FRENZY ಸೋಷಿಯಲ್ ಮಿಡಿಯಾ
social-media
ಚಿತ್ರಾ ಸಂತೋಷ್ ವಾಟ್ಸಾಪ್‌ನಲ್ಲಿ ಸಂದೇಶವೊಂದು ಬಂದಾಕ್ಷಣ ಫಾರ್ವರ್ಡ್ ಮಾಡಿದ್ದಾಗಿದೆ. ಆದರೆ ಅದು ನಿಜವೇ? ಸುಳ್ಳಾದರೆ? ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್ ಸತ್ಯವಲ್ಲದಿದ್ದರೆ? ಹೀಗೆ ಹಿಂದೆಮುಂದೆ ನೋಡದೆ ಸೋಶಿಯಲ್ ಮೀಡಿಯಾದಲ್ಲಿ ವ್ಯವಹರಿಸುವ ಈ ಅಪಾಯಕಾರಿ ವರ್ತನೆಗೆ ಏನೆನ್ನುತ್ತಾರೆ ಗೊತ್ತೇ? ಘಟನೆ-1: ಇದು ಮೊನ್ನೆ ಮೊನ್ನೆ ನಡೆದದ್ದು. ಮುಂಬೈಯಲ್ಲಿ ಶಾಲಾ ಮಕ್ಕಳು ಕೆಲವು ಶಂಕಿತರನ್ನು ನೋಡಿದ್ದು, ಟೀಚರ್‌ಗೆ ಹೇಳಿ ಪೊಲೀಸರ ತನಕ ಸುದ್ದಿ ತಲುಪಿಸಿ, ಕೊನೆಗೆ ಮುಂಬೈಯಲ್ಲಿ ಹೈ-ಅಲರ್ಟ್ ಘೋಷಿಸಲಾಯಿತು. ಆದರೆ, ಟ್ವಿಟರ್ ಮಹಾತ್ಮರು ಈ ಸುದ್ದಿಯನ್ನು ತಿರುಚಿ ಶಂಕಿತರ ಸ್ಕೆಚ್ ಎಂದು ಹಿರಿಯ ಪತ್ರಕರ್ತರೊಬ್ಬರ ಫೋಟೊ ಪ್ರಕಟಿಸಿಬಿಟ್ಟರು. ಅದನ್ನು ನಿಜವೆಂದು ನಂಬಿದ ರಾಷ್ಟ್ರೀಯ ಚಾನೆಲ್‌ವೊಂದು ಬ್ರೇಕಿಂಗ್ ನ್ಯೂಸ್ ಎಂದು ಟೆಲಿಕಾಸ್ಟ್ ಮಾಡಿದರೆ, ಒಡಿಶಾದ ದೈನಿಕವೊಂದು ಫೋಟೋ ಸಮೇತ ಪ್ರಕಟಿಸಿಬಿಟ್ಟಿತು! ಘಟನೆ-2: ಎರಡು ದಿನಗಳ ಹಿಂದಿನ ಘಟನೆ. ಎಸ್.ಜಾನಕಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಸುದ್ದಿ. ಅವರು ತಾನಿನ್ನು ಹಾಡುವುದಿಲ್ಲ ಎಂದು ಹೇಳಿದ್ದೇ ತಡ, ಯಾವುದನ್ನೂ ಪರಾಮರ್ಶಿಸದ ಸೋಷಿಯಲ್ ಮೀಡಿಯಾದ ಮಂದಿ ಜಾನಕಿ ವಿಧಿವಶರಾದರು ಎಂದು ಪ್ರಕಟಿಸಿಬಿಟ್ಟರು. ಬೆಳಗ್ಗೆ ಯಿಂದ ಸಂಜೆ ತನಕ ಫೇಸ್‌ಬುಕ್, ವ್ಯಾಟ್ಸಾಪ್ ಎಲ್ಲಾ ಕಡೆ ಹರಡಿದ್ದ ಸುದ್ದಿಗೆ ಫುಲ್‌ಸ್ಟಾಪ್ ಸಿಕ್ಕಿದ್ದು ಎಸ್‌ಪಿಯಂಥ ಮಹಾನ್ ಗಾಯಕರೆಲ್ಲಾ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮೇಲೆ! ಒಂದಲ್ಲ ಎರಡಲ್ಲ, ಇಂತಹ ಸಾಕಷ್ಟು ನಿದರ್ಶನಗಳು ನಮಗೆ ಸಿಗುತ್ತವೆ. ದಿನಾ ಬೆಳಗ್ಗೆದ್ದು ವಾಟ್ಸಾಪ್ ನೋಡಿದರೆ ರಾಶಿ ರಾಶಿ ಸುದ್ದಿಗಳು, ಹೇಳಿಕೆಗಳು! ಹಿಂದೆಲ್ಲಾ ಪಾರ್ಕ್, ಕಲ್ಲುಬೆಂಚು, ರೋಡ್ ಕಾರ್ನರ್, ಕಾಲೇಜು ಕ್ಯಾಂಪಸ್, ಊಟದ ಟೇಬಲ್... ಅಲ್ಲಿ-ಇಲ್ಲಿ ಚರ್ಚೆಗೆ ಒಳಪಡುತ್ತಿರುವ ವಿಷಯಗಳೆಲ್ಲಾ ಇಂದು ಅಂಗೈಯಲ್ಲಿರುವ ಫೋನ್/ಕಂಪ್ಯೂಟರ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತವೆ. ಒಟ್ಟಿನಲ್ಲಿ ಆ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ ಖ್ಯಾತಿ ನಮ್ಮದಾಗಬೇಕು ಎನ್ನುವ 'ಚಟ' ಬಹುಮಂದಿಯದ್ದು! ಇತ್ತೀಚೆಗೆ ವ್ಯಾಟ್ಸಾಪ್‌ನಲ್ಲಿ 'ಇಂಟರ್ನೆಟ್‌ನಲ್ಲಿ ಒಂದು ಚಿತ್ರ ಮತ್ತು ಕೋಟ್ ಇದ್ದ ತಕ್ಷಣ ಎಲ್ಲವೂ ನಿಜವೆಂದು ನಂಬಬೇಡಿ.! ' ಎಂಬ ಸಂದೇಶ ಹರಿದಾಡುತ್ತಿದೆ. ಈ ಕೋಟ್‌ನ ಕೆಳಗೆ ಅಬ್ರಹಾಂ ಲಿಂಕನ್ ಹೇಳಿದ್ದೆಂದು ಲಿಂಕನ್ ಫೋಟೋ ಕೂಡ ಇದೆ!. ವಾಹ್! ಎಂದು ಕೋಟ್ ನೋಡಿದ ತಕ್ಷಣ ಫಾರ್ವರ್ಡ್ ಮಾಡುವ ಮಂದಿಯೇ ಹೆಚ್ಚು. ಆದರೆ, ಲಿಂಕನ್ ಕಾಲದಲ್ಲಿ ಇಂಟರ್ನೆಟ್ ಇತ್ತೇ? ಅಷ್ಟು ಯೋಚನೆ ಮಾಡುವಷ್ಟು ಪರಿಜ್ಞಾನವಾಗಲೀ ವ್ಯವಧಾನವಾಗಲೀ ಬಹಳಷ್ಟು ಮಂದಿಗೆ ಇರುವುದೇ ಇಲ್ಲ. ಮೆಸೇಜ್ ಒಂದು ಬಂದಾಕ್ಷಣ ಇನ್ನೊಬ್ಬರಿಗೆ ಫಾರ್ವರ್ಡ್ ಮಾಡುವುದಷ್ಟೇ ಅನೇಕರ ಗೀಳು. ಹಲವು ಅನಾಹುತಗಳಾಗುವುದೇ ಈ ಪ್ರವೃತ್ತಿಯಿಂದ. ಅಂದ ಹಾಗೆ ಈ ಗೀಳಿಗೊಂದು ಹೆಸರಿದೆ, 'ಫ್ರೆಂಝಿ'. ಅದೊಂದು ಮೇನಿಯಾ frenzy... ಅಂದರೆ ಮೇನಿಯಾ. ಮೊಬೈಲ್‌ಗೆ ಹರಿದು ಬಂದು ಮೆಸೇಜು ಸತ್ಯವೋ ಎಂದು ಹಿಂದೆಮುಂದೆ ಯೋಚಿಸುವುದಕ್ಕಿಲ್ಲ, ನಿಜವೇ ಎಂದು ತಿಳಿದುಕೊಳ್ಳುವ ಇಷ್ಟವೂ ಇರುವುದಿಲ್ಲ. ಸುಮ್ಮನೇ ಮತ್ತೊಬ್ಬರಿಗೆ ಸುದ್ದಿ ಹರಡುವುದು ಇಲ್ಲವೇ ವಿಷಯವೊಂದು ತಿಳಿದ ತಕ್ಷಣ ಪೋಸ್ಟ್ ಮಾಡುವುದು, ಇದೊಂದು ಮೇನಿಯಾವೇ ಆಗಿದೆ ಅನ್ನುತ್ತಾರೆ ಮನೋವಿಜ್ಞಾನಿಗಳು. 'ಟಿವಿ, ಮೊಬೈಲ್ ಬರುವುದಕ್ಕಿಂತ ಮೊದಲು ಪತ್ರಿಕೆ ಮೂಲಕ ಸುದ್ದಿ ಬರಬೇಕಿತ್ತು. ಈಗ ಟೆಕ್ನಾಲಜಿ ಇದೆ. ಆದರೆ, ಅದೇ ಈಗ ಒಂದು ರೀತಿಯ ಫ್ರೆಂಝಿ ಆಗಿದೆ. ಏನೇ ಸುದ್ದಿಗಳು ಹರಿದುಬರಲಿ ಅದನ್ನು ಎಡಿಟ್ ಮಾಡುವ ಕೆಪಾಸಿಟಿ ಇಲ್ಲ, ನಿಜವೋ ಅಲ್ಲವೋ ಎಂದು ಯೋಚಿಸುವಷ್ಟು ಸ್ವಂತಿಕೆ ಇಲ್ಲ, ಜೊತೆಗೆ ಸಮಯವೂ ನಮಗಿರುವುದಿಲ್ಲ. ಏನೇ ಬರಲಿ...ಅದನ್ನು ಫಾರ್ವರ್ಡ್ ಮಾಡಬೇಕು ಎನ್ನುವ ಎಕ್ಸೈಟ್‌ಮೆಂಟ್. ತಕ್ಷಣ ಬೇರೆ ಗ್ರೂಪ್‌ಗೋ ಅಥವಾ ಫ್ರೆಂಡ್ಸ್‌ಗೋ ಫಾರ್ವರ್ಡ್ ಮಾಡ್ತಾರೆ. ಯೋಚನೆ ಮಾಡದೆ ಕಳಿಸುವುದು ಖಂಡಿತಾ ತಪ್ಪು' ಎನ್ನುತ್ತಾರೆ ಮನಃಶಾಸ್ತ್ರಜ್ಞ ಶಿವಾನಂದ ನಾಯಕ್. ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡವರಲ್ಲಿ ಕಾಡುವ ಐಡೆಂಟಿಟಿ ಕ್ರೈಸಿಸ್ ಕೂಡ ಇದಕ್ಕೊಂದು ಕಾರಣ. ಎಲ್ಲೋ ಕೇಳಿದ ಯಾವುದೋ ವಿಷಯವನ್ನು ಪೋಸ್ಟ್ ಮಾಡಬೇಕು, ಅದಕ್ಕೆ ಎಲ್ಲರೂ ಲೈಕ್, ಕಾಮೆಂಟ್ ಒತ್ತುವಾಗ ತಾನೇ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತೇನೆ ಅನ್ನುವ ಕ್ರೇಝ್ ಅನೇಕರಲ್ಲಿದೆ. ಹೀಗಾಗಿಯೇ ಕ್ಷಣಕ್ಕೊಂದು ಸ್ಟೇಟಸ್ ಹಾಕುತ್ತಾರೆ, ಹಲವು ಅನಾಹುತಗಳಿಗೂ ಕಾರಣರಾಗುತ್ತಾರೆ. ಸೋಶಿಯಲ್ ಮೀಡಿಯಾ ಎಂದರೆ ಮನೆಯ ಚಾವಡಿಯಲ್ಲಿ ಕುಳಿತು ಹರಟೆ ಹೊಡೆದಂತೆ ಅಲ್ಲ ಎಂಬ ಅರಿವು ಎಲ್ಲರಿಗಿಲ್ಲ. ಇದಕ್ಕೇ ಬೇಕಾಬಿಟ್ಟಿ ಮೆಸೇಜುಗಳು ಹರಿಯವುದು, ತಪ್ಪು ತಿಳಿವಳಿಕೆಯನ್ನು ಹುಟ್ಟು ಹಾಕುವುದು. ತನಗೆ ಬಂದ ಸಂದೇಶದ ಸರಿತಪ್ಪುಗಳನ್ನು ವಿಮರ್ಶಿಸುವ ವಿವೇಕ, ಆ ಸಂಯಮ ರೂಢಿಸಿಕೊಂಡರೆ ಈ ತಪ್ಪುಗಳು ಆಗವು. ಅದು ಎಲ್ಲರ ಸಾಮಾಜಿಕ ಜವಾಬ್ದಾರಿಯೂ ಹೌದು. ನಮಗೆ ಬಂದ ಮೆಸೇಜ್‌ಗಳು ನಿಜವೇ? ನನಗೆ ಇದು ಹೇಗೆ ರಿಲೆವೆಂಟ್ ಆಗುತ್ತವೆ? ಇದರಿಂದ ನನಗೇನು ಸಹಾಯವಾಗುತ್ತೆ? - ಈ ಮೂರು ಮಾತುಗಳನ್ನಷ್ಟೇ ನೆನಪಿಟ್ಟುಕೊಂಡರೆ ಯಾವುದೇ ತಪ್ಪು ಸಂದೇಶ ಹೋಗುವ ಸಾಧ್ಯತೆ ಕಡಿಮೆ. ಜೊತೆಗೆ ನಮ್ಮಲ್ಲಿ ಮೊದಲು ಸ್ವ ಜಾಗೃತಿ ಮೂಡಬೇಕು. - ಶಿವಾನಂದ ನಾಯಕ್, ಕೈಬರಹ ಮತ್ತು ಮನ:ಶಾಸ್ತ್ರಜ್ಞ ತಮ್ಮಲ್ಲಿನ ಐಡೆಂಟಿಟಿ ಕ್ರೈಸಿಸ್‌ನಿಂದಾಗಿ ಎಷ್ಟೋ ಮಂದಿ ವಿಷಯದರಿವೇ ಇಲ್ಲದೆ ಇರೋ ಬರೋ ಪೋಸ್ಟ್‌ಗಳನ್ನೆಲ್ಲಾ ಅಪ್ ಮಾಡಿಬಿಡ್ತಾರೆ. ಇದರಿಂದ ವೈಯಕ್ತಿಕ ಕೊಂಡು-ಕೊಳ್ಳುವಿಕೆ ಏನೂ ಇರುವುದಿಲ್ಲ. ಆದರೆ, ಪರಸ್ಪರ ಪರಸ್ಪರ ದ್ವೇಷ ಹುಟ್ಟುತ್ತೆ. ಮನೆ-ಮನಸ್ಸು ಒಡೆಯುತ್ತೆ. ಇದೊಂದು ರೀತಿ ಅಪಾಯಕಾರಿ ಸ್ಥಿತಿ. -ಜಯಲಕ್ಷ್ಮಿ ಪಾಟೀಲ್, ಕಲಾವಿದೆ.
Comments
Post a Comment