ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ : ಎಚ್.ಆಂಜನೇಯ
ಬೆಂಗಳೂರು, ಡಿ.29-ರಾಜ್ಯದ ಎಲ್ಲಾ
ಹೋಬಳಿಗಳಲ್ಲೂ ಮುಂದಿನ ಶೈಕ್ಷಣಿಕ
ವರ್ಷದಿಂದ ವಸತಿ ಶಾಲೆಯನ್ನು
ಪ್ರಾರಂಭಿಸಲಾಗುವುದು ಎಂದು ಸಮಾಜ
ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಪ್ರತಿ ಹೋಬಳಿಗೆ ತಲಾ ಒಂದು ವಸತಿ ಶಾಲೆ
ಪ್ರಾರಂಭಿಸಲಾಗುವುದು. ಪ್ರತಿ ಶಾಲೆಗೆ 10 ಎಕರೆ
ಪ್ರದೇಶ, 15 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ
ಕಲ್ಪಿಸಲಾಗುವುದು. ಜತೆಗೆ ಅಗತ್ಯ ಸಿಬ್ಬಂದಿ
ನೇಮಕ ಮಾಡಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣ
ಮಾಡಲಾಗುವುದು ಎಂದು ಹೇಳಿದರು. ವಸತಿ ಶಾಲೆಗಳ
ಶಿಕ್ಷಣವನ್ನು ದ್ವಿತೀಯ ಪಿಯುಸಿವರೆಗೆ
ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ
100 ವಸತಿ ಶಾಲೆಗಳ ಪ್ರಾರಂಭಕ್ಕೆ ಸಿದ್ಧತೆ
ನಡೆಸಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲಾ
ಹೋಬಳಿಗಳಲ್ಲೂ ವಸತಿ ಶಾಲೆ ಪ್ರಾರಂಭಿಸಲಾಗುವುದು
ಎಂದು ಆಂಜನೇಯ ತಿಳಿಸಿದರು.
ವಾಸ್ತವ್ಯ:
ಈ ಬಾರಿಯ ಹೊಸ ವರ್ಷವನ್ನು
ಅರಣ್ಯ ವಾಸಿಗಳ ಹಾಡಿಯಲ್ಲಿ ವಾಸ್ತವ್ಯ ಹೂಡುವ
ಮೂಲಕ ಆಚರಿಸಲು ಆಶಿಸಿದ್ದು, ಉತ್ತರ ಕನ್ನಡ
ಜಿಲ್ಲೆಯ ಹಳಿಯಾಳದಲ್ಲಿನ ವಾಡಾದ ಸಿದ್ದಿ
ಸಮುದಾಯದ ಹಾಡಿಯಲ್ಲಿ ಆಚರಿಸಲಾಗುವುದು.
ಡಿ.31ರಂದು ವಾಡಾದ ಹಾಡಿಯಲ್ಲಿ ವಾಸ್ತವ್ಯ
ಹೂಡಿ ಜಿಲ್ಲೆಯಲ್ಲಿರುವ ಎಲ್ಲ ಬುಡಕಟ್ಟು
ಜನಾಂಗ ಮತ್ತು ಸಿದ್ದಿ ಜನಾಂಗದವರ ಸಭೆ
ನಡೆಸಿ ಸಮಸ್ಯೆ ಆಲಿಸಿ ಹಲವು ಸೌಲಭ್ಯ
ವಿತರಿಸಲಾಗುವುದು ಎಂದರು.
ವಾಡಾದ ಸಿದ್ದಿ ಜನಾಂಗದ ಸಾವೇರ ಕೈತಾನ್ ಗಾಡಿ ಹಾಗೂ
ಕ್ಲೇರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿ
ಹೊಸವರ್ಷ ಸ್ವಾಗತಿಸಲಾಗುವುದು. ಗಿರಿಜ
ಸಮುದಾಯಕ್ಕೆ ಭೂಮಿ ಹಕ್ಕು, ವಾಸಸ್ಥಾನಗಳಿಗೆ ಮೂಲ
ಸೌಕರ್ಯ, ನಿರುದ್ಯೋಗ ನಿವಾರಣೆ, ತರಬೇತಿ, ಸಾಲ,
ಪೌಷ್ಠಿಕ ಆಹಾರ ಮುಂತಾದ ಯೋಜನೆಗಳನ್ನು
ಜಾರಿಗೊಳಿಸಲಾಗುತ್ತದೆ ಎಂದು
ಹೇಳಿದರು. ಸಿದ್ದಿ ಜನಾಂಗದ ಜನಸ್ಪಂದನಾ
ಸಭೆಗೆ ಭಾರೀ ಕೈಗಾರಿಕೆ ಸಚಿವ
ಆರ್.ವಿ.ದೇಶಪಾಂಡೆ ಸೇರಿದಂತೆ ಜಿಲ್ಲೆಯ
ಸಂಸದರು, ಶಾಸಕರು, ಜನಪ್ರತಿನಿಧಿಗಳನ್ನು
ಆಹ್ವಾನಿಸಲಾಗಿದೆ ಎಂದರು.
Comments
Post a Comment