ಪದ್ಮ ಪ್ರಶಸ್ತಿ ಕರ್ನಾಟಕದವರು:
ಪದ್ಮ ಪ್ರಶಸ್ತಿ ಕರ್ನಾಟಕದವರು
26 Jan, 2016
ಶ್ರೀ ಶ್ರೀ ರವಿಶಂಕರ ಗುರೂಜಿ (ಅಧ್ಯಾತ್ಮ)
ತಮಿಳುನಾಡು ಮೂಲದ ಶ್ರೀ ಶ್ರೀ ರವಿಶಂಕರ ಗುರೂಜಿ ಬೆಂಗಳೂರಿನಲ್ಲಿ 1981ರಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ಜಗತ್ತಿನಾದ್ಯಂತ ಯೋಗ ಹಾಗೂ ಅಧ್ಯಾತ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ.
ಒತ್ತಡಮುಕ್ತ, ಹಿಂಸೆಮುಕ್ತ ಸಮಾಜ ನಿರ್ಮಾಣದ ಕನಸು ಹೊಂದಿರುವ ಅವರು, ಶಾಂತಿ ಸ್ಥಾಪನೆಗಾಗಿಯೂ ಶ್ರಮಿಸುತ್ತಿದ್ದಾರೆ. ದೇಶ–ವಿದೇಶಗಳ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಗುರೂಜಿ ಹೊಂದಿದ್ದಾರೆ. 155 ದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮ ನಡೆಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಲು ಅಂತರರಾಷ್ಟ್ರೀಯ ದತ್ತಿ ಸಂಸ್ಥೆಯೊಂದನ್ನೂ ಸ್ಥಾಪಿಸಿದ್ದಾರೆ. ಇದರ ಕೇಂದ್ರ ಸ್ಥಾನ ಜಿನಿವಾದಲ್ಲಿದೆ.
ವಾಸುದೇವ ಕಳಕುಂಟೆ ಅತ್ರೆ (ವಿಜ್ಞಾನ ಮತ್ತು ತಂತ್ರಜ್ಞಾನ)
ದೇಶದ ಪ್ರಖ್ಯಾತ ವಿಜ್ಞಾನಿಯಾಗಿರುವ ಅತ್ರೆಯವರು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಅಧ್ಯಕ್ಷರು. ಅವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. 1939ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಯುವಿಸಿಇಯಲ್ಲಿ ಬಿ.ಇ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) ಪದವಿ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸ್ನಾತಕೋತ್ತರ ಪದವಿ ಪಡೆದರು. 2000ರಲ್ಲಿ 'ಪದ್ಮಭೂಷಣ' ಗೌರವಕ್ಕೆ ಪಾತ್ರರಾಗಿದ್ದರು.
*
ಪದ್ಮಶ್ರೀ ಪುರಸ್ಕೃತರು
ಪ್ರೊ.ದೀಪಂಕರ್ ಚಟರ್ಜಿ (ವಿಜ್ಞಾನ ಮತ್ತು ತಂತ್ರಜ್ಞಾನ)
ಮೂಲತಃ ಕೋಲ್ಕತ್ತದ ಪ್ರೊ. ದೀಪಂಕರ್ ಚಟರ್ಜಿ, ಜಾಧವಪುರ ವಿವಿ ಮಾತ್ರವಲ್ಲದೆ ನ್ಯೂಯಾರ್ಕ್‌ನ ಅಲ್ಬರ್ಟ್ ಐನ್‌ಸ್ಟೈನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಅವರು, ಮುಂದೆ ಇದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾದರು. ಜೈವಿಕಭೌತ ರಸಾಯನಶಾಸ್ತ್ರದಲ್ಲಿ ಅವರು ವಿಶೇಷ ಪರಿಣತಿ .
*
ಮಧು ಪಂಡಿತ ದಾಸ (ಸಮಾಜ ಸೇವೆ)
ಬೆಂಗಳೂರಿನ ಇಸ್ಕಾನ್ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಮಧು ಪಂಡಿತ ದಾಸ ಅವರು (ಮೂಲ ಹೆಸರು ಎಸ್.ಮಧುಸೂದನ್) 1980ರಲ್ಲಿ ಮುಂಬೈನ ಐಐಟಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರರು. ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಲು ನಿರ್ಧರಿಸಿದ ಅವರು, ಎಂ.ಟೆಕ್ ಅಧ್ಯಯನ ಅರ್ಧಕ್ಕೆ ನಿಲ್ಲಿಸಿ, ಇಸ್ಕಾನ್ ಸೇರಿದರು. ₹ 38 ಕೋಟಿ ದೇಣಿಗೆ ಸಂಗ್ರಹಿಸಿ, ರಾಜಾಜಿನಗರದ ಗುಡ್ಡದ ಮೇಲೆ ದೇವಾಲಯ ಸಂಕೀರ್ಣ ಕಟ್ಟಿದರು. ಅವರು ಆರಂಭಿಸಿದ ಅಕ್ಷಯ ಪಾತ್ರೆ ಪ್ರತಿಷ್ಠಾನ ನಿತ್ಯ 15 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ.
*
ಎಸ್.ಎಲ್.ಭೈರಪ್ಪ (ಸಾಹಿತ್ಯ)
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಲಿಂಗಣ್ಣಯ್ಯ ಅವರ ಪುತ್ರ ಭೈರಪ್ಪ ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರು. ಗೃಹಭಂಗ, ಪರ್ವ, ದಾಟು, ಸಾಕ್ಷಿ, ಸಾರ್ಥ, ತಂತು, ಆವರಣ, ವಂಶವೃಕ್ಷ ಅವರ ಜನಪ್ರಿಯ ಕಾದಂಬರಿಗಳು. ಇದುವರೆಗೆ 23 ಕಾದಂಬರಿಗಳನ್ನು ರಚಿಸಿದ್ದಾರೆ. ಈಚೆಗೆ ಅವರ 'ದಾಟು' ಕಾದಂಬರಿಯು ಸಂಸ್ಕೃತಕ್ಕೆ 'ಉಲ್ಲಂಘನಂ' ಎಂದು ಅನುವಾದಗೊಂಡಿದೆ. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ, ನಿವೃತ್ತಿ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ.
*
ಡಾ.ಮೈಲಸ್ವಾಮಿ ಅಣ್ಣಾದೊರೈ (ಬಾಹ್ಯಾಕಾಶ ವಿಜ್ಞಾನ)
ತಮಿಳುನಾಡು ಮೂಲದವರು. ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಅವರು 1982ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ (ಇಸ್ರೊ) ಸೇರಿದರು. ಪ್ರಸ್ತುತ ಇಸ್ರೊದ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಮಂಗಳಯಾನ' ಯೋಜನೆಯ ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
*
ಡಾ.ಎಂ.ಎಂ.ಜೋಶಿ (ನೇತ್ರತಜ್ಞ)
ನೇತ್ರತಜ್ಞ, 81ರ ಇಳಿವಯಸ್ಸಿನಲ್ಲಿಯೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವ ಡಾ.ಎಂ.ಎಂ. ಜೋಶಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಕಾಖಂಡಕಿಯವರು. ಮುಂಬೈನಲ್ಲಿ ಎಂ.ಎಸ್. ಮುಗಿಸಿದ ಅವರು ಹುಬ್ಬಳ್ಳಿಯನ್ನು ಕಾರ್ಯಕ್ಷೇತ್ರ ಮಾಡಿಕೊಂಡರು. ಇಲ್ಲಿಯವರೆಗೆ 800 ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದು, 1.70 ಲಕ್ಷ ಜನರ ತಪಾಸಣೆ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಹಾಗೂ ಶಿರಸಿಯಲ್ಲಿ ಆಸ್ಪತ್ರೆಗಳನ್ನು ತೆರೆದಿದ್ದಾರೆ.
*
ಜಾನ್ ಎಬ್ನೇಜರ್ (ಮೂಳೆ ತಜ್ಞ)
ಒಂದು ವರ್ಷದಲ್ಲಿ 108 ಪುಸ್ತಕ ಬರೆದು ಗಿನ್ನಿಸ್ ದಾಖಲೆ ನಿರ್ಮಿಸಿರುವ ಡಾ. ಜಾನ್ ಎಬ್ನೇಜರ್ ಅವರೊಬ್ಬ ಮೂಳೆಚಿಕಿತ್ಸಾ ತಜ್ಞ. ಶಸ್ತ್ರ ಚಿಕಿತ್ಸಕ, ಲೇಖಕ, ಉದ್ಯಮಿ, ಸಾಮಾಜಿಕ ಕಾರ್ಯಕರ್ತ... ಡಾ. ಜಾನ್ ಅವರ ವ್ಯಕ್ತಿತ್ವಕ್ಕೆ ಹೀಗೆ ಹಲವು ಮುಖಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಪ್ರತಿಷ್ಠಿತ ಅಮೆರಿಕ ಮೂಳೆ ಶಸ್ತ್ರಚಿಕಿತ್ಸಕರ ಸಂಘದಿಂದ ಅವರಿಗೆ ಪ್ರಶಸ್ತಿ ಸಂದಿದೆ. 213 ವೈದ್ಯಕೀಯ ಕೃತಿ ರಚಿಸಿರುವ ಅವರು ಬೆಂಗಳೂರಿನಲ್ಲಿ ಆಸ್ಪತ್ರೆ ನಡೆಸುತ್ತಿದ್ದಾರೆ.
*
ಪ್ರತಿಭಾ ಪ್ರಹ್ಲಾದ್ (ನೃತ್ಯ)
ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಹಾಗೂ ಕೂಚಿಪುಡಿ ಕಲಾವಿದೆ ಪ್ರತಿಭಾ ಪ್ರಹ್ಲಾದ್. ದೇಶವಿದೇಶಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಅವರು ಪ್ರೊ.ಯು.ಎಸ್.ಕೃಷ್ಣ ರಾವ್ ಹಾಗೂ ಚಂದ್ರಭಾಗಾ ದೇವಿ ಅವರಲ್ಲಿ ಭರತನಾಟ್ಯ ಕಲಿತರು. ಸುನಂದಾ ದೇವಿ ಅವರ ಬಳಿಯಲ್ಲಿ ಕೂಚಿಪುಡಿ ನೃತ್ಯ ಕಲಿತರು. ಹಲವು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.
*
ರಾಜಮೌಳಿ (ಸಿನಿಮಾ)
ರಾಯಚೂರಿನವರಾದ ಎಸ್.ಎಸ್. ರಾಜಮೌಳಿ ಅವರು ಖ್ಯಾತ ಚಿತ್ರಕಥೆಗಾರ ಹಾಗೂ ನಿರ್ದೇಶಕ ವಿಜಯೇಂದ್ರ ಪ್ರಸಾದ್ ಅವರ ಪುತ್ರ. ಇವರು ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಾಗಿ ದೊಡ್ಡ ಹೆಸರು ಗಳಿಸಿದ್ದಾರೆ. 'ಮಗಧೀರ', 'ಈಗ' ಮತ್ತು ಇತ್ತೀಚಿನ 'ಬಾಹುಬಲಿ' ಭಾರಿ ಯಶಸ್ಸು ಗಳಿಸಿದ ಚಿತ್ರಗಳು.
*
ಡಾ.ಎಚ್.ಆರ್.ನಾಗೇಂದ್ರ (ಯೋಗ)
ಬೆಂಗಳೂರಿನ ವಿವೇಕಾನಂದ ಯೋಗ ಸಂಶೋಧನಾ ಕೇಂದ್ರದ ಮುಖ್ಯಸ್ಥರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು. ಯೋಗ ಗುರುಗಳಾಗಿ ಪ್ರಖ್ಯಾತರು.
*
ವೆಂಕಟೇಶ್ ಕುಮಾರ್ (ಸಂಗೀತ)
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಚನ ಗಾಯನ ಹಾಗೂ ದಾಸರ ಪದಗಳನ್ನು ಹಾಡುವ ಮೂಲಕ ಪ್ರಸಿದ್ಧಿ ಪಡೆದಿರುವ ಪಂಡಿತ್ ವೆಂಕಟೇಶ ಕುಮಾರ್ ಮೂಲತಃ ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರದವರು. ಗಾನಯೋಗಿ ಪುಟ್ಟರಾಜ ಗವಾಯಿಗಳ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸದ ನಂತರ ಆಕಾಶವಾಣಿಯ ಉನ್ನತ ಶ್ರೇಣಿ ಕಲಾವಿದರಾಗಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಇವರು ಸದ್ಯ ಧಾರವಾಡದಲ್ಲಿ ನೆಲೆಸಿದ್ದಾರೆ.
Comments
Post a Comment