ಗಾಯಕ ಸೋನು ನಿಗಮ್ ಗೆ ನಿಷೇಧ ಹೇರಿದ ಜೀ ಟಿವಿ
Published: 29 Apr 2015 12:42 PM IST
ಹಿನ್ನಲೆ ಗಾಯಕ ಸೋನು ನಿಗಮ್
ಮುಂಬೈ: ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ನಿಷೇಧಕ್ಕೆ ಒಳಗಾಗಿದ್ದಾರೆಯೇ ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು.
ಮೂಲಗಳ ಪ್ರಕಾರ ಖಾಸಗಿ ವಾಹಿನಿ ಜೀ ಟಿವಿ ವಾಹಿನಿ ಗಾಯಕ ಸೋನು ನಿಗಮ್ ಹಾಡುಗಳಿಗೆ ತನ್ನ ವಾಹಿನಿಯಲ್ಲಿ ನಿಷೇಧ ಹೇರಿದೆ. ಆದರೆ ತನ್ನ ಈ ನಿಷೇಧ ನಿರ್ಧಾರಕ್ಕೆ ಕಾರಣ ಏನೆಂಬುದನ್ನು ಮಾತ್ರ ವಾಹಿನಿ ಈ ವರೆಗೂ ಬಹಿರಂಗ ಪಡಿಸಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಸೋನು ನಿಗಮ್ ನಿಷೇಧದ ಹಿಂದೆ ರಾಜಕೀಯ ಕಾರಣಗಳಿವೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ರ್ಯಾಲಿ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಆಪ್ ಮುಖಂಡ ಕುಮಾರ್ ವಿಶ್ವಾಸ್ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯನ್ನೇ ಆಧರಿಸಿ ಜೀ ಟಿವಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತ್ತು. ಆದರೆ ಇದರ ವಿರುದ್ಧ ಗಾಯಕ ಸೋನು ನಿಗಮ್ ಮಾತನಾಡಿದ್ದರು ಮತ್ತು ಇದೇ ಕಾರಣಕ್ಕಾಗಿ ಸೋನು ನಿಗಮ್ ವಿರುದ್ಧ ಮುನಿಸಿಕೊಂಡ ವಾಹಿನಿ ಅವರ ಹಾಡುಗಳಿಗೆ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ.
ಇನ್ನು ತಮ್ಮ ಮೇಲಿನ ನಿಷೇಧ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಗಾಯಕ ಸೋನು ನಿಗಮ್, ಹಾಗದರೆ ಜೀ ಟಿವಿ ನನ್ನ ಮೇಲೆ ನಿಷೇಧ ಹೇರಿದೆ. ನಿಷೇಧ ಹೇರುವುದೆಂದರೇನು? ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೇ? ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಆಸ್ಪದ ನೀಡಲು ಹೇಗೆ ಸಾಧ್ಯ. ಕಾನೂನು ಪ್ರಕಾರವೋ ಅಲ್ಲವೋ ನಿಷೇಧ ಹೇರಿಕೆಯಂತೂ ಉತ್ತಮ ನಡೆಯಲ್ಲ ಎಂದು ಸೋನು ನಿಗಮ್ ಟ್ವೀಟ್ ಮಾಡಿದ್ದಾರೆ. ಸೋನು ನಿಗಮ್ ಟ್ವೀಟ್ ಹಿಂದೆಯೇ ಅವರ ಸಾವಿರಾರು ಅಭಿಮಾನಿಗಳು ಸರಣಿ ಟ್ವೀಟ್ ಮಾಡುತ್ತಿದ್ದು, ಸೋನು ನಿಗಮ್ ಪರ ಮತ್ತು ಜೀ ಟಿವಿ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Comments
Post a Comment