ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ
ನವದೆಹಲಿ, ಫೆಬ್ರವರಿ 10: ಸರ್ಕಾರಿ ನೌಕಕರಿಗೆ ಬಡ್ತಿ ವಿಚಾರದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ನೌಕರರಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ಸರ್ಕಾರವು ಅನುಸರಿಸುತ್ತಿರುವ ಮೀಸಲಾತಿಯನ್ನು ಕೈಬಿಡಬೇಕೆಂದು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಬಡ್ತಿ ವಿಚಾರವಾಗಿ ಎಸ್ಸಿ, ಎಸ್ಟಿ ನೌಕರರನ್ನು ವಿಶೇಷವಾಗಿ ಪರಿಗಣಿಸುವ (ಕಾನ್ಸೆಕ್ವೆನ್ಷಿಯಲ್ ಸೀನಿಯಾರಿಟಿ) ವಿಧಾನದಿಂದಾಗಿ, ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರಸ್ಥರು ಅನೇಕ ವರ್ಷಗಳಿಂದ ತಮಗೆ ಸಿಗಬೇಕಾದ ಬಡ್ತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ ಕುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ, ಬಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗುವ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿ, ಇನ್ನು ಮೂರು ತಿಂಗಳಲ್ಲಿ ಜೇಷ್ಠತೆಯನ್ನು ಪರಿಗಣಿಸದೇ ಎಸ್ಸಿ, ಎಸ್ಟಿ ನೌಕರರಿಗೆ ನೀಡಲಾಗಿರುವ ಎಲ್ಲಾ ಬಡ್ತಿ ಆದೇಶಗಳನ್ನು ಹಿಂಪಡೆಯುವಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದರ ಜತೆಯಲ್ಲೇ ಬಹುದಿನಗಳಿಂದ ಬಡ್ತಿಯ ನಿರೀಕ್ಷೆಯಲ್ಲಿರುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಸಿಗಬೇಕಿರುವ ಬಡ್ತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಈಗಾಗಲೇ ಎಸ್ಸಿ, ಎಸ್ಟಿ ಕೋಟಾದಡಿಯಲ್ಲಿ ವೇಗವಾಗಿ ಬಡ್ತಿ ಹೊಂದಿ ನಿವೃತ್ತರಾದವರಿಗೆ ಹಾಗೂ ಪಿಂಚಣಿ ಮತ್ತಿತರ ಸೌಲಭ್ಯ ಪಡೆಯುತ್ತಿರುವವರಿಗೆ ಈ ಆದೇಶ ಅನ್ವಯವಾಗದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಹಿನ್ನೆಲೆ: 2011ರಲ್ಲಿ ಬಿಡಿಎನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ.ಕೆ. ಪವಿತ್ರ ಹಾಗೂ ಇತರರು ಸೇವಾ ಬಡ್ತಿ ವಿಚಾರದಲ್ಲಿ ಮೀಸಲಾತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ವಿಚಾರಣೆ ಆಗನಿಂದಲೂ ನಡೆಯುತ್ತಿತ್ತು. ಈಗ ಅದರ ತೀರ್ಪು ಹೊರಬಿದ್ದಿದೆ.
Comments
Post a Comment