USAಗೆ ಸೋಲಿಗ ತಜ್ಞ -ಚಿಕ್ಕನಂಜೇಗೌಡ ಮಾದೇಗೌಡ
Mon, 03/23/2015 - 01:00
ಯಳಂದೂರು (ಚಾಮರಾಜನಗರ): ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯ ಮಾರ್ಚ್ 25ರಿಂದ 27ವರೆಗೆ ಆಯೋಜಿಸಿರುವ ಸಮ್ಮೇಳನದಲ್ಲಿ 'ಕಾಡಿನ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ' ಕುರಿತು ವಿಷಯ ಮಂಡಿಸಲು ಸೋಲಿಗ ವ್ಯಕ್ತಿಯೊಬ್ಬರಿಗೆ ಇದೇ ಮೊದಲ ಬಾರಿಗೆ ಆಹ್ವಾನ ನೀಡಲಾಗಿದೆ.
ಯಳಂದೂರು ತಾಲ್ಲೂಕಿನ ಬಿ.ಆರ್.ಹಿಲ್ಸ್‌ನ ಚಿಕ್ಕನಂಜೇಗೌಡ ಮಾದೇಗೌಡ ಅಮೆರಿಕಕ್ಕೆ ತೆರಳುತ್ತಿರುವವರು. ಮಾದೇಗೌಡ ಈಗಾಗಲೇ ಕಾಡು ಸಂರಕ್ಷಣೆ ವಿಷಯದಲ್ಲಿ ಪ್ರಬಂಧ ಮಂಡಿಸಿ, ಪಿಎಚ್.ಡಿ ಪಡೆದಿದ್ದಾರೆ. ಅವರ ಜತೆ ನವದೆಹಲಿಯ ಏಟ್ರಿ ಸಂಸ್ಥೆಯ ಡಾ.ಅಂಕಿತ್ ಹಿರೇಮಠ ಅಮೆರಿಕಕ್ಕೆ ತೆರಳಲಿದ್ದಾರೆ.
ಮಾರ್ಚ್ 25ರಂದು ಲ್ಯಾಟಿನ್ ಅಮೆರಿಕ ಮತ್ತು ಭಾರತದ ಪ್ರತಿನಿಧಿಗಳು ಅರಣ್ಯ ಸಂರಕ್ಷಣೆ ಕುರಿತು ಚರ್ಚಿಸಲಿದ್ದಾರೆ. ಜೀವವೈವಿಧ್ಯಗಳ ಸುಸ್ಥಿರ ಬೆಳವಣಿಗೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರದ ಒದಗಿಸುವಿಕೆ, ಪರಿಸರ ಸಂರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕಾಭಿವೃದ್ಧಿ, ಜಾಗತಿಕ ತಾಪಮಾನ ತಗ್ಗಿಸುವಲ್ಲಿ ಅರಣ್ಯದ ಪಾತ್ರ ಕುರಿತು ಸಮಾಲೋಚನೆ ನಡೆಯಲಿದೆ. ಮಾದೇಗೌಡ ಅವರು ಮಾರ್ಚ್ 23ರಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಬಿಳಿಗಿರಿರಂಗನಬೆಟ್ಟದ ವನವೈವಿಧ್ಯ, ಪ್ರಾಣಿ ಸಂಕುಲ ಹಾಗೂ ಅಲ್ಲಿ ಬದುಕು ಕಟ್ಟಿಕೊಂಡಿರುವ ಸೋಲಿಗರು, ಅವರ ಆಹಾರ ಪದ್ಧತಿ, ಅರಣ್ಯ ಹಕ್ಕು ಕಾಯ್ದೆ, ಅಶೋಕ ಪರಿಸರ ಸಂಶೋಧನ ಸಂಸ್ಥೆ (ಏಟ್ರೀ) ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಸಮ್ಮೇಳನದಲ್ಲಿ ವಿಷಯ ಮಂಡಿಸುತ್ತೇನೆ ಎಂದು ಅಮೆರಿಕಕ್ಕೆ ತೆರಳುತ್ತಿರುವ ಚಿಕ್ಕನಂಜೇಗೌಡ ಮಾದೇಗೌಡ ಅವರು ತಿಳಿಸಿದರು.
Comments
Post a Comment