6.29ಕ್ಕೆ ತೀರ್ಥಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ತಾಯಿ!
Updated: Mon, Oct 17, 2016, 6:44 [IST]
By: Prasad
ಭಾಗಮಂಡಲ, ಅಕ್ಟೋಬರ್ 17 : ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಶುಭಸಮಯದಲ್ಲಿ ಅಕ್ಟೋಬರ್ 17ರ ಬೆಳಿಗ್ಗೆ ಸರಿಯಾಗಿ 6.29ಕ್ಕೆ ಭಾಗಮಂಡಲದ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿ ತೀರ್ಥಸ್ವರೂಪಿಣಿಯಾಗಿ ಉಕ್ಕಿಹರಿದಿದ್ದಾಳೆ.
ಈ ವಿಸ್ಮಯಕರ ಘಟನೆಯನ್ನು ನೋಡಲು ಕರ್ನಾಟಕ ಮತ್ತು ದೇಶದ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಮಂಡಲದಲ್ಲಿ ನೆರೆದಿದ್ದಾರೆ. ಕಾವೇರಿ ತೀರ್ಥದಲ್ಲಿ ಪವಿತ್ರಸ್ನಾನ ಮಾಡಿ ಪುನೀತರಾಗಲು ಕಾತುರದಿಂದ ಕಾದಿದ್ದಾರೆ.
ಸರಿಯಾಗಿ 6.29ಕ್ಕೆ ತೀರ್ಥೋದ್ಭವವಾಗುತ್ತಿದ್ದಂತೆ, ಮಂತ್ರಘೋಷಗಳ ನಡುವೆ ಅಲ್ಲಿ ನೆರೆದವರಿಗೆ ತೀರ್ಥಪ್ರೋಕ್ಷಣೆ ಮಾಡಲಾಯಿತು. ಕೊಡಗಳ ಮೂಲಕ ಪುಣ್ಯ ಸ್ನಾನ ಮಾಡಿ ಭಕ್ತಾದಿಗಳು ಪುನೀತರಾದರು.
ಪ್ರಧಾನ ಅರ್ಚಕರ ನೇತೃತ್ವದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಮಳೆಗಾಲ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವಸೆಲೆಯಾಗಿರುವ ಕಾವೇರಿ ಜನರನ್ನು ಕಾಪಾಡಲೆಂದು ಕೂಡ ಪೂಜೆ ಸಲ್ಲಿಸಲಾಗುತ್ತಿದೆ.
ಇಲ್ಲಿ ನೆರೆದಿರುವ ಜನರಿಗಾಗಿ ಜಿಲ್ಲಾಡಳಿತ ಸರ್ವಸಿದ್ಧತೆ ಮಾಡಿದೆ. ನೂಕುನುಗ್ಗಲು ಸಂಭವಿಸದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಬಸ್ ಸೌಲಭ್ಯ, ಬಂದವರಿಗೆ ಊಟೋಪಚಾರಕ್ಕಾಗಿ, ವಸತಿಗಾಗಿ ಕೂಡ ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿದೆ.
Comments
Post a Comment