*ಮಕ್ಕಳ ಆಧಾರ್‌ ನೋಂದಣಿಗೆ ಬಂತು ಟ್ಯಾಬ್ಲೆಟ್‌*! Sep 22, 2016,

*ಮಕ್ಕಳ ಆಧಾರ್‌ ನೋಂದಣಿಗೆ 2 ಸಾವಿರ ಟ್ಯಾಬ್ಲೆಟ್‌* * *ಅಂಗನವಾಡಿ ಮೇಲ್ವಿಚಾರಕರಿಗೆ ವಿತರಣೆ** *ಟ್ಯಾಬ್ಲೆಟ್‌ ಖರೀದಿಗೆ 4.08 ಲಕ್ಷ ರೂ. ವೆಚ್ಚಅಂಗನವಾಡಿ ಕೇಂದ್ರಗಳಲ್ಲಿ ಆರಂಭವಾಗಿರುವ ನೋಂದಣಿ*ಡಿ. 31ರ ವೇಳೆಗೆ 41 ಲಕ್ಷ ಮಕ್ಕಳ ನೋಂದಣಿ ಗುರಿ*

ಬೆಂಗಳೂರು ನವಜಾತ ಶಿಶು ಸೇರಿದಂತೆ ಆರು ವರ್ಷದೊಳಗಿನ ಎಲ್ಲ ಮಕ್ಕಳ ಆಧಾರ್‌ ನೋಂದಣಿ ಕಾರ್ಯಕ್ಕೆ 2 ಸಾವಿರ ಟ್ಯಾಬ್ಲೆಟ್‌ಗಳನ್ನು (ಕಿರು ಕಂಪ್ಯೂಟರ್‌) ಇ-ಆಡಳಿತ ಇಲಾಖೆ ಖರೀದಿಸಿದೆ. ಈಗಾಗಲೇ ಅಂಗನವಾಡಿಗಳಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಿದ್ದು, ನೋಂದಣಿ ಕಾರ್ಯ ಆರಂಭವಾಗಿದೆ.
(Mallikarjun Hulasur)

ಸರಕಾರಿ ಸವಲತ್ತು ಪಡೆಯಲು ಬಹುಮುಖ್ಯ ಆಧಾರವಾಗಿರುವ 'ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಆಧಾರ್‌) ಡಿ. 31ರೊಳಗೆ ಎಲ್ಲ ಮಕ್ಕಳಿಗೆ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜತೆಗೂಡಿ 'ಇಂಟೆಲಿಕ್‌ ಸಿಸ್ಟಂ' ಎಂಬ ಕಂಪೆನಿಯಿಂದ 2 ಸಾವಿರ ಟ್ಯಾಬ್ಲೆಟ್‌ಗಳನ್ನು ಖರೀದಿಸಲಾಗಿದೆ. ಟ್ಯಾಬ್ಲೆಟ್‌ ಮತ್ತು ಬೆರಳಚ್ಚು ಮುದ್ರಣದ ಪರಿಕರಗಳ ಖರೀದಿಗೆ 4.08 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಮೊತ್ತವನ್ನು ಇ-ಆಡಳಿತ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಭರಿಸಿವೆ. ರಾಜ್ಯದಲ್ಲಿ 61,187 ಅಂಗನವಾಡಿಗಳು ಮತ್ತು 3331 ಮಿನಿ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸುಮಾರು 41 ಲಕ್ಷ ಮಕ್ಕಳಿದ್ದಾರೆ. 25-30 ಅಂಗನವಾಡಿಗಳ ನಿರ್ವಹಣೆಯ ಹೊಣೆ ಹೊತ್ತಿರುವ ಮೇಲ್ವಿಚಾರಕರಿಗೆ ಮಕ್ಕಳ ಆಧಾರ್‌ ನೋಂದಣಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಹಾಜರಾಗುವ ಮಕ್ಕಳ ಆಧಾರ್‌ ನೋಂದಣಿಗಾಗಿ 1647 ಮಂದಿ ಮೇಲ್ವಿಚಾರಕರಿಗೆ ಇ-ಆಡಳಿತ ಇಲಾಖೆಯು ತರಬೇತಿ ನೀಡಿತ್ತು. ಆ ಬಳಿಕ ಪರೀಕ್ಷೆಯನ್ನೂ ಸಹ ನಡೆಸಿದ್ದು, ಇದರಲ್ಲಿ 1529 ಮಂದಿ ಉತ್ತೀರ್ಣರಾಗಿದ್ದಾರೆ. ಇವರಿಗೆ ಪ್ರಮಾಣಪತ್ರ ನೀಡಿ, ಗುರುತಿನ ಸಂಖ್ಯೆಯೊಂದನ್ನು ಕೊಡಲಾಗಿದೆ. ಮಕ್ಕಳ ಆಧಾರ್‌

*ನೋಂದಣಿ ಹೇಗೆ?*

: ಪ್ರತಿ ಟ್ಯಾಬ್ಲೆಟ್‌ಗೆ ಬಿಎಸ್‌ಎನ್‌ಎಲ್‌ ಸಿಮ್‌ ಕಾರ್ಡ್‌ ಅಳವಡಿಸಿ, ಅಂತರ್ಜಾಲದ ಸಂಪರ್ಕ ಪಡೆಯಲಾಗಿದೆ. ಇದಕ್ಕಾಗಿ ತಿಂಗಳಿಗೆ 8 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.

ಇದರಲ್ಲಿ ಯುಐಡಿಎಐ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಆನ್‌ಲೈನ್‌ ಸಂಪರ್ಕದ ಮೂಲಕವೇ ಮಕ್ಕಳ ಆಧಾರ್‌ ನೋಂದಣಿ ಮಾಡಿಸಲಾಗುತ್ತಿದೆ. ಮಗುವಿನ ಭಾವಚಿತ್ರ ಮತ್ತು ತಂದೆ, ತಾಯಿಯ ಬಯೋಮೆಟ್ರಿಕ್‌ ಆಧಾರದಲ್ಲಿ ಮಗುವಿಗೆ ಆಧಾರ್‌ ಸಂಖ್ಯೆ ನೀಡಲಾಗುತ್ತದೆ. ಈ ವೇಳೆ ಆರು ವರ್ಷದ ಒಳಗಿನ ಮಗುವಿನ ಬಯೋಮೆಟ್ರಿಕ್‌ (10 ಬೆರಳುಗಳ ಬೆರಳಚ್ಚು) ಮತ್ತು ಕಣ್ಣಿನ ಐರಿಷ್‌ ವಿವರ ಪಡೆಯುವುದಿಲ್ಲ. ಐದು ವರ್ಷ ತುಂಬಿದ ಬಳಿಕ ಆಧಾರ್‌ ಸಂಖ್ಯೆಗೆ ಈ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಇದಲ್ಲದೇ 15 ವರ್ಷ ತುಂಬಿದ ಬಳಿಕ ಮತ್ತೊಮ್ಮೆ ಬಯೋಮೆಟ್ರಿಕ್‌ ಮಾಹಿತಿ ಪಡೆದು ಅಪ್‌ಡೇಟ್‌ ಮಾಡಲಾಗುತ್ತದೆ. ಆಧಾರ್‌ ನೋಂದಣಿ ಬಳಿಕ ಯಾವುದೇ ರೀತಿಯ ಸ್ವೀಕೃತಿ ಪತ್ರ ನೀಡುವುದಿಲ್ಲ. ಬದಲಿಗೆ ಪೋಷಕರ ಮೊಬೈಲ್‌ ಸಂಖ್ಯೆಗೆ ನೋಂದಣಿ ಕುರಿತು ಸಂದೇಶವನ್ನು ನೇರವಾಗಿ ರವಾನಿಸಲಾಗುತ್ತದೆ. ಆಶ್ರಮದಲ್ಲಿರುವ ಅನಾಥ ಮಕ್ಕಳಿಗೆ ಅಲ್ಲಿನ ಮೇಲ್ವಿಚಾರಕರ ಆಧಾರ್‌ ಸಂಖ್ಯೆ ಬಳಸಿ ನೋಂದಣಿ ಮಾಡಿಸಲಾಗುತ್ತಿದೆ. ಆಧಾರ್‌ ನೋಂದಣಿ ಮುಗಿದ ಬಳಿಕ ಟ್ಯಾಬ್ಲೆಟ್‌ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ಬಳಸಿಕೊಳ್ಳಲಿದೆ. ಮಕ್ಕಳ ಬೆಳವಣಿಗೆಯ ಪ್ರತಿ ಹಂತಗಳಲ್ಲಿ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಒದಗಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಆಧಾರ್‌ ಮೂಲಕವೇ ಪತ್ತೆ ಮಾಡಲು ತೀರ್ಮಾನಿಸಿದೆ. ಅಂಗನವಾಡಿ ಕೇಂದ್ರಗಳಲ್ಲಷ್ಟೇ ಅಲ್ಲ; ಏಕಕಾಲಕ್ಕೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಶಾಲೆಗಳು, ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಆಧಾರ್‌ ನೋಂದಣಿ ಕಾರ್ಯ ಚುರುಕು ಪಡೆದುಕೊಂಡಿದೆ.

ಆಧಾರ್‌ ನೋಂದಣಿಗಾಗಿ ಬೆಂಗಳೂರು ಒನ್‌ ಕೇಂದ್ರಗಳಲ್ಲಿ 88 ಕಿಟ್‌ಗಳು, ಕರ್ನಾಟಕ ಒನ್‌ ಕೇಂದ್ರಗಳಲ್ಲಿ 37, ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ 770 ಮತ್ತು 692 ಮೊಬೈಲ್‌ ಕಿಟ್‌ಗಳನ್ನು ಇ-ಆಡಳಿತ ಇಲಾಖೆ ಒದಗಿಸಿದೆ. ಶೇ 88.75ರಷ್ಟು ಗುರಿ ಸಾಧನೆ: ರಾಜ್ಯವು 6,46,60,412 ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಈ ಪೈಕಿ 5,73,85,067 ಮಂದಿಗೆ ಆಧಾರ್‌ ಸಂಖ್ಯೆಯನ್ನು ವಿತರಿಸಲಾಗಿದೆ. ಅದರಂತೆ ಶೇ 88.75ರಷ್ಟು ಗುರಿ ಸಾಧಿಸಲಾಗಿದೆ. ಕೇವಲ 72,75,345 ಜನರಿಗೆ ಮಾತ್ರ ಆಧಾರ್‌ ಸಂಖ್ಯೆ ಪಡೆದುಕೊಂಡಿಲ್ಲ. ಒಂದರಿಂದ ಹತ್ತನೇ ತರಗತಿಯಲ್ಲಿ 1,01,14,286 ಮಕ್ಕಳಿದ್ದು, 84,71,114 ಮಂದಿಯ ಆಧಾರ್‌ ನೋಂದಣಿ ಆಗಿದೆ. ಹೆರಿಗೆ ಆಸ್ಪತ್ರೆಗಳಲ್ಲಿ ನೋಂದಣಿ: ಇ-ಆಡಳಿತ ಇಲಾಖೆಯ ಸಿಬ್ಬಂದಿಯು ಹೆರಿಗೆ ಆಸ್ಪತ್ರೆಗಳಿಗೆ ತೆರಳಿ ಆಗಷ್ಟೇ ಜನಿಸಿದ ಮಗುವಿಗೂ ಆಧಾರ್‌ ನೋಂದಣಿ ಮಾಡಿಸುತ್ತಿದ್ದಾರೆ. ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ 200 ನವಜಾತ ಶಿಶುಗಳಿಗೆ ಆಧಾರ್‌ ವಿತರಿಸಲಾಗಿದೆ. ಈ ಹಂತದಲ್ಲಿ ಮಗುವಿನ ಭಾವಚಿತ್ರ ಮತ್ತು ಪೋಷಕರ ಬಯೋಮೆಟ್ರಿಕ್‌ ವಿವರವನ್ನಷ್ಟೇ ಪಡೆಯಲಾಗುತ್ತಿದೆ. ಮಗುವಿಗೆ ತಡವಾಗಿ ನಾಮಕರಣ ಮಾಡುವುದರಿಂದ ತಾಯಿಯ ಹೆಸರಿನಲ್ಲಿ ಆಧಾರ್‌ ನೀಡಲಾಗಿದೆ. ವೃದ್ಧರ ಮನೆ ಬಾಗಿಲಿಗೆ ಆಧಾರ್‌: ''ವರ್ಷಾಂತ್ಯದೊಳಗೆ ಶೇ 100ರಷ್ಟು ಆಧಾರ್‌ ನೋಂದಣಿ ಗುರಿ ಸಾಧಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಗುಡ್ಡಗಾಡು ಪ್ರದೇಶ ಸೇರಿದಂತೆ ಕುಗ್ರಾಮಗಳಲ್ಲೂ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ವಯೋವೃದ್ಧರು, ಬುದ್ಧಿಮಾಂದ್ಯರು, ದೃಷ್ಟಿ ವಿಕಲಚೇತನರು ಸೇರಿದಂತೆ ಇತರೆ ವಿಶೇಷಚೇತನ ಮಕ್ಕಳಿರುವೆಡೆಯೇ ತೆರಳಿ ಆಧಾರ್‌ ನೋಂದಣಿ ಮಾಡಿಸಲಾಗುತ್ತಿದೆ,''. -ಕೆ.ರವಿಕುಮಾರ್‌, ಯೋಜನಾ ವ್ಯವಸ್ಥಾಪಕ (ಯುಐಡಿ), ಇ-ಆಡಳಿತ ಇಲಾಖೆ ಜಿಲ್ಲಾವಾರು

*ಟ್ಯಾಬ್ಲೆಟ್‌ ವಿತರಣೆ:*

ಜಿಲ್ಲೆ ವಿತರಿಸಿದ ಟ್ಯಾಬ್ಲೆಟ್‌ ಬಾಗಲಕೋಟೆ 89 ಬಳ್ಳಾರಿ 76 ಬೆಳಗಾವಿ 223 ಬೆಂಗಳೂರು ಗ್ರಾಮೀಣ 39 ಬೆಂಗಳೂರು ನಗರ 86 ಬೀದರ್‌ 52 ಚಾಮರಾಜನಗರ 18 ಚಿಕ್ಕಮಗಳೂರು 46 ಚಿಕ್ಕಬಳ್ಳಾಪುರ 34 ಚಿತ್ರದುರ್ಗ 57 ದಕ್ಷಿಣ ಕನ್ನಡ 83 ದಾವಣಗೆರೆ 68 ಧಾರವಾಡ 63 ಗದಗ 48 ಕಲಬುರಗಿ 112 ಹಾಸನ 47 ಹಾವೇರಿ 81 ಕೊಡಗು 18 ಕೋಲಾರ 23 ಕೊಪ್ಪಳ 75 ಮಂಡ್ಯ 44 ಮೈಸೂರು 64 ರಾಯಚೂರು 91 ರಾಮನಗರ 34 ಶಿವಮೊಗ್ಗ 62 ತುಮಕೂರು 83 ಉಡುಪಿ 49 ಉತ್ತರ ಕನ್ನಡ 99 ವಿಜಯಪುರ 89 ಯಾದಗಿರಿ 47
=ಒಟ್ಟು 2000

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು