ಅಶ್ವಿನ್‌ ಐಸಿಸಿ ವರ್ಷದ ಕ್ರಿಕೆಟಿಗ

2015-16ನೇ ಸಾಲಿನ ಐಸಿಸಿ ಪ್ರಶಸ್ತಿ ಪ್ರಕಟ | ವರ್ಷದ ಏಕದಿನ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ ದುಬೈ: ಭಾರತದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ ವರ್ಷದ ಏಕದಿನ ಆಟಗಾರ ಎಂಬ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. 2015ರ ಸೆಪ್ಟೆಂಬರ್‌ 14ರಿಂದ 2016ರ ಸೆಪ್ಟೆಂಬರ್‌ 20ರ ಅವಧಿಯಲ್ಲಿ ಆಟಗಾರರು ತೋರಿದ ಪ್ರದರ್ಶನದ ಆಧಾರದಲ್ಲಿ ಐಸಿಸಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಾಜಿ ಕ್ರಿಕೆಟ್‌ ದಿಗ್ಗಜರಾದ ಭಾರತದ ರಾಹುಲ್‌ ದ್ರಾವಿಡ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಐಸಿಸಿ ಆಯ್ಕೆ ಸಮಿತಿಯಲ್ಲಿದ್ದರು. ವರ್ಷದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ಪಾಕಿಸ್ತಾನ ಟೆಸ್ಟ್‌ ತಂಡದ ನಾಯಕ ಮಿಸ್ಬಾ ಉಲ್‌ ಹಕ್‌ ಪಾಲಾಗಿದೆ. ಈ ಪ್ರಶಸ್ತಿ ಪಡೆದ ಪಾಕ್‌ನ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಿಸ್ಬಾ ಅವರದ್ದಾಗಿದೆ. ವಿರಾಟ್‌ಗೆ ಏಕದಿನ ತಂಡದ ಸಾರಥ್ಯ ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿರುವ ವಿರಾಟ್‌ ಕೊಹ್ಲಿ ಅವರಿಗೆ ವರ್ಷದ ಏಕದಿನ ತಂಡದ ಸಾರಥ್ಯ ವಹಿಸಲಾಗಿದೆ. ತಂಡದಲ್ಲಿ ವಿರಾಟ್‌ ಅವರೊಂದಿಗೆ ಭಾರತದ ರೋಹಿತ್‌ ಶರ್ಮಾ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಈ ತಂಡದಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕು ಆಟಗಾರರಿದ್ದು, ಎಬಿ ಡಿ'ವಿಲಿಯರ್ಸ್‌ 2010ರಿಂದ 6ನೇ ಬಾರಿ ಈ ಗೌರವ ಪಡೆದಿದ್ದಾರೆ. ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಕಳೆದ ನಾಲ್ಕು ವರ್ಷಗಳಲ್ಲಿ 3ನೇ ಬಾರಿ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್‌ ತಂಡಕ್ಕೆ ಕುಕ್‌ ನಾಯಕ ಇಂಗ್ಲೆಂಡ್‌ ತಂಡದ ನಾಯಕ ಅಲಿಸ್ಟರ್‌ ಕುಕ್‌ 3ನೇ ಬಾರಿ ವರ್ಷದ ಟೆಸ್ಟ್‌ ತಂಡದ ನಾಯಕರಾಗಿ ಹೊರ ಹೊಮ್ಮಿದ್ದಾರೆ. ತಂಡದಲ್ಲಿ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾದ ತಲಾ ನಾಲ್ಕು ಆಟಗಾರರು; ಭಾರತ, ನ್ಯೂಜಿಲೆಂಡ್‌, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದ ತಲಾ ಒಬ್ಬ ಆಟಗಾರ ಟೆಸ್ಟ್‌ ತಂಡದಲ್ಲಿದ್ದಾರೆ. ತಂಡದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಅಶ್ವಿನ್‌ ಕಾಣಿಸಿಕೊಂಡಿದ್ದಾರೆ. ಅಚ್ಚರಿಯೆಂಬಂತೆ ವಿಶ್ವದ ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌, ಆಸ್ಪ್ರೇಲಿಯಾ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಅವರನ್ನು 12ನೇ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆಸ್ಪ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮತ್ತು ವೇಗಿ ಮಿಚೆಲ್‌ ಸ್ಟಾರ್ಕ್‌, ವರ್ಷದ ಟೆಸ್ಟ್‌ ಹಾಗೂ ಏಕದಿನ ತಂಡಗಳೆರಡರಲ್ಲೂ ಸ್ಥಾನ ಪಡೆದ ಆಟಗಾರರಾಗಿದ್ದಾರೆ. 2015-16ನೇ ಸಾಲಿನ ಐಸಿಸಿ ಪ್ರಶಸ್ತಿಗಳು ವರ್ಷದ ಕ್ರಿಕೆಟಿಗ: ರವಿಚಂದ್ರನ್‌ ಅಶ್ವಿನ್‌ (ಭಾರತ) ವರ್ಷದ ಟೆಸ್ಟ್‌ ಆಟಗಾರ: ರವಿಚಂದ್ರನ್‌ ಅಶ್ವಿನ್‌ (ಭಾರತ) ವರ್ಷದ ಏಕದಿನ ಆಟಗಾರ: ಕ್ವಿಂಟನ್‌ ಡಿ'ಕಾಕ್‌ (ದಕ್ಷಿಣ ಆಫ್ರಿಕಾ) ವರ್ಷದ ಕ್ರೀಡಾಸ್ಫೂರ್ತಿಯ ಆಟಗಾರ: ಮಿಸ್ಬಾ ಉಲ್‌ ಹಕ್‌ (ಪಾಕಿಸ್ತಾನ) ವರ್ಷದ ಟಿ20 ಪ್ರದರ್ಶನ: ಕಾರ್ಲೋಸ್‌ ಬ್ರಾಥ್‌ವೇಟ್‌ (ವೆಸ್ಟ್‌ ಇಂಡೀಸ್‌) ವರ್ಷದ ಉದಯೋನ್ಮುಖ ಆಟಗಾರ: ಮುಸ್ತಾಫಿಜುರ್‌ ರೆಹ್ಮಾನ್‌ (ಬಾಂಗ್ಲಾದೇಶ) ವರ್ಷದ ಅಂಪೈರ್‌: ಮರಾಯಿಸ್‌ ಎರಾಸ್ಮಸ್‌ (ದಕ್ಷಿಣ ಆಫ್ರಿಕಾ) ಐಸಿಸಿ ವರ್ಷದ ಟೆಸ್ಟ್‌ ತಂಡ: ಆಲಿಸ್ಟರ್‌ ಕುಕ್‌ (ನಾಯಕ, ಇಂಗ್ಲೆಂಡ್‌), ಡೇವಿಡ್‌ ವಾರ್ನರ್‌ (ಆಸ್ಪ್ರೇಲಿಯಾ), ಕೇನ್‌ ವಿಲಿಯಮ್ಸನ್‌ (ನ್ಯೂಜಿಲೆಂಡ್‌), ಜೋ ರೂಟ್‌ (ಇಂಗ್ಲೆಂಡ್‌), ಆ್ಯಡಮ್‌ ವೋಜಸ್‌ (ಆಸ್ಪ್ರೇಲಿಯಾ), ಜಾನಿ ಬೈರ್‌ಸ್ಟೋವ್‌ (ವಿಕೆಟ್‌ ಕೀಪರ್‌, ಇಂಗ್ಲೆಂಡ್‌), ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌), ಆರ್‌.ಅಶ್ವಿನ್‌ (ಭಾರತ), ರಂಗನ ಹೆರತ್‌ (ಶ್ರೀಲಂಕಾ), ಮಿಚೆಲ್‌ ಸ್ಟಾರ್ಕ್‌(ಆಸ್ಪ್ರೇಲಿಯಾ), ಡೇಲ್‌ ಸ್ಟೇನ್‌ (ದಕ್ಷಿಣ ಆಫ್ರಿಕಾ), ಸ್ಟೀವನ್‌ ಸ್ಮಿತ್‌(ಆಸ್ಪ್ರೇಲಿಯಾ, 12ನೇ ಆಟಗಾರ). ಐಸಿಸಿ ವರ್ಷದ ಏಕದಿನ ತಂಡ: ಡೇವಿಡ್‌ ವಾರ್ನರ್‌ (ಆಸ್ಪ್ರೇಲಿಯಾ), ಕ್ವಿಂಟನ್‌ ಡಿ'ಕಾಕ್‌ (ವಿಕೆಟ್‌ ಕೀಪರ್‌, ದಕ್ಷಿಣ ಆಫ್ರಿಕಾ), ರೋಹಿತ್‌ ಶರ್ಮಾ (ಭಾರತ), ವಿರಾಟ್‌ ಕೊಹ್ಲಿ (ನಾಯಕ, ಭಾರತ), ಎಬಿ ಡಿ'ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ), ಜೋಸ್‌ ಬಟ್ಲರ್‌ (ಇಂಗ್ಲೆಂಡ್‌), ಮಿಚೆಲ್‌ ಮಾರ್ಷ್‌ (ಆಸ್ಪ್ರೇಲಿಯಾ), ರವೀಂದ್ರ ಜಡೇಜಾ (ಭಾರತ), ಮಿಚೆಲ್‌ ಸ್ಟಾರ್ಕ್‌ (ಆಸ್ಪ್ರೇಲಿಯಾ), ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ), ಸುನಿಲ್‌ ನರೈನ್‌ (ವೆಸ್ಟ್‌ ಇಂಡೀಸ್‌), ಇಮ್ರಾನ್‌ ತಾಹಿರ್‌ (ದಕ್ಷಿಣ ಆಫ್ರಿಕಾ, 12ನೇ ಆಟಗಾರ)

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023