ರೈತರ ಸಮಸ್ಯೆ ಕುರಿತು ಮೋದಿ ಮನ್ ಕಿ ಬಾತ್ ಭೂ ಮಸೂದೆ ಕಾಯ್ದೆ ಕುರಿತ ಪ್ರತಿಪಕ್ಷಗಳ ತಪ್ಪು ಕಲ್ಪನೆ ಕುರಿತು ಮೋದಿ ವಾಗ್ಧಾಳಿ
Published: 22 Mar 2015 01:25 PM IST | Updated: 22 Mar 2015 01:30 PM IST
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ದೇಶದಲ್ಲಿ ರೈತರ ಸಮಸ್ಯೆ ಹಾಗೂ ಅವರ ಸ್ಥಿತಿಗತಿ ಕುರಿತಂತೆ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಜನರಲ್ಲಿರುವ ತಪ್ಪು ಕಲ್ಪನೆಗಳಿಗೆ ತೊಡೆದು ಹಾಕಿದ್ದಾರೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲರನ್ನೂ ನಮಸ್ಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದಿನ ಕಾರ್ಯಕ್ರಮ ವಿಭನ್ನ ರೀತಿಯ ಅನುಭವವನ್ನು ನೀಡಿದ್ದು, ರೈತರ ಸಮಸ್ಯೆ ಕುರಿತ ಪತ್ರಗಳು ತಮಗೂ ನೋವುಂಟು ಮಾಡಿದೆ. ನಿಮ್ಮ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಮುಂದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಗೆ ಮುಂದಾದ ಮೋದಿ ಅವರು, ಪ್ರತಿಪಕ್ಷಗಳು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿವೆ. 120 ವರ್ಷಗಳ ಹಿಂದೆನಿಂದಲೂ ಭೂ ಮಸೂದೆ ಕಾಯ್ದೆ ಜಾರಿಯಲ್ಲಿದೆ. ಜಾರಿಯಲ್ಲಿದ್ದ ಕಾಯ್ದೆಯನ್ನೇ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಕೊಂಚ ತಿದ್ದುಪಡಿ ಮಾಡಿದೆ. ಈ ಭೂ ಮಸೂದೆ ಕಾಯ್ದೆ ತಿದ್ದುಪಡಿ ರೈತರಿಗೆ ಲಾಭವಾಗಲಿದೆಯೇ ಹೊರತು ನಷ್ಟವನ್ನು ತರುವುದಿಲ್ಲ. ತಿದ್ದುಪಡಿಯಿಂದ ರೈತರಿಗೆ ಹಣ ಹರಿದು ಬರಲಿದೆ ಎಂದು ಹೇಳಿದ್ದಾರೆ.
ರೈತರು ಭೂಮಿ ನೀಡದಿದ್ದರೆ ನಗರೀಕರಣ ಅಭಿವೃದ್ಧಿ ಹೇಗೆ?...ರಸ್ತೆಗಳ ಅಭಿವೃದ್ಧಿ ಹೇಗೆ?...ರೈತಪರವಾದ ಭೂ ಮಸೂದೆ ಕಾಯ್ದೆಯನ್ನು ತಿದ್ದಪಡಿ ಮಾಡಿದ್ದೇ ತಪ್ಪೇ?...ಇದು ಧೋರಣೆಯೇ?...ಎಂದು ಮೋದಿ ರೈತರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರ ಇರುವುದೇ (ಜೈವಾನ್ ಜೈಕಿಸಾನ್) ರೈತರ ಪರವಾಗಿ, ತಿದ್ದುಪಡಿಯಾಗಿರುವ ಮಸೂದೆಯು ರೈತರಿಗಾಗುವ ಅನ್ಯಾಯವನ್ನು ತಡೆಯಲಿದೆ.
ಮೊದಲಿಗಿಂತ 4 ಪಟ್ಟು ಹೆಚ್ಚು ರೈತರಿಗೆ ಪರಿಹಾರ ಸಿಗುತ್ತದೆ. ಹಳ್ಳಿಗಳು ಅಭಿವೃದ್ಧಿಯಾದರೆ ಅಲ್ಲಿ ಉದ್ಯೋಗ ಹೆಚ್ಚುತ್ತದೆ. ಬೇರೆಡೆಯಿಂದ ಯುವಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಧಿಕಾರಿಗಳು ಹಳ್ಳಿಯ ಯುವಕರನ್ನೇ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಾರೆ. ರೈತರು ಸರ್ಕಾರಕ್ಕೆ ಭೂಮಿ ನೀಡುವಾಗ ಹಲವಾರು ಪರಿಹಾರ ಹಾಗೂ ಲಾಭಗಳನ್ನು ನೀಡಬಲ್ಲ ಪರಿಹಾರ ಧನವನ್ನು ಷರತ್ತು ಬದ್ಧತೆಯ ಮೇರೆಗೆ ಲಿಖಿತ ರೂಪದಲ್ಲಿ ನೀಡಲಾಗುತ್ತದೆ.
ಪ್ರತಿಪಕ್ಷಗಳು ರೈತರಿಗೆ ಲಾಭವಾಗದಂತೆ ಉದ್ದೇಶಪೂರ್ವಕವಾಗಿ ತಪ್ಪು ಕಲ್ಪನೆಗಳನ್ನು ಹುಟ್ಟಿಸಿ, ಭೂ ಮಸೂದೆ ಸುಗ್ರೀವಾಜ್ಞೆ ಕಾಯ್ದೆಯನ್ನು ಜಾರಿಯಾಗದಂತೆ ಮಾಡುತ್ತಿವೆ. ಒಂದು ವೇಳೆ ರಾಜ್ಯಗಳಿಗೆ ತಿದ್ದುಪಡಿಯಾಗಿರುವ ಭೂ ಮಸೂದೆಯಲ್ಲಿ ಸಮಸ್ಯೆ ಕಂಡು ಬಂದರೆ, ಈ ಹಿಂದಿದ್ದ ಕಾಯ್ದೆಯನ್ನು ಅನುಸರಿಸಬಹುದು. ಇದಕ್ಕೆ ಸರ್ಕಾರದಿಂದ ಯಾವುದೇ ಅಡ್ಡಿ ಬರುವುದಿಲ್ಲ ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ.
Comments
Post a Comment