ಅಂಗನವಾಡಿ ಮೇಲ್ವಿಚಾರಕಿಯರ ಹುದ್ದೆಗೆ ಪದವಿ ಮಾನದಂಡ::-

28 Oct, 2015ರಾಹುಲ ಬೆಳಗಲಿ     
ಚಿಕ್ಕಬಳ್ಳಾಪುರ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ನೀಡಿ ಮೇಲ್ವಿಚಾರಕಿಯರ ಹುದ್ದೆಗೆ ನೇಮಿಸಲು ಹೊಸ ಮಾರ್ಗಸೂಚಿ ರಚಿಸಲಾಗಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮಾರ್ಗಸೂಚಿ ಅನುಸರಿಸಲು ಮುಂದಾಗಿದೆ. ಮೇಲ್ವಿಚಾರಕಿಯರ ಹುದ್ದೆಗೆ ಪದವಿ ವಿದ್ಯಾರ್ಹತೆ ನಿಗದಿಪಡಿಸಲು ಮುಂದಾಗಿದೆ.

ಎಸ್‌ಎಸ್‌ಎಲ್‌ಸಿ ಶಿಕ್ಷಣದ ಜತೆಗೆ 10 ವರ್ಷದ ಸೇವಾನುಭವಕ್ಕೆ ಒತ್ತು ನೀಡುತ್ತಿದ್ದ ಇಲಾಖೆಯು ಈಗ ಪದವಿ ಶಿಕ್ಷಣಾರ್ಹತೆಗೆ ಆದ್ಯತೆ ನೀಡಲು ಉದ್ದೇಶಿಸಿದೆ.

ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿ ತಿದ್ದುಪಡಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದರಿಂದ ಹೊಸ ನೇಮಕಾತಿ ಪ್ರಕ್ರಿಯೆ ಪಾಲಿಸಬೇಕಿದೆ. ಅದರಂತೆ ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಿದೆ. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಕುರಿತು ಮಾಹಿತಿ ನೀಡುವಂತೆ ಇಲಾಖೆ ಜಂಟಿ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಸುತ್ತೋಲೆ ರವಾನಿಸಿದ್ದಾರೆ.

ಹೊಸ ನಿಯಮ:   ಮೇಲ್ಚಿಚಾರಕಿಯರ ಶೇ 45ರಷ್ಟು ಹುದ್ದೆಗಳಿಗೆ ಪದವಿ ಶಿಕ್ಷಣ ಮತ್ತು 7 ವರ್ಷ ಸೇವಾನುಭವ ಉಳ್ಳವರು ಮತ್ತು ಎಸ್‌ಎಸ್‌ಎಲ್‌ಸಿ ಶಿಕ್ಷಣ ಮತ್ತು 10 ವರ್ಷ ಸೇವಾನುಭವ ಉಳ್ಳವರಿಗೆ ಆದ್ಯತೆ ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರದ ಹೊಸ ಸೂಚನೆಯನ್ವಯ ಮೇಲ್ವಿಚಾರಕಿಯರ ಹುದ್ದೆಗೆ ಪದವಿ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ.

ರಾಜ್ಯದಲ್ಲಿ 2447 ಮೇಲ್ವಿಚಾರಕಿಯರ ಹುದ್ದೆಗಳಿದ್ದು, ಅವುಗಳ ಪೈಕಿ 1788 ಹುದ್ದೆಗಳು ಭರ್ತಿಯಾಗಿವೆ. 659 ಹುದ್ದೆ ಭರ್ತಿಯಾಗಬೇಕಿದೆ. ಪದವಿ ಶಿಕ್ಷಣದ ಜತೆ 10 ವರ್ಷ ಸೇವಾನುಭವ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರ ಜೇಷ್ಠತಾ ಪಟ್ಟಿಯನ್ನು ಅ. 31ರೊಳಗೆ ಬೆಂಗಳೂರು ಕಚೇರಿಗೆ ಸಲ್ಲಿಸಬೇಕು. ಪಟ್ಟಿಯಲ್ಲಿ ಯಾವುದೇ ಲೋಪದೋಷ ಇರಬಾರದು.

ಯಾವ ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿ ಕೈಬಿಡಬಾರದು. ಸಮರ್ಪಕ ಮಾಹಿತಿಯಿಲ್ಲದೆ ಪಟ್ಟಿಯಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಾದಲ್ಲಿ, ಎಲ್ಲದಕ್ಕೂ ಉಪನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಸ್ಪಷ್ಟ ಸೂಚನೆಯೂ ನೀಡಲಾಗಿದೆ.

ಹೊಸ ರೀತಿಯ ನೇಮಕಾತಿ ಪ್ರಕ್ರಿಯೆಗೆ ಸಿಐಟಿಯು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನೇಮಕಾತಿ ವಿಷಯದಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ಅನುಸರಿಸುತ್ತಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಸಂಘ ಒತ್ತಾಯಿಸಿದೆ.

ಆಕ್ಷೇಪಣೆ: 'ಹೊಸ ನಿಯಮದಿಂದ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕಿ ಹುದ್ದೆಯಿಂದ ವಂಚಿತರಾಗುತ್ತಾರೆ. ಶೇ 70ಕ್ಕೂ ಹೆಚ್ಚು ಮಂದಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಮತ್ತು 10 ವರ್ಷದ ಸೇವಾನುಭವ ಹೊಂದಿದ್ದಾರೆ. ಪದವಿ ಓದಿಲ್ಲ ಎಂಬ ಕಾರಣಕ್ಕೆ ಅವರನ್ನು ಆ ಹುದ್ದೆಗೆ ಪರಿಗಣಿಸದಿರುವುದು ತಪ್ಪು. ಇದರಿಂದ ಇನ್ನಷ್ಟು ಸಮಸ್ಯೆ ಮತ್ತು ಗೊಂದಲ ಸೃಷ್ಟಿಯಾಗುತ್ತದೆ' ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ 'ಪ್ರಜಾವಾಣಿ'ಗೆ ತಿಳಿಸಿದರು.

'ಈವರೆಗಿನ ನಿಯಮಾವಳಿಯನ್ನು ಒಮ್ಮೆಲೆ ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಎಸ್ಸೆಸ್ಸೆಲ್ಸಿ ಶಿಕ್ಷಣ ಹೊಂದಿದವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಮರ್ಥರಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಕೀಳರಿಮೆ ಮತ್ತು ಅಸಮಾನತೆ ಮೂಡಿಸುವಂತಹ ನಿಯಮಾವಳಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬಾರದು. ಒಂದು ವೇಳೆ ಮುಂದಾದಲ್ಲಿ, ತೀವ್ರ ಹೋರಾಟ ಎದುರಿಸಬೇಕಾಗುತ್ತದೆ' ಎಂದು ಅವರು ಹೇಳಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು