ಜನೇವರಿ.9ರಿಂದ ಆನ್‍ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ January 5, 2017
ಬೆಂಗಳೂರು, ಜ.5- ಬಿಪಿಎಲ್ ಪಡಿತರ ಚೀಟಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 26ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.9ರಂದು ಆನ್‍ಲೈನ್ ಮೂಲಕ ಎಪಿಎಲ್‍ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ ಎಂದರು. ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಪಡಿತರ ಚೀಟಿ ಅರ್ಜಿದಾರರ ಕೈ ಸೇರಲಿದೆ. ಅದೇ ರೀತಿ ಬಿಪಿಎಲ್ ಪಡಿತರ ಚೀಟಿಯನ್ನು 15 ದಿನಗಳೊಳಗೆ ಅಂಚೆ ಮೂಲಕ ತಲುಪಿಸಲಾಗುವುದು. ಈಗಾಗಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ 10 ಲಕ್ಷ ಮಂದಿ ಕೂಡ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿ ಮಾಡುವವರು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ದೊಡ್ಡದಾದ ಮನೆ ಹೊಂದಿರುವವರು, 7ಎಕರೆ ಜಮೀನುಳ್ಳವರು, 4 ಚಕ್ರದ ವಾಹನ ಹೊಂದಿರುವವರು ಹಾಗೂ ಮಾಸಿಕ 150 ಯುನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸುವವರು ಬಿಪಿಎಲ್ ಪಡೆಯಲು ಅರ್ಹರಾಗಿರುವುದಿಲ್ಲ ಎಂದ ಅವರು, ಎಪಿಎಲ್ ಪಡಿತರ ಚೀಟಿ ಪಡೆಯಲು ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.
Comments
Post a Comment