ದೇವರ/ಜೇಡರ ದಾಸಿಮಯ್ಯ:-

ಜನನ ೧೧೬೫
ಸುರಪುರ ತಾಲ್ಲೋಕು ಮುದನೂರು
ಅಂಕಿತನಾಮ ರಾಮನಾಥ
ಸಂಗಾತಿ(ಗಳು) ದುಗ್ಗಳೆ

ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆ/ಸುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವನಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಡ ಸಾಧಕ. ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಈತನ ಸುಮಾರು ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ.
ಮೊಲೆ ಮೂಡಿ ಬಂದರೆ ಹೆಣ್ಣೆಂಬರು,
ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿಯುವಾತ್ಮನು
ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ
ಒಡಲುಗೊಂಡವ ಹಸಿವ:ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ
ಎಂದು ಸಾರುವಲ್ಲಿ ತೋರಿದ ಜನಪರ ಕಾಳಜಿ ಇಂದಿಗೂ ಆನ್ವಯಿಕ. ಶಿವ ಜಗತ್ತನ್ನೇ ವ್ಯಾಪಿಸಿಕೊಂಡಂತೆ, ಜಗತ್ತೇ ಶಿವನ ರೂಪ ಎಂಬ ನಿಲುವಿನೊಂದಿಗೆ, "ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನವಯ್ಯ. ಎಂದೆನ್ನುವ ದಾಸಿಮಯ್ಯನಲ್ಲಿ ಈ ಲೋಕವನ್ನು ನೋಡುವ ಕ್ರಮ ಹೊಸತನದಿಂದ ಕೂಡಿದೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024