ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರಗಳು 57 ಕೋಟಿ ರೂ.ಗೆ ಬಿಕರಿ
ಏಜೆನ್ಸೀಸ್ | Apr 23, 2015, 04.30PM IST
2
ಹೊಸದಿಲ್ಲಿ: ಒಂದು ಕಾಲದಲ್ಲಿ ಮೈಸೂರಿನ ರಾಜ ಟಿಪ್ಪು ಸುಲ್ತಾನನಿಗೆ ಸೇರಿದ್ದ ಶಸ್ತ್ರಾಸ್ತ್ರಗಳು ಲಂಡನ್‌ನಲ್ಲಿ ನಡೆದ ಹರಾಜೊಂದರಲ್ಲಿ 57 ಕೋಟಿ ರೂ.ಗೆ ಬಿಕರಿಯಾಗಿದೆ.
ಈ ಹರಾಜನ್ನು ಬೊನ್ಹಾಮ್ಸ್ ಎಂಬ ಸಂಸ್ಥೆ ಆಯೋಜಿಸಿತ್ತು. ಒಟ್ಟು 30 ವಿವಿಧ ಆಯುಧಗಳನ್ನು ಸಿರಿವಂತರು ಮುಗಿಬಿದ್ದು ಖರೀದಿಸಿದರು.
ಹುಲಿಯ ತಲೆಯ ಚಿತ್ರವಿರುವ ಟಿಪ್ಪು ಸುಲ್ತಾನ್‌ನ ರಾಜಲಾಂಛನವಿರುವ ಅಪರೂಪದ ರತ್ನಖಚಿತ ಖಡ್ಗವೊಂದೇ 20.44 ಕೋಟಿ ರೂ. ತಂದು ಕೊಟ್ಟಿತು. ಇದು ಸುಮಾರು 75 ಲಕ್ಷ ರೂ.ಗೆ ಮಾರಾಟವಾಗಬಹುದು ಎನ್ನುವುದು ಆಯೋಜಕರ ಲೆಕ್ಕಾಚಾರವಾಗಿತ್ತು.
ಮೈಸೂರಿನ ಹುಲಿ ಎಂದೇ ಖ್ಯಾತನಾಗಿದ್ದ ಟಿಪ್ಪು ಸುಲ್ತಾನ್, ಯುದ್ಧ ಪರಿಕರಿಗಳಲ್ಲೂ ಹುಲಿ ಮತ್ತು ಹುಲಿಯ ಬಣ್ಣದ ಪಟ್ಟಿಯನ್ನು ಬಳಸಿಕೊಳ್ಳುತ್ತಿದ್ದ. ಹೀಗಾಗಿ ಆತನ ಶಸ್ತ್ರಾಸ್ತ್ರಗಳಲ್ಲೂ ಇದೇ ರೀತಿಯ ವಿನ್ಯಾಸವಿದೆ.
ಮೂರು ಪೌಂಡ್ ತೂಕದ ಸಿಡಿಗುಂಡುಗಳನ್ನು ಹಾರಿಸಬಲ್ಲ, ಆಚೀಚೆ ಸಾಗಿಸಬಲ್ಲ ಫಿರಂಗಿ ಗರಿಷ್ಠ 60 ಲಕ್ಷ ರೂ.ಗೆ ಮಾರಾಟವಾಗುವ ನಿರೀಕ್ಷೆ ಇತ್ತು. ಆದರೆ ಹರಾಜಿನಲ್ಲಿ ಅದು 13.53 ಕೋಟಿ ರೂ.ಗಳಿಗೆ ಬಿಕರಿಯಾಯಿತು. ಟಿಪ್ಪು ಸುಲ್ತಾನ್‌ನ ಖಾಸಾ ಆಯುಧಗಾರದಲ್ಲಿದ್ದ ಎರಡು ಕೋವಿಗಳು 7, 22, 500 ಪೌಂಡುಗಳಿಗೆ ಮಾರಾಟವಾದವು. ಇವುಗಳಿಂದ ಒಂದರಿಂದ ಒಂದೂವರೆ ಲಕ್ಷ ಪೌಂಡ್ ಮಾತ್ರ ನಿರೀಕ್ಷಿಸಲಾಗಿತ್ತು. ಒಟ್ಟಾರೆ ಈ ಹರಾಜಿನಿಂದ ಬೊನ್ಹಾಮ್ಸ್, 70 ಕೋಟಿ ರೂ ಗಳನ್ನು ಬಾಚಿಕೊಂಡಿತು.
Comments
Post a Comment