ಕರಿ ಮೆಣಸು ಉತ್ಪಾದನೆ: ಕರ್ನಾಟಕ ನಂ.1:-
ವಿಕ ಸುದ್ದಿಲೋಕ | Nov 24, 2015,
ಮೈಸೂರು: ಕಾಫಿ, ತಂಬಾಕಿನ ಜತೆಗೆ ಕರಿಮೆಣಸು
ಬೆಳೆಯುವಲ್ಲಿಯೂ ಕರ್ನಾಟಕ ದೇಶದಲ್ಲೇ
ಮೊದಲ ಸ್ಥಾನದಲ್ಲಿದೆ. ಕಾಫಿ
ಬೆಳೆಯಲ್ಲಿ ಆಗುತ್ತಿರುವ ವ್ಯತ್ಯಾಸದ ಲಾಭ
ಪಡೆದು ಕರ್ನಾಟಕದ ಪಶ್ಚಿಮಘಟ್ಟದ ಭಾಗದಲ್ಲಿ
ಕರಿಮೆಣಸು ಬೆಳೆಯುವ ಪ್ರಮಾಣ ಹೆಚ್ಚಿದ್ದು,
ಕೇರಳಕ್ಕಿಂತ ಉತ್ಪಾದನೆಯಲ್ಲಿ ಕರ್ನಾಟಕ
ಮುಂದಿದೆ ಎಂದು ಕೇಂದ್ರ
ಸಾಂಬಾರ ಮಂಡಳಿ ಅಧ್ಯಕ್ಷರೂ ಆಗಿರುವ
ಅಂತಾರಾಷ್ಟ್ರೀಯ ಮೆಣಸು
ಸಮುದಾಯದ ಅಧ್ಯಕ್ಷ ಎ.ಜಯತಿಲಕ್
ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ
ಆರಂಭಗೊಂಡ ವಿಶ್ವ
ಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್ ಆರ್ಥಿಕ
ಮತ್ತು ಸಾಮಾಜಿಕ
ಆಯೋಗದೊಂದಿಗೆ ಮೆಣಸು
ಬೆಳೆಯುವ ದೇಶಗಳನ್ನು
ಒಳಗೊಂಡ
ಅಂತಾರಾಷ್ಟ್ರೀಯ ಮೆಣಸು
ಸಮುದಾಯದ 43ನೇ ಸಮಾವೇಶದ ಉದ್ಘಾಟನೆ
ಸಮಾರಂಭದ ನಂತರ
ಸುದ್ದಿಗಾರರೊಂದಿಗೆ
ಮಾತನಾಡಿದರು.
''ಒಂದು ಅಂದಾಜಿನ ಪ್ರಕಾರ 2015-16ನೇ
ಸಾಲಿನಲ್ಲಿ ಕರ್ನಾಟಕದಲ್ಲಿ 30ರಿಂದ 40 ಟನ್
ಕರಿಮೆಣಸು ಉತ್ಪಾದನೆ ಮಾಡಿರುವ ಅಂದಾಜಿದೆ.
ಇದೇ ಅವಧಿಯಲ್ಲಿ ಕೇರಳದಲ್ಲಿ 25ರಿಂದ 30
ಟನ್ ಉತ್ಪಾದಿಸಲಾಗಿದೆ. ಇನ್ನೂ ನಿಖರ ಅಂಕಿ
ಅಂಶ ಬಂದಿಲ್ಲ. ಆನಂತರ ಖಚಿತ
ಪ್ರಮಾಣ ತಿಳಿಯಬಹುದು'' ಎಂದು ಹೇಳಿದರು.
''ಅಂತಾರಾಷ್ಟ್ರೀಯ ಮಟ್ಟದಲ್ಲಿ
ಪ್ರತಿ ಕಿಲೋ ಮೆಣಸಿನ ಬೆಲೆ 600 ರೂ.ನಿಂದ 700
ರೂ.ಗೆ ಏರಿಕೆಯಾಗಿದೆ. ಅಡಕೆ, ಕಾಫಿಯ ದರದಲ್ಲಿ
ಏರುಪೇರಾಗಿರುವುದರಿಂದ ಬಹಳಷ್ಟು ರೈತರು
ಮೆಣಸಿನ ಕಡೆಗೆ ಗಮನ ನೀಡಿದ್ದಾರೆ.
ಇದರಿಂದ ಕರ್ನಾಟಕದಲ್ಲಿ ಏರಿಕೆ ಕಂಡು
ಬಂದಿದೆ. ಬೆಲೆ ಹಾಗೂ ಬೆಳೆಯಲ್ಲಿ ಸ್ಥಿರತೆ
ಕಾಪಾಡಿಕೊಳ್ಳಲು ಗಮನ
ನೀಡಲಾಗುತ್ತಿದೆ'' ಎಂದು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಸಮಾವೇಶದಲ್ಲಿ ಮಾತನಾಡಿದ
ಅವರು, ''ಪ್ರಮುಖ ಆಹಾರ ಉತ್ಪನ್ನವಾಗಿ
ಮಾರ್ಪಟ್ಟಿರುವ ಮೆಣಸು ರೈತರಿಗೂ ಉತ್ತಮ ಆದಾಯ
ತರಬಲ್ಲ ವಾಣಿಜ್ಯ ಬೆಳೆಯಾಗಿ
ರೂಪುಗೊಂಡಿದೆ. ಸಾಂಬಾರ
ಪದಾರ್ಥಗಳ ರಫ್ತಿನಲ್ಲಿ ಶೇ.35ರಷ್ಟು ಪ್ರಮಾಣ
ಮೆಣಸಿನದು. ಕಳೆದ ವರ್ಷದಲ್ಲಿ 2.30 ಮಿಲಿಯನ್
ಅಮೆರಿಕನ್ ಡಾಲರ್ನಷ್ಟು ವಹಿವಾಟು ನಡೆದಿದೆ.
ಒಂದು ದಶಕದ ಅವಧಿಯಲ್ಲಿ ಮೆಣಸಿನ
ಬೆಳೆಯಲ್ಲಿ ಹೆಚ್ಚಳವಾಗುತ್ತಿದ್ದರೂ
ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಈ
ಕಾರಣದಿಂದಲೇ ರಾಷ್ಟ್ರಿಯ ತೋಟಗಾರಿಕೆ ಮಿಷನ್
ಅಡಿ ಈಗಾಗಲೇ ಮೆಣಸು ಪ್ರಮಾಣ ಹೆಚ್ಚಳಕ್ಕೆ ಒತ್ತು
ನೀಡಲಾಗಿದೆ. ಜತೆಗೆ ದರ ಸ್ಥಿರತೆ ಕಾಪಾಡಲು
ಗಮನ ಹರಿಸಲಾಗುತ್ತಿದೆ'' ಎಂದರು.
ಕೇಂದ್ರ ವಾಣಿಜ್ಯ ಮಂತ್ರಾಲಯದ
ಜಂಟಿ ಕಾರ್ಯದರ್ಶಿ ರಜನಿ ರಂಜನ್
ರಶ್ಮಿ ಮಾತನಾಡಿ, ''ಪಶ್ಚಿಮಘಟ್ಟದಲ್ಲಿ
ಬೆಳೆಯುವ ಕರಿಮೆಣಸನ್ನು ಸಾಂಬಾರ ಪದಾರ್ಥಗಳ
ರಾಜ ಎಂದೇ ಕರೆಯಲಾಗುತ್ತದೆ. ಸಾಂಬಾರ
ಪದಾರ್ಥಗಳ ರಫ್ತು ಪ್ರಮಾಣದಲ್ಲಿ ಕರಿಮೆಣಸು
ಪ್ರಮುಖವಾದದ್ದು. ಇಂಡೋನೇಷಿಯಾ,
ಮಲೇಶಿಯಾ, ವಿಯೆಟ್ನಾಂ,
ಶ್ರೀಲಂಕಾ ಕೂಡ ಭಾರತದ ಸಾಲಿನಲ್ಲಿವೆ.
ಜಾಗತಿಕ ಮಟ್ಟದಲ್ಲಿ 3.50 ಲಕ್ಷ ಮೆಟ್ರಿಕ್
ಟನ್ನಷ್ಟು ಕರಿಮೆಣಸಿಗೆ ಬೇಡಿಕೆ ಇರುವುದರಿಂದ
ಉತ್ಪಾದನೆಯೂ ಗಣನೀಯವಾಗಿ ಏರುತ್ತಿದೆ.
2014ರಲ್ಲಿ 2.78 ಮೆಟ್ರಿಕ್ ಟನ್ನಷ್ಟು ಕರಿಮೆಣಸು
ರಫ್ತು ಮಾಡಿದ್ದು, ಈ ವರ್ಷ ಇನ್ನೂ ಹೆಚ್ಚಿದೆ. ಕಳೆದ
ವರ್ಷದಿಂದ ಕೆಜಿಗೆ 600 ರೂ.ಗೂ ಹೆಚ್ಚಿನ
ಉತ್ತಮ ದರ ಸಿಗುತ್ತಿರುವುದರಿಂದ ಸಹಜವಾಗಿ
ರೈತರಿಗೆ ಆದಾಯದ ಪ್ರಮಾಣವೂ ಹೆಚ್ಚಿದೆ''
ಎಂದು ತಿಳಿಸಿದರು.
ಸಂಸದ ಪ್ರತಾಪಸಿಂಹ,
ವಿಯೆಟ್ನಾಂನ ಉಪ ಸಚಿವೆ ತಾಮ್ ತನ್ಹನ್
ಹಾಜರಿದ್ದರು. ಮೂರು ದಿನದ ಸಮಾವೇಶದಲ್ಲಿ ಏಳು
ದೇಶಗಳ 300ಕ್ಕೂ ಹೆಚ್ಚು ಪ್ರತಿನಿಧಿಗಳು
ಪಾಲ್ಗೊಂಡಿದ್ದಾರೆ. ಹಾಸನದ
ಎಂ.ಬಿ.ಮಹೇಶ್ಕುಮಾರ್ ಸೇರಿ ಮೂವರು ರೈತರಿಗೆ
ಅಂತಾರಾಷ್ಟ್ರೀಯ ಬೆಳೆಗಾರ ಪ್ರಶಸ್ತಿ
ನೀಡಲಾಯಿತು.
Comments
Post a Comment