ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಭಾರತದ ಏಕೈಕ ಜ್ವಾಲಾಮುಖಿ ಮತ್ತೆ ಸಕ್ರಿಯ


ವಾರ್ತಾ ಭಾರತಿ : 19 Feb, 2017
ಪಣಜಿ, ಫೆ.19: ಭಾರತದ ಏಕೈಕ ಜ್ವಾಲಾಮುಖಿ ಮತ್ತೆ ಸಕ್ರಿಯವಾಗಿದ್ದು,  ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಮತ್ತೆ ದಟ್ಟ ಹೊಗೆ ಹಾಗೂ ಲಾವಾರಸವನ್ನು ಚಿಮ್ಮಿಸುತ್ತಿದೆ.
ಸುಮಾರು 150 ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ ಈ ಬರಡು ದ್ವೀಪದ ಜ್ವಾಲಾಮುಖಿ 1991ರಲ್ಲಿ ದಿಢೀರನೇ ಸಕ್ರಿಯವಾಗಿತ್ತು. ಆ ಬಳಿಕ ಆಗಾಗ ಲಾವಾರಸ ಚಿಮ್ಮುತ್ತಿದೆ ಎಂದು ಗೋವಾ ಮೂಲದ ರಾಷ್ಟ್ರೀಯ ಸಾಗರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
"ಲಾವಾರಸ ಕಡಿಮೆ ಪ್ರಮಾಣದಲ್ಲಿ ಐದರಿಂದ ಹತ್ತು ನಿಮಿಷಗಳ ಅವಧಿಯಲ್ಲಿ ಚಿಮ್ಮುತ್ತಿದೆ" ಎಂದು ಅಭಯ್ ಮುಧೋಳ್ಕರ್ ಹೇಳಿದ್ದಾರೆ. ಅವರ ನೇತೃತ್ವದ ವಿಜ್ಞಾನಿಗಳ ತಂಡ ಅಂಡಮಾನ್ ಕಣಿವೆಯ ಮಾದರಿಗಳನ್ನು ಸಂಗ್ರಹಿಸಿದೆ.
"ಹಗಲಿನ ಅವಧಿಯಲ್ಲಿ ಕೇವಲ ಬೂದಿ ಮೋಡ ಮಾತ್ರ ಕಂಡುಬರುತ್ತದೆ. ಆದರೆ ಸೂರ್ಯಾಸ್ತವಾಗುತ್ತಿದ್ದಂತೆ ಕೆಂಪು ಲಾವಾ ರಸ ಒಳಗಿನಿಂದ ವಾತಾವರಣಕ್ಕೆ ಚಿಮ್ಮಲ್ಪಡುತ್ತದೆ. ಈ ಬಿಸಿ ಲಾವಾರಸ ಕೆಳ ಪ್ರದೇಶಕ್ಕೆ ಪ್ರವಾಹವಾಗಿ ಹರಿಯುತ್ತದೆ" ಎಂದು ಅವರು ವಿವರಿಸಿದ್ದಾರೆ. ಈ ಸ್ಥಳಕ್ಕೆ ಖ್ಯಾತ ವಿಜ್ಞಾನಿ ಬಿ.ನಾಗೇಂದ್ರನಾಥ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ನಿರಂತರವಾದ ಸ್ಫೋಟ, ಹೊಗೆ ಹಾಗೂ ಲಾವಾರಸ ಚಿಮ್ಮುವುದನ್ನು ದೃಢಪಡಿಸಿದೆ.
ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಹಾಗೂ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ ಸಂಶೋಧಕರು ಇಲ್ಲಿನ ಮಣ್ಣು ಮತ್ತು ನೀರಿನ ಮಾದರಿಯನ್ನು ಪರಿಶೀಲಿಸಿದ್ದು, ಜ್ವಾಲಾಮುಖಿ ವೇಳೆ ಹೊರಹೊಮ್ಮುವ ಕಲ್ಲಿದ್ದಲು ಮಾದರಿಯ ಕಪ್ಪು ಪೈರೊಕ್ಲಾಸ್ಟಿಕ್ ವಸ್ತುವನ್ನು ಕೂಡಾ ಪತ್ತೆ ಮಾಡಿದ್ದಾರೆ. ಇದು ಜ್ವಾಲಾಮುಖಿಯ ಪ್ರಸ್ತುತ ಹಾಗೂ ಹಿಂದಿನ ಚಟುವಟಿಕೆಗಳನ್ನು ಅಧ್ಯಯನ ಮಾಡಲು ನೆರವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024