ಅಭಿಮತ:- 30 ವರ್ಷಗಳ ನಂತರ ಸರ್ಕಾರಿ ಶಾಲೆಗಳು ಹೇಗಿರಬಹುದು?

ಮೈಸೂರು ದಸರಾ. ತೇರಲ್ಲಿ ಅಂಬಾರಿ. ಅದರ
ಮುಂದೆ ಸ್ತಬ್ಧ ಚಿತ್ರಗಳ ಸಾಲು.
ಜನಪದವಂತೂ ಸಂಪೂರ್ಣ ಕಣ್ಮರೆ.
ಎಲ್ಲದರಲ್ಲೂ ಆಧುನಿಕತೆ ಕಾಣಿಸುತ್ತಿತ್ತು. ನಾನು, ನನ್ನ
ಮಗ ಕುಳಿತು ನೋಡುತ್ತಿದ್ದೆವು. ಸಾರ್ವಜನಿಕ ಶಿಕ್ಷಣ
ಇಲಾಖೆ ರೂಪಿಸಿದ್ದ ಸ್ತಬ್ಧ ಚಿತ್ರ ನನ್ನ ಮಗನಿಗೆ ಆ
ಕರ್ಷಕವಾಗಿ ಕಾಣಿಸಿತು. ಒತ್ತೂತ್ತಾಗಿ ಕಟ್ಟಿದ ಮೂರು
ಕಟ್ಟಡಗಳು, ಅದರಲ್ಲಿ ಒಂದು ಹೆಂಚಿನ
ಕಟ್ಟಡ. ಗೊಡೆಯ ಹೊರಭಾಗದಲ್ಲಿ
ಗಾಂಧೀಜಿ, ಸುಭಾಷ್ಚಂದ್ರ ಬೋಸ್,
ನೆಹರು, ಪಟೇಲರು ಮುಂತಾದ ಗಣ್ಯರ
ಚಿತ್ರಗಳು, ಒಂದು ಕಡೆ ಮಗ್ಗಿ, ಕಾಗುಣಿತ, ಮುರಿದ
ಕಿಟಕಿಗಳು. ಕಟ್ಟಡದ ಮುಂದೆ ಕುರುಚಲು
ಗಿಡದಂತಹ ನಾಲ್ಕಾರು ಗಿಡಗಳು...
ಅಪ್ಪ ಏನದು!
ನಾನು ತಣ್ಣಗೆ ಹೇಳಿದೆ ಸರ್ಕಾರಿ ಶಾಲೆ ಮಗಾ!
ಸರ್ಕಾರಿ ಶಾಲೆನಾ, ಹಾಗಂದ್ರೇನು?
ಈಗ ನಿನ್ನ ಶಾಲೆ ಇದೆಯಲ್ವಾ? ಅದೇ ರೀತಿ
ಹಿಂದೆ ಸರ್ಕಾರ ಶಾಲೆಗಳನ್ನು ನಡೆಸ್ತಿತ್ತು. "ಹೌದಾ?
ಹಾಗಾದರೆ ಈಗ ಯಾಕಿಲ್ಲ' ಅಂದ. ಇಲ್ಲಪ್ಪ
ಎಲ್ಲ ಮುಚ್ಚಿಬಿಟ್ರಾ. 2-3 ಶಾಲೆ ಇದಾವೆ ಅಂತ
ಕೇಳಿದೀನಿ. ಒಂದು ಮೈಸೂರು, ಇನ್ನೆರಡು
ಕಾರವಾರ ಮತ್ತು ಕಲಬುರಗಿಯಲ್ಲಿವೆಯಂತೆ.
ನನ್ನ ಮಗನಿಗೆ ಕಾತುರ ಜಾಸ್ತಿಯಾಯಿತು. "ಹಾಗಾದರೆ
ಆವಾಗ ಇವು ಎಲ್ಲಾ ಕಡೆ ಇದ್ವಾ ಅಪ್ಪ' ಅಂದ.
ಹೂಂ ಅಂದೆ. ನಮ್ಮೂರ
ಹೊರಗೆ ದನದ ಆಸ್ಪತ್ರೆ, ಗ್ರಾಮ
ಲೆಕ್ಕಿಗರ ಆಫೀಸ್ ಇದೆಯಲ್ಲಾ, ಅದೇ
ನಮ್ಮೂರ ಶಾಲೆ. ನಾನೂ ಅಲ್ಲೇ ಓದಿದ್ದು. ನಮ್ಮ
ಕಾಲಕ್ಕೆ ಆಗಲೇ ಶಾಲೆ ಮುಚ್ಚೋಕೆ ಸ್ಟಾರ್ಟ್ ಮಾಡಿದ್ರು.
ನಮಗೆ ಎಲ್ಲಾ ಪಾಠವನ್ನೂ ಒಬ್ಬರೇ ಮಾಡ್ತಿದ್ರು.
ಯಾಕಂದ್ರೆ ನಾವು 20 ಮಂದಿಗೆ,
1ರಿಂದ 7ನೇ ತರಗತಿಗೆ ಒಬ್ಬರೇ ಮೇಷ್ಟ್ರು.
ಪಾಪ ಬಹಳ ಚಂದ ಕಲಿಸ್ತಿದ್ರು.
ಬೆಳಗಿನಿಂದ ಸಂಜೆಯವರೆಗೂ ಪಾಠ
ಹೇಳ್ತಿದ್ರು. ಅದರ ಮಧ್ಯೆ ಶಾಲೆಯ ಕೆಲಸಗಳನ್ನು
ತಾವೇ ಮಾಡುತ್ತಿದ್ದರು. ನನಗಿವತ್ತು ಇಷ್ಟು ಚಂದ
ಕನ್ನಡ ಮಾತಾಡೋಕೆ ಬರುತ್ತಿದ್ದರೆ, ಜೀವನದ
ಶಿಸ್ತು, ಧೈರ್ಯ, ಜೀವನದ ಕಾಳಜಿ, ಬದುಕುವ
ಛಲ ಇವೆಲ್ಲ ಬಂದಿದ್ದರೆ ಆ ಕನ್ನಡ ಶಾಲೆ
ಮತ್ತು ಅಲ್ಲಿನ ಮಾಸ್ತರ್ ಕಾರಣ ಎಂದೆ.
ಅಪ್ಪಾ, ಅಲ್ಲಿ ಕನ್ನಡ ಕಲಿಸ್ತಿದ್ರಾ? ಅವನ
ಮಾತಲ್ಲಿ ಆಶ್ಚರ್ಯವಿತ್ತು. ಹೌದು! ಎಲ್ಲವೂ ಕನ್ನಡ
ಪಾಠ, ಆಟ, ಭಾವನೆ, ಮೌಲ್ಯ, ಬದುಕು ಎಲ್ಲವೂ
ಕನ್ನಡವಾಗಿತ್ತು. "ಅಪ್ಪನಂಗೆ ಶಾಲೆಯಲ್ಲಿ
ವಾರಕ್ಕೆ ಓನ್ಲಿ 3 ಪೀರಿಯಡ್ಸ್ ಕನ್ನಡ
ಕಲಿಸ್ತಾರೆ. ನೀವು ಎಷ್ಟು ಲಕ್ಕಿ ಅಪ್ಪ.
ಎಲ್ಲದನ್ನೂ ಕನ್ನಡದಲ್ಲೇ ಓದಿ
ಕಲ್ತಿದೀರಿ. ಆದರೆ ಈಗ ನಮಗ್ಯಾಕೆ ಈ
ಶಿಕ್ಷೆ? ಕಲೀತೀವಿ ಅಂದ್ರೂ
ಕಲಿಸ್ತಿಲ್ಲ. ಅಪ್ಪ ಸರ್ಕಾರಿ ಶಾಲೆಗಳು ಹೇಗಿದ್ದವು?
ನಮ್ಮ ಶಾಲೆಗಿಂತ ಚಂದವಿದ್ದವೇ
ಅಂತ ಕೇಳಿದ.
ನೋಡೋಕೆ ನಿಮ್ಮ ಶಾಲೆಯ ಹಾಗೆ ಅದ್ಧೂರಿತನ
ಇರಲಿಲ್ಲ. ಆದರೆ ಜ್ಞಾನದಲ್ಲಿ ಅದ್ಧೂರಿತನವಿತ್ತು.
ಅಂಕಗಳಿಗಿಂತ ಆ ಶಾಲೆಯಲ್ಲಿ ಬದುಕನ್ನು
ಕಲಿಸಲಾಗುತ್ತಿತ್ತು. ಹಳ್ಳಿಯ ವಾತಾವರಣದ
ಸೊಗಡು ತರಗತಿಯನ್ನು
ರೂಪಿಸಿಸುತ್ತಿತ್ತು. ಮನೆಯ ಕೆಲಸ ಮಾಡುತ್ತಲೇ ಮಕ್ಕಳು
ಶಾಲೆಯ ಪಾಠ ಕಲಿಯುತ್ತಿದ್ದರು. ಪ್ರತಿಭಾವಂತ
ಶಿಕ್ಷಕರಿದ್ದರು, ಪ್ರಾಮಾಣಿಕವಾಗಿ ಕೆಲಸ ಮಾಡಿ
ಏಕಪಾತ್ರಾಭಿನಯದಂತೆ ಎಲ್ಲವನ್ನೂ
ನಿಭಾಯಿಸುತ್ತ ಮಕ್ಕಳಿಗೆ ಆಟ ಪಾಠ ಹೇಳಿಕೊಡುತ್ತಿದ್ದರು.
ಆರಂಭದ ತರಗತಿಗಳಿಗೆ ನಲಿ ಕಲಿ, ಆಮೇಲೆ ಕಲಿ
ನಲಿ, ಚಟುವಟಿಕೆ ಆಧರಿತ ಬೋಧನೆ, ಪ್ರತಿಭಾ
ಕಾರಂಜಿ, ಕಲಿಕಾ ಸಂತೆ, ವಸ್ತು ಪ್ರದರ್ಶನ,
ವಿಜ್ಞಾನ ಮೇಳ, ಉಚಿತ ಪ್ರವಾಸ,
ಕ್ರೀಡಾಕೂಟ ಹೀಗೆ ಅನೇಕ
ಆಕರ್ಷಣೆಗಳು ಮಕ್ಕಳಿಗಾಗಿದ್ದವು. ಮಕ್ಕಳಿಗೆ
ತುಂಬಾ ಸ್ವಾತಂತ್ರÂವಿತ್ತು. ಶಿಕ್ಷಕರು ಕೂಡ
ಮಕ್ಕಳೊಂದಿಗೆ ಬಹಳ ಬೆರೆಯುತ್ತಿದ್ದರು.
ಶಾಲೆಯ ಪಾಠ ಅನ್ನೋದಕ್ಕಿಂತ ಅದೊಂದು
ಜೀವನ ಪಾಠವಾಗಿತ್ತು.
ಅಪ್ಪ, ಶಾಲೆ ಅಷ್ಟೊಂದು
ಚೆನ್ನಾಗಿದ್ರೆ ಯಾಕೆ ಮುಚ್ಚಿಹೋದವು?
ಸರ್ಕಾರ, ಪೋಷಕರು, ಖಾಸಗಿಯವರು ಎಲ್ಲರೂ ಸೇರಿ ಆ
ಶಾಲೆಗಳ ಮೇಲೆ ಕಲ್ಲು ಎತ್ತಿ ಹಾಕಿದರು. ಸರ್ಕಾರ
ಗಲ್ಲಿಗಲ್ಲಿಗೆ ಒಂದರಂತೆ ಖಾಸಗಿ ಶಾಲೆಗೆ
ಅನುಮತಿ ಕೊಟ್ಟಿತು. ಆ ಶಾಲೆಗಳು ಒಂದೊಳ್ಳೆ
ಹೆಸರಿಟ್ಟುಕೊಂಡು ದುಡ್ಡಿನ ವ್ಯವಹಾರಕ್ಕೆ
ಶುರುವಿಟ್ಟುಕೊಂಡವು. ಮಕ್ಕಳಿಗೆ ಒಳ್ಳೆ
ಯೂನಿಫಾರಂ, ಶೂ, ಟೈ, ಬೆಲ್ಟ್, ರಾಶಿ ರಾಶಿ ಬುಕ್ಸ್,
ಪೋಷಕರ ಕಿವಿಗೆ ಇಂಪಾಗೋ ಒಂದೆರಡು
ಇಂಗ್ಲಿಷ್ ಪದಗಳು ಇವುಗಳನ್ನೆ ಬಂಡವಾಳ
ಮಾಡಿಕೊಂಡರು. ಪೋಷಕರು ಮರುಳಾಗಿ ತಮ್ಮ
ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸಿ, ದೊಡ್ಡ
ಮೊತ್ತದ ಹಣ ಕಟ್ಟಿ
ಇಂಗ್ಲಿಷ್ ಶಾಲೆಗೆ ಸೇರಿಸೋಕೆ ಶುರುಮಾಡಿದರು. ಅವರಿಗೆ
ಮಗುವಿನ ಭಾವನೆ, ಜೀವನ ಪಾಠಕ್ಕಿಂತ
ಇಂಗ್ಲಿಷ್, ಅಂಕಗಳು, ಕೊನೆಗೊಂದು
ಲಕ್ಷ ಎಣಿಸೋ ನೌಕರಿ ಅಷ್ಟೇ ಗುರಿಯಾಗಿತ್ತು.
ರಾಜಕೀಯ ವ್ಯಕ್ತಿಗಳು, ಕಾನೂನು
ರೂಪಿಸುವವರ್ಯಾರೂ ಇದರ ಬಗ್ಗೆ ದನಿ ಎತ್ತಲಿಲ್ಲ.
ಬದಲಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ
ಸೇರಿಸಲಾರಂಭಿಸಿದರು. ಸರ್ಕಾರಿ ಶಾಲೆಗೆ ಕಡುಬಡವರು
ಮಾತ್ರ ಹೋಗುತ್ತಿದ್ದರು. ಇಷ್ಟೇ ಆಗಿದ್ದರೆ ಕೆಲವು
ಸರ್ಕಾರಿ ಶಾಲೆಗಳಾದರೂ ಉಳಿಯುತ್ತಿದ್ದವೋ ಏನೋ. ಆದರೆ,
ಆರ್ಟಿಇ ಅಂತ ಮಾಡಿಕೊಂಡು ಪ್ರತಿವರ್ಷ
ಶೇ.25ರಷ್ಟು ಮಕ್ಕಳನ್ನು ಸರ್ಕಾರವೇ ಖಾಸಗಿ ಶಾಲೆಗಳಿಗೆ
ಸೇರಿಸುವುದಕ್ಕೆ ಆರಂಭಿಸಿತು. ಆಮೇಲೆ
ಮೊರಾರ್ಜಿ, ಕಿತ್ತೂರು ರಾಣಿ
ಚೆನ್ನಮ್ಮ, ನವೋದಯ ಮುಂತಾದ ಶಾಲೆಗಳಿಗೆ
ಒಂದಷ್ಟು ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಹೋದರು.
ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಡಿಮೆಯಾದಂತೆ
ಪೋಷಕರು ಗಾಬರಿಯಾಗಿ ತಮ್ಮ ಮಕ್ಕಳನ್ನೂ ಸರ್ಕಾರಿ
ಶಾಲೆ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿಬಿಟ್ಟರು. ಉಳಿದ
ಮೂರು ಮತ್ತೂಂದು ಮಕ್ಕಳಿಗೆ ಶಾಲೆ ನಡೆಸುವುದು
ಆರ್ಥಿಕ ಹೊರೆ ಅಂತ ಹೇಳಿ
ಸರ್ಕಾರ ಆ ಮಕ್ಕಳಿಗೆ ಹಾಗೂ ಅಲ್ಲಿನ ಶಿಕ್ಷಕರಿಗೆ ಬೇರೆ
ವ್ಯವಸ್ಥೆ ಮಾಡಿ ಸರ್ಕಾರಿ ಶಾಲೆಗೆ ದಪ್ಪ
ಬೀಗ ಜಡಿದು ಕೈತೊಳೆದುಕೊಂಡಿತು.
ಶಾಲೆಗಳು ಹೀಗೆಲ್ಲಾ ಆಗ್ತಿದ್ರೂ ಶಿಕ್ಷಣ
ಇಲಾಖೆ ಸುಮ್ಮನೇ ಇತ್ತಾ?
ಸುಮ್ಮನೆ ಕೂರಲಿಲ್ಲ. ನೆಪಕ್ಕೆ ಏನೇನೋ ಕಾರ್ಯಕ್ರಮ
ಮಾಡು¤. ಮಧ್ಯಾಹ್ನ ಬಿಸಿಯೂಟ ಕೊಟ್ಟಿತು. ಅದರ
ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ವಾರವಿಡೀ ಚಿತ್ರಾನ್ನ, ತರಕಾರಿ ಇಲ್ಲದ ಸಾರು
ತಿಂದು ಮಕ್ಕಳು ಮುಖ ಕಿವುಚುತ್ತಿದ್ದರು.
ನಂತರ ಹಾಲು ಕೊಟ್ಟರು. ಆ ಪೌಡ್ರು ಹಾಲನ್ನು
ಮಕ್ಕಳು ಕುಡಿಯುತ್ತಿದ್ದುದು ಅಷ್ಟಕ್ಕಷ್ಟೆ. ಸೈಕಲ್
ಕೊಟ್ಟರು. ಅವು ಒಂದು ವರ್ಷ ಬಾಳಿಕೆ
ಬಂದ್ರೆ ಪುಣ್ಯ. ಬುಕ್ ಕೊಟ್ಟರು, ಬಟ್ಟೆ
ಕೊಟ್ಟರು, ಮಕ್ಕಳಿಗೆ ಅಂತ ರಾಶಿ ರಾಶಿ
ಕಾರ್ಯಕ್ರಮ ತಂದರು. ಯಾವುದೂ
ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ. ಸರ್ಕಾರಿ
ಶಾಲೆಗಳನ್ನು ಖಾಸಗಿ ಶಾಲೆಗಳ ಎದುರಿಗೆ
ಸ್ಪರ್ಧಿಸುವಂತೆ ಗುಣಮಟ್ಟ ವರ್ಧನೆ ಮಾಡುವ
ಬದಲು ಅಳುವ ಮಗುವಿಗೆ ಚಾಕಲೇಟ್
ನೀಡುವಂತೆ ಅದು ಇದು ಸೌಲಭ್ಯ
ನೀಡಿ ಸುಮ್ಮನಿರಿಸುವ ಪ್ರಯತ್ನವಾಯಿತು.
ಶಿಕ್ಷಕರಿಗೆ ಸರಿಯಾಗಿ ಪಾಠ ಮಾಡಲಿಕ್ಕೂ ಬಿಡದೇ ಸರ್ಕಾರ
ಅವರನ್ನು ಕಾಡಿತು. ಅವರಿಗೆ ಅಡುಗೆ ಕೆಲಸದಿಂದ
ಹಿಡಿದು ಕುರಿ, ಕೋಳಿ ಗಣತಿಯವರೆಗೆ ಎಲ್ಲಾ ಕೆಲಸ
ನೀಡಿ, ಕೊನೆಗೆ ಟೈಂ ಇದ್ದರೆ ಪಾಠ
ಮಾಡುವಂತೆ ಮಾಡಿತು. ಪೋಷಕರು ಕೂಡ
ಸಮೂಹಸನ್ನಿಗೆ ಒಳಗಾಗಿ ಖಾಸಗಿ ಶಾಲೆಯೆಂದರೆ
ಅದೊಂದು ಅದ್ಬುತ ಎಂಬಂತೆ
ತಮ್ಮ ಮಕ್ಕಳನ್ನು ಅಲ್ಲಿಗೇ ಸೇರಿಸಿ, ಕೊನೆಗೆ ಸರ್ಕಾರಿ
ಶಾಲೆ ಮುಚ್ಚಿ ಹಾಕಿದರು.
ನನ್ನ ಮಗ ಇದೊಂದು ನಾಗರೀಕತೆಯ
ಅವಸಾನದ ಕಥೆಯೋ ಎನ್ನುವಂತೆ ಆಲಿಸುತ್ತಿದ್ದ.
ಹೌದು, ಇದು ಅಕ್ಷರ
ನಾಗರೀಕತೆಯೊಂದರ
ಅವಸಾನದ ಕತೆ. ದಸರೆಯಲ್ಲಿ ಆ ಸ್ತಬ್ಧಚಿತ್ರಕ್ಕೆ
ಬಹುಮಾನ ಬಂತು. ಅಷ್ಟೇ ಅಲ್ಲ,
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ
ಪರೇಡ್ಗೆ ಕಳುಹಿಸಿದರೂ ಬಹುಮಾನ ಬರಬಹುದು
ಅಂದೆ. ಮಗ ನನ್ನನ್ನು ನೋಡಿ ನಕ್ಕ.
- ಸದಾಶಿವ್ ಸೊರಟೂರು,
ಚಿಂತಾಮಣಿ

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26 for JAMAKHANDI BLOCK