ಪೌಲ್ ಬೆಟ್ಟಿಗೆ ಪ್ರತಿಷ್ಠಿತ ಮ್ಯಾನ್ ಬುಕರ್
27 Oct, 2016
ಪಿಟಿಐ
ಲಂಡನ್ : ಅಮೆರಿಕದ ಲೇಖಕ ಪೌಲ್ ಬೆಟ್ಟಿ ಅವರು ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಪಾತ್ರರಾಗಿದ್ದು, ಈ ಪ್ರಶಸ್ತಿಗಳಿಸಿದ ಅಮೆರಿಕದ ಮೊದಲಲೇಖಕರಾಗಿದ್ದಾರೆ.ಅಮೆರಿಕದ ಜನಾಂಗೀಯ ರಾಜಕಾರಣ ಕುರಿತು ವಿಡಂಬನಾತ್ಮಕ ವಾಗಿರುವ ತಮ್ಮ 'ದಿ ಸೆಲ್‌ಔಟ್' ಕೃತಿಗೆ ಅವರು ಈ ಪ್ರಶಸ್ತಿ ಗಳಿಸಿದ್ದಾರೆ.
ಆಫ್ರಿಕನ್ ಅಮೆರಿಕನ್ ವ್ಯಕ್ತಿಯೋರ್ವ ತನ್ನ ಅಸ್ತಿತ್ವ ದೃಢಪಡಿಸಿಕೊಳ್ಳುವ ಸಲುವಾಗಿ ಲಾಸ್ ಏಂಜಲೀಸ್‌ನಲ್ಲಿ ಜೀತಪದ್ಧತಿ ಮತ್ತು ವರ್ಣಭೇದ ಪದ್ಧತಿಯನ್ನು ಪುನಃ ಆರಂಭಿಸುವ ವಿಡಂಬನಾತ್ಮಕತೆ ಈ ಕೃತಿಯ ತಿರುಳಾಗಿದೆ. ಈ ಕೃತಿ 'ಆಘಾತಕಾರಿ ಮತ್ತು ಅನಿರೀಕ್ಷಿತ ಹಾಸ್ಯ'ವುಳ್ಳದ್ದು ಎಂದು ತೀರ್ಪುಗಾರರು ವ್ಯಾಖ್ಯಾನಿಸಿದ್ದಾರೆ.
ಮಂಗಳವಾರ ರಾತ್ರಿ ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಟ್ಟಿ ಅವರು ₹ 40.81ಲಕ್ಷ ಮೌಲ್ಯದ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 'ನಾನು ಬರೆಯುವುದನ್ನು ದ್ವೇಷಿಸುತ್ತೇನೆ' ಎಂದು ಹೇಳಿದ್ದಾರೆ. 'ಇದು ಕಷ್ಟದ ಪುಸ್ತಕ. ಇದನ್ನು ಬರೆಯಲು ನನಗೆ ಕಷ್ಟವಾಗಿತ್ತು.ಇದನ್ನು ಓದುವುದು ಕಷ್ಟ ಎಂದೂ ನನಗೆ ತಿಳಿದಿದೆ. ಎಲ್ಲರೂ ವಿವಿಧ ದೃಷ್ಟಿಕೋನಗಳಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ' ಎಂದು ಬೆಟ್ಟಿ ಅವರು ಹೇಳಿದ್ದಾರೆ.
'ನಾಲ್ಕು ತಾಸುಗಳ ಸತತ ಚರ್ಚೆಯ ಬಳಿಕ ಸರ್ವಾನುಮತದಿಂದ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಕ್ಲಿಷ್ಟಕರವಾಗಿರುವ ವಿಷಯವನ್ನು ವಿಡಂಬನಾತ್ಮಕವಾಗಿ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿರುವ ವಿರಳ ಕೃತಿ ಇದಾಗಿದೆ' ಎಂದು ತೀರ್ಪುಗಾರರ ಮಂಡಳಿ ಅಧ್ಯಕ್ಷ ಅಮಾಂದಾ ಫೋರ್‌ಮ್ಯಾನ್ ಅವರು ಹೇಳಿದ್ದಾರೆ.
Comments
Post a Comment