ಕೆಸುವು ನೀಡುತ್ತದೆ ಶರೀರಕ್ಕೆ ಕಸುವು


ವಾರ್ತಾ ಭಾರತಿ : 13 Jan, 2017
ಸಮೃದ್ಧ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುವ ಕೆಸುವು ಗೆಡ್ಡೆ ಪಶ್ಚಿಮ ಆಫ್ರಿಕಾ ಮೂಲದ್ದಾಗಿದೆ. ಇದು ಸಸ್ಯಶಾಸ್ತ್ರೀಯವಾಗಿ ಡಯಾಸ್ಕೊರೇಸಿ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಡಯಾಸ್ಕೋರಿಯಾ ಆಗಿದೆ.
ಹಲವಾರು ವಿಧಗಳ ಕೆಸುವು ಲಭ್ಯವಿದ್ದರೂ, ಕೆಲವೇ ಮಾತ್ರ ವಾಣಿಜ್ಯಿಕ ಮಹತ್ವವನ್ನು ಹೊಂದಿವೆ. ಆಹಾರವಾಗಿ ಬಳಕೆಯ ಜೊತೆಗೆ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಸಂಸ್ಕೃತಿಯೊಂದಿಗೆ ಸಾಂಕೇತಿಕವಾಗಿ ತಳುಕು ಹಾಕಿಕೊಂಡಿದೆ.
ಭೂಮಿಯ ಒಳಗೆ ಬೆಳೆಯುವ ಕೆಸುವು ಗಡ್ಡೆ ಉಷ್ಣವಲಯದ ಬೆಳೆಯಾಗಿದ್ದು, ತೇವಾಂಶ ಅಗತ್ಯವಿದೆ. 120 ಪೌಂಡ್ ತೂಕ ಮತ್ತು ಎರಡು ಮೀಟರ ಉದ್ದದವರೆಗೂ ಇದು ಬೆಳೆಯಬಲ್ಲುದು.
ಕೆಸುವು ಮತ್ತು ಗೆಣಸು ಒಂದೇ ರೂಪ ಹೊಂದಿವೆಯಾದರೂ ಅವುಗಳ ನಡುವೆ ಸಸ್ಯಶಾಸ್ತ್ರೀಯವಾಗಿ ಯಾವುದೇ ಸಂಬಂಧವಿಲ್ಲ. ನೈಜೀರಿಯಾದಲ್ಲಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ (ಶೇ.70) ಕೆಸುವು ಬೆಳೆಯುತ್ತದೆ.
ಕೆಸುವು ಆರೋಗ್ಯಕ್ಕೆ ಹೇಗೆ ಸಹಕಾರಿ?
ಉತ್ತಮ ಶಕ್ತಿಮೂಲವಾಗಿರುವ ಕೆಸುವು ಗೆಡ್ಡೆಯ ಪ್ರತಿ 100 ಗ್ರಾಂ 118 ಕ್ಯಾಲೊರಿಗಳನ್ನು ಒದಗಿಸುತ್ತದೆ. ಸಂಯುಕ್ತ ಕಾರ್ಬೋಹೈಡ್ರೇಟ್ಗಳೊಂದಿಗೆ ಕರಗಬಲ್ಲ ನಾರಿನಂಶವನ್ನು ಹೊಂದಿದೆ. ಈ ನಾರಿನಂಶವು ಮಲಬದ್ಧತೆಯನ್ನು ತಗ್ಗಿಸುವ ಜೊತೆಗೆ ಕೆಟ್ಟ ಕೊಲೆಸ್ಟರಾಲ್ ಅನ್ನು ಕರುಳಿಗೆ ಸೀಮಿತಗೊಳಿಸುವ ಮೂಲಕ ಅದರ ಮಟ್ಟವನ್ನು ತಗ್ಗಿಸುತ್ತದೆ. ಆಹಾರದಲ್ಲಿ ನಂಜಿನ ಅಂಶವನ್ನು ತಡೆಯುವ ಮೂಲಕ ಗುದನಾಳ ಕ್ಯಾನ್ಸರ್ನ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ಇದರಲ್ಲಿಯ ಸಂಯುಕ್ತ ಕಾರ್ಬೋಹೈಡ್ರೇಟ್ಗಳು ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಕೆಯನ್ನು ನಿಯಂತ್ರಿಸುತ್ತವೆ. ಇದೇ ಕಾರಣದಿಂದ ಕೆಸುವನ್ನು ಕಡಿಮೆ ಗ್ಲೈಸಿಮಿಕ್ ಸೂಚಿಯ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದ್ದು, ಮಧುಮೇಹಿಗಳಿಗೆ ಉಪಕಾರಿಯಾಗಿದೆ.
ಕೆಸುವು ಗೆಡ್ಡೆ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್ಗಳ ಆಗರವಾಗಿದೆ. ಅದು ನಮ್ಮ ಶರೀರಕ್ಕೆ ಪೈರಿಡಾಕ್ಸಿನ್(ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬ1), ರಿಬೊಫ್ಲಾವಿನ್, ಫೊಲೇಟ್ಗಳು, ಪ್ಯಾಂಟೊಥೆನಿಕ್ ಆ್ಯಸಿಡ್ ಮತ್ತು ನಿಯಾಸಿನ್ಗಳ ದೈನಂದಿನ ಅಗತ್ಯವನ್ನು ಒದಗಿಸುತ್ತದೆ. ಈ ವಿಟಾಮಿನ್ಗಳು ನಮ್ಮ ಶರೀರದೊಳಗೆ ಪಚನಕ್ರಿಯೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ.
ತಾಜಾ ಗೆಡ್ಡೆಯಲ್ಲಿ ಆ್ಯಂಟಿ ಆಕ್ಸಿಡಂಟ್ ವಿಟಾಮಿನ್ ಆಗಿರುವ ವಿಟಾಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಪ್ರತಿ 100 ಗ್ರಾಂ.ಕೆಸುವು ಶರೀರಕ್ಕೆ ಅಗತ್ಯವಿರುವ ಶೇ.29ರಷ್ಟು ವಿಟಾಮಿನ್ ಸಿ ಅನ್ನು ಒದಗಿಸುತ್ತದೆ. ಈ ವಿಟಾಮಿನ್ ಶರೀರದ ಮೇಲೆ ವಯಸ್ಸಿನ ಪರಿಣಾಮಗಳನ್ನು ತಡೆಯುವ ಜೊತೆಗೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಾಯಗಳು ಮಾಗುವಲ್ಲಿ ನೆರವಾಗುವ ಜೊತೆಗೆ ಎಲುಬುಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
ಕೆಸುವಿನಲ್ಲಿ ವಿಟಾಮಿನ್ ಎ ಮತ್ತು ಬೀಟಾ ಕ್ಯಾರೊಟಿನ್ಗಳೂ ಸ್ವಲ್ಪ ಪ್ರಮಾದಲ್ಲಿವೆ. ಕ್ಯಾರೊಟಿನ್ಗಳು ಶರೀರದೊಳಗೆ ವಿಟಾಮಿನ್ ಎ ಆಗಿ ರೂಪಾಂತರಗೊಳ್ಳುತ್ತವೆ. ಇವೆರಡೂ ಸಂಯುಕ್ತಗಳು ಶಕ್ತಿಶಾಲಿ ಆ್ಯಂಟಿ ಆಕ್ಸಿಡಂಟ್ಗಳಾಗಿವೆ.
ವಿಟಾಮಿನ್ ಎ ಆರೋಗ್ಯಕರ ಲೋಳೆ ವಪೆಗಳನ್ನು ಮತ್ತು ಚರ್ಮವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುವ ಜೊತೆಗೆ ರಾತ್ರಿ ದೃಷ್ಟಿಯನ್ನು ಸುಧಾರಿಸುತ್ತದೆ. ಶ್ವಾಸಕೋಶಗಳು ಮತ್ತು ಬಾಯಿ ಕ್ಯಾನ್ಸರ್ಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ತಾಮ್ರ,ಕ್ಯಾಲ್ಸಿಯಂ,ಪೊಟ್ಯಾ ಮತ್ತು ರಂಜಕದಂತಹ ಖನಿಜಗಳು ಕೆಸುವಿನಲ್ಲಿ ಹೇರಳವಾಗಿವೆ. ಪ್ರತಿ 100 ಗ್ರಾಂ ಕೆಸುವು 816 ಮಿ.ಗ್ರಾಂ.ಪೊಟ್ಯಾಶಿಯಂ ಅನ್ನು ಒದಗಿಸುತ್ತದೆ. ಪೊಟ್ಯಾಶಿಯಂ ಎದೆಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಜೀವಕೋಶಗಳು ಮತ್ತು ಶರೀರ ದ್ರವಗಳ ಪ್ರಮುಖ ಘಟಕವಾಗಿದೆ.
ಕೆಂಪು ರಕ್ತಕಣಗಳ ಉತ್ಪಾದನೆಗೆ ತಾಮ್ರ ಮತ್ತು ಕಬ್ಬಿಣ ಅಗತ್ಯವಾಗಿವೆ. ಮ್ಯಾಂಗನೀಸ್ ಅನ್ನು ನಮ್ಮ ಶರೀರವು ಆ್ಯಂಟಿ ಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು