ದ.ಕೊರಿಯಾ ಜತೆ 7 ಒಪ್ಪಂದಗಳಿಗೆ ಸಹಿ
ದ.ಕೊರಿಯಾ ಜತೆ 7 ಒಪ್ಪಂದಗಳಿಗೆ ಸಹಿ
ಸೋಲ್ (ಪಿಟಿಐ): ದುಪ್ಪಟ್ಟು ತೆರಿಗೆ ತಪ್ಪಿಸುವುದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವುದೂ ಸೇರಿದಂತೆ ಸಾರಿಗೆ, ವಿದ್ಯುತ್, ಚಲನಚಿತ್ರ ಕ್ಷೇತ್ರವನ್ನು ಒಳಗೊಂಡ ಒಟ್ಟು 7 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ದಕ್ಷಿಣ ಕೊರಿಯಾ ಮಂಗಳವಾರ ಇಲ್ಲಿ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ದ.ಕೊರಿಯಾ ಅಧ್ಯಕ್ಷೆ ಪಾರ್ಕ್ ಜೆನ್ ಹೆ ಅವರು ಈ ಒಪ್ಪಂದಗಳಿಗೆ ಸಹಿ ಹಾಕಿದರು.
ಎರಡೂ ದೇಶಗಳಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದಕ್ಕೆ 1985ರಲ್ಲೇ ಸಹಿ ಹಾಕಲಾಗಿತ್ತು. ಈಗ ಈ ಒಡಂಬಡಿಕೆಯನ್ನು ಇನ್ನಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಲಿದೆ.
ಈಗಾಗಲೇ ಜಾರಿಯಲ್ಲಿರುವ ಸಮಗ್ರ ಆರ್ಥಿಕ ಸಹಭಾಗಿತ್ವ (ಸಿಇಪಿಎ) ಒಪ್ಪಂದದಡಿ, ಚಲನಚಿತ್ರ, ಪ್ರಸಾರ ಒಳಗೊಂಡ ಆಡಿಯೊ-ವಿಡಿಯೊ ಕೊ ಪ್ರೊಡೆಕ್ಷನ್ ಕ್ಷೇತ್ರದಲ್ಲಿ ಸಹಕಾರ ನೀಡಲು ಉಭಯ ದೇಶಗಳು ಸಮ್ಮತಿ ಸೂಚಿಸಿವೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣ, ಪರ್ಯಾಯ ಇಂಧನ ಅಭಿವೃದ್ಧಿ, ಸ್ಮಾರ್ಟ್ ಗ್ರಿಡ್ ಅಳವಡಿಕೆ ಸೇರಿದಂತೆ ವಿದ್ಯುತ್ ವಲಯದಲ್ಲಿ ಮತ್ತು ರಪ್ತು ವಹಿವಾಟು ಕ್ಷೇತ್ರದಲ್ಲೂ ಎರಡೂ ದೇಶಗಳು ಒಡಂಬಡಿಕೆ ಮಾಡಿಕೊಂಡಿವೆ. ಅಂತರರಾಷ್ಟ್ರೀಯ ಯುವಜನ ವಿನಿಮಯ ಕಾರ್ಯಕ್ರಮಕ್ಕೂ ಈ ಜಾಗತಿಕ ನಾಯಕರು ಹಸಿರು ನಿಶಾನೆ ತೋರಿದರು.
Comments
Post a Comment