ಸಿಇಟಿ: ಇಂದಿನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ.
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2016-17ನೇ ಸಾಲಿನ ವೈದ್ಯ, ದಂತ ವೈದ್ಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರಂಸೈನ್ಸ್, ಬಿ-ಫಾರ್ಮಾ, ಫಾರ್ಮಾ-ಡಿ ಮತ್ತಿತರ ವೃತ್ತಿಪರ ಪದವಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಪ್ರವೇಶಾರ್ಹತೆಯ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡುವ ಕುರಿತು ಮಾರ್ಗದರ್ಶನ ನೀಡುವ ಮಾಹಿತಿ ಪುಸ್ತಿಕೆಯನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಜ.13ರಿಂದ ಫೆ.13ರವರೆಗೆ ಒಂದು ತಿಂಗಳ ಕಾಲಾವಧಿ ಇದೆ. ಅಭ್ಯರ್ಥಿಗಳು ಮಾರ್ಗಸೂಚಿಯನ್ನು ಓದಿ ಖಾಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡುವ ಬಗ್ಗೆ ಪೂರ್ಣ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡ ನಂತರವೇ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಲು ಸೂಚಿಸಲಾಗಿದೆ.
ಅರ್ಜಿ ತುಂಬುವಾಗ ಎಚ್ಚರಿಕೆ ವಹಿಸಿ
ಅರ್ಜಿಯಲ್ಲಿ ಅಭ್ಯರ್ಥಿ ನೀಡುವ ವಿವರ ಅವಲಂಬಿಸಿ ಮುಂದಿನ ಸೀಟು ಹಂಚಿಕೆಯ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆ ಸಲ್ಲಿಸಿದ ವಿವರ ಬದಲಾಯಿಸಲು ಅವಕಾಶವಿಲ್ಲ. ಚಲನ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವನ್ನು ನಿಗದಿತ ಬ್ಯಾಂಕ್‌ನಲ್ಲಿ ಪಾವತಿಸುವ ಕೊನೆಯ ದಿನ ಫೆ.15 ಮತ್ತು ಪ್ರವೇಶಪತ್ರವನ್ನು ಏ.15ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕರ್ನಾಟಕದ ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 650 ರೂ. (ಪ.ಜಾ, ಪ.ಪಂ, ಪ್ರವರ್ಗ-1ಕ್ಕೆ 500 ರೂ.) ಅರ್ಜಿ ಶುಲ್ಕ ಪಾವತಿಸಬೇಕು.
ಪಿಯು ಮಂಡಳಿಯಿಂದ ವಿವರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಿವರಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಇದೇ ಮೊದಲ ಬಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಡೆಯಲಿದೆ. ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ತನ್ನ ವಿದ್ಯಾರ್ಥಿ ಸಂಖ್ಯೆ ಭರ್ತಿ ಮಾಡಿದ ತಕ್ಷಣ ಅರ್ಜಿಯಲ್ಲಿ ಈ ವಿವರ ಗೋಚರಿಸುತ್ತದೆ. ಅದರಲ್ಲಿ ಏನಾದರೂ ತಪ್ಪು/ಬದಲಾವಣೆ ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಳವಾಗಿ ಮಾರ್ಗದರ್ಶನ ಮಾಡಲು ಮಾಹಿತಿ ಪುಸ್ತಿಕೆಯನ್ನು ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಿರುವ ಮಾಹಿತಿ ಗಮನಿಸುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್ ವಿಳಾಸ: http://kea.kar.nic.in
Comments
Post a Comment