ಜಾತಿಗಣತಿ ಗಡುವು 10 ದಿನ ವಿಸ್ತರಣೆ ಮಾಡಿದ ಸಿಎಂ
ಜಾತಿಗಣತಿ ಗಡುವು 10 ದಿನ ವಿಸ್ತರಣೆ ಮಾಡಿದ ಸಿಎಂ
PSGadyal.
ಬೆಂಗಳೂರು, ಏ. 30 : ಸರ್ಕಾರದ ಮಹತ್ವಾಕಾಂಕ್ಷಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ನಗರ ಪ್ರದೇಶಗಳಲ್ಲಿ ಗಣತಿ ನಿರೀಕ್ಷಿತ ಗುರಿ ಮುಟ್ಟದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗದೆ. ಏ.11ರಂದು ಆರಂಭವಾದ ಜಾತಿ ಗಣತಿ ನಿಗದಿಯಂತೆ ಏ.30ಕ್ಕೆ ಅಂತ್ಯಗೊಳ್ಳಬೇಕಾಗಿತ್ತು. ಆದರೆ, ನಗರ ಪ್ರದೇಶದಲ್ಲಿ ಇನ್ನೂ ಗಣತಿ ಬಾಕಿ ಇರುವ ಕಾರಣ ಗಡುವನ್ನು ವಿಸ್ತರಣೆ ಮಾಡುವಂತೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ 90ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಆದರೆ, ನಗರ ಪ್ರದೇಶಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಣತಿ ಮುಗಿದಿಲ್ಲ. ಆದ್ದರಿಂದ ಗಣತಿಯನ್ನು ಅರ್ಧಕ್ಕೆ ನಿಲ್ಲಿಸದೇ 10 ದಿನಗಳ ಕಾಲ ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ರಾಜ್ಯದಲ್ಲಿ ಶೇ 90ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಎಲ್ಲಾ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಗಡುವು ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಸರ್ಕಾರ ಸುಮಾರು 130 ಕೋಟಿ ವೆಚ್ಚದಲ್ಲಿ ಸಮೀಕ್ಷೆಯನ್ನು ನಡೆಸುತ್ತಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಕುರಿತು ಸಾಮಾಜಿಕ, ಶೈಕ್ಷಣಿಕ ಸ್ಥಿತಿ-ಗತಿ, ಔದ್ಯೋಗಿಕ-ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
Comments
Post a Comment