ಮೈಸೂರು ಅರಮನೆ ಉತ್ತರಾಧಿಕಾರಿಯಾಗಿ ಯದುವೀರ್ ಆಯ್ಕೆ, ಫೆ.23ಕ್ಕೆ ದತ್ತು ಸ್ವೀಕಾರ ಸಮಾರಂಭ
ಮೈಸೂರು: ಮೈಸೂರಿನ ಕೊನೆಯ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ಉದ್ಭವಿಸಿದ್ದ ಉತ್ತರಾಧಿಕಾರಿ ವಿವಾದಕ್ಕೆ ಗುರುವಾರ ತೆರೆ ಬಿದ್ದಿದೆ.
ಈ ಕುರಿತು ಇಂದು ಕುಟುಂಬದ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಮಹಾರಾಣಿ ಪ್ರಮೋದಾ ದೇವಿ ಅವರು, ಶ್ರಿಕಂಠದತ್ತ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜೇ ಅವರನ್ನು ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಅರಮನೆಯ ಪರಂಪರೆಯಂತೆ ಇದೇ ತಿಂಗಳು 23ಕ್ಕೆ ದತ್ತು ಸ್ವೀಕಾರ ಸಮಾರಂಭ ನಡೆಯಲಿದ್ದು, ಅಂದು ಯದುವೀರ್ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಎಂದು ಬದಲಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉತ್ತರಾಧಿಕಾರಿ ನೇಮಕದ ಕುರಿತು ದಾಖಲೆ ಪ್ರದರ್ಶಿಸಿದ ಪ್ರಮೋದಾ ದೇವಿ, ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉತ್ತರಾಧಿಕಾರಿಯಾಗುವವರು ಅರಮನೆ ಪರಂಪರೆ ಬಗ್ಗೆ ತಿಳಿದಿರಬೇಕು ಎಂದರು.
ಫೆ. 21, 22 ಮತ್ತು 23ರಂದು ಅರಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೊದಲ ದಿನವೇ ಯದು ಗೋಪಾಲರಾಜೇ ಅರಸ್ ಅವರನ್ನು ಶುಭಲಗ್ನ 1.20ರಿಂದ 1.30 ವೇಳೆಯ ಓಳಗೆ ದತ್ತು ಸ್ವೀಕಾರ ಮಾಡಲಾಗುತ್ತದೆ. ಅಲ್ಲದೆ ಸಮಾರಂಭದ ಅತಿಥಿಗಳಾಗಿ ಶೃಂಗೇರಿ ಮಠದ ಪೀಠಾಧ್ಯಕ್ಷರು ಸೇರಿದಂತೆ ಇತರೆ ಮಠಾಧೀಶರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಅಲಮೇಲಮ್ಮನ ಶಾಪ ಎಂದು ನಂಬಲಾದ ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಮೈಸೂರು ರಾಜವಂಶಸ್ಥರ ಒಬ್ಬರಿಗೆ ಮಕ್ಕಳಾದರೆ, ಮತ್ತೊಬ್ಬರಿಗೆ ಮಕ್ಕಳಾಗದ ಸ್ಥಿತಿ ಇದೆ. ಕಳೆದ ವರ್ಷ ಡಿ. 10 ರಂದು ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಇದುವರೆಗೆ ದತ್ತು ಸ್ವೀಕಾರ ನಡೆದಿರಲಿಲ್ಲ. ವಿಜಯ ದಶಮಿಯ ದಿನಗಳಲ್ಲಿ ನಿಯಮದಂತೆ ಪೂಜಾ ವಿಧಿ ವಿಧಾನಗಳು ನಡೆಯಬೇಕಾದ ಹಿನ್ನೆಲೆಯಲ್ಲಿ ದತ್ತು ಸ್ವೀಕಾರಕ್ಕೆ ಪ್ರಮೋದಾದೇವಿ ಮುಂದಾಗಿದ್ದಾರೆ.
Comments
Post a Comment