ಗಿನ್ನೀಸ್ ಪುಟ ಸೇರಿದ ತೆಲಂಗಾಣದ ನಾಡಹಬ್ಬ ‘ಬತುಕಮ್ಮ’ ಆಚರಣೆ
ಹೈದರಾಬಾದ್, ಅ.9-ತೆಲಂಗಾಣದ ಸಾಂಪ್ರದಾಯಿಕ ನಾಡಹಬ್ಬ ಬತುಕಮ್ಮ ಆಚರಣೆ ವಿಶ್ವ ದಾಖಲೆಗೆ ಪಾತ್ರವಾಗಿದೆ. ನಿನ್ನೆ ಮುತ್ತಿನನಗರಿ ಹೈದರಾಬಾದ್‍ನ ಲಾಲ್‍ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಬತುಕಮ್ಮ ಹಬ್ಬವನ್ನು ಏರ್ಪಡಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಹಿಳೆಯರು ಭಾಗವಹಿಸಿ ನೂತನ ದಾಖಲೆ ನಿರ್ಮಿಸಿದರು. ಗಿನ್ನೀಸ್ ಪುಟ ಸೇರಿದೆ. ಕೇರಳದಲ್ಲಿ 2015ರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ದಾಖಲೆಯನ್ನು ಈ ಬಾರಿಯ ಬತುಕಮ್ಮ ಹಬ್ಬದ ಆಚರಣೆ ಮುರಿದಿದೆ. ಕೇರಳದಲ್ಲಿ ಓಣಂ ಆಚರಣೆಯಲ್ಲಿ 5015 ಮಹಿಳೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 9,292 ಪ್ರಮದೆಯರು ಪಾಲ್ಗೊಳ್ಳುವ ಮೂಲಕ ಹೊಸ ವಿಶ್ವ ದಾಖಲೆ ಸೃಷ್ಟಿಯಾಗಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿಜರ್, ಮಿನ್ ಪ್ಲಾನೆಟ್ ಇಂಡಿಯಾ ರಶ್ಮಿ ಠಾಕೂರ್, ತೆಲಂಗಾಣ ಗೃಹ ಸಚಿವ ನರಸಿಂಹ ರೆಡ್ಡಿ, ಪ್ರವಾಸೋದ್ಯಮ ಸಚಿವ ನರಸಿಂಹ ಲಾಲ್ ಹಾಗೂ ಸರ್ಕಾರದ ಉನ್ನತಾಧಿಕಾರಿಗಳು ಹಾಜರಿದ್ದರು. ಇಷ್ಟು ಸಂಖ್ಯೆಯ ವನಿತೆಯರು ಒಂದೆಡೆ ಸೇರಿ ಕಣ್ಮನ ತಣಿಸುವ ಪುಷ್ಪಾಲಂಕಾರವನ್ನು ವಿನ್ಯಾಸಗೊಳಿಸಿದ ಅಪೂರ್ವ ವಿದ್ಯಮಾನವಿದು. ಇದರೊಂದಿಗೆ ವನಿತೆಯರ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ವಿಶೇಷವಾಗಿ ಗಮನಸೆಳೆದವು. ಬತುಕಮ್ಮ ಹಬ್ಬವನ್ನು ಭಾದ್ರಪದ ಅಮಾವಾಸ್ಯೆಯ ಸಂದರ್ಭದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಡೀ ವಾರ ಮಣ್ಣಿನಿಂದ ಮಾಡಿದ ದುರ್ಗೆಯನ್ನು ಪೂಜಿಸಿ ಹಬ್ಬದ ದಿನ ಹೂವಿನಿಂದ ಅಲಂಕರಿಸಿ ನೀರಿನಲ್ಲಿ ಮುಳುಗಿಸುತ್ತಾರೆ.
ಈ ಹಬ್ಬಕ್ಕಾಗಿ ಬಳಸುವ ಹೂಗಳಲ್ಲಿ ನೀರನ್ನು ಶುದ್ಧೀಕರಿಸುವ ಗುಣಗಳಿರುತ್ತವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪುಷ್ಪಗಳನ್ನು ನೀರಿನಲ್ಲಿ ಮುಳುಗಿಸಿದಾಗ ನೀರು ಸ್ವಚ್ಚಗೊಂಡು ನಿರ್ಮಲವಾಗುತ್ತದೆ ಎಂಬ ನಂಬಿಕೆ ಇದೆ.
Comments
Post a Comment