ಶಶಾಂಕ್ ಮನೋಹರ್ ನೂತನ ಬಿಸಿಸಿಐ ಅಧ್ಯಕ್ಷ.
ಶಶಾಂಕ್ ಮನೋಹರ್ ನೂತನ ಬಿಸಿಸಿಐ ಅಧ್ಯಕ್ಷ.
ನವದೆಹಲಿ, ಸೆ.27- ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ( ಬಿಸಿಸಿಐ)ಯ ನೂತನ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಜಗನ್ಮೋಹನ್ ದಾಲ್ಮೀಯ ಇತ್ತೀಚೆಗೆ ನಿಧನರಾದ ಹಿನ್ನಲೆಯಲ್ಲಿ ಈ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಕೇಂದ್ರದ ಮಾಜಿ ಸಚಿವ ಶರದ್ ಪವಾರ್ , ಶ್ರೀನಿವಾಸನ್ ಸೇರಿದಂತೆ ಮತ್ತಿತರ ಹೆಸರುಗಳು ಚಾಲ್ತಿಯಲ್ಲಿದ್ದವು. ಆದರೆ ಇದೀಗ ಶಶಾಂಕ್ ಮನೋಹರ್ ಹೆಸರು ಎಲ್ಲೆಡೆ ಕೇಳಿ ಬರುತ್ತಿದ್ದು, ಬಹತೇಕ ವಲಯಗಳಲ್ಲಿ ಅವರ ಬೆಂಬಲಕ್ಕೆ ನಿಂತಿವೆ.
ನಿನ್ನೆಯಷ್ಟೇ ಶರದ್ ಪವಾರ್ ಹಾಗೂ ಶ್ರೀನಿವಾಸನ್ ಇಬ್ಬರೂ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದರು. ಇಬ್ಬರಲ್ಲಿ ಒಬ್ಬರು ಬಿಸಿಸಿಐ ಚುಕ್ಕಾಣಿ ಹಿಡಿಯುವುದು ಖಚಿತ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿತ್ತು. ಇದೀಗ ಎಲ್ಲ ಉಹಾ-ಪೋಹಗಳಿಗೆ ತೆರೆ ಎಳೆಯಲು ಮುಂದಾಗಿರುವ ಬಿಸಿಸಿಐ ಶಶಾಂಕ್ ಮನೋಹರ್‌ಗೆ ಪಟ್ಟ ಕಟ್ಟಲು ಸಿದ್ಧತೆ ನಡೆಸಿದೆ. ನಾವು ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಬೆಂಬಲ ಸೂಚಿಸಿದ್ದೇವೆ.ಇದಕ್ಕೆ ಶರದ್ ಪವಾರ್, ಶ್ರೀನಿವಾಸನ್ ಸೇರಿದಂತೆ ಬಹುತೇಕ ವಲಯಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಇನ್ನೊಂದು ಸುತ್ತಿನ ಮಾತುಕತೆ ನಡೆದ ಬಳಿಕ, ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಸರ್ವ ಸಮ್ಮತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದೆಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಜಯ್ ಶಿರ್ಕೆ ಹೇಳಿದ್ದಾರೆ.
ಈ ಸಂಬಂಧ ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಗೂರ್ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಶರದ್ ಪವಾರ್ ಹಾಗೂ ಶ್ರೀನಿವಾಸನ್ ಬೆಂಬಲ ಸೂಚಿಸಿದ್ದಾರೆ. ಉಳಿದಂತೆ ಕೆಲವು ವಲಯಗಳ ಬೆಂಬಲ ಗಿಟ್ಟಿಸಿ ಶಶಾಂಕ್ ಮನೋಹರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುವುದು. ಈ ವಾರದಲ್ಲಿ ಎಲ್ಲರೂ ಮತ್ತೊಮ್ಮೆ ಸಭೆ ಸೇರಿ ತೀರ್ಮಾನಿಸಲಿದ್ದೇವೆಂದು ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡಲು ಮನೋಹರ್ ಒಪ್ಪಿಕೊಂಡಿದ್ದಾರೆ. ಕೆಲವು ಸಣ್ಣಪುಟ್ಟ ಗೊಂದಲಗಳಿರುವುದರಿಂದ ಇವುಗಳನ್ನು ಪರಿಹರಿಸಿಕೊಳ್ಳಲಾಗುವುದು. ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಈ ವಾರದ ಅಂತ್ಯಕ್ಕೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಶಿರ್ಕೆ ವ್ಯಕ್ತಪಡಿಸಿದ್ದಾರೆ
Comments
Post a Comment