ಕಳಸಾ-ಬಂಡೂರಿ ಯೋಜನಯ ಸಮಗ್ರ ಇತಿಹಾಸ: ಮೂಲ ಲೇಖಕ- ಮಹೇಶ ರುದ್ರಗೌಡರ

ಮಲಪ್ರಭಾ ನೀರಾವರಿ ಯೋಜನೆ ಹಿನ್ನೋಟ:
ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ
ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ
ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ
ಜಿಲ್ಲೆಯ ಸವದತ್ತಿ
ಬೈಲಹೊಂಗಲ ತಾಲೂಕುಗಳಿಗೆ
ನೀರಾವರಿಯ ಅಗತ್ಯತೆ ಇತ್ತು. ಈ
ಭಾಗದ ಕುಡಿಯುವ ನೀರಿನ ಅಭಾವ
ಹೇಳತೀರದಾಗಿತ್ತು. ಅದಕ್ಕಾಗಿ
ರೂಪಗೊಂಡದ್ದು ಮಲಪ್ರಭಾ
ನೀರಾವರಿ ಯೋಜನೆ. ಸವದತ್ತಿ ಹತ್ತಿರ
`ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ
ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ
ನೀರು ಒದಗಿಸುವ ಯೋಜನೆ ಇದಾಗಿತ್ತು.
ಯೋಜನೆಯ ಕಾರ್ಯ 1961 ರಲ್ಲಿ
ಪ್ರಾರಂಭಗೊಂಡು
1972-73ರ ಸುಮಾರಿಗೆ
ಪೂರ್ಣಗೊಂಡಿತು. ಈ ಜಲಾಶಯ
37 ಟಿಎಂಸಿ ನೀರಿನ ಸಂಗ್ರಹ
ಸಾಮಥ್ರ್ಯ ಹೊಂದಿದೆ. ಆದರೆ
ಇಲ್ಲಿಯವರೆಗೆ ಜಲಾಶಯ ಸಂಪೂರ್ಣ
ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಮಲಪ್ರಭಾ
ಜಲಾಶಯ (ರೇಣುಕಾಸಾಗರ) ದಲ್ಲಿ ನೀರಿನ
ಸಂಗ್ರಹ ಕಡಿಮೆಯಾದ ಕಾರಣ ಮಳೆಯ
ಕೊರತೆ ಒಂದು ಕಡೆಯ
ಸಮಸ್ಯೆಯಾದರೆ, ನದಿ ನೀರು ಜಲಾಶಯ
ತಲುಪುವ ಪೂರ್ವದಲ್ಲೇ ರೈತರಿಂದ
ದೊಡ್ಡ ಪ್ರಮಾಣದಲ್ಲಿ
ಬಳಕೆಯಾಗುವುದು ಇನ್ನೊಂದು
ಕಡೆಯ ಸಮಸ್ಯೆ.
ಇದರೊಂದಿಗೆ ಮಲಪ್ರಭಾ
ಜಲಾಯನ ಪ್ರದೇಶ ಕಿರಿದಾಗಿದೆ. ಹೀಗಾಗಿ
ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿಸಿದ
ಪ್ರಮಾಣದಲ್ಲಿ ನೀರು ಒದಗಿಸಲು
ಸಾಧ್ಯವಾಗುತ್ತಿಲ್ಲ. ಇಷ್ಟಾಗಿ ರೋಣ ತಾಲೂಕಿನ 1.11
ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲು
ಘೋಷಿಸಿದ್ದರೂ ನೀರು ಲಭ್ಯವಾಗಿಲ್ಲ.
ಮಹದಾಯಿ ಯೋಜನೆ:
ರೇಣುಕಾಸಾಗರದ ನೀರಿನ
ಕೊರತೆಯನ್ನು ನೀಗಲು
ಸಿದ್ಧವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ.
ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ
ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ
ಮಟ್ಟದಿಂದ 914 ಮೀ.
ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ
೩೫ ಕಿ.ಮೀ. ಕ್ರಮಿಸಿ ಗೋವಾ ರಾಜ್ಯದಲ್ಲಿ
ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ
ಗೋವಾದಲ್ಲಿ `ಮಾಂಡೋವಿ' ಎಂದು ಹೆಸರು.
ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ,
ಕಾರಂಜೋಳ, ಬೊಮ್ಮನರಿ ದೂದ
ಸಾಗರ ಹೀಗೆ ಅನೇಕ ಉಪನದಿಗಳಿಂದ
ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು
ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ
3,134 ಮಿಲಿಮೀಟರ್ ಮಳೆ
ಬೀಳುತ್ತದೆ. ಮಹಾದಾಯಿ ನದಿ
ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ
ನದಿಗೆ ನೀರು ವರ್ಗಾಯಿಸುವುದೇ ಈ
ಯೋಜನೆಯ ಉದ್ದೇಶ.
ಗೋವಾದ ವಿರೋಧ:
1978ರಲ್ಲಿಯೇ ಈ ಯೋಜನೆ ಸಿದ್ಧವಾದರೂ
ಕಾರ್ಯರೂಪಕ್ಕೆ ಬರಲಿಲ್ಲ.
ಇದನ್ನೊಂದು ಜಲವಿದ್ಯುತ್
ಯೋಜನೆಯಾಗಿ ಮಾರ್ಪಡಿಸಿ ಮಹಾದಾಯಿ ಜಲಾಯನ
ಪ್ರದೇಶದಿಂದ 9 ಟಿಎಂಸಿ
ನೀರನ್ನು ಮಲಪ್ರಭಾಗೆ ವರ್ಗಾಯಿಸಿ
ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು.
(5-11-1988)1988 ರಲ್ಲಿ ಇದಕ್ಕೆ ಕರ್ನಾಟಕ
ಸರಕಾರ ಅನುಮೋದನೆ ನೀಡಿತು. ಆದರೆ ಗೋವಾ
ಸರಕಾರದ ತೀವ್ರ ವಿರೋಧದಿಂದ
ಯೋಜನೆಗೆ ತಡೆಯಾಯಿತು. ಮಹಾದಾಯಿ 2,032
ಚ.ಕಿ.ಮೀ. ಜಲಾನಯನ ಪ್ರದೇಶ
ಹೊಂದಿದ್ದು ಅದರಲ್ಲಿ
ಕರ್ನಾಟಕದ ಪಾಲು 412 ಚ.ಕಿ.ಮೀ.
ಕೇಂದ್ರದ ಜಲ ಆಯೋಗದ
ಸಮೀಕ್ಷೆಯಂತೆ ನದಿಯಲ್ಲಿ
ಒಟ್ಟು 210 ಟಿಎಂಸಿ ನೀರು
ಲಭ್ಯವಿದ್ದು ಕರ್ನಾಟಕ 45 ಟಿಎಂಸಿ
ನೀರಿನ ಪಾಲನ್ನು
ಹೊಂದಿದೆ. ಗೋವಾ ಸರಕಾರ
ಮಹದಾಯಿ ನದಿಗೆ ಜಲವಿದ್ಯುತ್ ಆಗಲಿ, ಇತರ
ಇನ್ನಾವುದೆ ಯೋಜನೆಯನ್ನೂ ರೂಪಿಸಿಲ್ಲ. ಕರ್ನಾಟಕ
ತನ್ನ ಪಾಲಿನ ನೀರು ಪಡೆಯಲು ಯೋಜನೆ
ರೂಪಿಸಿದರೂ ಅದಕ್ಕೆ ಗೋವಾ ಆತಂಕ ಒಡ್ಡುತ್ತಿದೆ.
ಕಳಸಾ – ಬಂಡೂರಿ ಯೋಜನೆ :
ಕಳಸಾ ನಾಲಾ ತಿರುವು:
ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ
ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ
ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರ
ಕಿ.ಮೀ. ಜಲಾನಯನ ಪ್ರದೇಶ
ಹೊಂದಿದ್ದು ಕೆಲವು ಉಪ
ಹಳ್ಳಗಳು ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಕಳಸಾ
ಹಳ್ಳವನ್ನು ಸೇರುತ್ತವೆ. ಈ ಹಳ್ಳದಿಂದ 3.56
ಟಿಎಂಸಿ ನೀರನ್ನು ಪಡೆಯುವ
ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ
ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು.
ಹುಬ್ಬಳ್ಳಿ-ದಾರವಾಡ ಅವಳಿ ನಗರಗಳಿಗೆ ಕುಡಿಯುವ
ನೀರು ಒದಗಿಸುವ ಸಲುವಾಗಿ ಅಂದಿನ
ಜಲಸಂಪನ್ಮೂಲ ಸಚಿವರಾಗಿದ್ದ
ಎಚ್.ಕೆ.ಪಾಟೀಲ್ ೨೦೦೦ ರಲ್ಲಿ ಕಳಸಾ
ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.
(1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ.
ಉದ್ದದ ಕಾಲುವೆ ನಿರ್ಮಾಣ.
(2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ
ಸಂಗ್ರಹವಾದ ನೀರನ್ನು 5.5
ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ
ಅಣೆಕಟ್ಟೆಗೆ ಸಾಗಿಸುವುದು.
ಇದರ ಒಟ್ಟು ವೆಚ್ಚ ಯೋಜನೆ ರೂಪಿಸಿದಾಗ 44 ಕೋಟಿ
ರೂ.ಗಳು. ಆದರೆ ಈಗ ಅದರ ವೆಚ್ಚ 428 ಕೋಟಿ ರೂ.ಗಳು.
ಈ ಪೈಕಿ ಅಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ
ಸರಕಾರ ಯೋಜನೆ ಅನುಷ್ಠಾನಗೊಳಿಸುವ
ಉದ್ದೇಶದಿಂದ 125 ಕೋಟಿ ರೂ. ಅನುದಾನ ಬಿಡುಗಡೆ
ಮಾಡಿತ್ತು. ಅಂದಿನ ನೀರಾವರಿ
ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಕಾಮಗಾರಿಗೆ
ಅಡಿಗಲ್ಲು ನಿರ್ವಹಿಸಿ ಯೋಜನೆಗೆ ಚಾಲನೆ
ನೀಡಿದ್ದರು.
ಬಂಡೂರಿ ನಾಲಾ ತಿರುವು:
ಬಂಡೂರಿ ಮಹದಾಯಿ ನದಿಯ
ಇನ್ನೊಂದು ಉಪನದಿ.
ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು
ಕಟ್ಟಿ ಸಂಗ್ರಹವಾದ ನೀರನ್ನು
ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ
ಸಂಗ್ರಹವಾದ 4 ಟಿಎಂಸಿ
ನೀರನ್ನು ೫.೧೫ ಕಿ.ಮೀ ಕಾಲುವೆ
ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು.
ಬಂಡೂರ ನಾಲಾ
ಯೋಜನೆಗೊಳಪಡುವ ಜಲಾನಯನ
ಪ್ರದೇಶ 32.25 ಚ.ಕಿ.ಮೀ.
ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ
ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ
ತಯಾರಿಸುವಾಗ 49 ಕೋಟಿ ರೂ.ಗಳು. ಈಗ ಅದರ ವೆಚ್ಚ
370 ಕೋಟಿ ರೂ. ಆಗಿದೆ.
ಈ ಎರಡೂ ಯೋಜನೆಗಳಿಂದ ಒಟ್ಟು 7.56
ಟಿಎಂಸಿ ನೀರು ಲಭ್ಯವಾಗಲಿದೆ.
ಇದುವೆ ಕಳಸಾ-ಬಂಡೂರಿ ನಾಲಾ ಯೋಜನೆ.
ಯೋಜನೆ ಬಗ್ಗೆ ಕರ್ನಾಟಕ, ಗೋವಾ ಸರಕಾರಗಳ ಚರ್ಚೆ
ಮತ್ತು ಒಪ್ಪಂದ:
ಒಂದು ಹಂತದಲ್ಲಿ ಗೋವಾ ಮತ್ತು ಕರ್ನಾಟಕ
ಸರಕಾರಗಳ ನಡುವೆ ಜಲವಿದ್ಯುತ್ ಯೋಜನೆಗೆ
ಒಪ್ಪಂದವಾಗಿತ್ತು. ದಿ. 10-9-1996
ರಂದು ಗೋವಾ ಸರಕಾರದ ನೀರಾವರಿ
ಮಂತ್ರಿ ಹಾಗೂ ಕರ್ನಾಟಕದ ಸರಕಾರದ
ನೀರಾವರಿ ಸಚಿವರ ಒಂದು ಸಭೆ ನಡೆದು
ಜಲವಿದ್ಯುತ್ ಯೋಜನೆ ಮತ್ತು ಕಳಸಾ-ಹರತಾರ
ನದಿಗಳಿಂದ ನೀರು ವರ್ಗಾವಣೆ ಕುರಿತು
ಚರ್ಚೆಯಾಗಿ ಕಳಸಾ ಯೋಜನೆಯಿಂದ 1.5
ಟಿಎಂಸಿ ನೀರನ್ನು ಮಾಂಡೋವಿ
ಯೋಜನೆಗೆ ಹರಿಸುವ
ಕರಾರಿನೊಂದಿಗೆ ಈ ಯೋಜನೆಗೆ
ಒಪ್ಪಂದವಾಯಿತು. ಆದರೆ 5-3-1997
ರಂದು ಗೋವಾ ಸರಕಾರ ನೀರು
ವರ್ಗಾಯಿಸುವುದಕ್ಕೆ ಒಪ್ಪಿಗೆ ಆಗಿಲ್ಲ ಎಂದು
ತಿಳಿಸಿತು.
ಗೋವಾದ ವಾದವೇನು?
(1) ಮಹದಾಯಿ ನೀರಿನ
ಕೊರತೆಯನ್ನು ಅನುಭವಿಸುತ್ತಿರುವ
ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ
ನೀರಿನ ಕೊರತೆ ಇರುವ
ಕಣಿವೆಯಿಂದ ನೀರನ್ನು ಬೇರೆಡೆಗೆ
ವರ್ಗಾಯಿಸುವುದು ಸೂಕ್ತವಲ್ಲ.
(2) ಮಹದಾಯಿ ನದಿ ನೀರನ್ನು ಬೇರೆಡೆಗೆ
ವರ್ಗಾಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ
ತೀವ್ರ ಪರಿಣಾಮ ಉಂಟಾಗುವುದು.
ಅದ್ಯಯನ ಮತ್ತು ಸಮೀಕ್ಷೆಗಳು
ಹೇಳುವುದೇನು:
ಅಧ್ಯಯನಗಳು ಮತ್ತು ಸಮೀಕ್ಷೆಗಳು
ಗೋವಾದ ವಾದದಲ್ಲಿರುವ
ಪೊಳ್ಳುತನವನ್ನು ಎತ್ತಿತೋರಿಸಿವೆ.
ಕೇಂದ್ರ ಸರಕಾರದ ಸಲಹೆಯಂತೆ ಕರ್ನಾಟಕ
ಸರಕಾರ ಮಾಡಿಕೊಂಡ ಮನವಿ
ಮೇರೆಗೆ ಮಹಾರಾಷ್ಟ್ರದ ನಾಗಪುರದಲ್ಲಿರುವ
`ನೀರಿ' ಅಧ್ಯಯನ ನಡೆಸಿ ಮಹದಾಯಿ
ತಿರುವು ಯೋಜನೆಯಿಂದ ಪರಿಸರದ ಮೇಲೆ
ಯಾವುದೇ ವ್ಯತಿರಿಕ್ತ ಪರಿಣಾಮ
ಉಂಟಾಗುವುದಿಲ್ಲವೆಂದೂ ಮತ್ತು
ಮಹದಾಯಿ ಕಣಿವೆ ನೀರಿನ
ಕೊರತೆ ಇರುವ ಪ್ರದೇಶ ಅಲ್ಲವೇ
ಅಲ್ಲವೆಂದೂ ತಿಳಿಸಿತು. ಅದರಂತೆ
ರಾಷ್ಟ್ರೀಯ ನೀರಿನ
ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ
ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ
ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ.
ಆದರೆ ಗೋವಾ ಸರಕಾರ ಮಾತ್ರ ಈ ಯಾವ ವರದಿಯನ್ನು
ಒಪ್ಪಿಕೊಳ್ಳಲು ಸಿದ್ದವಿಲ್ಲ ಅಷ್ಟೆ.
ಕಳಸಾ – ಬಂಡೂರಿ ನಾಲಾ ಯೋಜನೆಗೆ ಕೇಂದ್ರದ
ಒಪ್ಪಿಗೆ ಹಾಗೂ ತಡೆ :
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಹಾಗೂ ಇತರ
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ
ನೀರನ್ನು ಪೂರೈಸಲು ಈ ಯೋಜನೆ ಅಗತ್ಯ
ಎಂಬುದನ್ನು ಕರ್ನಾಟಕ ಕೇಂದ್ರಕ್ಕೆ
ಮನವರಿಕೆ ಮಾಡಿಕೊಟ್ಟ
ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ದಿ.
30-4-2002 ರಂದು ಯೋಜನೆಗೆ ತನ್ನ ತಾತ್ವಿಕ
ಒಪ್ಪಿಗೆ ನೀಡಿತು.
ಅದರೊಂದಿಗೆ ಕೆಲವು
ಕರಾರುಗಳನ್ನು ವಿಧಿಸಿತು.
(1) 7.56 ಟಿಎಂಸಿ ನೀರನ್ನು ಕೇವಲ
ಮಾನ್ಸೂನ್ ಮಳೆಗಾಲದಲ್ಲಿ ಮಾತ್ರ ವರ್ಗಾಯಿಸುವುದು.
(2) ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ
ನಗರಗಳಿಗೆ ಕುಡಿಯಲು ಮಾತ್ರ ಬಳಸುವುದು.
(3) ಅಂತರರಾಜ್ಯ ನೀರಿನ
ಹಂಚಿಕೆಯಾದಾಗ ಕರ್ನಾಟಕದ ಪಾಲಿನಲ್ಲಿ ಈ
7.56 ಟಿಎಂಸಿ ನೀರನ್ನು
ಹೊಂದಾಣಿಕೆ
ಮಾಡಿಕೊಳ್ಳುವುದು.
(4) ಕರ್ನಾಟಕವು ಕೇಂದ್ರ ಜಲ ಆಯೋಗಕ್ಕೆ ಈ
ಯೋಜನೆಗಳ ಎಲ್ಲ ತಾಂತ್ರಿಕ ಮಾಹಿತಿ
ಒದಗಿಸುವುದು. ಕರ್ನಾಟಕವು ಭವಿಷ್ಯದಲ್ಲಿ ಹೆಚ್ಚಿನ
ನೀರನ್ನು ವರ್ಗಾಯಿಸುವುದಿಲ್ಲ
ಎಂಬುದನ್ನು ನೀಲಿ
ನಕ್ಷೆಗಳಿಂದ ಖಾತ್ರಿ
ಮಾಡಿಕೊಳ್ಳುವುದು.
(5) ಕೇಂದ್ರ ಜಲ ಆಯೋಗ ತಂತ್ರಜ್ಞರು,
ಅಧಿಕಾರಿಗಳ ಯೋಜನಾ ಸ್ಥಳದ
ಪರಿವೀಕ್ಷಣೆಗೆ ಮತ್ತು
(6) ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳ
ತಂಡ ಭೇಟಿ ಮಾಡಬಯಸಿದರೆ ಅವರ
ಪರಿವೀಕ್ಷಣೆಗೆ ಅನುಮತಿಸುವುದು ಹಾಗೂ
ಅನುಕೂಲ ಮಾಡಿಕೊಡುವುದು.
(7) ಉದ್ದೇಶಿತ ಕುಡಿಯುವ ನೀರಿನ ಯೋಜನೆ
ಅನುಷ್ಠಾನದಲ್ಲಿ ಕರ್ನಾಟಕವು
ಅಂಗೀಕೃತ ವಿಧಾನಗಳನ್ನು ಬಳಸುವುದು.
ಇದಾದ 5 ತಿಂಗಳಲ್ಲೇ ಗೋವಾ ಸರಕಾರದ
ಹಠಮಾರಿತನ, ವಿರೋಧ ಹಾಗೂ ಆಕ್ಷೇಪಣೆಗಳಿಗೆ ಬಗ್ಗಿದ
ಕೇಂದ್ರ ಜಲ ಆಯೋಗ ದಿ. 19-9-2002
ರಂದು ತಾನೇ ನೀಡಿದ ತಾತ್ವಿಕ ಒಪ್ಪಿಗೆಗೆ
ತಡೆಯಾಜ್ಞೆ ನೀಡಿತು.
ಅರಣ್ಯ ಕಾಮಗಾರಿ:
ಹುಬ್ಬಳ್ಳಿ- ಧಾರವಾಡ ಸೇರಿದಂತೆ ಸುಮಾರು 10
ನಗರಗಳಿಗೆ ಕುಡಿಯುವ ನೀರು ಪೂರೈಸುವ
ಸಲುವಾಗಿ ರೂಪಿಸಿರುವ ಕಳಸಾ- ಬಂಡೂರಿ ನಾಲೆ
ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ 7.32
ಹೆಕ್ಟೇರ್ ಅರಣ್ಯ ಭೂಮಿ ಹಾಗೂ 60 ಸಾವಿರ ಮರಗಳು
ನಾಶವಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿ
ಉಂಟಾಗುತ್ತದೆ. ಅಲ್ಲದೆ, ಈ ಯೋಜನೆಗೆ
ಕೇಂದ್ರ ಅರಣ್ಯ ಸಚಿವಾಲಯದಿಂದ
ಅನುಮತಿ ಪಡೆದಿಲ್ಲ ಎಂದು ಸಾರ್ವಜನಿಕ
ಹಿತಾಸಕ್ತಿ ಅರ್ಜಿ ಮೂಲಕ
ಅರ್ಜಿದಾರರೊಬ್ಬರು ಆಕ್ಷೇಪಿಸಿದ್ದರು.
ಇದಕ್ಕೆ ಉತ್ತರಿಸಿದ ರಾಜ್ಯ ಸರಕಾರ ಹುಬ್ಬಳ್ಳಿ –
ಧಾರವಾಡ ಸೇರಿದಂತೆ ಇತರ ನಗರಗಳಿಗೆ ಕುಡಿಯುವ
ನೀರು ಒದಗಿಸುವ ಕಳಸಾ- ಬಂಡೂರಿ ನಾಲೆ
ಯೋಜನೆಯ ಕಾಮಗಾರಿಗೆ ಅರಣ್ಯ ಪ್ರದೇಶವನ್ನು
ಬಳಸಿಕೊಳ್ಳುತ್ತಿಲ್ಲ ಎಂದು
ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ಕಳಸಾ ಬಂಡೂರಿ ಯೋಜನೆ ಮತ್ತು
ರಾಜಕೀಯ ಪಕ್ಷಗಳ ಇಚ್ಚಾಶಕ್ತಿ :
ದಶಕಗಳಿಂದ ವರದಿ ಹಂತದಲ್ಲೇ ಇದ್ದ
ಕಳಸಾ ಬಂಡೂರಿ ಯೋಜನೆಯನ್ನು
ಎಸ್.ಎಮ್.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ
ಅನುಷ್ಟಾನಕ್ಕೆ ಮುಂದಾಯಿತು. ಕರ್ನಾಟಕ
ಸರಕಾರದ ಮನವಿಯಂತೆ ಕೇಂದ್ರದ ಬಿಜೆಪಿ
ನೇತೃತ್ವದ ಎನ್.ಡಿ.ಎ ಸರಕಾರ ೨೦೦೨ ರಲ್ಲಿ
ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು
ನೀಡಿತು. ನಂತರ ಗೋವಾದ ಬಿಜೆಪಿ
ಸರಕಾರದ ರಾಜಕೀಯ ಒತ್ತಡಕ್ಕೆ ಮಣಿದು
ನೀಡಿದ್ದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ
ನೀಡಿತು. ಅಂದು ಕೇಂದ್ರದಲ್ಲಿ
ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಎನ್.ಡಿ.ಎ
ಸರಕಾರ ಗೋವಾದ ಬಿಜೆಪಿ ಸರಕಾರಕ್ಕೆ ಒಂದಿಷ್ಟು
ತಿಳಿಹೇಳಿ ಕುಡಿಯುವ ನೀರಿನ ಆದ್ಯತೆಯ
ಆಧಾರದಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸುವಂತೆ
ತಿಳಿಸಬಹುದಿತ್ತು. ಆದರೆ ಪಕ್ಷ ರಾಜಕಾರಣ
ಜನಹಿತಕ್ಕಿಂತ ಮಿಗಿಲಾದುದು ಎಂಬುದನ್ನು
ಅಂದಿನ ಕೇಂದ್ರ ಸರಕಾರ ಸಾಬೀತು
ಪಡಿಸಿತು.
ಮುಂದೆ ೨೦೦೪ ರಲ್ಲಿ ಸಾರ್ವತ್ರಿಕ ಚುನಾವಣೆ
ನಡೆದು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್
ಸರಕಾರ ಅಸ್ತಿತ್ವಕ್ಕೆ ಬಂದರೆ
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ
ಯು.ಪಿ.ಎ ಸರಕಾರ ಅದಿಕಾರಕ್ಕೇರಿತು. 19-9-2002
ರಂದು ಎನ್.ಡಿ.ಎ ಸರಕಾರ ನೀಡಿದ್ದ
ತಾತ್ವಿಕ ಒಪ್ಪಿಗೆಯ ತಡೆಯಾಜ್ಞೆಯನ್ನು
ತೆರವುಗೊಳಿಸಲು ಕರ್ನಾಟಕದ
ಕಾಂಗ್ರೆಸ್ ಸರಕಾರ ತನ್ನದೇ ಯು.ಪಿ.ಎ ಸರಕಾರದ
ಮೇಲೆ ಪ್ರಭಾವ ಬೀರುವುದರಲ್ಲಿ
ವಿಫಲವಾಯಿತು. ಇನ್ನು, ಗೋವಾದ ವಿಧಾನ ಸಭೆಗೆ ಚುನಾವಣೆ
ನಡೆದ ಸಂದರ್ಭದಲ್ಲಿ ಕಾಂಗ್ರೆಸ್
ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣಾ ಭಾಷಣ
ಮಾಡುತ್ತಾ ಕಳಸಾ ಬಂಡೂರಿ ಯೋಜನೆಗೆ ಅನುಮತಿ
ನೀಡುವುದಿಲ್ಲ ಎಂಬ ಭರವಸೆ
ನೀಡಿದರು. ೨೦೦೬ ರಲ್ಲಿ ಕರ್ನಾಟಕದಲ್ಲಿ
ಅಸ್ತಿತ್ವಕ್ಕೆ ಬಂದ ಜೆಡಿಎಸ್ ಬಿಜೆಪಿ ಸಮ್ಮಿಶ್ರ
ಸರಕಾರ ಯೋಜನೆ ಅನುಷ್ಟಾನಕ್ಕೆ ಮುಂದಾಗಿ ಕಳಸಾ
ನಾಲಾ ಯೋಜನೆಗೆ ೧೨೫ ಕೋಟಿ ರೂ. ಬಿಡುಗಡೆ ಮಾಡಿ
ಕಾಮಗಾರಿ ಆರಂಬಿಸಿತು. ಈ ಹಂತದಲ್ಲಿ
ನೀರಾವರಿ ವಿಷಯ ರಾಜ್ಯಕ್ಕೆ ಸೇರಿದ್ದು,
ವಿವಾದಿತ ಕಳಸಾ-ಬಂಡೂರಿ ಯೋಜನೆಯಲ್ಲಿ
ಮಧ್ಯ ಪ್ರವೇಶ ಮಾಡದಿರಲು ರಾಜ್ಯ ಸರ್ಕಾರ
ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಹಿಂದೆ
ಆಂಧ್ರಪ್ರದೇಶ-ಕರ್ನಾಟಕ ನಡುವಿನ `ತೆಲುಗು
ಗಂಗಾ' ಯೋಜನೆ ವಿವಾದದಲ್ಲಿ ಕೇಂದ್ರ
ನೀರಾವರಿ ರಾಜ್ಯಕ್ಕೆ
ಸಂಬಂಧಿಸಿದ ವಿಷಯ ಎಂದು
ಮಧ್ಯ ಪ್ರವೇಶ ಮಾಡಲು ನಿರಾಕರಿಸಿತು. ಇದೇ
ನಿಲುವನ್ನು `ಕಳಸಾ-ಬಂಡೂರಿ' ನಾಲೆ
ವಿಷಯದಲ್ಲೂ ತಳೆಯಬೇಕೆಂದು ರಾಜ್ಯ
ಸರಕಾರ ಮನವಿ ಮಾಡಿತು. ನಂತರದ ದಿನಗಳಲ್ಲಿ
ಗೋವಾದ ನಿರಂತರ ಅಡ್ಡಿ ಮತ್ತು
ನ್ಯಾಯಾದೀಕರದ ನೇಮಕ ವಿಚಾರದ
ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನವಾಗಿ ಸಾಗಿತು.
ಕರ್ನಾಟಕ ಸರಕಾರಗಳೂ ಕೂಡ
ನ್ಯಾಯಾಧೀಕರಣದ ಅನಗತ್ಯತೆಯ
ಬಗ್ಗೆ ಕೇಂದ್ರಕ್ಕೆ ಮನವರಿಕೆ
ಮಾಡಿಕೊಡುವಲ್ಲಿ ವಿಫಲವಾದವು.
ನ್ಯಾಯಾಧಿಕರಣ ನೇಮಕ :
ಗೋವಾ ಸರಕಾರ ಕೇಂದ್ರ ಜಲಸಂಪನ್ಮೂಲ
ಸಚಿವರಿಗೆ ದಿ. 9-7-2002 ರಂದು ಪತ್ರ ಬರೆದು
ನ್ಯಾಯಾಧಿಕರಣ ರಚಿಸುವಂತೆ
ಕೇಳಿಕೊಂಡಿತು. ಅದಲ್ಲದೆ
2006ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು
ದಾಖಲಿಸಿ ಕಳಸಾ ಬಂಡೂರಿ ಕಾಮಗಾರಿ
ತಡೆಯುವಂತೆ ಹಾಗೂ ನ್ಯಾಯಾಧಿಕರಣ
ನೇಮಿಸುವಂತೆ ಕೇಂದ್ರ ಸರಕಾರಕ್ಕೆ
ಸೂಚಿಸಬೇಕೆಂದು ವಿನಂತಿಸಿತು. ನವೆಂಬರ್
2006ರಲ್ಲಿ ಕೇಂದ್ರ ಮಂತ್ರಾಲಯ
ಕರ್ನಾಟಕ ಸರಕಾರವನ್ನು ಸಂಪರ್ಕಿಸಿ "ಈ
ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ
ಎಂಬ ಅಭಿಪ್ರಾಯ ಈ
ಮಂತ್ರಾಲಯದ್ದಾಗಿದೆ. ಮುಂದಿನ
ಕ್ರಮವನ್ನು 1956ರ ಅಂತರರಾಜ್ಯ
ಜಲವಿವಾದ ಕಾಯ್ದೆ ಮೇರೆಗೆ ಕ್ರಮ
ಜರುಗಿಸಲಾಗುವುದು." ಎಂದು ತಿಳಿಸಿತು. ಕೇಂದ್ರ
ಸರಕಾರ ನವೆಂಬರ್ 16, 2010 ರಂದು
`ಮಹದಾಯಿ ಜಲವಿವಾದ ನ್ಯಾಯಾಧಿಕರಣ' ರಚಿಸಿತು.
ಹೀಗಾಗಿ ಕಳಸಾ ಬಂಡೂರಿ ನಾಲಾ ಯೋಜನೆ
ಈಗ ನ್ಯಾಯಾಧಿಕರಣದ ಅಂಗಳದಲ್ಲಿದೆ.
ಸದ್ಯದ ಪರಿಸ್ಥಿತಿ :
ಜೆಡಿಎಸ್ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ
ಕಣಕುಂಬಿ ಬಳಿ ಚಾಲನೆ ನೀಡಲಾದ
ಕಳಸಾ ನಾಲೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು,
5.15 ಕಿ.ಮೀ. ಉದ್ದದ ನಾಲಾ
ಯೋಜನೆಯ ಪೈಕಿ ಈಗಾಗಲೇ ಶೇ. 95ರಷ್ಟು ಕಾಲುವೆ
ಕಾಮಗಾರಿ ಪೂರ್ಣಗೊಂಡಿದೆ. ಈ
ಪೈಕಿ 450 ಮೀಟರ್ ಕಾಲುವೆ ನಿರ್ಮಾಣ
ಕಾಮಗಾರಿ ಉಳಿದುಕೊಂಡಿದೆ.
ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಚಾಲನೆ
ಸಿಕ್ಕಿಲ್ಲ. ನ್ಯಾಯಾದೀಕರಣದ
ತೀರ್ಪಿಗೆ ಬದ್ದವಾಗಿರುವ ಷರತ್ತನ್ನು
ಒಪ್ಪಿಕೊಂಡು
ಸುಪ್ರೀಂ ಕೋರ್ಟ್ ಗೆ ೨೦೦೬ ರಲ್ಲಿ
ಪ್ರಮಾಣ ಪತ್ರ ಸಲ್ಲಿಸಲಾಗಿದೆ. ೨೦೧೪ ರ ವೇಳೆಗೆ
ನಾಲಾ ಕಾಮಗಾರಿ ಮುಗಿಯಲಿದೆ. ಜಲಾಶಯದ ಕಾಮಗಾರಿ
ಪೂರ್ಣಗೊಳ್ಳುವವರೆಗೂ ನಾಲೆಗೆ
ನೀರು ಹರಿಯುವ ಸಾದ್ಯತೆಗಳಿಲ್ಲ.
ನ್ಯಾಯಾದೀಕರಣದ ತೀರ್ಪು
ಶೀಘ್ರ ಹೊರಬರಲಿದೆ
ಎಂದು ಜಲಸಂಪನ್ಮೂಲ ಸಚಿವ
ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಹರಿಯುವ
ನೀರನ್ನು ಜನರಿಗೆ ಕುಡಿಯಲು ಪೂರೈಕೆ ಮಾಡುವ
ಉದ್ದೇಶದಿಂದ ಈ ಕಾಮಗಾರಿಯನ್ನು
ಕೈಗೊಂಡಿದೆ. ರಾಜ್ಯದ ಒಳಗೆ
ಕೈಗೆತ್ತಿಕೊಳ್ಳುವ ಯೋಜನೆಗೆ ಪರವಾನಗಿ
ಪಡೆಯುವ ಅಗತ್ಯ ಇಲ್ಲ. ಕುಡಿಯುವ
ನೀರಿನ ಯೋಜನೆ ಕೈಗೊಳ್ಳಲು
ಕೇಂದ್ರ ಸರ್ಕಾರವು ಪ್ರಾಥಮಿಕ ಪರವಾನಗಿ
ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ
ಆರಂಭಿಸಲಾಗಿದೆ. ಪ್ರಮಾಣಪತ್ರದಲ್ಲಿ
ತಿಳಿಸಿರುವಂತೆಯೇ ನ್ಯಾಯಮಂಡಳಿಯ
ತೀರ್ಪಿನ ಬಳಿಕವೇ ಈ ನಾಲಾಗಳ
ನೀರನ್ನು ತಿರುಗಿಸಲಾಗುವುದು ಎಂದು
ಇತ್ತೀಚಿಗೆ ರಾಜ್ಯಕ್ಕೆ ಭೇಟಿ
ನೀಡಿದ ನ್ಯಾಯಮಂಡಳಿ
ಅದ್ಯಕ್ಷರಿಗೆ ರಾಜ್ಯದ
ಅಡ್ವೊಕೇಟ್ ಜನರಲ್
ರವಿವರ್ಮಕುಮಾರ್ ಭರವಸೆ ನೀಡಿದ್ದಾರೆ.
ಈ ವರ್ಷದ ಬರಗಾಲದಿಂದ ನವಿಲು
ತೀರ್ಥ ಆಣೆಕಟ್ಟಿನಲ್ಲಿ ಅರ್ಧದಷ್ಟೂ
ನೀರಿಲ್ಲ. ಇದರಿಂದಾಗಿ
ನೀರಾವರಿಗೆ ನೀರು ಇರಲಿ,
ಕುಡಿಯಲು ನೀರಿಲ್ಲದ
ಸ್ಥಿತಿಯುಂಟಾಗಿದೆ. ಹೀಗಾಗಿ ಕಳಸಾ
ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಳಗಾವಿ,
ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ
ಕನ್ನಡಿಗರು ನಿರಂತರ ಪ್ರತಿಭಟನೆಗೆ
ಇಳಿದಿದ್ದಾರೆ. ಪ್ರತಿಭಟನೆಯ ಬಿಸಿಗೆ ಸಿಲುಕಿರುವ ಮೂರೂ
ರಾಜಕೀಯ ಪಕ್ಷಗಳು
ಒಬ್ಬರನ್ನೊಬ್ಬರು ದೂಷಿಸುತ್ತ
ರಾಜಕೀಯ ಮಾಡುವುದರಲ್ಲೇ
ನಿರತರಾಗಿದ್ದಾರೆ. ಪ್ರಧಾನಿ ಬಳಿಗೆ ಹೋದ ಸರ್ವ ಪಕ್ಷ
ನಿಯೋಗ ಒಂದು ಖಚಿತ ಭರವಸೆ ಪಡೆಯದೇ
ಬಂದ ದಾರಿಗೆ ಸುಂಕವಿಲ್ಲ
ಎಂಬಂತೆ ವಾಪಾಸ್ ಬಂದಿದ್ದಾರೆ.
ನೀವು ನೀವೇ
ಮಾತಾಡಿಕೊಂಡು ಆನಂತರ
ದೆಹಲಿಗೆ ಬನ್ನಿ ಅನ್ನುವ ಪ್ರಧಾನಿಯವರ ಮಾತು
ಜನರನ್ನು ಇನ್ನಷ್ಟು
ರೊಚ್ಚಿಗೆಬ್ಬಿಸಿದೆ. ಈ
ಹೊತ್ತಿನಲ್ಲಿ ಮೂರು ಪಕ್ಷಗಳೂ
ತಮ್ಮ ರಾಜಕೀಯ
ಬದಿಗೊತ್ತಿ ಒಂದು ದನಿಯಲ್ಲಿ
ಕನ್ನಡಿಗರ ಹಿತ ಕಾಯಲು ಮುಂದಾಗಬೇಕು.
ಪ್ರಧಾನಿಯವರು ಮೂರು ರಾಜ್ಯಗಳ ಸಭೆ
ಕರೆಯುವಂತೆ ಒತ್ತಡ ಹೇರಬೇಕು.
ಮಧ್ಯಂತರ
ತೀರ್ಪೊಂದು
ಕೊಡುವಂತೆ
ನ್ಯಾಯಾಧೀಕರಣ ಮಂಡಳಿಗೆ
ರಾಜ್ಯ ಸರ್ಕಾರ ತುರ್ತಾಗಿ ಒಂದು ಅರ್ಜಿ
ಸಲ್ಲಿಸಬೇಕು, ನೊಂದಿರುವ ರೈತರ
ಬೆನ್ನಿಗೆ ನಾವಿದ್ದೇವೆ ಅನ್ನುವ ಭರವಸೆಯನ್ನು
ರಾಜ್ಯ ಸರ್ಕಾರ ನೀಡಬೇಕು.
ಇಲ್ಲದಿದ್ದಲ್ಲಿ ಮೂರೂ ಪಕ್ಷಗಳಿಗೂ ಜನರೇ ಪಾಠ
ಕಲಿಸುವ ದಿನ ದೂರವಿಲ್ಲ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು