ಅವಧಿಗೂ ಮುನ್ನ ಮಕ್ಕಳನ್ನು ಶಾಲೆಗೆ ಸೇರಿಸುವಂತಿಲ್ಲ
ಬೆಂಗಳೂರು, ಫೆ.17- ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೆ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು. ಹಾಗೆಯೇ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿಂಗಳು ತುಂಬಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಹಿಂದಿನ ಸರ್ಕಾರಗಳು ನಿಗದಿ ಪಡಿಸಿದ್ದ ಮಕ್ಕಳ ದಾಖಲಾತಿ ವಯೋಮಿತಿ ಆದೇಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದು ಪಡಿಸಿದೆ. ಮಕ್ಕಳಿಗೆ 5 ವರ್ಷ ತುಂಬಿದ ಕೂಡಲೇ ಪೋಷಕರು ಶಾಲೆಗೆ ಸೇರಿಸುತ್ತಾರೆ. ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ. ಆದರೆ, ಹೊಸ ನಿಯಮದ ಪ್ರಕಾರ 5 ವರ್ಷ 10 ತಿಂಗಳು ಪೂರ್ಣಗೊಂಡಿದ್ದರೆ ಮಾತ್ರ ಶಾಲೆಗೆ ದಾಖಲಿಸಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಆನಂದ್ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶ ಜೂನ್ 2017 ರಿಂದ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. 2016- 17ನೆ ಸಾಲಿನಲ್ಲಿ ಈಗಾಗಲೆ ದಾಖಲಾಗಿರುವ ಮಕ್ಕಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 10ನೆ ತರಗತಿ ಪೂರ್ಣಗೊಳಿಸುವ ವೇಳೆಗೆ ವಿದ್ಯಾರ್ಥಿ ವಯಸ್ಸು 16 ವರ್ಷ ತುಂಬಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳ ಪ್ರಕಾರ, 16 ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸಾಧ್ಯ, ಹೀಗಾಗಿ ಮಕ್ಕಳ ದಾಖಲಾತಿ ವಯೋಮಿತಿಯನ್ನು 5 ವರ್ಷ 10 ತಿಂಗಳಿಗೆ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Comments
Post a Comment