ಆರ್ಟಿಇ ರದ್ದುಗೊಳಿಸಲು ಕೇಂದ್ರ ಚಿಂತನೆ?:-
ವಿಧಾನಪರಿಷತ್ತು: ಶಿಕ್ಷಣ ಹಕ್ಕು
(ಆರ್ಟಿಇ) ಕಾಯ್ದೆ ಬಗ್ಗೆ ಕೇಂದ್ರ
ಸರ್ಕಾರ ಪುನರ್ಪರಿಶೀಲನೆ
ನಡೆಸುತ್ತಿದ್ದು, ಬರುವ ಜನವರಿ ವೇಳೆಗೆ
ಅಂತಿಮ ತೀರ್ಮಾನಕ್ಕೆ ಬರುವ
ಸಾಧ್ಯತೆಯಿದೆ ಎಂದು ಪ್ರಾಥಮಿಕ
ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ
ರತ್ನಾಕರ್ ಹೇಳಿದ್ದಾರೆ.
ಶುಕ್ರವಾರ ಪ್ರಶ್ನೋತ್ತರ
ಅವಧಿಯಲ್ಲಿ ಕಾಂಗ್ರೆಸ್ಸಿನ
ದಯಾನಂದ ಪ್ರಶ್ನೆಗೆ ಉತ್ತರಿಸಿದ
ಸಚಿವರು, ಆರ್ಟಿಇ ಯೋಜನೆಯ ಬಗ್ಗೆ
ಕೇಂದ್ರ ಸರ್ಕಾರ ಪುನರ್ಪರಿಶೀಲನೆ
ನಡೆಸುತ್ತಿದೆ. ಈಗಾಗಲೇ ಕೇಂದ್ರ
ಸರ್ಕಾರ ಮಟ್ಟದ ಮೂರು ವಿಚಾರ
ಸಂಕಿರಣಗಳಲ್ಲಿ ಈ ವಿಷಯ ಚರ್ಚೆ ಆಗಿದೆ. ಈ
ಯೋಜನೆಯನ್ನು
ಮುಂದುವರಿಸಬೇಕೋ ಅಥವಾ
ಬೇಡವೋ ಎಂಬ ಕುರಿತು
ಮುಂದಿನ ವರ್ಷ ಜನವರಿ ವೇಳೆಗೆ
ಅಂತಿಮ ತೀರ್ಮಾನಕ್ಕೆ ಬರುವ
ಸಾಧ್ಯತೆಯಿದೆ ಎಂದರು.
ಕರ್ನಾಟಕದಲ್ಲಿ ಈವರೆಗೆ 3.16 ಲಕ್ಷ
ಮಕ್ಕಳಿಗೆ ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ
ಪ್ರವೇಶ ದೊರಕಿಸಿಕೊಡಲಾಗಿದ್ದು,
ಅದಕ್ಕಾಗಿ ಸರ್ಕಾರದಿಂದ 368 ಕೋಟಿ
ರೂ. ಪಾವತಿ ಮಾಡಲಾಗಿದೆ. ಈ
ಮಕ್ಕಳಿಗೆ ಎಂಟನೆ ತರಗತಿವರೆಗೆ ಹಣ
ಕೊಟ್ಟರೆ ಅಂದಾಜು 1,300 ಕೋಟಿ
ರೂ. ಬೇಕಾಗುತ್ತದೆ. ಸರ್ಕಾರಿ
ಶಾಲೆಗಳಲ್ಲಿ ಕಲಿಯುವ ಮಕ್ಕಳಿಗಿಂತ
ದುಪ್ಪಟ್ಟು ಸಂಖ್ಯೆಯ ಮಕ್ಕಳನ್ನು
ಸರ್ಕಾರದಿಂದ ಹಣ ಕೊಟ್ಟು ಖಾಸಗಿ
ಶಾಲೆಗಳಲ್ಲಿ ಓದಿಸಬೇಕಾದಂತಹ
ಪರಿಸ್ಥಿತಿ ಬಂದಿದೆ. ಖಾಸಗಿ ಶಾಲೆಗಳಿಗೆ
ಕೊಡುವ ಹಣವನ್ನು ಸರ್ಕಾರಿ
ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ
ಬಳಸಿಕೊಂಡರೆ ನಮ್ಮ ಸರ್ಕಾರಿ
ಶಾಲೆಗಳನ್ನು ಖಾಸಗಿ ಶಾಲೆಗಳ
ಮಟ್ಟಕ್ಕೆ ಎತ್ತರಿಸಬಹುದು. ಈ ನಿಟ್ಟಿನಲ್ಲಿ
ಕೇಂದ್ರ ಸರ್ಕಾರ ಆರ್ಟಿಇ
ಯೋಜನೆಯನ್ನು ಪುನರ್ಪರಿಶೀಲನೆ
ಮಾಡುತ್ತಿದೆ ಎಂದು ಕಿಮ್ಮನೆ
ವಿವರಿಸಿದರು.
ನಿಯಮ ರೂಪಿಸಲಾಗುವುದು:
ಖಾಸಗಿ ಶಾಲಾ- ಕಾಲೇಜುಗಳು
ನಡೆಸುವ ಅನಧಿಕೃತ ವಸತಿ ನಿಲಯಗಳ
ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ
ಹೊಸದಾಗಿ ನಿಯಮಗಳನ್ನು
ರೂಪಿಸಲಾಗುವುದು ಎಂದು
ಕಿಮ್ಮನೆ ರತ್ನಾಕರ್ ಅವರು
ಕಾಂಗ್ರೆಸ್ಸಿನ ವಿ.ಎಸ್. ಉಗ್ರಪ್ಪ ಅವರ
ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದರು.
ಶಾಲೆ ಅನುದಾನಕ್ಕೆ ಆನ್ಲೈನಲ್ಲೇ
ಅರ್ಜಿ
ವಿಧಾನಪರಿಷತ್ತು: ಅನುದಾನರಹಿತ
ಶಾಲಾ- ಕಾಲೇಜುಗಳನ್ನು
ಅನುದಾನಕ್ಕೆ ಒಳಪಡಿಸಲು ಕೋರಿ
ಆನ್ಲೈನ್ ಅರ್ಜಿ ಸಲ್ಲಿಸಲು ಡಿಸೆಂಬರ್ 31
ಅಥವಾ ಜನವರಿ 31ರವರೆಗೆ ಗಡುವು
ನೀಡಲಾಗುವುದು ಎಂದು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಶುಕ್ರವಾರದ ಪ್ರಶ್ನೋತ್ತರ
ಅವಧಿಯಲ್ಲಿ ಬಿಜೆಪಿಯ ಕ್ಯಾ. ಗಣೇಶ್
ಕಾರ್ಣಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು,
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು
ಪ್ರತ್ಯೇಕ ಸಾಫ್ಟ್ವೇರ್
ಅಭಿವೃದ್ಧಿಪಡಿಸಲಾಗುತ್ತಿದ್ದು, 15
ದಿನಗಳಲ್ಲಿ ಸಾಫ್ಟ್ವೇರ್
ತಯಾರಾಗಲಿದೆ.
ಅನುದಾನಕ್ಕೊಳಪಡಿಸುವ ಬಗ್ಗೆ
ಮಾಧ್ಯಮಗಳ ಮೂಲಕ ಪ್ರಚಾರ ಸಹ
ಮಾಡಲಾಗುವುದು ಎಂದರು.
1995ರ ಮೊದಲು
ಪ್ರಾರಂಭಗೊಂಡ ಅನುದಾನರಹಿತ
ಶಾಲಾ-ಕಾಲೇಜುಗಳನ್ನು
ಅನುದಾನಕ್ಕೊಳಪಡಿಸಲು ಕ್ರಮ
ಕೈಗೊಳ್ಳಲಾಗಿದೆ. ಅದರಂತೆ 41
ಪ್ರಾಥಮಿಕ, 20 ಪ್ರೌಢ ಶಾಲೆಗಳು
ಮತ್ತು 21 ಪದವಿ ಪೂರ್ವ
ಕಾಲೇಜುಗಳ ಪ್ರಸ್ತಾವನೆಗಳು
ಬಾಕಿ ಇವೆ. ಅದಕ್ಕೆ 18.94 ಕೋಟಿ ರೂ.
ವಾರ್ಷಿಕ ಹಣ ಬೇಕು.
ಅನುದಾನಕ್ಕೊಳಪಡಿಸಲು ಆಗಾಗ
ಬರುವ ಅರ್ಜಿಗಳನ್ನು ಶಿಕ್ಷಣ ಇಲಾಖೆ
ಪರಿಶೀಲಿಸಿ ಆರ್ಥಿಕ ಇಲಾಖೆಗೆ
ರವಾನಿಸುವ ಪದ್ಧತಿ ಇದೆ. ಆದರೆ, ಇದರಿಂದ
ವಾರ್ಷಿಕ ಆರ್ಥಿಕ ಅಂದಾಜು
ಸಿಗುವುದಿಲ್ಲ ಎಂದು ಆರ್ಥಿಕ ಇಲಾಖೆ
ಆಕ್ಷೇಪ ವ್ಯಕ್ತಪಡಿಸಿದೆ.
ಅದರಂತೆ ಅನುದಾನಕ್ಕೊಳಪಡಲು
ಬಯಸುವ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ
ಒಂದೆರಡು ತಿಂಗಳ ಗಡುವು ನೀಡಿ,
ನಿಗದಿತ ಅವಧಿಯೊಳಗೆ ಒಂದಾವರ್ತಿ
ಅರ್ಜಿ ಸಲ್ಲಿಸಲು ಅವಕಾಶ
ಕೊಡುವಂತೆ
ಮುಖ್ಯಮಂತ್ರಿಯವರು ಮೌಖೀಕ
ಆದೇಶ ಕೊಟ್ಟಿರುವ ಹಿನ್ನೆಲೆಯಲ್ಲಿ
ಕ್ರಮ ಜರುಗಿಸಲಾಗುತ್ತಿದೆ ಎಂದರು.
6 ತಿಂಗಳಲ್ಲಿ ಕಾಮಗಾರಿ ಪೂರ್ಣ:
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ
ಅಭಿಯಾನ ಯೋಜನೆಯಡಿ
ಕೈಗೆತ್ತಿಕೊಳ್ಳಲಾಗಿರುವ ಶಾಲಾ
ಕಟ್ಟಡ ನಿರ್ಮಾಣದ ಚಾಲ್ತಿ
ಕಾಮಗಾರಿಗಳನ್ನು ಮುಂದಿನ 6
ತಿಂಗಳಲ್ಲಿ
ಪೂರ್ಣಗೊಳಿಸಲಾಗುವುದು
ಎಂದು ಇದೇ ವೇಳೆ ಸಚಿವರು
ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ ಪ್ರಶ್ನೆಗೆ
ಉತ್ತರಿಸಿದರು.
Comments
Post a Comment