ಭಾಗ್ಯಗಳಿಲ್ಲದ ಹೊತ್ತಲ್ಲಿ ಮೇಷ್ಟ್ರೇ ಭಾಗ್ಯದೇವತೆ*

_01 Sep 2016_

ಗುರು-ಶಿಷ್ಯರ ನಡುವೆ ತಾದಾತ್ಮ್ಯ ಏರ್ಪಡುವುದು ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು. ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿದಾಗ ಆಗುವ ಖುಶಿಯೇ ಬೇರೆ.ಗುರುದೃಷ್ಟಿಗೆ ಇರುವ ಕಾರುಣ್ಯದಿಂದಾಗಿ 'ಹರ ಮುನಿಯಲ್, ಗುರು ಕಾಯ್ವನ್' ಎಂಬ ಮಾತು ಹುಟ್ಟಿದೆ.

 ನಮ್ಮ ನಾಡಿನಲ್ಲಿ ಆಗಿಹೋದ ಮಹಾನ್ ಚೇತನಗಳಲ್ಲಿ ಅಂತರ್ಗತವಾಗಿದ್ದ ಅಗಾಧ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿ ಬೆಳೆಸಿದ ಮೂಲಗಳನ್ನು ಹುಡುಕುತ್ತಾ ಹೋದರೆ ಖಂಡಿತವಾಗಿ ಆ ಮೂಲದಲ್ಲಿ ಗೋಚರಿಸುವವರು -ಳ-ಳನೆ ಹೊಳೆಯುವ ಅವರ ಗುರುಗಳು! ಟೀಚರು, ಮೇಷ್ಟ್ರು, ಲೆಕ್ಚರರು, ಸರ್ರು, ಪ್ರೊ-ಸರು.... ಯಾವುದೇ ಹಂತದಲ್ಲಿಯೂ ಈ ಗುರು ತನ್ನ ಶಿಷ್ಯನನ್ನು ಪ್ರಭಾವಿಸಿ ತನ್ನ ಪ್ರಭಾವಲಯದಲ್ಲಿ ಬೆಳೆಸಿ ಆ ಶಿಷ್ಯ ಏರಿದ ಎತ್ತರವನ್ನು ಕಂಡು ಹೆಮ್ಮೆ ಪಡುವ ಅಪರೂಪದ ಸಹೃದಯಿ. ಎಲೆಮರೆಯ ಕಾಯಿಯ ಹಾಗೆ ಹಳ್ಳಿಯ ಮೂಲೆ ಮೂಲೆಗಳಲ್ಲಿದ್ದ 'ಕನ್ನಡ ಶಾಲೆಯ' ಮೇಷ್ಟ್ರುಗಳಿಗೆ ಕನ್ನಡ ನಾಡಿನ ಒಂದು ಸಭ್ಯ, ಶಿಷ್ಟ, ಸುಸಂಸ್ಕೃತ ತಲೆಮಾರನ್ನೇ ಕಟ್ಟಿ ನಿಲ್ಲಿಸಿದ ಕೀರ್ತಿ ಸಲ್ಲಬೇಕು.

ನಾನೀ ವಾರದ ಅಂಕಣಕ್ಕೆ ಪೆನ್ನು ಕೈಗೆತ್ತಿಕೊಂಡಾಕ್ಷಣ ನೆನಪಿಗೆ ಬಂದವರು ನನ್ನ ಕನ್ನಡ ಶಾಲೆಯಲ್ಲಿ ನಮಗೆ ಅಕ್ಷರ ಕಲಿಸಿದ ಮೇಷ್ಟ್ರು. ನಮ್ಮ 'ಕಾಗೆ ಕಾಲು ಗುಬ್ಬಿ ಕಾಲು' ಲಿಪಿಯನ್ನು ಅದು ಹೇಗೆ ಓದಿ ಅರ್ಥೈಸಿಕೊಳ್ಳುತ್ತಿದ್ದರೋ, ಇವತ್ತು ನಿನ್ನೆಗಿಂತ ಚಂದವಾಗಿದೆ ಅಕ್ಷರ ಎನ್ನುತ್ತಲೇ ನಮ್ಮ ಕೈಬರಹವನ್ನು ಸುಂದರಗೊಳಿಸಿದರು. ಶಬ್ದ ಕೊಟ್ಟು ಬರೆಸುವುದು ನಮ್ಮ ಶಾಲೆಯ ಮೋಜಿನ ಆಟಗಳಲ್ಲಿ ಒಂದಾಗಿತ್ತು. ನಮ್ಮ ಇಡೀ ಹಳ್ಳಿಯಲ್ಲಿ ಒಮ್ಮೆ 'ಸೂಪರಿಂಟೆಂಡೆಂಟ್' ಎಂಬ ಶಬ್ದದ ಜ್ವರ ಹತ್ತಿಬಿಟ್ಟಿತ್ತು. ಕಾರಣ ಒಬ್ಬರಿಗೂ ಅದನ್ನು ಹೇಳಲು ಬರುತ್ತಿರಲಿಲ್ಲ. ನಮ್ಮ ಮೇಷ್ಟ್ರು ಕೊಟ್ಟ ಆ ಶಬ್ದವನ್ನು ಪ್ರತಿ ವಿದ್ಯಾರ್ಥಿಯೂ ಮನೆಗೆ ಒಯ್ದು ಹಿರಿಯರ ತಲೆಕೆಡಿಸಿದ್ದರು. ಹೆಚ್ಚಿನವರು (ಈಗಲೂ) ಅದನ್ನು 'ಸುಪ್ರೀಡೆಂಟು' ಎಂದೇ ಹೇಳುತ್ತಿದ್ದರು. ಮೇಷ್ಟ್ರಿಗೆ ಅದೊಂದು ಪದ ವಿನೋದವಾಗಿತ್ತು. ಮೋಜಿತ್ತೇ ವಿನಾ ಗೇಲಿಯಿರಲಿಲ್ಲ.

ಆ ಮೇಷ್ಟ್ರು ನಮ್ಮ ಹಳ್ಳಿಗೆ ಬಂದಿಳಿದಾಗ ಅವರ ಕೈಯಲ್ಲಿ ಒಂದು ಚೀಲ, ಬಗಲಲ್ಲಿ ಒಂದು ಜೋಳಿಗೆ, ಶುದ್ಧ ಬಿಳಿಯ ಖಾದಿ ಪೈಜಾಮ ಹಾಗೂ ಅಂಗಿ. ಬಾಡಿಗೆ ಮನೆಗಳಿಲ್ಲದ ಹಳ್ಳಿ. ನಮ್ಮ ಮನೆಯ ಮಾಳಿಗೆಯ ಮೇಲೇ ಒಂದು ರೂಮು ಮೇಷ್ಟ್ರಿಗೆ. ಊಟ ಪಾಠ ಎಲ್ಲಾ ನಮ್ಮೊಟ್ಟಿಗೇ. ಮೊದಮೊದಲು ಮೇಷ್ಟ್ರು ನಮ್ಮ ಮನೆಯಲ್ಲೇ ಉಳಿಯುತ್ತಾರೆಂದಾಗ ನಮಗೆ ಏನೂ ಖುಶಿಯಾಗಲಿಲ್ಲ. ಇನ್ನು ನಾವೆಲ್ಲ ಸತ್ತ ಹಾಗೇ, ಸಂಜೆ ಶಾಲೆಯೇ ನಮ್ಮ ಜತೆ ಮನೆಗೆ ಬರುತ್ತದೆ ಎಂದೆಲ್ಲ ಗೊಣಗಿದೆವಾದರೂ ಕ್ರಮೇಣ ಆ ಮೇಷ್ಟ್ರು ಕುಟುಂಬದ ಓರ್ವ ಸದಸ್ಯನೇ ಆಗಿಹೋದರು. ಇಡೀ ಊರಿಗೆ ಬೇಕಾದ ಹಳ್ಳಿಮೇಷ್ಟ್ರು ಆಗಿಬಿಟ್ಟರು. ಮೇಷ್ಟ್ರನ್ನು ಕೇಳದೇ ಇಡೀ ಹಳ್ಳಿಯವರು ಏನೂ ಮಾಡುತ್ತಿರಲಿಲ್ಲ. ಕೆರೆ, ಬಾವಿ ತೋಡಿಸುವುದು, ಮಗಳಿಗೆ ಗಂಡು ನಿಶ್ಚಯಿಸುವುದು, ಸೊಸೆ ಟೈಲರಿಂಗ್ ಮಷಿನ್ ಕೇಳ್ತಿದ್ದಾಳೆ ತರುವುದಾ..... ಇಡೀ ಹಳ್ಳಿಯ ಕಷ್ಟ-ಸುಖ ವಿಚಾರಿಸುವ ಸಹೃದಯಿ. ಸ್ಕೂಲಿನಲ್ಲೂ ಬಡಮಕ್ಕಳಿಗೆ ತಾನೇ ಯೂನಿ-ರ್ಮು ಹೊಲಿಸುವುದು, ಪೆನ್ನು ಪಟ್ಟಿ ಕೊಡುವುದನ್ನೂ ಮಾಡುತ್ತಿದ್ದರು (ಆಗ ಯಾವುದೇ 'ಭಾಗ್ಯ'ಗಳಿರಲಿಲ್ಲ. ಮೇಷ್ಟ್ರೇ ನಮ್ಮ ಭಾಗ್ಯದೇವತೆಯಂತಿದ್ದರು).

ಇಂಥ ಮೇಷ್ಟ್ರಿಗೂ ವರ್ಗಾವಣೆ ಆಯಿತು. ಇಡೀ ಹಳ್ಳಿಗೆ ಆಘಾತ. ನಾನು, ಅಕ್ಕ ರಾತ್ರಿಯೆಲ್ಲ ಅತ್ತೆವು. ಮೇಷ್ಟ್ರು ಮಾತ್ರ ನಿರ್ಲಿಪ್ತ. ಹೆಗಲಿಗೆ ಅದೇ ಒಂದು ಜೋಳಿಗೆ, ಒಂದೇ ಕೈಚೀಲ. ಹೊರಟು ನಿಂತಿದ್ದರು. ಹೋಗುವಾಗ ನನಗೊಂದು ಪಾರ್ಕರ್ ಪೆನ್ನು ನೀಡಿ ಮುಂದೆ ತುಂಬಾ ಬರೆಯಬೇಕು ಎಂದರು.

ನವರಾತ್ರಿ ಸಮಯವಾಗಿತ್ತು. ಮೇಷ್ಟ್ರು ಹೆಂಡತಿಯನ್ನು ಊರಿಗೆ 'ಕರ್ಕೊಂಡು ಬರ್ಲೇಬೇಕು' ಎಂದು ಹಳ್ಳಿಗರು ತಾಕೀತು ಮಾಡಿದ್ದರು. ಮೇಷ್ಟ್ರ ಹೆಂಡತಿ ಅಕ್ಷರಶಃ ಬಡಗೌರಮ್ಮ. ಯಾವ ಚಿನ್ನ, ಆಭರಣಗಳೂ ಮೈಮೇಲಿಲ್ಲ. ಮೇಷ್ಟ್ರಿಗೆ ಆಗ ಸಂಬಳವೂ ಕಡಿಮೆ. ಬಂದಿದ್ದೆಲ್ಲ ಬಡಮಕ್ಕಳ ಓದಿಗೇ ಕೊಡುತ್ತಿದ್ದರು. ಮೇಷ್ಟ್ರ ಹೆಂಡತಿಗೆ ಬಾಗಿನ ಕೊಡುವ ನೆಪದಲ್ಲಿ ಊರ ಹೆಂಗಸರೆಲ್ಲ ಒಂದಿಷ್ಟು ಹಣ ಸೇರಿಸಿ ಕೊಟ್ಟು ಮೇಷ್ಟ್ರ ಕಣ್ಣಿಗೆ ಬೀಳದಂತೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದರು. ಆ ಬೀಳ್ಕೊಡುವ ಸಮಾರಂಭ ಮತ್ತೆಲ್ಲೂ ನಾನು ನೋಡಿಲ್ಲ. ಇಡೀ ಹಳ್ಳಿ ಕಣ್ಣೀರು ಸುರಿಸಿತ್ತು. ಇಂಥ ಮೇಸ್ಟ್ರುಗಳ ಸಂತತಿಯೇ ಆಗ ಹೆಚ್ಚಿತ್ತು.

ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ ಪ್ರಾಧ್ಯಾಪಕರಾಗಿದ್ದ 'ಭಾರತರತ್ನ' ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾಗಿ ಮೈಸೂರು ಬಿಟ್ಟು ಹೊರಟಾಗ ಇಡೀ ಮೈಸೂರು ಇಂಥದೇ ಸಂಕಟವನ್ನು ಪಟ್ಟಿತ್ತಂತೆ. ಅವರನ್ನು ಬೀಳ್ಕೊಟ್ಟ ರೀತಿ ಓದಿದಾಗ ಮೈನವಿರೇಳುತ್ತದೆ. ಕನ್ನಡದ ಧಿಮಂತ ಸಾಹಿತಿಗಳೆಲ್ಲ ಇದ್ದ ಮೈಸೂರು ಮಹಾರಾಜಾ ಕಾಲೇಜಿನಿಂದ ರೈಲ್ವೆ ಸ್ಟೇಷನ್ನಿನವರೆಗೆ ಪುಷ್ಪಾಲಂಕೃತ ಮೇನೆಯಲ್ಲಿ ರಾಧಾಕೃಷ್ಣನ್‌ರನ್ನು ಕೂರಿಸಿ, ಅತಿರಥ ಮಹಾರಥರೆಲ್ಲ ಹೆಗಲ ಮೇಲಿಟ್ಟು ಮೆರವಣಿಗೆ ಹೊರಟಿದ್ದರಂತೆ. ಹಿಂದು ಧರ್ಮದ ಸಾರವನ್ನು ಪಾಶ್ಚಾತ್ಯ ಜಗತ್ತಿಗೆ ನಿಖರವಾಗಿ ತೋರಿಸಿಕೊಟ್ಟು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಪಾಶ್ಚಾತ್ಯ ಸಂಸ್ಕೃತಿ ಹಾಗೂ ಭಾರತೀಯ ತತ್ತ್ವಶಾಸದ ಕೊಂಡಿಯಾಗಿ ಕೆಲಸ ಮಾಡಿ ಪ್ರಾಧ್ಯಾಪಕ ಕುಲಕ್ಕೇ ಗೌರವ ತಂದ ಈ ವ್ಯಕ್ತಿಯನ್ನು ದೆಹಲಿಗೆ ಕರೆದೊಯ್ಯುವ ರೈಲ್ವೆಯ ಎಲ್ಲ ಬೋಗಿಗಳನ್ನೂ ಹೂವಿನಿಂದ ಅಲಂಕರಿಸಲಾಗಿತ್ತಂತೆ. ಗುರುವೆಂದರೆ ಹೀಗಿರಬೇಕು, ಶಿಷ್ಯರೆಂದರೆ ಹೀಗಿರಬೇಕು ಎಂಬಂತಿತ್ತು ಅವರ ಪ್ರಭಾವ. ಶಿಕ್ಷಕ ವೃತ್ತಿಯ ಘನತೆಯನ್ನು ಜಗತ್ತಿಗೇ ತೋರಿಸಿಕೊಟ್ಟ ಈ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನು ಶಿಷ್ಯರು ಆಚರಿಸಹೊರಟಾಗ, ಅದು ಶಿಕ್ಷಕರ ನೆನಪಿನಲ್ಲಿ ನಡೆಯುವ ದಿನಾಚರಣೆಯಾಗಲಿ ಎಂದವರು ಅವರು.

ತಮ್ಮ 'ಗುರು'ತರವಾದ ಜವಾಬ್ದಾರಿಯನ್ನು ಎಂದೂ ಲಘುವಾಗಿ ಪರಿಗಣಿಸಿ ಶಿಷ್ಯರನ್ನು ಅವಗಣಿಸಿದವರಲ್ಲ ಈ ತಲೆಮಾರಿನವರು. ಹಾಗೆಂದು ಘನಗಂಭೀರ ದೃಷ್ಟಿಕೋನದಿಂದ ಶಿಷ್ಯರನ್ನು ಅವಮಾನಿಸುವ, ಬೆದರಿಸುವ, ಅಂಕ ನೀಡದೆ ಸತಾಯಿಸುವ ಜಾಯಮಾನದವರೂ ಅಲ್ಲ. 'ಶಿಷ್ಯ ವಾತ್ಸಲ್ಯ' ಎಂಬ ಪದಕ್ಕೇ ಮಾಧುರ್ಯ ತುಂಬಿದ ಗುರುಗಳೂ ನಮ್ಮಲ್ಲಿ ಆಗಿಹೋಗಿದ್ದಾರೆ.

ಶೃಂಗೇರಿಯಲ್ಲಿ ಸಂಸ್ಕೃತ ಬೋಧನೆ ಮಾಡುತ್ತಿದ್ದ ದೀಕ್ಷಿತರೆಂಬ ಗುರುವೊಬ್ಬರಿದ್ದರು. ಅವರಿಗೆ ತಮ್ಮ ಶಿಷ್ಯ ಏಕಪಾಠಿ ಶ್ರೀಕಂಠಕುಮಾರ ಸ್ವಾಮಿ ಮೇಲೆ ಅಪಾರ ಪ್ರೀತಿ. ಶಿಷ್ಯ ಕೆಲ ದಿನದಿಂದ ಪಾಠಕ್ಕೆ ಬರುತ್ತಿಲ್ಲ. ಗುರುವಿನ ಹೃದಯಕ್ಕೆ ಕಾತರ. ಅವನ ಮನೆಗೇ ಹೋಗುತ್ತಾರೆ. ಪರೀಕ್ಷೆ ಬಂದುಬಿಟ್ಟಿದೆ. ಕಲಿತು ಮುಗಿದಿಲ್ಲ. 'ಏನೋ, ಪಾಠಶಾಲೆಗೆ ಬರುತ್ತಿಲ್ಲ?' ಎಂದು ವಿಚಾರಿಸಿದರು. ತೀವ್ರವಾದ ಜ್ವರದಿಂದ ಶಿಷ್ಯ ಮಲಗಿಬಿಟ್ಟಿದ್ದಾನೆ. 'ಒಳಗೆ ಬರಬೇಡಿ ಗುರುಗಳೇ, ಕೆಟ್ಟಜ್ವರ ನಿಮಗೂ ಹತ್ತೀತು...' ಎನ್ನುತ್ತಾನೆ ಶಿಷ್ಯ. 'ಆಯ್ತಪ್ಪ ಒಳಗೇ ಬರುವುದಿಲ್ಲ. ನೀನು ಮಲಗಿಯೇ ಇರು. ನಾನು ಕಿಟಕಿಯ ಈಚೆಯೇ, ಹೊರಗೇ ನಿಂತು ಪಾಠ ಮಾಡಿ ಹೋಗುತ್ತೇನೆ. ನೀನು ಕೇಳಿಸ್ಕೊಂಡ್ರೆ ಸಾಕು; ಜ್ವರ ಕಡಿಮೆಯಾದ ಮೇಲೆ ಪರೀಕ್ಷೆ ಬರಿ' ಎನ್ನುತ್ತಾರೆ. ಇಂಥ ಗುರುವೂ ಧನ್ಯ, ಶಿಷ್ಯನೂ ಧನ್ಯ.

ನಾನು ಪ್ರಾಧ್ಯಾಪಕ ವೃತ್ತಿಯನ್ನು ಆರಿಸಿಕೊಂಡಿದ್ದೂ ಈ ಚಿತ್ತಾಪಹಾರಕ ಗುರುಗಳ ದೆಸೆಯಿಂದಲೇ. ಒಂದಲ್ಲ ಎರಡಲ್ಲ ಹಲವು ಅಧ್ಯಾಪಕರು ತಮ್ಮ ಅಧ್ಯಾಪನ ಶೈಲಿ, ವಿದ್ಯಾರ್ಥಿಗಳ ಕುರಿತಾದ ತಮ್ಮ ಕಕ್ಕುಲಾತಿಗಳಿಂದ ನನ್ನ ಮೇಲೆ ಗಾಢಪ್ರಭಾವ ಬೀರಿ, 'ಆದರೆ ಉಪನ್ಯಾಸಕಿಯೇ ಆಗಬೇಕು' ಎನ್ನಿಸಿಬಿಟ್ಟಿದ್ದರು. ಆಗಿಯೂ ಆದೆ. ಅರ್ಥಶಾಸ ಕಲಿಸುತ್ತ ಮೂರು ದಶಕ ಕಳೆದಾಗಿದೆ. ಈ ಅವಧಿಯಲ್ಲಿ ಶಿಷ್ಯರೂ ನನಗೆ ಪಾಠ ಕಲಿಸಿದ್ದಾರೆ. ಅದರಲ್ಲಿ, 'ಅತಿಕಡಿಮೆ ವೇಗದಲ್ಲಿ ವಾಹನ ಚಲಾಯಿಸುವುದೂ ಅಪಘಾತಕ್ಕೆ ಕಾರಣ' ಎಂಬುದೂ ಒಂದು.

ಕ್ಲಾಸಿನೊಳಗೆ ಪಾಠ ಮಾಡಿ ಗುರುಗಳಾದವರೂ, ಕ್ಲಾಸಿನ ಹೊರಗಡೆ 'ಜೀವನಾವಶ್ಯಕ ಪಾಠ' ಕಲಿಸಿದವರೂ ಒಂದೇ ಎಂದು ಭಾವಿಸುವ ನಾನು, ನನಗೆ ದ್ವಿಚಕ್ರ ವಾಹನ ಕಲಿಸಲು ಬಂದ ಗುರುವೊಬ್ಬರ ಶಾಪಕ್ಕೆ ತುತ್ತಾದ ಘಟನೆ ಕೆಲ ವರ್ಷದ ಹಿಂದೆ ಜರುಗಿತ್ತು. ದ್ವಿಚಕ್ರ ವಾಹನ ಖರೀದಿಸಿಯಾದ ಮೇಲೆ ಅದನ್ನು ಕಲಿಸಲು ನನ್ನ ಸ್ನೇಹಿತೆಯೇ ಗುರುವಾಗಿ ಬಂದಳು. ಎಲ್ಲರಿಗೂ ಹೇಗೋ ಗೊತ್ತಿಲ್ಲ; ನಾನಂತೂ ಅದನ್ನು ಹತ್ತಿಕೂತು ಎದುರಿಗಿರುವ ಯಾವ ವಸ್ತುವನ್ನೇ ನೋಡಲಿ, ಅದಕ್ಕೆ ಹೋಗಿ ಗುದ್ದಿಬಿಡುತ್ತಿತ್ತು. ಒಂದು ದಿನ ಕಾಂಪೌಂಡ್ ಗೇಟನ್ನು ನೋಡಿದೆ, ಸೀದಾ ಗೇಟಿಗೆ ಹೋಗಿ ಗುದ್ದಿ, ಮನೆ ಮಾಲೀಕರ ಕೆಂಗಣ್ಣಿಗೆ ತುತ್ತಾದೆ. ಇನ್ನೊಂದು ದಿನ ಮನೆ ಮಾಲೀಕರೇ ಎದುರು (ಹಾಕಿಕೊಂಡರು) ಬರಬೇಕೇ? ಹಳೆಯ ಸಿಟ್ಟನ್ನೆಲ್ಲ ಅವರಿಗೆ ಗುದ್ದುವ ಮೂಲಕ ತೀರಿಸಿಕೊಂಡಿತು. ಕಾಲೇಜಿನಲ್ಲಿಯೂ ಅಷ್ಟೆ. ನಾನು ಮನೆಗೆ ಹೊರಟೆನೆಂದರೆ ಯಾವ ಜೀವಿಯೂ ಎದುರು ಬರುತ್ತಿರಲಿಲ್ಲ. ಪ್ರಿನ್ಸಿಪಾಲರೂ ಸಹ ಆ ಹೆಗಡೆ ಮೇಡಂ, ಅವರ ಟೂ ವ್ಹೀಲರ್ ಗೇಟಿನ ಹೊರಗೆ ಹೋಗಿ ಆಯ್ತೇನಪ್ಪಾ ಎಂದು ಕೇಳಿ ಖಚಿತಪಡಿಸಿಕೊಂಡೇ ಚೇಂಬರಿಗೆ ಬೀಗ ಹಾಕಿಸುತ್ತಿದ್ದರಂತೆ. ಈ ನನ್ನ ವಾಹನಾಘಾತದ ಸುದ್ದಿ ಕೇಳಿದ ನನ್ನ ಗುರು ಪುನಃ ಒಂದು 'ರೆಮೆಡಿಯಲ್ ಕ್ಲಾಸ್' ತೆಗೆಯಲು ನನ್ನ ಮನೆಯ ಬಳಿ ಬಂದಿದ್ದಳು. ಈ ಬಾರಿ ವಾಹನವೇರಿ ಕೂತ ನನ್ನ ದೃಷ್ಟಿ ಗುರುವಿನ ಮೇಲೇ ಹಾಯಿತಾದ್ದರಿಂದ, ಸೀದಾ ನನ್ನ ಗಾಡಿ ಹೋಗಿ ಅವಳನ್ನೇ ಗುದ್ದಿತು. ತಪ್ಪಿಸಲು ಆಕೆ ಹಾರಿದ ಪರಿಣಾಮ ಕಾಲಿಗೆ -ಕ್ಚರ್ ಆಗಿ ಆಸ್ಪತ್ರೆ ಸೇರುವಂತಾಯ್ತು. ಪಶ್ಚಾತ್ತಾಪದ ಮುಖಮುದ್ರೆಯಲ್ಲಿ ನೋಡಹೋದರೆ ನನ್ನ ಹೆಸರಿನವರನ್ನು ಒಳಗೆ ಬಿಡಬೇಡಿ ಎಂದಿದ್ದಳಂತೆ. ಪ್ರವೇಶ ದೊರೆಯಲಿಲ್ಲ. ಗುರುವಿನ ಶಾಪ ತಟ್ಟದಿರುತ್ತದೆಯೇ? ಕೆಲವೇ ದಿನಗಳಲ್ಲಿ ಜನನಿಬಿಡ ರಸ್ತೆಯೊಂದರಲ್ಲಿ ಹೋಗುತ್ತಿರುವಾಗ ಒಂದು ನಿಂತ ಬಸ್ಸಿನ ಮೇಲೆ ನನ್ನ ದೃಷ್ಟಿ ಹೋಗಿ ಸೀದಾ ಗುದ್ದಿತು ನನ್ನ ದ್ವಿಚಕ್ರಿ. ಪಾಠ ಸರಿಯಾಗಿ ಕೇಳಿಸಿಕೊಳ್ಳದ ಶಿಷ್ಯಳಾದ ನಾನು ತಕ್ಕ ಶಾಸ್ತಿ ಮಾಡಿಸಿಕೊಂಡು ಟೂ ವ್ಹೀಲರ್ ಸಹವಾಸ ಬಿಟ್ಟೆ.

ಗುರು-ಶಿಷ್ಯರ ನಡುವೆ ತಾದಾತ್ಮ್ಯ ಏರ್ಪಡುವುದು ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು. ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿದಾಗ ಆಗುವ ಖುಶಿಯೇ ಬೇರೆ. ಗುರುದೃಷ್ಟಿಗೆ ಇರುವ ಕಾರುಣ್ಯದಿಂದಾಗಿ 'ಹರ ಮುನಿಯಲ್, ಗುರು ಕಾಯ್ವನ್' ಎಂಬ ಮಾತು ಹುಟ್ಟಿದೆ.

ಉತ್ತಮ ಗುರುವನ್ನು ಪಡೆಯುವುದು ಹೇಗೆ ಅದೃಷ್ಟವೋ, ಉತ್ತಮ ಶಿಷ್ಯರನ್ನು ಪಡೆಯುವುದೂ ಅದೃಷ್ಟವೇ. ಗುರು-ಶಿಷ್ಯರಿಬ್ಬರನ್ನೂ ಹರ ಕಾಯಲಿ.

✍🏻 ಭುವನೇಶ್ವರಿ ಹೆಗಡೆ
📰 ವಿಜಯವಾಣಿ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK