ಮಗ ಕಲಿಸಿದ ಜೀವನಪಾಠ:-
ಮಗ : ಅಪ್ಪ .. ನಾನೊಂದು ಪ್ರಶ್ನೆ ಕೇಳಲೇ ..?
ಅಪ್ಪ : ಹ್ಮ್ , ಕೇಳು…
ಮಗ : ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ಅಪ್ಪಾ … ?!
ಅಪ್ಪ : (ಕೋಪದಿಂದ) ನಿನಗ್ಯಾಕೆ ಅದೆಲ್ಲ …?
ಮಗ : ನನಗೆ ಗೊತ್ತಾಗಬೇಕು .. ಪ್ಲೀಸ್ ಅಪ್ಪ … ಹೇಳು … ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ?
ಅಪ್ಪ : (ಕೋಪವನ್ನು ನಿಯಂತ್ರಿಸುತ್ತಾ)ಒಂದು ಸಾವಿರ ರೂಪಾಯಿ..
ಮಗ : ಓಹ್ (ತಲೆ ತಗ್ಗಿಸುತ್ತಾ)
ಮಗ: ಅಪ್ಪಾ , ನನಗೆ ಐನೂರು ರುಪಾಯಿ ಕೊಡ್ತ್ಯಾ ಪ್ಲೀಸ್..ಮಗನ ಈ ಪ್ರಶ್ನೆ ಕೇಳಿದ್ದೆ ತಡ ತಂದೆ ಕೆಂಡಾಮಂಡಲನಾದ.
ಅಪ್ಪ : (ಏರು ದನಿಯಲ್ಲಿ) ಓಹೋ .. ಗೊತ್ತಾಯ್ತು … ಯಾವುದೊ ಅಂಗಡಿಯಲ್ಲಿ ನೋಡಿದ ಆಟಿಕೆ ಖರೀದಿಸಲು ನಿನಗೆ ದುಡ್ಡು ಬೇಕು ಆಲ್ವಾ .. ಹೋಗು .. ತಾಯಿ ಹತ್ರ ಹೋಗಿ ಬಿದ್ಕೋ … ಏನು ಅಂತ ಅನ್ಕೊಂಡಿದ್ದೀಯ .. ಎರಡು ದಿವಸದಲ್ಲಿ ಮುರಿದು ಹಾಕ್ಲಿಕ್ಕೆ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾ ನಿಂಗೆ…?. ಆ ದುಡ್ಡಿನ ಹಿಂದಿನ ಶ್ರಮ ಏನು ಅಂತ ನಿಂಗೆ ಗೊತ್ತಾ…? ನನ್ನ ತಲೆ ಕೆಡಿಸ್ಬೇಡ.. ಹೋಗು…
ಮಗು ಮರುಮಾತನಾಡದೆ ನೇರ ಬೆಡ್ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡ .
ಅಪ್ಪ ಮಗ ಏನೋ ಕೇಳಬಾರದನ್ನು ಕೇಳಿದನೆಂದು ನಖಶಿಖಾಂತ ಉರಿದುಹೋದ.. 'ಅವನಿಗೆ ಧೈರ್ಯ ಆದರೂ ಹೇಗೆ ಬಂತು ಅಂತಹ ಪ್ರಶ್ನೆ ಕೇಳಿ ನನ್ನಿಂದ ದುಡ್ಡು ಪಡೆಯಲು….' ಅವನ ಮತ್ತಷ್ಟು ಉದ್ರಿಕ್ತನಾದ ..
ಕೆಲ ಸಮಯದ ಬಳಿಕ ಅವನ ಕೋಪ ಕರಗಿತು.. ಅವನು ಯೋಚಿಸಲು ಆರಂಭಿಸಿದ.. ನನ್ನ ಮಗ ಯಾವತ್ತು ನನ್ನಲ್ಲಿ ದುಡ್ಡು ಕೇಳಿದವನಲ್ಲ.. ಐನೂರು ರುಪಾಯಿ ಏನಾದ್ರೂ ತುಂಬಾ ಅವಶ್ಯ ವಸ್ತುವನ್ನು ಖರೀದಿಸಲು ಆಗಿರಬಹುದೇನೋ… ಅವನು ಯೋಚಿಸುತ್ತಲೇ ಇದ್ದ. ನನ್ನ ಮಗನಲ್ಲಿ ನಾನು ಆ ರೀತಿ ನಡೆದುಕೊಳ್ಳಬಾರದಿತ್ತು … ಛೆ ! ಎಂತಹಾ ತಪ್ಪು ಮಾಡಿಬಿಟ್ಟೆ…
ತಂದೆ ಮೆಲ್ಲ ಮಗನ ಬೆಡ್ರೂಮಿನ ಬಾಗಿಲ ತೆರೆದು ಒಳಹೊಕ್ಕ.
ಅಪ್ಪ : ಮಲಗಿದ್ದೀಯ ಮಗು… ?!
ಮಗ : ಇಲ್ಲಪ್ಪ .. ನಿದ್ದೆ ಬರ್ತಾ ಇಲ್ಲ ಅಪ್ಪಾ ..
ಅಪ್ಪ : ನಾನು ತುಂಬಾ ಕೆಟ್ಟದಾಗಿ ನಡೆದುಕೊಂಡೆ ಮಗೂ.. ಈ ಕೆಲಸದ ಒತ್ತಡ…. ಯಾರದೋ ಮೇಲಿನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಟ್ಟೆ.. ಹೋಗ್ಲಿ ಬಿಡು…. ತಗೋ ಮಗು.. ನೀನು ಕೇಳಿದ ಐನೂರು ರೂಪಾಯಿ…
ಮಗು ಛಕ್ಕನೆ ಎದ್ದು ಕುಳಿತ… ಅವನ ಕಂಗಳು ಇಷ್ಟಗಲ ಅರಳಿದವು. ನೋಟನ್ನು ಎದೆಗೆ ಅವಚಿಕೊಳ್ಳುತ್ತಾ "ಥಾಂಕ್ ಯೂ ವೆರಿ ಮಚ್ ಅಪ್ಪಾ ..!" ಎಂದವನೇ ಅವಸರದಿಂದ ತನ್ನ ತಲೆ ದಿಂಬಿನ ಕೆಳಗಿನಿಂದ ಹರಕಲಾಗಿ ಮಡಚಿಟ್ಟಿದ್ದ ಮತ್ತಷ್ಟು ನೋಟನ್ನು ಹೊರ ತೆಗೆದು ಮುಗ್ಧವಾಗಿ ಎಣಿಸತೊಡಗಿದ. ಮಗನಲ್ಲಿ ಇನ್ನಷ್ಟು ದುಡ್ಡನ್ನು ಕಂಡ ತಂದೆಯ ಮುಖ ಮತ್ತ್ತೆ ಕೆಂಪೇರಿತು.
ಅಪ್ಪ : ನಿನ್ನಲ್ಲಿ ದುಡ್ಡು ಇದ್ದರೂ ಮತ್ಯಾಕೆ ನನ್ನಲ್ಲಿ ಕೇಳಿದೆ…?
ಮಗ : ಯಾಕೆಂದರೆ ನನ್ನಲ್ಲಿ ಬೇಕಾದಷ್ಟು ಹಣ ಇರಲಿಲ್ಲ. ಈಗ ಬೇಕಾದಷ್ಟಾಯಿತು.
ಈ ಮಾತನ್ನು ಹೇಳುವಾಗ ಮಗನ ಮುಖ ಸಂತಸದಿಂದ ರಂಗೇರಿತ್ತು .
ತಂದೆ ಮಗನ ಮುಖವನ್ನುಶೂನ್ಯ ಭಾವದಿಂದ ದಿಟ್ಟಿಸಿದ .
ಮಗ ತನ್ನ ಮಾತನ್ನು ಮುಂದುವರೆಸಿದ ..
"ಅಪ್ಪಾ ನನ್ನಲ್ಲೀಗ ಒಂದು ಸಾವಿರ ರೂಪಾಯಿ ಇದೆ, ನಿನ್ನ ಸಮಯದಿಂದ ಒಂದು ಗಂಟೆಯನ್ನು ನನಗೆ ಕೊಡು. ನಾಳೆ ಮನೆಗೆ ಬೇಗ ಬಾ.. ನನಗೆ ನಿನ್ನ ಜೊತೆ ಊಟ ಮಾಡ್ಬೇಕು…."
ತಂದೆ ಕುಳಿತಲ್ಲೇ ಅಚೇತನನಾದ. ಅವನು ಆ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿದ. ಅವನ ದೇಹ ಪ್ರಶ್ನೆಯ ತೀಕ್ಸ್ನತೆಯನ್ನು ತಡೆಯಲಾರದೆ ಬೆವರಿತು. ಉಮ್ಮಡಿಸಿ ಗಂಟಲುಬ್ಬಿ ಮಾತು ಹೊರಡದಾಯಿತು. ಕೂಡಲೇ ತನ್ನೆರಡು ಕೈಗಳನ್ನು ಬಾಚಿ ಮಗನನ್ನು ತಬ್ಬಿಕೊಂಡ ಅವನು ಮಗನ ಹಣೆಗೆ ಮುತ್ತಿಟ್ಟು ಗೊಳೋ ಅಂತ ಅಳತೊಡಗಿದ.
son
ಹಣವೆಂಬ ಅಮೂರ್ತ ಮೌಲ್ಯದ ಹಿಂದೋಡಿ ಸಂಭಂದಗಳನ್ನು ಕಾಲಕಸದಂತೆ ಮಾಡಿದ ಎಲ್ಲ ಹೆತ್ತವರಿಗೊಂದು ಎಚ್ಚರಿಕೆಯ ಕರೆಘಂಟೆ ಇದು. ಜೀವನದ ನಾಗಾಲೋಟದಲ್ಲಿ ನಮ್ಮನ್ನು ಇಷ್ಟಪಡುವವರಿಗಾಗಿ ಒಂದಿಷ್ಟು ಕ್ಷಣವನ್ನು ಮೀಸಲಿಡಿ. ನಿಮ್ಮ ಒಂದು ದಿನದ ಸಾವಿರ ರೂಪಾಯಿ ಮೌಲ್ಯವಿರುವ ಒಂದು ಗಂಟೆಯನ್ನಾದರೂ ಹೃದಯಕ್ಕೆ ಹತ್ತಿರವಾದವರಿಗೆ ನೀಡಿ. ಅದು ಮಹತ್ತರವಾದ ಬದಲಾವಣೆಗೊಂದು ನಾಂದಿಯಾಗಬಹುದು.
ಮುಂದೆ ನೀವು ಸತ್ತಾಗ ನೀನು ನಿಮ್ಮ ಸಮಯವನ್ನೆಲ್ಲವನ್ನು, ಪರಿಶ್ರಮವನ್ನು ಕೊಟ್ಟು ಬೆಳೆಸಿದ ಕಂಪೆನಿ ಒಂದೆರಡು ದಿನದಲ್ಲಿ ಮತ್ತೊಬ್ಬರನ್ನು ನಿಮ್ಮ ಬದಲಾಗಿ ನೇಮಿಸಬಹುದು.
ಆದರೆ ನಿಮ್ಮ ಕುಟುಂಬಕ್ಕೆ, ನಿಮ್ಮ ಮಿತ್ರರಿಗೆ ನೀವಿಲ್ಲದ ನೋವು ಅವರ ಉಳಿದ ಜೀವನ ಪೂರ್ತಿ ಇರುತ್ತದೆ.
ಒಂದು ಕ್ಷಣ ಯೋಚಿಸಿ. ಈ ಅನಿಶ್ಚಿತವಾದ ಪ್ರಪಂಚದಲ್ಲಿ ನಾವ್ಯಾರೂ ಶಾಶ್ವತವಲ್ಲವೆನ್ನುವುದು ಸರ್ವವಿಧಿತ. ಹಣ,ಅಂತಸ್ತನ್ನು ಗಳಿಸುವ ಹೋರಾಟಕ್ಕೆ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಒಂದು ದಿನ ಮೃತ್ಯುವಿನ ಮನೆಯೆಡೆಗೆ ವಿಷಾದಪೂರ್ವಕವಾಗಿ ತೆರಳುವುದರಲ್ಲಿ ಯಾವುದೇ ಅರ್ಥ ಇಲ್ಲ.
ನಮ್ಮ ಬದುಕು ನಮ್ಮದು ಮಾತ್ರವಲ್ಲ. ಅದಕ್ಕೆ ಒಂದಿಷ್ಟು ಪಾಲುದಾರರಿದ್ದಾರೆ. ಅವರಿಗೂ ನಮ್ಮ ಬದುಕನ್ನು ಹಂಚೋಣ.. ಹಂಚಿದಷ್ಟು ಸಂತೋಷ ಹೆಚ್ಚಾಗುವುದು ತಾನೇ..?
ಅಂತಹ ಸಂತಸದ ಬದುಕನ್ನು ನಮ್ಮದಾಗಿಸೋಣ …
ಕಥಾ ಮೂಲ: ಅಂತರ್ಜಾಲ
Comments
Post a Comment