್ರಮಗಳಿಂದ ಪ್ರಯಾಣಿಕರ ಸುರಕ್ಷತೆ ಇನ್ನಷ್ಟು ಖಾತ್ರಿಗೊಂಡಿದೆ. ಅದರಲ್ಲೂ ಅತ್ಯಾಧುನಿಕ ವಾಟ್ಸ್‌ಅಪ್ ಸೇವೆಯನ್ನು ಅಳವಡಿಸಿರುವುದು ದೇಶದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಕ ಯೋಜನೆಯಾಗಿದೆ. ಅಹಿತಕರ ಘಟನೆಗಳ ಫೋಟೋ, ದೃಶ್ಯಗಳು ಆರೋಪಿಗಳ ಪತ್ತೆಹಚ್ಚಲು ಮತ್ತು ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸಲು ಸಾಕ್ಷಿಗಳಾಗಿಯೂ ಬಳಕೆಯಾಗಲಿವೆ.

ರಾಜ್ಯದಲ್ಲಿ 3089 ಕಿ.ಮೀ. ರೈಲ್ವೆ ಮಾರ್ಗವಿದ್ದು, 1131 ರೈಲುಗಳು ಸಂಚರಿಸುತ್ತಿವೆ. 362 ನಿಲ್ದಾಣಗಳು 620 ಪ್ಲಾಟ್‌ಫಾರಂಗಳಿವೆ. ದಿನಕ್ಕೆ 8.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇವರ ಸುರಕ್ಷತೆ ದಿನೇ ದಿನೇ ಸವಾಲಾಗುತ್ತಿರುವುದರಿಂದ ವ್ಯವಸ್ಥಿತವಾದ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ವಾಟ್ಸ್‌ಅಪ್ ಮೂಲಕ ಕಳುಹಿಸುವ ದೃಶ್ಯ ಹಾಗೂ ಫೋಟೋಗಳನ್ನು ಎಲ್ಲ ಠಾಣೆಗಳಿಗೂ ರವಾನಿಸಲಾಗುತ್ತದೆ. ಈ ಅತ್ಯಾಧುನಿಕ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ರಾಜ್ಯದ ರೈಲುಗಳಲ್ಲಿ ವರ್ಷ 24 ಕೋಟಿ ರೂ.ಗೂ ಅಧಿಕ ಜನ ಪ್ರಯಾಣಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, 1977ರಿಂದ ಈವರೆಗೂ  ಸಿಬ್ಬಂದಿಗಳ  ನೇಮಕಾತಿ ಆಗಿಲ್ಲ. ಹೀಗಾಗಿ ರಕ್ಷಣೆ ಸವಾಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಜತೆಗೆ  300 ಮಂದಿ ನಾಗರಿಕ ಪೊಲೀಸರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ರೈಲ್ವೆ ಪೊಲೀಸರ ಮೇಲಿನ ಕಾರ್ಯ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಕುಮೊ ಪಚಾವೋ ಹಿರಿಯ ಅಧಿಕಾರಿಗಳಾದ ಸುಶಾಂತ್ ಮಹಾಪಾತ್ರ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರೈಲ್ವೆ ಎಡಿಜಿಪಿ ಆರ್.ಪಿ.ಶರ್ಮ, ಹಿರಿಯ ಅಧಿಕಾರಿಗಳಾ ಮೇಗರೀಕ್, ಸತ್ಯನಾರಾಯಣ, ಶ್ರೀಕಂಠಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


Additional information

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು