ಶಿಕ್ಷಕರ ವರ್ಗ ಮಸೂದೆ ಮತ್ತು

ಕನ್ನಡ ಕಡ್ಡಾಯಕ್ಕೆ 2 ಮಸೂದೆ

ಉದಯವಾಣಿ, Mar 27, 2015, 3:40 AM IST

ವಿಧಾನಸಭೆ: ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ 1ರಿಂದ 10ನೇ ತರಗತಿವರೆಗೆ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸುವ ವಿಧೇಯಕಗಳನ್ನು ಗುರುವಾರ ಮಂಡಿಸಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ "ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ-2015' ಹಾಗೂ "ಕನ್ನಡ ಭಾಷಾ ಕಲಿಕೆ ವಿಧೇಯಕ-2015' ಮಂಡಿಸಿದರು.
ಸಂವಿಧಾನದ 350 ಎ ಅನುಚ್ಛೇದದ ಅನ್ವಯ ಮಗುವಿಗೆ ಆತನ/ಆಕೆಯ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಒದಗಿಸುವುದು ಸಂಬಂಧ ಪಟ್ಟ ರಾಜ್ಯಗಳ ಸಂವಿಧಾನಿಕ ಕರ್ತವ್ಯವಾಗಿದೆ. ಇದನ್ನು ಶಿಕ್ಷಣ ತಜ್ಞರು, ಬುದ್ಧಿ ಜೀವಿಗಳು ಮತ್ತು ಬರಹಗಾರರೊಂದಿಗೆ ಸವಿಸ್ತಾರವಾಗಿ ಚರ್ಚಿಸಲಾಗಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಅವಶ್ಯಕತೆಯನ್ನು ಎಲ್ಲರೂ ಅವಿರೋಧವಾಗಿ ಒಪ್ಪಿದ್ದಾರೆ. ಆದ್ದರಿಂದ 1 ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕು ಅಧಿನಿಯಮ 2009ಕ್ಕೆ (ಕೇಂದ್ರ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯಕ ಎಂದು "ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ತಿದ್ದುಪಡಿ) ವಿಧೇಯಕ'ದಲ್ಲಿ ಪ್ರಸ್ತಾಪಿಸಲಾಗಿದೆ.

ಅದೇ ರೀತಿ ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲೂ 1ರಿಂದ 10 ನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯಗಳಿಸಲು ಸರ್ಕಾರ ನಿರ್ಧಾರ ಮಾಡಿದ್ದು, 2015-16ನೇ ಶೈಕ್ಷಣಿಕ ವರ್ಷದಿಂದಲೇ ಇದನ್ನು ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿ ಪ್ರತ್ಯೇಕ ಅಧಿಕಾರಿ ನೇಮಿಸಲಾಗುವುದು ಎಂದು "ಕನ್ನಡ ಭಾಷಾ ಕಲಿಕೆ ವಿಧೇಯಕ-2015'ದಲ್ಲಿ ತಿಳಿಸಲಾಗಿದೆ.

ವರ್ಗಾವಣೆ ಮಸೂದೆಯೂ ಮಂಡನೆ: ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಮಾಣವನ್ನು ಶೇ.8ಕ್ಕೆ ಏರಿಸಿ ಪತಿ-ಪತ್ನಿ ಪ್ರಕರಣ ಹಾಗೂ ಪರಸ್ಪರ ಸಮ್ಮತಿ ವರ್ಗಾವಣೆಗಳಿಗೆ ಆದ್ಯತೆ ನೀಡುವ ಉದ್ದೇಶದ "ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2015' ಸಹ ಮಂಡಿಸಲಾಯಿತು.

ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವ ಕಾನೂನಿಗೆ ಬಲ ತುಂಬಲು ವಿಧೇಯಕ ಮಂಡಿಸಿ ವಿಧಾನಮಂಡಲದ ಉಭಯ ಸದನಗಳ ಅಂಗೀಕಾರ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು