ಭಾರತದ ಪ್ರಥಮ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ
ಚೆನ್ನೈ.ಜ 28 : ಕೀಟಗಳದ್ದೇ ಒಂದು ಪ್ರಪಂಚ. ಅವುಗಳದ್ದು ಒಂದು ವಿಸ್ಮಯ ಲೋಕ. ಈ ಕೀಟ ಜಗತ್ತನ್ನು ಸಾರ್ವಜನಿಕರಿಗೆ ತೆರೆದಿಡುವ ಪ್ರಥಮ ಪ್ರಯತ್ನವೊಂದು ಭಾರತದಲ್ಲಿ ನಡೆದಿದೆ. ಹೌದು ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ದೇಶದ ಮೊಟ್ಟಮೊದಲ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ನಿರ್ಮಾಣಗೊಳ್ಳುತ್ತಿರುವ ಈ ಮ್ಯೂಸಿಯಂ ವಿದ್ಯಾರ್ಥಿಗಳು, ಕೀಟ ಶಾಸ್ತ್ರಜ್ಞರು, ಕೀಟಗಳ ಅಧ್ಯಯನವನ್ನು ಹವಾಸ್ಯವನ್ನಾಗಿಕೊಂಡ ಮಂದಿ ಹಾಗೂ ಕೃಷಿಕರಿಗೆ ತುಂಬಾ ಪ್ರಯೋಜನವಾಗಲಿದೆ. ಪರಿಸರ ಮತ್ತು ಜೀವ ವೈವಿಧ್ಯತೆಯ ವ್ಯವಸ್ಥೆಯಿಂದ ಸಂಗ್ರಹಿಸಲಾದ 1,00,000ಕ್ಕೂ ಅಕ ಕೀಟಗಳ ಮಾದರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಈ ಮ್ಯೂಸಿಯಂನಲ್ಲಿ ಜೀರುಂಡೆಗಳು ಮತ್ತು ದೊಡ್ಡ ಗಾತ್ರದ ಗುಂಪಿಗೆ ಸೇರಿದ 29 ಕೀಟಗಳ ನಮೂನೆಗಳು ಇವೆ. ಕೀಟಗಳ ಮಾದರಿಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪ್ರಾದೇಶಿಕ ಕೀಟಗಳು, ನೀರಿನಲ್ಲಿ ವಾಸಿಸುವ ಕೀಟಗಳು ಹಾಗೂ ಗಿಡಗಳನ್ನು ಆಶ್ರಯಸುವ ಕೀಟಗಳು. ಈ ಮೂರು ವಿಭಾಗಗಳ ಕ್ರಿಮಿ-ಕೀಟಗಳ ಜಗತ್ತನ್ನು ಇಲ್ಲಿ ನೋಡಬಹುದು. ಮ್ಯೂಸಿಯಂ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೀಟ ಸಂರಕ್ಷಣೆ ಮತ್ತು ಅಧ್ಯಯನಗಳ ಕೇಂದ್ರದ ಉಸ್ತುವಾರಿ ನಿರ್ದೇಶಕ ಡಾ.ಕೆ.ರಾಮರಾಜು ತಿಳಿಸಿದ್ದಾರೆ.
ಇದು ಕೀಟಶಾಸ್ತ್ರದ ಮೇಲೆ ಬೆಳಕು ಚೆಲ್ಲುವ ಒಂದು ವಿಭಿನ್ನ ಪ್ರಯತ್ನವಾಗಿದೆ. ಕೀಟಗಳ ಸಂಗ್ರಹ ಮತ್ತು ಕೀಟಗಳ ಅಧ್ಯಯನಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ. ನಮ್ಮ ಉಪ ಕುಲಪತಿಯವರು ಈ ಯೋಜನೆಯ ರೂವಾರಿ. ಅವರ ಸಹಾಯ ಮತ್ತು ತಮಿಳುನಾಡು ಸರ್ಕಾರದ ಸಹಕಾರದಿಂದ ಕೀಟ ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೀಟ ಸಂರಕ್ಷಣೆ ಮತ್ತು ಅಧ್ಯಯನಗಳ ಕೇಂದ್ರದಿಂದ 50 ವರ್ಷಗಳ ಅವಯಲ್ಲಿ ಈ ಕೀಟಗಳನ್ನು ಸಂಗ್ರಹಿಸಲಾಗಿದೆ ಎಂದು ರಾಮರಾಜು ಹೇಳುತ್ತಾರೆ. ಬಿಳಿ ಬಟ್ಟೆಗಳ ಎರಡು ತುಂಡುಗಳ ನಡುವೆ ಒಂದು ದೀಪದ ಬಲ್ಬ್‍ನನ್ನು ಇರಿಸುವ ಮೂಲಕ ಕೀಟ ಶಾಸ್ತ್ರಜ್ಞರು ಕೀಟಗಳನ್ನು ಆಕರ್ಷಿಸಿ ಅವುಗಳನ್ನು ಬಲೆಗೆ ಬೀಳಿಸಿದ್ದಾರೆ. ಈ ಮ್ಯೂಸಿಯಂ 5000 ಚದರ ಅಡಿಗಳ ಪ್ರದೇಶವನ್ನು ವ್ಯಾಪಿಸಲಿದ್ದು, ಕೀಟ ಜಗತ್ತನ್ನು ವೀಕ್ಷಕರಿಗೆ ಪರಿಚಯಿಸುವ ಆಡಿಯೋ-ವಿಷ್ಯುವಲ್ ರೂಮ್‍ನನ್ನು ಸಹ ಈ ಸಂಗ್ರಹಾಲಯ ಒಳಗೊಂಡಿರುತ್ತದೆ. ಭಾರತದ ವಿವಿಧ ಪ್ರದೇಶಗಳು ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಥೈಲೆಂಡ್ ಮತ್ತು ಪಾಕಿಸ್ತಾನದಂಥ ದೇಶಗಳಿಂದ ಕೀಟಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ.
Comments
Post a Comment